ಗದ್ದೆ, ತೋಟ, ಕೆರೆ– ಕಟ್ಟೆಗಳಲ್ಲಿ ಸಿಗುವ ಏಡಿಗಳು, ಹುಳುಹುಪ್ಪಟೆ ತಿನ್ನಲು ನರಿಗಳು ಹಳ್ಳಿಗಳತ್ತ ಬರುತ್ತವೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಅವುಗಳ ನೆಮ್ಮದಿಗೆ ಭಂಗ ತರುವ ವಾತಾವರಣ ಸೃಷ್ಟಿಯಾಗಿದೆ. ಜನಪದೀಯ ಕಥೆಗಳಲ್ಲಿ ನರಿಗಳಿಗೆ ಅಗ್ರಸ್ಥಾನ. ಅಜ್ಜಿ ಹೇಳುತ್ತಿದ್ದ ರೋಚಕ ಕಥೆಗಳ ಭಾಗವಾಗಿದ್ದ ಅವುಗಳದ್ದು ಈಗ ದಯನೀಯ ಸ್ಥಿತಿ

ಆಗ ರಾತ್ರಿ ಹತ್ತು ಗಂಟೆ. ಕತ್ತಲು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿತ್ತು. ಕೊಟ್ಟಿಗೆಯಲ್ಲಿದ್ದ ದನಕರುಗಳ ಸದ್ದು ಸಣ್ಣಗೆ ಕೇಳಿಬರುತ್ತಿತ್ತು. ತನ್ನ ಬೆಚ್ಚನೆಯ ಅಪ್ಪುಗೆಯಿಂದ ದೂರಸರಿದ ಮರಿಯನ್ನು ಹತ್ತಿರಕ್ಕೆ ಸೆಳೆಯಲು ಹೇಟೆ ಚಡಪಡಿಸುತ್ತಿತ್ತು. ಗಾಢ ಕತ್ತಲು ಕವಿದಿದ್ದರಿಂದ ಮನದಲ್ಲಿ ಆಲೋಚನೆಗಳು ಚಕ್ಕಂದವಾಡತೊಡಗಿದ್ದವು. ಆಗಷ್ಟೇ ಮಳೆ ನಿಂತಿದ್ದರಿಂದ ವಾತಾವರಣದಲ್ಲಿ ನೀರವ ಮೌನ ಆವರಿಸಿತ್ತು.

ನಮ್ಮ ಮನೆಯ ಪಕ್ಕದಲ್ಲಿಯೇ ವಿಶಾಲ ಕೆರೆಯಿದೆ. ಕಳೆದ ವರ್ಷ ಸುರಿದ ಮಳೆ ನೀರು ಕೆರೆಯನ್ನು ಜೀವಂತವಾಗಿಟ್ಟಿದೆ. ಜಿನುಗುತ್ತಿದ್ದ ಮಳೆಯ ಹನಿಗಳ ನಡುವೆ ನಿದ್ದೆಯ ಜೊಂಪು ಹತ್ತಿತ್ತು. ಪರಿಚಿತ ಕಾಡು ಪ್ರಾಣಿ ಕೂಗಿದ ಸದ್ದು. ಅದು ನರಿಯೆಂದು ಊಹಿಸಲು ಬಹುಹೊತ್ತು ಬೇಕಾಗಲಿಲ್ಲ. ಕೊರೆಯುವ ಚಳಿಯಲ್ಲಿ ಮುದುಡಿ ಮಲಗಿದ್ದ ಬೀದಿನಾಯಿಗಳಲ್ಲಿ ಒಮ್ಮೆಲೆ ಜೀವ ಸಂಚಾರವಾಯಿತು. ನರಿಯ ಕೂಗಿಗೆ ಅವುಗಳಿಂದ ತೀವ್ರ ಅಸಹನೆ ವ್ಯಕ್ತವಾಯಿತು.

ಮತ್ತೆ ಅದರ ಕೂಗಿಗಾಗಿ ಕಾತರಿಸುತ್ತಿದ್ದೆ. ಬಹಳ ಸಮಯ ಉರುಳಿತು. ಪುನಃ ಊಳಿಟ್ಟಾಗ ಅದರ ಧ್ವನಿಯಲ್ಲಿ ಆತಂಕದ ಛಾಯೆಯಿತ್ತು. ಗ್ರಾಮೀಣ ಪರಿಸರದಲ್ಲಿ ತನ್ನ ನೆಮ್ಮದಿಗೆ ಕಂಟಕವಾಗುತ್ತಿರುವ ಬೇಟೆಗಾರರನ್ನು ಗಮನಿಸಿದ ಸೂಚನೆಯಿತ್ತು. ಕಗ್ಗತ್ತಲ ರಾತ್ರಿಯಲ್ಲಿ ಅಪಾಯದ ಸನ್ನಿವೇಶವನ್ನು ಖಚಿತವಾಗಿ ಗ್ರಹಿಸಿದ ಅದರ ಜಾಣ್ಮೆಗೆ ಬೆಕ್ಕಸ ಬೆರಗಾದೆ.

ನರಿಯೊಂದು ಕೂಗಿದರೆ ಸುತ್ತಲಿನ ಪ್ರದೇಶದಲ್ಲಿ ಇರುವ ಉಳಿದ ನರಿಗಳು ಒಟ್ಟಾಗಿ ಊಳಿಡುವುದು ಸಾಮಾನ್ಯ. ಬಾಲ್ಯದಲ್ಲಿ ಕೇಳಿದ್ದ ಈ ಸದ್ದು ಸ್ಮೃತಿಪಟಲದಲ್ಲಿ ಮಿಂಚಿ ಮರೆಯಾಯಿತು. ಕೋಳಿಗಳನ್ನು ತಿನ್ನಲು ರಾತ್ರಿವೇಳೆ ಹಳ್ಳಿಗಳಿಗೆ ನುಗ್ಗಿ ಜನರನ್ನು ಕಣ್ಣಾಮುಚ್ಚಾಲೆ ಆಡಿಸುತ್ತಿದ್ದ ಚಿತ್ರಣವೂ ಕಣ್ಮುಂದೆ ಸುಳಿಯಿತು.

ಬೆಳಗಿನ ಜಾವದಲ್ಲಿ ಕೆರೆಯ ದಂಡೆಗೆ ಲಗ್ಗೆ ಇಡುತ್ತಿದ್ದವು. ಏಡಿಗಳನ್ನು ಭಕ್ಷಿಸಿ ಸೂರ್ಯ ಉದಯಿಸುವ ವೇಳೆಗೆ ತಮ್ಮ ಆವಾಸ ಸೇರಿಕೊಳ್ಳುತ್ತಿದ್ದವು. ಆದರೆ, ನರಿಯ ಒಂಟಿ ಧ್ವನಿ ಅದರ ಬದುಕು ಅವಸಾನದತ್ತ ಸಾಗುತ್ತಿರುವ ದಾರುಣ ಕಥೆಯನ್ನು ಹೇಳುತ್ತಿತ್ತು.

ಅವು ಹೆಚ್ಚು ಜಾಗರೂಕ ಜೀವಿಗಳು. ಗದ್ದೆ, ತೋಟ, ಕೆರೆ– ಕಟ್ಟೆಗಳಲ್ಲಿ ಸಿಗುವ ಏಡಿಗಳು, ಹುಳುಹುಪ್ಪಟೆ ತಿನ್ನಲು ಹಳ್ಳಿಗಳತ್ತ ಬರುತ್ತವೆ. ಆಹಾರಕ್ಕಾಗಿ ಹುಡುಕಾಟ ನಡೆಸುವ ಮೊದಲು ಊಳಿಟ್ಟು ಶತ್ರುಗಳ ಇರುವಿಕೆಯನ್ನು ಪರೀಕ್ಷಿಸುತ್ತವೆ. ಅಪಾಯದ ಸುಳಿವು ದೊರೆತರೆ ತಕ್ಷಣವೇ ಕಾಲಿಗೆ ಬುದ್ಧಿ ಹೇಳುತ್ತವೆ.

ಒಟ್ಟಾಗಿ ಊಳಿಡುವುದರ ಹಿಂದೆ ತಂತ್ರಗಾರಿಕೆಯೂ ಅಡಗಿದೆ. ಯಾವುದೇ ಒಂದು ನಿರ್ದಿಷ್ಟಪ್ರದೇಶದಲ್ಲಿ ಒಂದೇ ಪ್ರಭೇದದ ಜೀವಿಗಳು ನೆಲೆಸಿದರೆ ಆಹಾರ ಮತ್ತು ವಂಶಾಭಿವೃದ್ಧಿಗೆ ಅನಗತ್ಯ ಪೈಪೋಟಿ ಏರ್ಪಡುವುದು ಸಹಜ. ಜೊತೆಗೆ, ಸಾಂಕ್ರಾಮಿಕ ರೋಗಗಳು ಸುಲಭವಾಗಿ ಹರಡುವ ಸಾಧ್ಯತೆ ಇರುತ್ತದೆ. ಇದು ಆ ಜೀವಿಗಳ ನಿರ್ನಾಮಕ್ಕೂ ಮುನ್ನುಡಿ ಬರೆಯಬಹುದು. ಹಾಗಾಗಿ ಪ್ರಾಣಿ, ಪಕ್ಷಿಗಳು ತಮ್ಮದೇ ಸಾಮ್ರಾಜ್ಯ, ಗಡಿ ಗುರುತಿಸಿಕೊಂಡಿರುತ್ತವೆ. ಬದುಕಿನ ದೃಷ್ಟಿಯಿಂದ ಅವುಗಳಿಗೆ ಇದು ಅನಿವಾರ್ಯ.

ಸುರಕ್ಷತೆಯ ದೃಷ್ಟಿಯಿಂದ ನರಿಗಳು ಗುಂಪುಗಳಾಗಿ ಚದುರಿ ಹೋಗಿರುತ್ತವೆ. ಒಟ್ಟಾಗಿ ಊಳಿಟ್ಟು ತಮ್ಮ ಅಸ್ತಿತ್ವವನ್ನು ಖಾತರಿಪಡಿಸಿಕೊಳ್ಳುತ್ತವೆ. ಇನ್ನೊಂದೆಡೆ ತಮ್ಮ ಗಡಿಯೊಳಗೆ ಉಳಿದ ಗುಂಪುಗಳು ಪ್ರವೇಶಿಸದಂತೆ ಎಚ್ಚರಿಕೆ ನೀಡುವ ವಿಧಾನವೂ ಇದಾಗಿದೆ. ಈ ವಿಶಿಷ್ಟ ಸಂವಹನ ಪ್ರಕ್ರಿಯೆ ಅವುಗಳಿಗೆ ಮಾತ್ರ ಅರ್ಥವಾಗುತ್ತದೆ. ನಮಗೆ ಅವುಗಳ ಕೂಗಾಟ ವಿಚಿತ್ರ ಎನಿಸುತ್ತದೆ. ಆದರೆ, ಅದು ಜೀವಜಗತ್ತಿನ ಸಂವಹನದ ಒಂದು ಭಾಗ.

ಜನಪದೀಯ ಕಥೆಗಳಲ್ಲಿ ನರಿಗಳಿಗೆ ಅಗ್ರಸ್ಥಾನ. ಅಜ್ಜಿ ಹೇಳುತ್ತಿದ್ದ ರೋಚಕ ಕಥೆಗಳ ಭಾಗವಾಗಿದ್ದ ಅವುಗಳದ್ದು ಈಗ ದಯನೀಯ ಸ್ಥಿತಿ.

ನೆಲೆಗೆ ಕಂಟಕ

ಮಾನವನ ವೈಭವದ ಬದುಕಿಗೆ ನಿಸರ್ಗ ಬಲಿಯಾಗುತ್ತಿದೆ. ಜೀವಸಂಕುಲ ಅಪಾಯಕ್ಕೆ ಸಿಲುಕಿದೆ. ಜೀವಜಗತ್ತಿನಲ್ಲಿ ನೆಮ್ಮದಿಯ ಬದುಕು ಸಾಗಿಸುತ್ತಿದ್ದ ಹಲವು ಜೀವಿಗಳು ಅಳಿವಿನಂಚಿನತ್ತ ಸಾಗುತ್ತಿವೆ. ಈಗ ನರಿಗಳ ಸರದಿ.

ನರಿ ಬಿಲದ ವಾಸಿ. ಭಾರತದ ಉಪ ಖಂಡದಲ್ಲಿ ಇಂಡಿಯನ್ ಫಾಕ್ಸ್, ರೆಡ್ ಫಾಕ್ಸ್, ಟಿಬೆಟಿಯನ್ ಫಾಕ್ಸ್ ಮತ್ತು ಕಾಶ್ಮೀರ್ ಫಾಕ್ಸ್ ಪ್ರಭೇದಗಳು ಕಂಡುಬರುತ್ತವೆ. ಇಂಡಿಯನ್ ಫಾಕ್ಸ್ ಎಲ್ಲೆಡೆ ಕಂಡುಬರುತ್ತದೆ. ಹಿಮಾಲಯದ ತಪ್ಪಲಿನಿಂದ ಹಿಡಿದು ದಕ್ಷಿಣದ ಭಾಗದವರೆಗೆ ಇದರ ಇರುವಿಕೆಯನ್ನು ಕಾಣಬಹುದು. ಕರ್ನಾಟಕದಲ್ಲಿ ನರಿ (ಇಂಡಿಯನ್ ಫಾಕ್ಸ್) ಮತ್ತು ಗುಳ್ಳೆನರಿ (ಜಕಾಲ್) ಪ್ರಭೇದಗಳು ಕಂಡುಬರುತ್ತವೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪರಿಚ್ಛೇದ 2ರಲ್ಲಿ ನರಿ ಬರುತ್ತದೆ. ಇವುಗಳ ಬೇಟೆ ನಿಷಿದ್ಧ. ಅಂತರರಾಷ್ಟ್ರೀಯ ಪರಿಸರ ಸಂರಕ್ಷಣಾ ಸಂಸ್ಥೆಯ (ಐಯುಸಿಎನ್) ವರದಿ ಪ್ರಕಾರ ಇದು ಅಪಾಯದ ಪಟ್ಟಿಯಲ್ಲಿದೆ.

ಕುರುಚಲು ಕಾಡು, ಬಯಲು ಪ್ರದೇಶ, ಹುಲ್ಲುಗಾವಲು, ಕೃಷಿ ಭೂಮಿ, ಪೊದೆಗಳೇ ಇವುಗಳ ಆವಾಸ. ಕಲ್ಲಂಗಡಿ ಹಣ್ಣು, ಎಲಚಿ ಹಣ್ಣು, ಕಬ್ಬು, ದಂಶಕ ಪ್ರಾಣಿಗಳು, ಸರೀಸೃಪ ವರ್ಗಕ್ಕೆ ಸೇರಿದ ಪ್ರಾಣಿಗಳೇ ಇವುಗಳ ಆಹಾರ. ದೊಡ್ಡ ಪ್ರಾಣಿಗಳು ತಿಂದು ಉಳಿದ ಆಹಾರವನ್ನೂ ಭಕ್ಷಿಸುತ್ತವೆ. ಆ ಮೂಲಕ ಜೀವಜಾಲದ ಜಾಡಮಾಲಿಗಳಾಗಿಯೂ ಪರಿಸರದ ಸಮತೋಲನ ಕಾಪಾಡುತ್ತವೆ.

8ರಿಂದ 10 ಕೆ.ಜಿ.ಯಷ್ಟು ತೂಕ ಇರುವ ಇವುಗಳ ಆಯಸ್ಸು ಹನ್ನೆರಡು ವರ್ಷ.

ನರಿ ಅಂಜುಬುರುಕ ಪ್ರಾಣಿ. ಮನುಷ್ಯನನ್ನು ಕಂಡ ತಕ್ಷಣವೇ ಓಡಿಹೋಗುತ್ತದೆ. ಮೂರದಿಂದ ಐದು ಮರಿಗಳಿಗೆ ಜನ್ಮ ನೀಡುತ್ತದೆ. ಆದರೆ, ಸ್ವತಂತ್ರವಾಗಿ ನೆಲೆ ಕಂಡುಕೊಳ್ಳುವ ಮೊದಲೇ ಕೆಲವು ಮರಿಗಳು ಸಾವು ಕಾಣುತ್ತವೆ. ಮರಿಗಳ ಲಾಲನೆ ಪಾಲನೆಯಲ್ಲಿ ಹೆಣ್ಣು ನರಿಯ ಪಾತ್ರ ಹಿರಿದು. ಅದು ಮೃತಪಟ್ಟರೆ ಗಂಡು ನರಿಯು ಮರಿಗಳ ಪೋಷಣೆಯ ಜವಾಬ್ದಾರಿ ಹೊರುತ್ತದೆ.

ಅವು ಕುರುಚಲು ಪ್ರದೇಶ ಮತ್ತು ಕೃಷಿ ಪ್ರದೇಶವನ್ನು ಹೆಚ್ಚಾಗಿ ಇಷ್ಟಪಡುತ್ತವೆ. ಈ ಪ್ರದೇಶದಲ್ಲಿ ಬಿಲ ತೋಡಲು ಅವುಗಳಿಗೆ ಸುಲಭ. ದಟ್ಟವಾದ ಅರಣ್ಯವನ್ನು ಇಷ್ಟಪಡುವುದು ಕಡಿಮೆ. ರಸ್ತೆಯಂಚಿನ ಪ್ರದೇಶದಲ್ಲೂ ಇವುಗಳ ಬಿಲಗಳು ಕಂಡುಬರುವುದು ಹೆಚ್ಚು. ರಸ್ತೆಯಲ್ಲಿ ಸಂಚರಿಸುವ ವಾಹನಗಳ ಚಕ್ರಕ್ಕೆ ಸಿಲುಕಿ ಮೃತಪಡುವ ಪ್ರಾಣಿಗಳು ಸುಲಭವಾಗಿ ಸಿಗುವ ಆಹಾರವಾಗಿರುವುದರಿಂದ ಆವಾಸಕ್ಕೆ ಈ ಸ್ಥಳಗಳನ್ನೂ ಆಯ್ದುಕೊಳ್ಳುತ್ತವೆ.

ಕಳೆದ ಒಂದು ದಶಕದ ಅವಧಿಯಲ್ಲಿ ಇವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಗ್ರಾಮೀಣ ಜಗತ್ತಿನಲ್ಲಿ ಅವುಗಳ ನೆಮ್ಮದಿ ಕೆಡಿಸುವ ವಾತಾವರಣ ಸೃಷ್ಟಿಯಾಗಿರುವುದೇ ಇದಕ್ಕೆ ಕಾರಣ. ಹಳ್ಳಿಗಳಲ್ಲಿ ಹೆಚ್ಚಿರುವ ಬೀದಿನಾಯಿಗಳು ಇವುಗಳ ನಿದ್ದೆಗೆಡಿಸಿವೆ. ನಾಯಿಗಳಿಗೆ ಕಾಡುವ ರೇಬಿಸ್ ರೋಗ ನರಿಗಳ ಬದುಕಿಗೆ ಮಾರಕವಾಗಿದೆ.

ಬಿಲಗಳು ಅವುಗಳ ಸಂತಾನೋತ್ಪತ್ತಿಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ. ಆದರೆ, ಬಿಲ ತೋಡಲು ಮುಖ್ಯ ನೆಲೆಯಾದ ಕೃಷಿ ಭೂಮಿ, ಹುಲ್ಲುಗಾವಲು ಪ್ರದೇಶ ಕೈಗಾರಿಕೆಗೆ ಬಳಕೆಯಾಗುತ್ತಿದೆ. ಕೆಲವೆಡೆ ಗಣಿಗಾರಿಕೆ ಪ್ರದೇಶವಾಗಿ ರೂಪಾಂತರಗೊಂಡಿದೆ. ಆವಾಸ ಛಿದ್ರಗೊಂಡಿರುವುದರಿಂದ ಅವುಗಳ ಬದುಕು ದಿಕ್ಕೆಟ್ಟಿದೆ. ಇನ್ನೊಂದೆಡೆ ಗದ್ದೆ, ತೋಟಗಳಲ್ಲಿ ಬಳಸುವ ಅತಿಯಾದ ಕ್ರಿಮಿನಾಶಕ ಅವುಗಳ ಸಂತಾನೋತ್ಪತ್ತಿ ಮೇಲೆ ಅಡ್ಡಪರಿಣಾಮ ಬೀರಿದೆ.

ಬೇರು ಬಿಟ್ಟ ಮೌಢ್ಯ

ನರಿಗಳು ಕುತಂತ್ರ ಜೀವಿಗಳು ಎನ್ನುವುದು ಜನರ ನಂಬಿಕೆ. ಸಾಕುಪ್ರಾಣಿಗಳನ್ನು ತಿನ್ನುತ್ತವೆ ಎಂದು ಗ್ರಾಮೀಣರಿಗೆ ಕೋಪ. ಹಾಗಾಗಿ, ಅವುಗಳಿಗೆ ಉರುಳು ಹಾಕುವುದು, ಮರಿಗಳಿಗೆ ವಿಷಪ್ರಾಶನ ಮಾಡುವುದು, ಗುಂಡಿಕ್ಕಿ ಕೊಲ್ಲುವುದು ನಡೆಯುತ್ತಿದೆ. ಸಮಾಜದಲ್ಲಿ ಬೇರೂರಿರುವ ಮೌಢ್ಯ ಕೂಡ ಅವುಗಳ ಜೀವಕ್ಕೆ ಸಂಚಕಾರ ತಂದಿದೆ.

ಮಾಟ, ಮಂತ್ರಗಳಿಗೆ ಅವುಗಳ ಚರ್ಮ, ಬಾಲ, ಉರುಗು, ಮೂಳೆಗಳನ್ನು ಬಳಸಲಾಗುತ್ತಿದೆ. ಅವಯವಗಳನ್ನು ತಾಯತದಲ್ಲಿಟ್ಟು ಮಾರಾಟ ಮಾಡುವುದು ಉಂಟು. ನರಿ ಶುಭಸೂಚಕ ಎಂಬ ಪ್ರತೀತಿ ಇದೆ. ‘ನನ್ನನ್ನು ನೋಡು ನಿನಗೆ ಯೋಗ ಬರುತ್ತದೆ’ ಎಂಬ ಬರಹವಿರುವ ನರಿಗಳ ಫೋಟೊಗಳು ಬಡವ, ಬಲ್ಲಿದರೆನ್ನದೆ ಎಲ್ಲರ ಮನೆಯ ಗೋಡೆಗಳ ಮೇಲೂ ನೇತಾಡುವುದು ಸಾಮಾನ್ಯ. ಆದರೆ, ಅವುಗಳು ಅಳಿವಿನತ್ತ ಸಾಗುತ್ತಿರುವುದು ನಾಗರಿಕ ಜಗತ್ತಿಗೆ ಶುಭಸೂಚಕವಲ್ಲ.

ಕ್ರೂರ ಪದ್ಧತಿ

ಮೈಸೂರು ಭಾಗದ ಕೆಲವೆಡೆ ವಿಚಿತ್ರ ಆಚರಣೆ ಇದೆ. ಈ ಕ್ರೂರ ಪದ್ಧತಿಗೆ ನರಿಗಳೇ ಬಲಿಪಶು. ಸಂಕ್ರಾಂತಿ ಹಬ್ಬದಂದು ನಡೆಯುವ ಜಾತ್ರೆಗಳಲ್ಲಿ ಹರಕೆಯ ರೂಪದಲ್ಲಿ ದೇವರ ಗುಡಿಯ ಸುತ್ತಲೂ ಇವುಗಳನ್ನು ಮೆರವಣಿಗೆ ಮಾಡುವುದು ವಾಡಿಕೆ.ಅರಣ್ಯ ಇಲಾಖೆಯ ಕಣ್ಣುತಪ್ಪಿಸಿ ಈ ಆಚರಣೆ ನಡೆಯುತ್ತದೆ.

ಹಬ್ಬಕ್ಕೂ ಮೂರು ದಿನ ಮೊದಲೇ ನರಿಗಳ ಬೇಟೆ ನಡೆಯುತ್ತದೆ. ಗ್ರಾಮದೇವತೆಗೆ ಪೂಜೆ ಸಲ್ಲಿಸಿದ ಬಳಿಕ ಜನರು ನರಿಗಳನ್ನು ಹಿಡಿಯುವ ಕೆಲಸ ಆರಂಭಿಸುತ್ತಾರೆ. ಎರಡು ಗುಂಪುಗಳಾಗಿ ವಿಂಗಡಣೆಯಾಗಿ ಹತ್ತಿರದ ಕಾಡಿಗೆ ತೆರಳುತ್ತಾರೆ. ಬಿಲವನ್ನು ಗುರುತಿಸುವುದು ಒಂದು ಗುಂಪಿನ ಕೆಲಸ. ಇನ್ನೊಂದು ಗುಂಪು ಡ್ರಮ್ ಬಾರಿಸುತ್ತಾ, ಗದ್ದಲ ಶುರುವಿಟ್ಟುಕೊಳ್ಳುತ್ತದೆ. ಇದಕ್ಕೂ ಮೊದಲೇ ಬಿಲದ ಬಳಿ ಗುಂಪಿನ ಕೆಲವು ಸದಸ್ಯರು ಬಲೆ ಬೀಸಿ ಹೊಂಚುಹಾಕಿ ಕುಳಿತಿರುತ್ತಾರೆ.

ದಿಢೀರ್ ಗದ್ದಲದಿಂದ ನರಿಗಳು ಬೆದರುತ್ತವೆ. ದಿಕ್ಕಕಾಣದೆ ಬಿಲದಿಂದ ಹೊರನುಗ್ಗಿ ತಪ್ಪಿಸಿಕೊಳ್ಳಲು ಮುಂದಾಗುವಾಗ ಬಲೆಯೊಳಗೆ ಸಿಲುಕುತ್ತವೆ. ಕೆಲವೊಮ್ಮೆ ಐದಾರು ನರಿಗಳು ಸಿಕ್ಕಿಬೀಳುವುದು ಉಂಟು. ಜನರ ಆರ್ಭಟಕ್ಕೆ ಬೆದರಿದ ಕೆಲವು ಬಲೆಯಲ್ಲಿಯೇ ಕೊನೆಯುಸಿರೆಳೆಯುತ್ತವೆ.

ದೇವರ ಹರಕೆಗೆ ಒಂದು ನರಿಯನ್ನು ಗುರುತಿಸಲಾಗುತ್ತದೆ. ಅದರ ಕಾಲು ಮತ್ತು ಬಾಯಿಗೆ ಹಗ್ಗ ಬಿಗಿಯಲಾಗುತ್ತದೆ. ಅದನ್ನು ದೇವಸ್ಥಾನದ ಹಿಂಭಾಗಕ್ಕೆ ತಂದು ಜತನದಿಂದ ಇಡಲಾಗುತ್ತದೆ. ಜಾತ್ರೆಯ ದಿನದಂದು ಅದರ ಕಿವಿಗೆ ಬಂಗಾರದ ಒಲೆ ತೊಡಿಸಲಾಗುತ್ತದೆ. ಆಗ ಕಿವಿಯಲ್ಲಿ ರಕ್ತ ಸೋರುತ್ತದೆ. ಅದರ ಕೊರಳಿಗೆ ಹೂವಿನ ಹಾರ ಹಾಕಲಾಗುತ್ತದೆ. ಅದರ ಮುಂದೆ ಜನರು ಮೈಮರೆತು ನೃತ್ಯ ಮಾಡುತ್ತಾರೆ. ಬಳಿಕ ಗುಡಿಯ ಸುತ್ತಲೂ ಅದನ್ನು ಹೊತ್ತು ಮೆರವಣಿಗೆ ಮಾಡುತ್ತಾರೆ. ಈ ಎಲ್ಲ ಪ್ರಕ್ರಿಯೆ ನಡೆಯುವುದು ರಾತ್ರಿಯಲ್ಲಿ.

ಕಟ್ಟಿದ್ದ ಹಗ್ಗವನ್ನು ಬಿಚ್ಚಲಾಗುತ್ತದೆ. ಅದರ ಬಾಲಕ್ಕೆ ಪಟಾಕಿ ಕಟ್ಟಿ ಬೆಂಕಿ ಹಚ್ಚುತ್ತಾರೆ. ಅರೆಜೀವಗೊಂಡ ಅದು ಜೀವ ಉಳಿಸಿಕೊಳ್ಳಲು ದಿಕ್ಕೆಟ್ಟು ಕಗ್ಗತ್ತಲಿನಲ್ಲಿ ಓಡುತ್ತದೆ. ಕೆಲವೊಮ್ಮೆ ಹಸಿದ ನಾಯಿಗಳಿಗೆ ಆಹಾರವೂ ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.