ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪು ಬಾಲದ ಗಿಡುಗ

Last Updated 27 ಜೂನ್ 2019, 16:13 IST
ಅಕ್ಷರ ಗಾತ್ರ

ಹದ್ದು, ರಣಹದ್ದುಗಳಂತೆ, ಗಿಡುಗಗಳೂ ಬೇಟೆಯಾಡುವುದಕ್ಕೆ ಹೆಸರುವಾಸಿ. ಗಿಡುಗಳಲ್ಲಿ ಕೆಲವು ತಳಿಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ಅಮೆರಿಕದಲ್ಲಿ ಕಾಣಸಿಗುವ ಕೆಂಪು ಬಾಲದ ಗಿಡುಗ (Red tailed Hawk), ತನ್ನಆಕರ್ಷಕ ದೇಹರಚನೆಯಿಂದಲೇ ಗಮನ ಸೆಳೆಯುತ್ತದೆ. ಇಂದಿನ ಪಕ್ಷಿ ಪ್ರಪಂಚದಲ್ಲಿ ಈ ಹಕ್ಕಿಯ ಬಗ್ಗೆ ತಿಳಿಯೋಣ.

ಇದರ ವೈಜ್ಞಾನಿಕ ಹೆಸರು ಬ್ಯುಟೊ ಜಮೈಕೆನಿಸಿಸ್ (Buteo jamaicensis). ಇದು ಕೂಡ ಹದ್ದು, ರಣಹದ್ದುಗಳ ಅಸಿಪಿಟ್ರಿಡೇ (Accipitridae) ಕುಟುಂಬಕ್ಕೆ ಸೇರಿದೆ.

ಹೇಗಿರುತ್ತದೆ?
ಇದು ದೈತ್ಯಗಾತ್ರದ ಹದ್ದು. ಕಪ್ಪು, ಕಂದು ಮತ್ತು ಬಿಳಿ ಬಣ್ಣದ ದಟ್ಟವಾದ ಪುಕ್ಕ ಮತ್ತು ಗರಿಗಳಿಂದ ದೇಹ ಆವೃತವಾಗಿರುತ್ತದೆ. ಮುಖ ಹದ್ದಿನ ಮುಖದಂತೆಯೇ ಕಂಡರೂ ನೋಡಿದ ಕೂಡಲೇ ಹಿಮವಾಸಿ ಗೂಬೆಯ ಮುಖದಂತೆ ಕಾಣುತ್ತದೆ. ಅಮೆರಿಕ ಖಂಡಗಳಲ್ಲಿ ಕಾಣಸಿಗುವ ದೈತ್ಯ ಗಿಡುಗಳಲ್ಲಿ ಇದು ಕೂಡ ಒಂದು. ನೀಳವಾದ ಕಂದು ಬಣ್ಣದ ಗರಿಗಳಿಂದ ಕೂಡಿದ ಬಾಲ ಹೊಂದಿರುವುದರಿಂದ ಇದಕ್ಕೆ ‘ಕೆಂಪು ಬಾಲದ ಗಿಡುಗ’ ಎಂದು ಹೆಸರಿಡಲಾಗಿದೆ. ಉದರಭಾಗ ಮತ್ತು ರೆಕ್ಕೆಯ ಒಳಭಾಗಗಳು ಬಿಳಿ ಮತ್ತು ಕಪ್ಪು ಬಣ್ಣದ ಪುಕ್ಕದಿಂದ ಕೂಡಿರುತ್ತವೆ. ಕುತ್ತಿಗೆ ಬಿಳಿ ಮತ್ತು ಕಂದು ಬಣ್ಣದ ಪುಕ್ಕದಿಂದ ಕೂಡಿದ್ದರೆ, ಕತ್ತಿನ ಮೇಲೆ ಕಂದು ಬಣ್ಣದ ಪುಕ್ಕ ಬೆಳೆದಿರುತ್ತದೆ. ತಲೆ ದುಂಡಗಿರುತ್ತದೆ. ಕಪ್ಪು ಬಣ್ಣದ ಕೊಕ್ಕು ಪುಟ್ಟದಾಗಿದ್ದು, ತುದಿಯಲ್ಲಿ ಬಾಗಿರುತ್ತದೆ. ಮಾಂಸವನ್ನು ಹೆಕ್ಕಿ ತಿನ್ನಲು ನೆರವಾಗುವಂತೆ ದೃಢವಾಗಿರುತ್ತದೆ. ಕಣ್ಣುಗಳು ಪುಟ್ಟದಾಗಿದ್ದು, ಹಳದಿ ಮತ್ತು ಕಂದು ಬಣ್ಣದಲ್ಲಿರುತ್ತವೆ. ಕಾಲುಗಳು ನೀಳವಾಗಿದ್ದು, ಹಳದಿ ಬಣ್ಣದಲ್ಲಿರುತ್ತವೆ. ದಾಳಿ ಮಾಡಲು ನೆರವಾಗುವ ಉಗುರುಗಳು ನೀಳವಾಗಿದ್ದು, ಕಪ್ಪು ಬಣ್ಣದಲ್ಲಿರುತ್ತವೆ.

ಎಲ್ಲಿದೆ?
ಈ ಹಕ್ಕಿಯ ಮೂಲ ನೆಲೆ ವೆಸ್ಟ್‌ ಇಂಡೀಸ್‌ನ ಜಮೈಕಾ. ಉತ್ತರ ಅಮೆರಿಕ ಖಂಡದ ಅಲಾಸ್ಕಾ, ಯುಕಾನ್, ವಾಯವ್ಯ ಭಾಗ, ಕೆನಾಡ, ದಕ್ಷಿಣ ಫ್ಲೊರಿಡಾ ಮತ್ತು ಮಧ್ಯ ಅಮೆರಿಕದಲ್ಲಿ ಇದನ್ನು ಕಾಣಬಹುದು. ಮರುಭೂಮಿ ಪ್ರದೇಶ, ಹುಲ್ಲುಗಾವಲು, ದಟ್ಟ ಅರಣ್ಯ, ಕೃಷಿ ಭೂಮಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇದು ಕಾಣಿಸುತ್ತದೆ.

ಜೀವನಕ್ರಮ ಮತ್ತು ವರ್ತನೆ
ಇದರ ಜೀವನಶೈಲಿ ಬಹುತೇಕ ಹದ್ದುಗಳಂತೆಯೇ ಇರುತ್ತದೆ. ಸಂತಾನೋತ್ಪತ್ತಿ ಅವಧಿಯನ್ನು ಹೊರತುಪಡಿಸಿದರೆ, ಬಹುತೇಕ ನಿಶಬ್ದವಾಗಿ ರುತ್ತದೆ. ವಯಸ್ಕ ಹಂತ ತಲುಪಿದ ಗಿಡುಗಗಳು ಮಾತ್ರ ಗಡಿ ಗುರುತಿಸಿಕೊಳ್ಳುವಾಗ ಹೆಚ್ಚು ಸದ್ದು ಮಾಡುತ್ತವೆ. ಸಂವಹನ ನಡೆಸುವುದಕ್ಕೆ ವಿಶಿಷ್ಟ ಶಬ್ದಗಳನ್ನು ಹೊರಡಿಸುತ್ತದೆ. ಇತರ ಪ್ರಾಣಿಗಳನ್ನು ಬೇಟೆಯಾಡಲು ಮುಂದಾದಾಗ ಮಾತ್ರ, ದೇಹದ ಭಂಗಿಗಳ ಮೂಲಕವೇ ಸಂವಹನ ನಡಸುತ್ತದೆ. ಜೀವನವಿಡೀ ಒಂದೇ ಹಕ್ಕಿಯೊಂದಿಗೆ ಜೊತೆಯಾಗಿರುತ್ತದೆ. ಸಂತಾನೋತ್ಪತ್ತಿ ಸಮಯವನ್ನು ಹೊರತು ಪಡಿಸಿದರೆ ಒಂಟಿಯಾಗಿ ಜೀವನ ಕಳೆಯುತ್ತದೆ. ಇದು ವಲಸೆ ಹೋಗುವ ಪ್ರವೃತ್ತಿಯ ಹಕ್ಕಿಯಾಗಿರುವುದರಿಂದ ಸದಾ ಸುತ್ತುತ್ತಿರುತ್ತದೆ. ಗಂಡು ಮತ್ತು ಹೆಣ್ಣು ಗಿಡುಗಗಳು ಒಟ್ಟಿಗೆ ಸೇರಿ ಗೂಡು ನಿರ್ಮಿಸುತ್ತವೆ. ಗೂಡು ಕಟ್ಟುವುದಕ್ಕೆ ಎತ್ತರದ ಪರ್ವತಗಳು ಸಿಗದೇ ಇದ್ದಾಗ, ಪರ್ತಗಳ ತುದಿಯಲ್ಲಿ, ಎತ್ತರದ ಬೆಟ್ಟಗಳ ಬಿರಕುಗಳನ್ನೇ ಗೂಡಾಗಿ ಪರಿವರ್ತಿಸಿಕೊಳ್ಳುತ್ತದೆ. ಒಂದು ಗೂಡನ್ನು ಹಲವು ವರ್ಷಗಳ ವರೆಗೆ ಬಳಸಿಕೊಳ್ಳುತ್ತದೆ. ಆಹಾರ ಅರಸಿ ದಿನವಿಡೀ ಸುತ್ತುತ್ತದೆ. ರಾತ್ರಿಯಲ್ಲಿ ವಿರಮಿಸುತ್ತದೆ.

ಆಹಾರ:
ದಂಶಕಗಳೇ ಇದರ ಪ್ರಮುಖ ಆಹಾರ. ಶೇ 95ರಷ್ಟು ಪ್ರಮಾಣದಲ್ಲಿ ಇವುಗಳನ್ನೇ ಬೇಟೆಯಾಡುತ್ತದೆ. ಅದರಲ್ಲಿ ಅಳಿಲುಗಳು ಮತ್ತು ಇಲಿಗಳು ಇವಕ್ಕೆ ಹೆಚ್ಚಾಗಿ ಸಿಗುತ್ತವೆ. ಕೆಲವು ಬಗೆಯ ಹಕ್ಕಿಗಳು, ಸರೀಸೃಪಗಳು, ಮೀನುಗಳನ್ನೂ ಬೇಟೆಯಾಡಿ ಭಕ್ಷಿಸುತ್ತದೆ.

ಸಂತಾನೋತ್ಪತ್ತಿ
ವರ್ಷದಲ್ಲಿ 42ರಿಂದ 46 ದಿನಗಳ ಕಾಲ ಇದು ಸಂತಾನೋತ್ಪತ್ತಿ ನಡೆಸುತ್ತದೆ. ಎರಡು ದಿನಕ್ಕೊಮ್ಮೆ 1ರಿಂದ 5 ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳು ಬಿಳಿ ಅಥವಾ ಬೂದು ಬಣ್ಣದಲ್ಲಿದ್ದು, ಕಂದು ಅಥವಾ ತಿಳಿ ನೇರಳೆ ಬಣ್ಣದ ಚುಕ್ಕಿಗಳು ಇರುತ್ತವೆ. 28ರಿಂದ 35 ದಿನಗಳ ವರೆಗೆ ಮೊಟ್ಟೆಗಳಿಗೆ ಕಾವುಕೊಟ್ಟು ಮರಿಗಳಿಗೆ ಜನ್ಮ ನೀಡುತ್ತದೆ. ಮೊಟ್ಟೆಯಿಂದ ಹೊರಬಂದ ಮರಿಗಳಿಗೆ 42ರಿಂದ 48 ದಿನಗಳ ನಂತರ ಹಾರಲು ಆರಂಭಿಸುತ್ತದೆ. ಹಾರಲು ಆರಂಭಿಸಿದ ನಂತರವೂ ಸುಮಾರು ಎರಡು ತಿಂಗಳ ಕಾಲ ತಾಯಿ ಆರೈಕೆಯಲ್ಲೇ ಇರುತ್ತವೆ. ನಂತರ ಗೂಡು ಬಿಟ್ಟು ಸ್ವತಂತ್ರ್ಯವಾಗಿ ಜೀವಿಸಲು ಆರಂಭಿಸುತ್ತದೆ. ಮರಿಗಳು ವಯಸ್ಕ ಹಂತ ತಲುಪಿದ ನಂತರ ಕೆಂಪು ಬಾಲ ರಚನೆಯಾಗುತ್ತದೆ.ಇದು ವಯಸ್ಕ ಹಂತ ತಲುಪಲು 2 ವರ್ಷ ಬೇಕು.

ಸ್ವಾರಸ್ಯಕ ಸಂಗತಿಗಳು
* ಇತರೆ ಹದ್ದುಗಳು ಬೇಟೆಯಾಡಿದ ಮಾಂಸವನ್ನು ಇದು ಕಬಳಿಸುತ್ತದೆ.
*ಇದರ ಗೂಡು 6.5 ಅಡಿ ಉದ್ದ ಮತ್ತು 3 ಅಡಿ ಅಗಲ ಇರುತ್ತದೆ!
* ಇದರ ದೃಷ್ಟಿ ಶಕ್ತಿ ಎಷ್ಟು ತೀಕ್ಷ್ಣವಾಗಿರುತ್ತದೆ ಎಂದರೆ, 100 ಅಡಿ ದೂರದಿಂದಲೇ ನೆಲದ ಮೇಲಿರುವ ಪುಟ್ಟ ಸರೀಸೃಪಗಳನ್ನು ಗುರುತಿಸುತ್ತದೆ.
* ಈ ಹಕ್ಕಿಯನ್ನು ಹಲವು ಜಾಹೀರಾತುಗಳಲ್ಲಿ ಬಳಸಿಕೊಳ್ಳಲಾಗಿದೆ.
* ಇವುಗಳ ಮೊಟ್ಟೆಯ ಒಳಭಾಗವು ಹಸಿರು ಬಣ್ಣದಲ್ಲಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT