‘ಮನೆಹಾಳು ಕೆಲಸಕ್ಕೆ ಹೆಣ್ಮಕ್ಳೇ ಬೇಕೆ? ಕಿರುತೆರೆಯ ಖಳರ ಬಗ್ಗೆ ಒಂದಿಷ್ಟು ಮಾತುಕತೆ

7

‘ಮನೆಹಾಳು ಕೆಲಸಕ್ಕೆ ಹೆಣ್ಮಕ್ಳೇ ಬೇಕೆ? ಕಿರುತೆರೆಯ ಖಳರ ಬಗ್ಗೆ ಒಂದಿಷ್ಟು ಮಾತುಕತೆ

Published:
Updated:

‌‌ಈ ಹೆಂಗಸರಿಗೇಕಪ್ಪ ಇಷ್ಟೊಂದು ಕೆಟ್ಟ ಬುದ್ಧಿ! ಕಿರುತೆರೆಯ ಬಹುತೇಕ ಧಾರಾವಾಹಿಗಳನ್ನು ಕಂಡಾಗ ಮೂಡುವ ಪ್ರಶ್ನೆಯಿದು. ‘ಹೆಣ್ಣಿಗೆ ಹೆಣ್ಣೇ ಶತ್ರು’ ಎಂಬ ಹಳಸಲು ಮಾತು ಕಿರುತೆರೆ ಧಾರಾವಾಹಿಗಳನ್ನು ನೋಡುವಾಗ ಮತ್ತೆ ಮತ್ತೆ ನೆನಪಾಗುವುದು ಸುಳ್ಳಲ್ಲ. ಈ ಧಾರಾವಾಹಿಗಳಲ್ಲಿ ಮನೆಹಾಳು ಮಾಡುವ ಕೆಲಸ ಮಹಿಳೆಯರಿಗೆ ಮೀಸಲು. ಹುಡುಕಿದರೆ ಬೆರಳೆಣಿಕೆಯಷ್ಟು ಪುರುಷ ವಿಲನ್‌ ಪಾತ್ರಗಳು ದೊರಕುತ್ತವೆಯಷ್ಟೇ. ಅವರೂ ಮತ್ತೊಂದು ಲೇಡಿ ವಿಲನ್ ಆಟಕ್ಕೆ ಕುಣಿಯುತ್ತಿರುವ ಗೊಂಬೆಗಳಷ್ಟೆ.

ಖಳಪಾತ್ರಗಳ ಮೀಸಲಾತಿಯಲ್ಲಿ ಮಹಿಳೆಯರನ್ನು ಮೀರಿಸಲು ಇವರಿಗೆ ಸಾಧ್ಯವಾಗಿಲ್ಲ. ಒಳ್ಳೆಯವರ ಹಾಗೆ ಸೋಗು ಹಾಕಿಕೊಂಡು ಮನೆಮುರಿಯುವ, ಮನಸ್ಸು ಕೆಡಿಸುವ ಕೆಡುಕಿನ ಪಾತ್ರಗಳಿಗೆ ಮಹಿಳೆಯರೇ ಯಾಕೆ ಒದಗಿಬರುತ್ತಾರೆ? ಮನೆಮನೆಗೆ ತಲುಪುವ ಧಾರಾವಾಹಿಗಳಲ್ಲಿ ನಾಯಕಿಯ ಪರಮಮುಗ್ಧತೆಗೆ ವಿರುದ್ಧವಾಗಿ ದುಷ್ಟತನವೇ ಮೈವೆತ್ತಂತಿರುವ ನೆಗೆಟಿವ್‌ ಶೇಡ್‌ ಪಾತ್ರಗಳೂ ಜನಪ್ರಿಯತೆ ಗಳಿಸಲು ಕಾರಣವೇನು? ಈ ಸಿದ್ಧಸೂತ್ರವನ್ನು ಮೀರುವ ಪ್ರಯತ್ನಗಳು ಯಾಕೆ ನಡೆಯುತ್ತಿಲ್ಲ? ಧಾರಾವಾಹಿ ಜಗತ್ತಿನ ಬೇರೆ ಬೇರೆ ವಿಭಾಗಗಳಲ್ಲಿ ಸಕ್ರಿಯರಾಗಿರುವ ನಾಲ್ವರು ಈ ಪ್ರಶ್ನೆಗಳಿಗೆ ನೀಡಿದ ಪ್ರತಿಕ್ರಿಯೆ ಇಲ್ಲಿದೆ.

‘ವ್ಯತ್ಯಾಸ ಕಾಣುವುದು ಅಗತ್ಯ’

ಹೆಂಗಸರನ್ನೇ ಖಳನಾಯಕಿಯರನ್ನಾಗಿ ಮಾಡಬೇಕು ಎಂಬ ಹಟ ನಮ್ಮಗಿಲ್ಲ. ಸಾಕಷ್ಟು


ಸ್ವಪ್ನಾ ಕೃಷ್ಣ, ‘ಗಂಗಾ’ ಧಾರಾವಾಹಿ ನಿರ್ದೇಶಕಿ

ಧಾರಾವಾಹಿಗಳಲ್ಲಿ ಪುರುಷ ವಿಲನ್‌ಗಳು ಇದ್ದಾರೆ. ವೀಕ್ಷಕರು ಇಷ್ಟಪಡುವುದು ಏನು ಎಂಬುದರ ಗ್ರಹಿಕೆಯ ಮೇಲೆ ಕಥೆಯೂ ಸಾಗುತ್ತದೆ. ಧಾರಾವಾಹಿಗಳನ್ನು ನೋಡುವ ವೀಕ್ಷಕರ ಸಂಖ್ಯೆ ಪರಿಗಣಿಸಿದಾಗ ಶೇಕಡವಾರು ಮಹಿಳೆಯರೇ ಹೆಚ್ಚು. ಹೀಗಾಗಿ ಅವರನ್ನೇ ಕೇಂದ್ರೀಕರಿಸಿಕೊಂಡು ಕಥೆ ಸಿದ್ಧವಾಗುತ್ತದೆ. ಕ್ರೂರತ್ವ ಸ್ವಭಾವಕ್ಕೆ ಮಹಿಳೆ, ಪುರುಷ ಎಂಬ ಬೇಧವಿಲ್ಲ. ಹಾಗಾಗಿ ವೈಯಕ್ತಿಕವಾಗಿ ಮಹಿಳೆಯರನ್ನೇ ಖಳನಾಯಕಿರನ್ನಾಗಿಸಬೇಕು ಎಂದು ನಾನೆಂದೂ ಯೋಚಿಸಿಲ್ಲ.

ಕಾಲಮಾನಕ್ಕೆ ತಕ್ಕಂತೆ ಪಾತ್ರಗಳಲ್ಲಿಯೂ ಬದಲಾವಣೆಯಾಗುತ್ತ ಹೋಗುತ್ತದೆ. ಆ ಕಾರಣದಿಂದಲೇ ಇಂದು ವಿಲನ್‌ ಪಾತ್ರಗಳು ಹೆಚ್ಚು ಗ್ಲಾಮರಸ್‌, ಸ್ಟೈಲ್‌ ಐಕಾನ್‌ಗಳಾಗಿ ಗುರುತಿಸಿಕೊಂಡಿದ್ದಾರೆ. ಜನರಿಗೆ ಇಷ್ಟವಾಗಬೇಕಾದರೆ ಪಾತ್ರಗಳ ಮೇಕ್‌ಓವರ್‌ ಮಾಡುವುದು ಅಗತ್ಯ. ಹೀಗಾಗಿಯೇ ಇಂದು ಮಧ್ಯವಯಸ್ಸಿನವರ ಜೊತೆಗೆ ಯುವತಿಯರು ವಿಲನ್‌ಗಳಾಗಿದ್ದಾರೆ. ನಟಿಯರು ಸರಳವಾಗಿರಬೇಕು, ವಿಲನ್‌ ಪಾತ್ರಗಳು ಅದ್ದೂರಿಯಾಗಿ ಕಾಣಬೇಕು ಎಂಬ ಹಳೆಯ ಸೂತ್ರವೇ ಇಂದು ಇನ್ನಷ್ಟು ವೈಭವೀಕರಣಗೊಂಡಿದೆ. ನಟಿ ಮತ್ತು ವಿಲನ್‌ ನಡುವೆ ವ್ಯತ್ಯಾಸ ತೋರಿಸಬೇಕಾಗುತ್ತದೆ. ಅದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದನ್ನೇ ನಾವು ತೋರಿಸುತ್ತಿದ್ದೇವೆ. 

‘ಟ್ರೆಂಡ್‌ಗೆ ತಕ್ಕಂತೆ ಕಥೆ’

ಮಹಿಳಾ ಖಳನಾಯಕಿಯರು ಹೆಚ್ಚಲು ಟ್ರೆಂಡ್‌ ಕಾರಣ. ಜನರು ಇಷ್ಟಪಡುವುದನ್ನೇ ನಾವು ನೀಡುತ್ತೇವೆ. ವೈವಿಧ್ಯ ಕಥೆ ಹೊಂದಿರುವ


ಶಿವಪೂಜೇನ ಅಗ್ರಹಾರ, ರಾಧಾ ರಮಣ ಧಾರಾವಾಹಿ ನಿರ್ದೇಶಕ

ಧಾರಾವಾಹಿಗಳ ಮಧ್ಯೆ ಯಾವುದು ಯಶಸ್ಸು ಕಾಣುತ್ತದೆಯೋ ಅದರ ದಾರಿ ಹಿಡಿದು ಹಲವು ಕಥೆಗಳು ಸೃಷ್ಟಿಯಾಗುತ್ತವೆ. ಆರ್ಥಿಕವಾಗಿ ವಾಹಿನಿಗೆ ಲಾಭ ತರುವ ಕಥೆಗಳು ಟ್ರೆಂಡ್‌ ಸೆಟ್ಟರ್‌ಗಳಾಗುತ್ತವೆ. 

ಮಹಿಳೆಯರೇ ಕಿರುತೆರೆಯ ವೀಕ್ಷಕರು. ಅವರಿಗೆ ಹತ್ತಿರವಾಗಲು ಅವರು ಇಷ್ಟಪಡುವ ಪಾತ್ರಗಳನ್ನು ಸೃಷ್ಟಿಸಬೇಕಾಗುತ್ತದೆ. ಅಲ್ಲದೆ ಪುರುಷರಿಗೆ ತಾಳ್ಮೆ ಕಡಿಮೆ. ಯಾವುದೇ ವಿಷಯಕ್ಕಾದರೂ ತಕ್ಷಣಕ್ಕೆ ಪ್ರತಿಕ್ರಿಯೇ ನೀಡುತ್ತಾರೆ. ಅದೇ ಮಹಿಳೆ ಹಂತಹಂತವಾಗಿ ತಾನು ಅಂದುಕೊಂಡಿದ್ದನ್ನು ಸಾಧಿಸುತ್ತಾಳೆ. ಅದನ್ನೇ ನಾವು ವೈಭವೀಕರಿಸಿ ತೋರಿಸುತ್ತೇವೆ. ‘ರಾಧಾ ರಮಣ’ದಲ್ಲಿ ರಾಧಾ ಮಧ್ಯಮ ವರ್ಗದ ಕುಟುಂಬದಿಂದ ಬಂದವಳು. ಹಾಗಾಗಿ ಅವಳ ಉಡುಪು ಸರಳವಾಗಿದೆ. ಸಿತಾರ ಪಾತ್ರಧಾರಿ ಶ್ರೀಮಂತ ಮನೆತನದವಳು. ಹಾಗಾಗಿ ಅದ್ದೂರಿಯಾಗಿ ತಯಾರಾಗುತ್ತಾಳೆ. ಕಥೆಗೆ ಅನುಗುಣವಾಗಿ ಅವರ ಮೇಕಪ್‌ ಮಾಡುತ್ತೇವೆ. ಕೆಲವರು ಫ್ಯಾಷನ್‌ ಬಗ್ಗೆ ಹೆಚ್ಚಿನ ಜ್ಞಾನ ಪಡೆಯುವ ಸಲುವಾಗಿಯೇ ಟೀವಿ ನೋಡುತ್ತಾರೆ. ಹೀಗಾಗಿ ನಾವು ಅದಕ್ಕನುಗುಣವಾಗಿ ಪಾತ್ರಧಾರಿಗಳನ್ನು ಸೃಷ್ಟಿಸಬೇಕಾಗುತ್ತದೆ. 

‘ಕಥೆ ಎಳೆಯಲು ಇದು ಅವಶ್ಯ’ 

ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವ ಮಾತಿನಂತೆ ಧಾರಾವಾಹಿಯ ಕಥೆಯನ್ನು ಸೃಷ್ಟಿಸಲಾಗುತ್ತದೆ. ಮಹಿಳೆ ಖಳನಾಯಕಿಯಾಗಿರುವ


ಚೈತ್ರಿಕಾ ಹೆಗಡೆ, ಧಾರಾವಾಹಿ ಸಂಭಾಷಣೆಕಾರರು

ಧಾರಾವಾಹಿ ಯಶಸ್ಸು ಗಳಿಸುವ ಕಾರಣಕ್ಕೆ ಅದರ ಅನುಕರಣೆ ಮುಂದುರೆದಿದೆ. ಹುಳುಕು ಬುದ್ಧಿ, ಹೊಟ್ಟೆಕಿಚ್ಚು ಇರುವುದು ಗಂಡಸಿಗಿಂತ ಹೆಣ್ಣಿಗೆ ಹೆಚ್ಚು ಎಂಬುದು ಲೋಕಾರೂಢಿ. ಇದನ್ನೇ ಧಾರಾವಾಹಿಗಳಲ್ಲಿ ಸ್ವಲ್ಪ ಹೆಚ್ಚೇ ಎನ್ನುವಂತೆ ತೋರಿಸಲಾಗುತ್ತದೆ. ಸಿನಿಮಾಗಳಾದರೆ ಮೂರು ಗಂಟೆಗಳಲ್ಲಿ ಮುಗಿಯುತ್ತದೆ. ಆದರೆ ಧಾರಾವಾಹಿ ಹಲವು ವರ್ಷಗಳೇ ಸಾಗಬೇಕು. ಹಾಗಾಗಿ ಕಥೆಯನ್ನು ಬೆಳೆಸಲು ಈ ರೀತಿಯ ಸನ್ನಿವೇಶಗಳನ್ನು ಸೃಷ್ಟಿಸುವುದು ಅನಿವಾರ್ಯ. ಉದಾಹರಣೆಗೆ ಅಡುಗೆಗೆ ಹೆಚ್ಚು ಉಪ್ಪು ಸುರಿಯುವ ದೃಶ್ಯಗಳನ್ನು ಗಂಡಸರಿಂದ ಮಾಡಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅವರನ್ನು ಕಚೇರಿಗೆ ಹೋಗುವವರು, ಬ್ಯುಸಿ ಇರುವವರು ಎಂಬಂತೆ ಬಿಂಬಿಸಲಾಗುತ್ತದೆ. ಕಿಡ್ನಾಪ್‌ ಆದವರನ್ನು ಬಿಡಿಸಿಕೊಂಡು ಬರುವ ಮಹತ್ತರ ಕೆಲಸವನ್ನು ಪುರುಷರಿಗೆ ಮೀಸಲಿಡಲಾಗುತ್ತದೆ. ‌

ಧಾರಾವಾಹಿಗಳಲ್ಲಿ ಈಗ ಪ್ರೇಮಕಥೆಗಳೇ ರಾರಾಜಿಸುತ್ತಿವೆ. ಕಥೆಯನ್ನು ಮುಂದುವರೆಸುವ ಸಲುವಾಗಿ ತ್ರಿಕೋನ ಪ್ರೇಮಕಥೆ ಸೃಷ್ಟಿಸಿ, ಮನೆಗೆ ಬರುವ ಹೆಣ್ಣಿಗೆ ಕಷ್ಟ ಕೊಡಲು ತಯಾರಾಗಿರುವ ಇನ್ನೊಂದು ಹೆಣ್ಣಿನ ಪಾತ್ರವನ್ನು ಸೃಷ್ಟಿಸಲಾಗುತ್ತದೆ. ನಾಯಕಿಯನ್ನು  ಹೈಲೆಟ್‌ ಮಾಡಲು ಅವಳಿಗೆ ಇಲ್ಲದಿರುವ ಕಷ್ಟವನ್ನು ಕೊಡುವುದು ಅಗತ್ಯವಾಗುತ್ತದೆ.  ಕಷ್ಟಗಳ ಸರಮಾಲೆಯನ್ನೇ ಅನುಭವಿಸಿದ ನಾಯಕಿ ಜನರ ಮನಸಿನಲ್ಲಿ ಬೇರೂರಿವುದನ್ನು ನಾವು ಕಂಡಿದ್ದೇವೆ. 


ಸುಜಾತಾ, ನಟಿ

‘ಪಾತ್ರದಿಂದ ಸಿಕ್ಕಿತು ಜನಪ್ರಿಯತೆ’

ಮನೆ ಬೆಳಗುವುದು ಹೆಣ್ಣು, ಮನೆ ಒಡೆಯುವುದು ಹೆಣ್ಣು ಎಂಬ ಮಾತಿದೆ. ಈ ಕಾರಣದಿಂದಲೇ ಬಹುಶಃ ಧಾರಾವಾಹಿಗಳಲ್ಲಿಯೂ ಮಹಿಳಾ ಖಳನಾಯಕರಿಗೇ ಬೇಡಿಕೆ. ನಿಜ ಹೇಳಬೇಕೆಂದರೆ ನನ್ನ ಪಾತ್ರವನ್ನು ನೋಡುವಾಗ ನಾನೇ ಭಯಗೊಳ್ಳುತ್ತೇನೆ. ಕೆಲ ವರ್ಷಗಳ ಹಿಂದೆ ಜನರು ಖಳ ನಾಯಕಿಯರು ತೆರೆ ಹಿಂದೆಯೂ ಹಾಗೆಯೇ ಇರುತ್ತಾರೆ ಎಂದು ನಂಬಿದ್ದರು. ಆದರೆ ಜನರು ಈಗ ಪ್ರಬುದ್ಧರಾಗಿದ್ದಾರೆ. ಅದು ಕೇವಲ ಪಾತ್ರವಷ್ಟೇ ಎಂಬ ಅರಿವು ಅವರಿಗಿದೆ. ರಸ್ತೆಯಲ್ಲಿ ಹೋಗುತ್ತಿದ್ದರೆ ತೀರಾ ಪರಿಚಯದವಳಂತೆ ಮಾತನಾಡಿಸುತ್ತಾರೆ. ನನ್ನ ನಟನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಕಣ್ಣಲ್ಲೇ ಅಭಿನಯಿಸುವ ನನ್ನ ಕೌಶಲಕ್ಕೆ ಹೊಗಳುತ್ತಾರೆ. ಅವರ ಮಾತುಗಳನ್ನು ಕೇಳಿದಾಗ ಪಾತ್ರದ ಜನಪ್ರಿಯತೆಯ ಅರಿವಾಗುತ್ತದೆ. 

ಸಿತಾರ ದೇವಿ ಸೀರೆಯೂ ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆಭರಣಗಳನ್ನು ಎಲ್ಲಿಂದ ಕೊಂಡುಕೊಳ್ಳುತ್ತೀರಿ, ಮೇಕಪ್‌ ಹೇಗೆ ಮಾಡಿಕೊಳ್ಳುತ್ತೀರಿ ಎಂದು ಹಲವರು ಪ್ರಶ್ನಿಸುತ್ತಲೇ ಇರುತ್ತಾರೆ. ಧಾರಾವಾಹಿಯ ನಾಯಕ, ನಾಯಕಿರನ್ನು ಜನರು ಹೆಚ್ಚು ಗಮನಿಸುತ್ತಾರೆ. ಅವರಿಗೆ ಸವಾಲು ನೀಡುವಂತೆ ಕಾಣಿಸಿಕೊಳ್ಳುವುದು ನಮಗೆ ಸವಾಲು. ಅದರಲ್ಲಿ ಯಶಸ್ಸು ಕಂಡರೆ ಟ್ರೆಂಡ್‌ ಸೆಟ್ಟರ್‌ಗಳಾಗುತ್ತೇವೆ. 

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !