ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡುಬೀರಿಯಾಗಿ ಮಿಂಚುವ ಆಸೆ

Last Updated 25 ಏಪ್ರಿಲ್ 2019, 12:11 IST
ಅಕ್ಷರ ಗಾತ್ರ

ಉದಯ ಟಿವಿಯ ‘ಬ್ರಹ್ಮಾಸ್ತ್ರದ’ ಖುಷಿ ರಶ್ಮಿತಾ ಜೆ. ಶೆಟ್ಟಿ ಅವರು ‘ಸುಧಾ’ ಜತೆಗೆ ತಮ್ಮ ವೃತ್ತಿ ಬದುಕಿನ ಕುರಿತು ಮಾತನಾಡಿದ್ದಾರೆ. ಅವರ ಸಂದರ್ಶನದ ಪೂರ್ಣ ಭಾಗ ಇಲ್ಲಿದೆ.

ನಿಮ್ಮ ಬಗ್ಗೆ ನೀವು ಹೇಳುವುದಾದರೆ?

ನನ್ನ ತಂದೆ ಬಾಲ್ಯದಲ್ಲಿಯೇ ತೀರಿಹೋದರು. ಅಮ್ಮ ಲೀಲಾ ನನ್ನನ್ನು ಮತ್ತು ನನ್ನ ಅಕ್ಕನನ್ನು ಸಾಕಿದರು. ಚಿಕ್ಕಮಗಳೂರಿನಲ್ಲಿ ನಮ್ಮದು ಕ್ಯಾಂಟೀನ್‌ ಇತ್ತು. ಅದನ್ನು ಅಮ್ಮನೇ ನೋಡಿಕೊಳ್ಳುತ್ತಿದ್ದರು. ನನ್ನ ತಂದೆಗೆ ನನಗೆ ಕರಾಟೆ ಕಲಿಸಬೇಕು ಎನ್ನುವ ಆಶೆ. ನಮ್ಮ ಅಮ್ಮನಿಗೆ ಭರತನಾಟ್ಯ ಕಲಿಸಬೇಕು ಎನ್ನುವ ಬಯಕೆ. ಅದೃಷ್ಟಕ್ಕೆ ನಾನು ಎರಡನ್ನೂ ಕಲಿತೆ. ನನ್ನ ಅಪ್ಪನ ದೊಡ್ಡ ಆಶೆ ಮಗಳು ನಟಿ ಆಗಬೇಕು ಎನ್ನುವುದು. ಅದೂ ಆಗಿದ್ದೇನೆ ಎನ್ನುವುದು ನನಗೆ ಅತ್ಯಂತ ಖುಷಿಯ ಸಂಗತಿ. ಬಣ್ಣದ ಲೋಕ ನನ್ನನ್ನು ಬಂಧಿಸಿದೆ. ಇದನ್ನು ಬಿಟ್ಟು ಹೋಗುವ ಮನಸ್ಸಿಲ್ಲ. ಪ್ರಮುಖ ಪಾತ್ರಗಳಿಗಾಗಿ ಕಾಯುತ್ತಿದ್ದೇನೆ. ಅದಕ್ಕಾಗಿ ನಾನು ತಯಾರಿಯನ್ನೂ ನಡೆಸಿದ್ದೇನೆ. ಈಗ ಯಾವುದೇ ಸಿನಿಮಾ– ಧಾರಾವಾಹಿ ನೋಡಿದರೂ ಅಲ್ಲಿ ಕಥೆಗಿಂತ ನಟನೆಯನ್ನು ಗಮನಿಸುತ್ತೇನೆ.

ನಟನೆ ಆರಂಭ ಆಗಿದ್ದು ಯಾವಾಗ?

ಒಂದು ವರ್ಷದ ಹಿಂದೆ ‘ತ್ರಿವೇಣಿ ಸಂಗಮ’ದ ಮೂಲಕ ನಾನು ನಟಿಯಾದೆ. ಎಂಸಿಎ ಓದಬೇಕೆಂದುಕೊಂಡಿದ್ದೆ. ಬಿಸಿಎ ಮುಗಿಸಿದ ತಕ್ಷಣ ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿದೆ. ಒಂದು ದಿನ ಸುವರ್ಣ ವಾಹಿನಿಯಲ್ಲಿ ಬರುತ್ತಿದ್ದ ಜಾಹೀರಾತು ನೋಡಿ ಆಡಿಷನ್‌ ನೀಡಿದೆ. ಅಂದು ನನಗೆ ಯಾವ ಭರವಸೆಯೂ ಇರಲಿಲ್ಲ. ಏಕೆಂದರೆ ಹಿರಿಯ ನಟಿಯರೆಲ್ಲಾ ಅಲ್ಲಿ ನನ್ನ ಸ್ಪರ್ಧಿಗಳಾಗಿದ್ದರು. ಆದರೆ ನನ್ನನ್ನು ಆಯ್ಕೆ ಮಾಡಿದ್ದರು. ಅದರಲ್ಲೂ ಆಶ್ಚರ್ಯದ ಸಂಗತಿ ಎಂದರೆ ಮರುದಿನವೇ ಚಿತ್ರೀಕರಣಕ್ಕೆ ಬರಲು ಆಹ್ವಾನ ನೀಡಿದರು. ಆಗ ಯಾವ ಸಿದ್ಧತೆಯನ್ನೂ ಮಾಡಿಕೊಂಡಿರಲಿಲ್ಲ. ಚಿಕ್ಕಮಗಳೂರಿನಿಂದ ಆಡಿಷನ್‌ ನೀಡಲು ಬೆಂಗಳೂರಿಗೆ ಬಂದಿದ್ದೆ. ಕೊನೆಗೆ ನಮ್ಮ ಸಂಬಂಧಿಕರ ಮನೆಯಲ್ಲಿ ಉಳಿದು ಒಂದು ದಿನ ಚಿತ್ರೀಕರಣ ಮಾಡಿದೆ. ನಂತರ ನಿರ್ದೇಶಕರಿಗೆ ವಿಷಯ ಹೇಳಿ ನಾಲ್ಕು ದಿನ ಬಿಡುವು ಮಾಡಿಕೊಂಡು ಬೆಂಗಳೂರಿನಲ್ಲಿ ನೆಲೆಗೊಳ್ಳಲು ಸಿದ್ಧಳಾಗಿ ಬಂದೆ.

ನನ್ನ ತಂದೆಯ ಕನಸಿನಂತೆ ನಾನು ನಟಿಯಾದೆ ಎನ್ನುವ ಸಮಾಧಾನದಲ್ಲಿ ಇದನ್ನೇ ವೃತ್ತಿಯಾಗಿ ತೆಗೆದುಕೊಂಡೆ. ‘ಸರ್ವಮಂಗಳ ಮಾಂಗಲ್ಯೆ’ ‘ಸುಬ್ಬುಲಕ್ಷ್ಮಿ ಸಂಸಾರ’ದಲ್ಲಿಯೂ ಭಿನ್ನ ಗುಣಗಳಲ್ಲಿ ಕಾಣಿಸಿಕೊಂಡೆ. ‘ಕೃಷ್ಣ ಗಾರ್ಮೆಂಟ್‌’ ಸಿನಿಮಾದಲ್ಲಿಯೂ ಮುಖ್ಯ ಪಾತ್ರವನ್ನು ಮಾಡಿದ್ದೇನೆ. ನಾನು ನಟಿಸಿದ ಎಲ್ಲಾ ಪಾತ್ರಗಳೂ ಭಿನ್ನವಾಗಿವೆ. ಮುಖ್ಯಪಾತ್ರವನ್ನು ನಿರ್ವಹಿಸಬೇಕು ಎನ್ನುವ ಬಯಕೆ ಇದೆ. ಅದರಲ್ಲೂ ಪೌರಾಣಿಕ ಪಾತ್ರಗಳಿಗೆ ಅಲಂಕಾರಗೊಳ್ಳಬೇಕು. ಗಂಡುಬೀರಿ ರೀತಿಯ ಪಾತ್ರಗಳಲ್ಲಿಯೂ ರಗಾಡಾಗಿ ಮಿಂಚಬೇಕು.

ಮೊದಲ ದಿನದ ಚಿತ್ರೀಕರಣ ಹೇಗಿತ್ತು?

ಬಾಲ್ಯದಿಂದಲೂ ನೃತ್ಯಾಭ್ಯಾಸ ಮಾಡುತ್ತಿದ್ದೆ. ಸಭಾ ಕಂಪನ ಎನ್ನುವುದು ಇರಲಿಲ್ಲ. ಕ್ಯಾಮೆರಾ ಮೊದಲು ಎದುರಾಗಿದ್ದರೂ ಕೂಡ ಭೀತಿಯನ್ನು ಹುಟ್ಟಿಸಲಿಲ್ಲ. ಆದರೆ, ಡೈಲಾಗ್‌ಗಳನ್ನು ತುಂಬಾ ವೇಗವಾಗಿ ಹೇಳುತ್ತಿದ್ದೆ. ಅದನ್ನು ಕ್ರಮೇಣ ಸರಿಪಡಿಸಿಕೊಂಡೆ. ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಬಯಕೆ ಇದ್ದ ನನಗೆ ಟೀವಿಯಲ್ಲಿ ಬರುತ್ತಿದ್ದೇನೆ ಎನ್ನುವುದೇ ಸಣ್ಣ ಸಮಾಧಾನವನ್ನು ತಂದಿದೆ. ಸಮರಕಲೆಯನ್ನೂ ಅಭ್ಯಾಸ ಮಾಡಿರುವುದರಿಂದ ಅದನ್ನೂ ಪೋಷಿಸಬೇಕು. ನಾನು ಏಳು ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ಒಮ್ಮೆ ಮಾತ್ರ ಕಂಚಿನ ಪದಕವನ್ನು ಗೆದ್ದಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT