7

ಕೇಳಿಸದ ಚಿಂವ್‌ ಚಿಂವ್‌ ಗುಬ್ಬಿ ಸದ್ದು

Published:
Updated:
ಇಲ್ಲಿನ ಹಳೆ ಬಸ್ ನಿಲ್ದಾಣದಲ್ಲಿ ರಸ್ತೆ ಬದಿ ಇರುವ ಮರದಲ್ಲಿ ಗುಬ್ಬಚ್ಚಿಗಳು

ದೇವನಹಳ್ಳಿ: ಬೆಳಗಿನ ಪ್ರಶಾಂತ ವಾತಾವರಣ, ಚಿಲಿಪಿಲಿ ಗುಡುವ ಗುಬ್ಬಚ್ಚಿಗಳು, ತಣ್ಣನೆ ಗಾಳಿಯಲಿ ಹಾರಿಹೋಗಿ ಸಂಜೆ ಸೂರ್ಯ ಮರೆಯಾದ ಬಳಿಕ ವಾಸಸ್ಥಾನಕ್ಕೆ ಸೇರುತ್ತವೆ. ನಗರದ ಜನನಿಬೀಡ ಪ್ರದೇಶದಲ್ಲಿ ಆತಂಕದಲ್ಲಿರುವ ಪಕ್ಷಿ ಸಂಕುಲ ನೆಲೆ ಕಳೆದುಕೊಳ್ಳುತ್ತಿವೆ ಎಂಬುದು ಪಕ್ಷಿ ಪ್ರೇಮಿಗಳ ಆತಂಕ.

ದೇವನಹಳ್ಳಿ ಅತ್ತ ನಗರವು ಅಲ್ಲದೆ, ಇತ್ತ ಗ್ರಾಮೀಣ ಪ್ರದೇಶವು ಅಲ್ಲದ ಸ್ಥಿತಿಯ ತಾಲ್ಲೂಕು ಕೇಂದ್ರವಾಗಿದೆ. ವಿಮಾನ ನಿಲ್ದಾಣಕ್ಕಾಗಿ 750ಕ್ಕೂ ಹೆಚ್ಚು ಹೆಕ್ಟರ್ ಅರಣ್ಯ, 11 ಕೆರೆ ಕುಂಟೆಗಳು ಅಪೋಶನವಾಗಿವೆ. ಅಭಿವೃದ್ಧಿ ಹೆಸರಿನಲ್ಲಿ ರಸ್ತೆ ಅಕ್ಕಪಕ್ಕದ ಮರಗಳು ಗರಗಸಕ್ಕೆ ಬಲಿಯಾಗುತ್ತಿವೆ. ಸಕಾಲದಲ್ಲಿ ಮರದ ಆಶ್ರಯಗಳಿಲ್ಲದೆ, ಕುಡಿಯುವ ನೀರಿಲ್ಲದೆ ವಿವಿಧ ಪ್ರಭೇದದ ಪಕ್ಷಿಗಳ ಸಮೂಹ ನಿಧಾನವಾಗಿ ಕಣ್ಮರೆಯಾಗುತ್ತಿದೆ. ಮತ್ತೊಂದೆಡೆ ಅಳಿದುಳಿದಿರುವ ಪಕ್ಷಿಗಳು ತಮ್ಮ ಬದುಕಿಗಾಗಿ ಹರಸಾಹಾಸ ಪಡುತ್ತಿವೆ ಎಂಬುದು ವಾಸ್ತವ. ಇದಕ್ಕೆ ಗುಬ್ಬಚ್ಚಿಗಳು ಉತ್ತಮ ಉದಾಹರಣೆ.

‘ಅತೀ ಸೂಕ್ಷ್ಮ ಬುದ್ಧಿಮತ್ತೆ ಇರುವ ಗುಬ್ಬಚ್ಚಿ ಎಳೆಯರ ಪ್ರಿಯವಾದ ಪಕ್ಷಿ. ಅದರ ಚಿಂವ್‌ ಚಿಂವ್‌, ಪುಟ್ಟ ದೇಹ, ಪುರ್ರೆಂದು ಹಾರುವ ಭಂಗಿ ಅವರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಮನೆಯ ಒಳ–ಹೊರಗೆ ನಿರ್ಭಯವಾಗಿ ಓಡಾಡುವ ಗುಬ್ಬಚ್ಚಿಗಳಿಗೆ ಆಶ್ರಯದ ಕೊರತೆ ಕಾಡುತ್ತಿದೆ. ಅದ ಸಂತತಿ ಅಳಿವಿಗೆ ಶಬ್ದಮಾಲಿನ್ಯ ಮುಖ್ಯ ಕಾರಣವಾಗಿದೆ. ಪ್ರಾಣಿಗಳಂತೆ ಪಕ್ಷಿಗಳೂ ಮಾನವನ ಪರೋಕ್ಷ ಸಂಘರ್ಷಕ್ಕೆ ಒಳಗಾಗುತ್ತಿವೆ ಎನ್ನತ್ತಾರೆ’ ಪಕ್ಷಿ ಮತ್ತು ಪ್ರಕೃತಿ ಪ್ರೇಮಿ ಶಿವನಾಪುರ ರಮೇಶ್.

ಪಕ್ಷಿಗಳಲ್ಲಿ ಸಾವಿರಾರು ಪ್ರಭೇದಗಳಿದ್ದವು. ತಾಲ್ಲೂಕಿನಲ್ಲಿ ಹತ್ತಾರು ಪ್ರಭೇದಗಳು ಇದೆಯೋ ಇಲ್ಲವೋ ಗೊತ್ತಿಲ್ಲ. ಕೆರೆಯಂಗಳಗಳಲ್ಲಿ ಬಿಳಿ ಕೊಕ್ಕರೆ, ಗೊರವಂಕ, ಗುಬ್ಬಚ್ಚಿ ಬೆರಳಣಿಕೆಯಷ್ಟು ಜಾತಿ ಪಕ್ಷಿಗಳು ಅಲ್ಲಲ್ಲಿ ಕಂಡುಬಂದರೂ ಜಲ, ವಾಯು, ಶಬ್ದಮಾಲಿನ್ಯಗಳಿಂದ ಪಕ್ಷಿಗಳ ಸಂತತಿ ಅಪಾಯಕಾರಿ ಮಟ್ಟಕ್ಕೆ ಇಳಿದಿದೆ. ಹೆಚ್ಚುತ್ತಿರುವ ವಾಹನ ಸಂಚಾರದಿಂದ ಮನುಷ್ಯನಿಗೆ ದಿಗಿಲು ಹುಟ್ಟಿಸುತ್ತಿದೆ. ಇನ್ನು ಪಕ್ಷಿ ಸಂಕುಲಗಳ ಗತಿ ಏನಾಗಬೇಕು. ನಮ್ಮ ಮನೆಯಲ್ಲಿ 25 ರಿಂದ 30ಗುಬ್ಬಚ್ಚಿಗಳು ಕಳೆದ ಹತ್ತಾರು ವರ್ಷಗಳಿಂದ ವಾಸವಾಗಿದೆ. ನಾವು ತೊಂದರೆ ಮಾಡಿಲ್ಲ ಎನ್ನುತ್ತಾರೆ ನಾಗಮಂಗಲದ ಅಪ್ಪಣ್ಣ.

ರಸ್ತೆ ಅಗಲೀಕರಣ, ವಿದ್ಯುತ್ ಮಾರ್ಗಕ್ಕೆ ಅಡಚಣೆ ಎಂಬ ನೆಪದಿಂದ ಮರದ ರೆಂಬೆಗಳ ಹನನ ನಿರಂತರವಾಗಿದೆ. ಪ್ರವಾಸಿ ಮಂದಿರದಲ್ಲಿ ಹೊಸ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ನೂರಾರು ವರ್ಷದ ವಿವಿಧ ಹಣ್ಣುಗಳ 14 ಬೃಹತ್ ಮರಗಳನ್ನು ಕಡಿದು ಹಾಕಲಾಗಿದೆ. ಈವರೆಗೆ ಒಂದು ಗಿಡ ಸಹ ಬೆಳೆಸಿಲ್ಲ. ಹೀಗಾದರೆ ಯಾವ ಪಕ್ಷಿ ಸಂಕುಲ ಉಳಿಯುತ್ತದೆ. ಪರಿಸರ ಸಂರಕ್ಷಣೆ ಹೇಗೆ ಸಾಧ್ಯ ಎನ್ನುತ್ತಾರೆ ಎಂ. ಆಂಜಿನಪ್ಪ.

ಪಟಾಕಿ ಶಬ್ದ ಮತ್ತು ಅದರ ಹೊಗೆ ಪಕ್ಷಿ ಸಂಕುಲದ ಸಂಕಟ

ದೀಪಾವಳಿಯಲ್ಲಿ ಸುಡುವ ಪಟಾಕಿ, ಜಾತ್ರೆ, ಸಭೆ, ಸಮಾರಂಭ, ಜನಪ್ರತಿನಿಧಿಗಳ ಗೆಲುವಿನ ಸಂಭ್ರಮ, ಹೀಗೆ ಪ್ರತಿಯೊಂದು ಖುಷಿಯನ್ನೂ ಪಟಾಕಿ ಮೂಲಕವೇ ಆಚರಿಸುವ ರಾಜಕೀಯಸ್ಥರು, ಅದರಿಂದ ಪರಿಸರಕ್ಕೆ ಧಕ್ಕೆ, ಜೀವ ಸಂಕುಲಕ್ಕೆ ದುಷ್ಪರಿಣಾಮ ಬೀರುತ್ತದೆ ಎಂಬ ಜ್ಞಾನವನ್ನು ಕಾರ್ಯಕರ್ತರಿಗೆ ಮನವರಿಕೆ ಮಾಡಿಸುವ ಪ್ರಯತ್ನ ಮಾಡಬೇಕಾಗಿದೆ. ಪರಿಸರ ಸಂರಕ್ಷಣೆ ಬಗ್ಗೆ ಭಾಷಣ ಮಾಡುವವರೆಲ್ಲರೂ ಜೀವ ಸಂಕುಲ ಉಳಿಸುವ ಬಗ್ಗೆ ಹಾಗೂ ಮನುಕುಲದ ಮೇಲೆ ಪ್ರತಿಕೂಲ ಪರಿಣಾಮ ಬೀರದಂತೆ ಎಚ್ಚರ ವಹಿಸಬೇಕಾಗಿದೆ ಎನ್ನುತ್ತಾರೆ ಸ್ಥಳೀಯರಾದ ವೆಂಕಟೇಶ್ ಮತ್ತು ಗೋವಿಂದರಾಜ್.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !