ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಗಳನ್ನೇರುವ ಇರುವೆ ಭಕ್ಷಕ ‘ಟಮಂಡುವಾ’

Last Updated 20 ಸೆಪ್ಟೆಂಬರ್ 2019, 19:42 IST
ಅಕ್ಷರ ಗಾತ್ರ

ಕೆಲವು ಪ್ರಾಣಿಗಳನ್ನು ನೋಡಿದ ಕೂಡಲೇ ವಿಚಿತ್ರ ಎನಿಸುತ್ತದೆ. ಸಾಮಾನ್ಯವಾಗಿ ನಾವು ನೋಡುವ ಪ್ರಾಣಿಗಳಿಗೆ ಹೋಲಿಸಿದರೆ ಅವುಗಳ ದೇಹರಚನೆ ಭಿನ್ನವಾಗಿರುವುದೇ ಇದಕ್ಕೆ ಕಾರಣ. ಇಂತಹ ಪ್ರಾಣಿಗಳು ಕಾಣಸಿಗುವುದು ಕೂಡ ಅಪರೂಪ. ವಿಚಿತ್ರ ದೇಹಾಕೃತಿಯ ಪ್ರಾಣಿಗಳಲ್ಲಿ ಇರುವೆಭಕ್ಷಕ (Ant Eater) ಕೂಡ ಒಂದು. ಇಂದಿನ ಪ್ರಾಣಿ ಪ್ರಪಂಚದಲ್ಲಿ ಇರುವೆ ಭಕ್ಷಕ ಪ್ರಭೇದಗಳಲ್ಲಿ ಒಂದಾದ ನಾರ್ತನ್ ಟಮಂಡುವಾ (Northern Tamandua) ಬಗ್ಗೆ ತಿಳಿಯೋಣ.

ಇದರ ವೈಜ್ಞಾನಿಕ ಹೆಸರು ಟಮಂಡುವಾ ಮೆಕ್ಸಿಕಾನಾ (Tamandua mexicana). ಇದು ಮಿರ್ಮೆಕೊಫಗಿಡೇ (Myrmecophagidae) ಕುಟುಂಬಕ್ಕೆ ಸೇರಿದ್ದು, ಪಿಲೊಸಾ (Pilosa) ಗುಂಪಿನಲ್ಲಿ ವರ್ಗೀಕರಿಸಲಾಗಿದೆ.

ಗಾತ್ರ ಮತ್ತು ಜೀವಿತಾವಧಿ
102–130 ಸೆಂ.ಮೀ:
ದೇಹದ ಉದ್ದ
3–4 ಕೆ.ಜಿ:ದೇಹದ ತೂಕ
9.5 ವರ್ಷ:ಜೀವಿತಾವಧಿ

ಹೇಗಿರುತ್ತದೆ?
ಇದು ಮಧ್ಯಮ ಗಾತ್ರದ ಇರುವೆ ಭಕ್ಷಕ. ದೈತ್ಯ ಇರುವೆಭಕ್ಷಕಕ್ಕೆ ಹೋಲಿಸಿದರೆ ಇದರ ಬಾಲ ಭಿನ್ನವಾಗಿ ರಚನೆಯಾಗಿರುತ್ತದೆ. ಬಿಳಿ ಅಥವಾ ತಿಳಿಹಳದಿ ಹಾಗೂ ಕಪ್ಪು–ಕಂದು ಮಿಶ್ರಿತ ಬಣ್ಣದ ಕೂದಲಿನಿಂದ ಕೂಡಿದ ತುಪ್ಪಳ ದೇಹವನ್ನು ಆವರಿಸಿರುತ್ತದೆ. ದೇಹವೆಲ್ಲಾ ಬಿಳಿ ಬಣ್ಣದಲ್ಲಿದ್ದರೆ, ಬೆನ್ನು, ಭುಜ ಮತ್ತು ಉದರ ಭಾಗ ಕಂದು ಬಣ್ಣದಲ್ಲಿರುತ್ತದೆ.

ಭುಜಗಳ ಮೇಲೆ ನೇರ ಪಟ್ಟಿಗಳಂತೆ ಈ ಬಣ್ಣ ರಚನೆಯಾಗಿದ್ದು, ಬೆನ್ನಿನ ಮೇಲೆ ಬ್ಯಾಗ್ ತೊಟ್ಟಂತೆ ಕಾಣುತ್ತದೆ. ಕಣ್ಣುಗಳು ಚಿಕ್ಕದಾಗಿದ್ದು, ಕಪ್ಪು ಬಣ್ಣದಲ್ಲಿರುತ್ತವೆ. ಕಿವಿಗಳು ಮಧ್ಯಮಗಾತ್ರದಲ್ಲಿದ್ದು, ಎಲೆಯಂತೆ ರಚನೆಯಾಗಿರುತ್ತವೆ. ಮೂತಿ ನೀಳವಾಗಿರುತ್ತದೆ. ಕಾಲುಗಳಲ್ಲಿ ದಟ್ಟವಾದ ತುಪ್ಪಳ ಬೆಳೆದಿರುತ್ತದೆ. ಮರಗಳನ್ನು ಏರುವುದಕ್ಕೆ ನೆರವಾಗುವಂತೆ ನೀಳವಾದ ಕಪ್ಪು ಬಣ್ಣದ ಉಗುರುಗಳು ಬೆಳೆದಿರುತ್ತವೆ. ಮುಂಗಾಲಿನ ಉಗುರುಗಳು ದೊಡ್ಡದಾಗಿರುತ್ತವೆ. ಬಾಲದ ಆರಂಭ ದುಂಡಾಗಿದ್ದು, ದಟ್ಟವಾಗಿ ಕೂದಲು ಬೆಳೆದಿರುತ್ತವೆ. ತುದಿ ಸಣ್ಣದಾಗಿರುತ್ತದೆ.

ಎಲ್ಲಿದೆ?
ಉತ್ತರ ಅಮೆರಿಕ ಖಂಡದ ದಕ್ಷಿಣ ಭಾಗ ಹಾಗೂ ದಕ್ಷಿಣ ಅಮೆರಿಕ ಖಂಡದ ಉತ್ತರಭಾಗದ ನಡುವಿನ ಪ್ರದೇಶಗಳೆಲ್ಲಾ ಇದರ ಸಂತತಿ ವಿಸ್ತರಿಸಿದೆ. ಕೊಲಂಬಿಯಾ, ವೆನಿಜುವೆಲಾ, ಮೆಕ್ಸಿಕೊ ಮತ್ತು ಪೆರು ರಾಷ್ಟ್ರಗಳಲ್ಲಿ ಇದನ್ನು ಕಾಣಬಹುದು. ದಟ್ಟವಾದ ಅರಣ್ಯ, ಮ್ಯಾಂಗ್ರೋವ್‌ ಕಾಡು, ನಿತ್ಯಹರಿದ್ವರ್ಣದ ಕಾಡುಗಳು ಇದರ ನೆಚ್ಚಿನ ವಾಸಸ್ಥಾನ, ಕಾಡು ಪ್ರದೇಶ, ಜೌಗು, ಅರೆಕಾಡು ಪ್ರದೇಶಗಳಲ್ಲೂ ವಾಸಿಸುತ್ತದೆ.

ಜೀವನಕ್ರಮ ಮತ್ತು ವರ್ತನೆ
ಇದು ಸಾಮಾನ್ಯವಾಗಿ ರಾತ್ರಿಯಲ್ಲಿ ಹೆಚ್ಚು ಚುರುಕಾಗಿರುತ್ತದೆ. ಕೆಲವು ಗಂಡು ಟಮಂಡುವಾಗಳು ಹಗಲಿನಲ್ಲೂ ಚುರುಕಾಗಿರುತ್ತವೆ. ಜೀವನದ ಶೇ 40ರಷ್ಟು ಅವಧಿಯನ್ನು ಮರಗಳಲ್ಲೇ ಕಳೆಯುತ್ತದೆ. ದಿನದಲ್ಲಿ ಸುಮಾರು 8 ಗಂಟೆ ಆಹಾರ ಹುಡುಕುವುದಕ್ಕೆ ಮೀಸಲಿಡುತ್ತದೆ. ಉಳಿದ ಅವಧಿಯಲ್ಲಿ ಮರದ ರೆಂಬೆಗಳು ಅಥವಾ ಪೊಟರೆಗಳಲ್ಲಿ ಕಳೆಯುತ್ತದೆ. ಸುರಕ್ಷಿತ ಪ್ರದೇಶವಿದ್ದರೆ ನೆಲದ ಮೇಲೂ ವಾಸಿಸುತ್ತದೆ. ಆದರೆ ನೆಲದ ಮೇಲೆ ವೇಗವಾಗಿ ಓಡುವ ಸಾಮರ್ಥ್ಯ ಇದಕ್ಕಿಲ್ಲ.

ಇದು ಒಂಟಿಯಾಗಿ ಜೀವಿಸಲು ಇಷ್ಟಪಡುತ್ತದೆ. ಪ್ರತಿ ಟಮಂಡುವಾ 62ರಿಂದ 170 ಎಕರೆ ವಿಸ್ತೀರ್ಣದಲ್ಲಿ ಗಡಿ ಗುರುತಿಸಿಕೊಂಡಿರುತ್ತದೆ. ವಿಶೇಷ ರಾಸಾಯನಿಕಗಳನ್ನು ಸ್ರವಿಸಿ ಇತರೆ ಟಮಂಡುವಾಗಳೊಂದಿಗೆ ಸಂವಹನ ನಡೆಸುತ್ತದೆ. ವಯಸ್ಕ ಟಮಂಡುವಾ ಸದ್ದು ಮಾಡುವುದಕ್ಕೆ ಹೆಚ್ಚು ಇಷ್ಟಪಡುವುದಿಲ್ಲ. ಆದರೆ ಮರಿಗಳು ಹೆಚ್ಚು ಸದ್ದು ಮಾಡುತ್ತವೆ. ಮರಗಳ ಮೇಲೆ ಸಂಚರಿಸುವಾಗ ಹಿಂಗಾಲುಗಳು ಮತ್ತು ಬಾಲದ ನೆರವಿನಿಂದ ದೇಹದ ಸಮತೋಲನ ಕಾಪಾಡಿಕೊಳ್ಳುತ್ತದೆ.

ಆಹಾರ
ಹೆಸರೇ ಹೇಳುವಂತೆ ಇದು ಇರುವೆಗಳನ್ನು ಹೆಚ್ಚು ಇಷ್ಟಪಟ್ಟು ತಿನ್ನುವ ಪ್ರಾಣಿ. ವಿವಿಧ ಬಗೆಯ ಕೀಟಗಳು ಮತ್ತು ಗೆದ್ದಲನ್ನೂ ಇದು ಭಕ್ಷಿಸುತ್ತದೆ. ಅಪರೂಪಕ್ಕೊಮ್ಮೆ ಕೆಲವು ಬಗೆಯ ಹಣ್ಣುಗಳನ್ನೂ ಸೇವಿಸುತ್ತದೆ.

ಸಂತಾನೋತ್ಪತ್ತಿ
ಆಹಾರ ದೊರೆಯುವ ಪ್ರಮಾಣಕ್ಕೆ ಅನುಗುಣವಾಗಿ ಇದು ವರ್ಷದ ಯಾವುದೇ ಅವಧಿಯಲ್ಲಿ ಸಂತಾನೋತ್ಪತ್ತಿ ನಡೆಸುತ್ತದೆ. ಗಂಡು ಟಮಂಡುವಾ ಗಡಿ ಪ್ರವೇಶಿಸಿದ ಹೆಣ್ಣು ಟಮಂಡುವಾಗಳ ಜೊತೆಯಾಗುತ್ತದೆ. 130ರಿಂದ 190 ದಿನಗಳ ವರೆಗೆ ಗರ್ಭಧರಿಸಿ ಒಂದು ಮರಿಗೆ ಜನ್ಮ ನೀಡುತ್ತದೆ. ಇದರ ಮರಿಯನ್ನು ಪಪ್ ಎನ್ನುತ್ತಾರೆ. ಮರಿಗಳನ್ನು ಮರದ ಪೊಟರೆಗಳಲ್ಲೇ ಬಚ್ಚಿಟ್ಟು ತಾಯಿ ಟಮಂಡುವಾ ಆರೈಕೆ ಮಾಡುತ್ತದೆ. ಕೆಲವು ದಿನಗಳ ನಂತರ ಬೆನ್ನಿನ ಮೇಲೆ ಹೊತ್ತುಕೊಂಡು ಆರೈಕೆ ಮಾಡುತ್ತದೆ. ಒಂದು ವರ್ಷದ ನಂತರ ತಾಯಿಯಿಂದ ಬೇರ್ಪಟ್ಟು ಸ್ವತಂತ್ರ ಜೀವನ ನಡೆಸುತ್ತದೆ.

ಸ್ವಾರಸ್ಯಕರ ಸಂಗತಿಗಳು
* ಗ್ರೇಟ್‌ ಆ್ಯಂಟ್ ಈಟರ್‌, ಸಿಲ್ಕಿ ಆ್ಯಂಟ್ ಈಟರ್‌, ದಕ್ಷಿಣ ಟಮಂಡುವಾ ಹಾಗೂ ಉತ್ತರ ಟಮಂಡುವಾ ಎಂದು ನಾಲ್ಕು ಪ್ರಭೇದಗಳನ್ನು ಗುರುತಿಸಲಾಗಿದೆ.
* ದೈತ್ಯ ಇರುವೆಭಕ್ಷಕ ಸುಮಾರು 26 ವರ್ಷ ಜೀವಿಸುತ್ತದೆ. ಇದು ಸುಮಾರು 7 ಅಡಿ ಉದ್ದ ಬೆಳೆಯುತ್ತದೆ.
* ಇರುವೆ ಭಕ್ಷಕಗಳಿಗೆ ಬಾಯಿದ್ದರೂ ಹಲ್ಲುಗಳು ಇರುವುದಿಲ್ಲ.
* ದೃಷ್ಟಿಶಕ್ತಿ ಮಂದವಾಗಿದ್ದರೂ ಶ್ರವಣಶಕ್ತಿ ಮತ್ತು ಆಘ್ರಾಣಶಕ್ತಿ ಚುರುಕಾಗಿರುತ್ತದೆ.
* ಪುಮಾಗಳು ಮತ್ತು ಜಾಗ್ವಾರ್‌ಗಳು ಇವನ್ನು ಹೆಚ್ಚಾಗಿ ಬೇಟೆಯಾಡುತ್ತವೆ.
* ಹಾವಿಗಿರುವಂತೆ ತೆಳುವಾದ ಮತ್ತು ನೀಳವಾದ ನಾಲಗೆ ಇದ್ದು, ಸುಮಾರು 60 ಸೆಂ.ಮೀ ಉದ್ದ ಇರುತ್ತದೆ.
* ಇದರ ಗುಂಪನ್ನು ಪರೇಡ್‌ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT