ಎತ್ತಿನ ಬಾಲ ಹಿಡಿದು ಹಳ್ಳ ದಾಟಿದೆ...

7

ಎತ್ತಿನ ಬಾಲ ಹಿಡಿದು ಹಳ್ಳ ದಾಟಿದೆ...

Published:
Updated:

1965ರ ಮಳೆಗಾಲವದು. ನಾನಾಗ 5ನೇ ತರಗತಿ ಓದುತ್ತಿದ್ದೆ. ನಮ್ಮದು ಕೃಷಿ ಕುಟುಂಬವಾದ್ದರಿಂದ ಭಾನುವಾರ ಅಪ್ಪ–ಅಮ್ಮನ ಜತೆ ಎತ್ತುಗಳನ್ನು ಕರೆದುಕೊಂಡು ಹೊಲಕ್ಕೆ ಹೋಗಿದ್ದೆವು. ಮಧ್ಯಾಹ್ನದ ಹೊತ್ತಿಗೆ ಮಳೆ ಬರುವ ಸೂಚನೆ ಕಂಡು ಅಪ್ಪ ಮನೆಗೆ ಹೋಗಲು ಸೂಚಿಸಿದರು. ಅಮ್ಮ ತಲೆ ಮೇಲೆ ಬುಟ್ಟಿ ಹೊತ್ತು ನಡೆದರೆ, ನಾನು ಎರಡೂ ಎತ್ತುಗಳ ಹಗ್ಗ ಹಿಡಿದು ಖುಷಿಯಿಂದ ಹೊರಟೆ. ಆದರೆ, ಆ ಖುಷಿ ಸ್ವಲ್ಪ ಸಮಯದಲ್ಲೇ ಕಾಣೆಯಾಯ್ತು.  ಮೋಡ ಕಪ್ಪಾಗಿ ಮಳೆ ಜೋರಾಗಿ ಸುರಿಯತೊಡಗಿತು. ಮಳೆಯ ಜತೆಗೆ ಮಿಂಚು ಬೇರೆ. ನಾನು ಮತ್ತು ಎತ್ತುಗಳ ಸಮೀಪವೇ ಸಿಡಿಲು ಬಡಿದ ರಭಸಕ್ಕೆ ಎತ್ತುಗಳ ನನ್ನ ಕೈಯಿಂದ ಹಗ್ಗ ಕಿತ್ತುಕೊಂಡು ಓಡತೊಡಗಿದವು.

ನಮ್ಮನೆ ಹೊಲದಿಂದ ಮೂರು ಕಿ.ಮೀ. ದೂರವಿತ್ತು. ಹೊಲ ಮತ್ತು ಊರಿನ ಮಧ್ಯೆ ಇದ್ದ ಆಹುತಿ ಹಳ್ಳ ವರ್ಷವೆಲ್ಲಾ ಹರಿಯುತ್ತಿತ್ತು. ನೀರಿನ ಹರಿವು ಹೆಚ್ಚಾದಾಗ ಸೇತುವೆ ದಾರಿ ಬಳಸುತ್ತಿದ್ದೆವು. ಮಳೆ–ಸಿಡಿಲಿನ ಕಾರಣ ಎತ್ತುಗಳು ಹೆದರಿ ಹಳ್ಳದ ದಾರಿಯಲ್ಲಿ ಹೋಗಿಬಿಟ್ಟವು. ಅವುಗಳ ಹಿಂದೆಯೇ ಹೋಗುವುದು ನನಗೆ ಅನಿವಾರ್ಯವಾಯ್ತು. ಹಳ್ಳದ ಪ್ರವಾಹದಲ್ಲಿ ಎತ್ತುಗಳ ಹೋಗುತ್ತಿದ್ದರೆ, ಅವುಗಳ ಬಾಲ ಹಿಡಿದು ಸೊಂಟಮಟ್ಟದ ನೀರಿನಲ್ಲಿ ದೇವರನ್ನು ನೆನೆಯುತ್ತಾ ಅಂತೂಇಂತೂ ಹಳ್ಳ ದಾಟಿದೆ. ಈ ಸಾಹಸವನ್ನು ನೆನಪಿಸಿಕೊಂಡರೆ ಈಗಲೂ ಮೈ ಜುಮ್ಮೆನ್ನುತ್ತದೆ. ಅಂದಿನ ಮಳೆಗಾಲ ನೆನೆದರೆ ಈಗಲೂ ಮನಸಿಗೆ ಮುದವೆನಿಸುತ್ತದೆ. ಆಗ ಜನರು ಮಳೆಗಾಲದಲ್ಲಿ ಊರಲ್ಲೇ ಇರುತ್ತಿದ್ದರು. ಸನ್ಯಾಸಿಗಳು ಚಾರ್ತುಮಾಸ ಆಚರಿಸುತ್ತಿದ್ದರು. ಈಗ ಮೂರು ದಿನ ಬಿಡದೇ ಮಳೆ ಬಂದರೆ ಸಾಕು ಟಿ.ವಿ.ಯವರು ದೊಡ್ಡ ಅನಾಹುತವಾದಂತೆ ವರದಿ ಮಾಡುತ್ತಾರೆ. ಮಳೆಗಾಲದಲ್ಲಿ ಒಂದೆರಡು ತಿಂಗಳು ಸತತ ಮಳೆಯಾಗಿ ಹಳ್ಳ–ನದಿಗಳು  ಹರಿದರೆ ಕೆರೆ, ಜಲಾಶಯಗಳು ತುಂಬಿ ಕೃಷಿ ಉಳಿಯುತ್ತದೆ.
–ಎಚ್.ಟಿ. ಲೋಕೇಶ್, ಲಕ್ಷ್ಮೀಶ ನಗರ, ಕಡೂರು

*
ಮ‌ಳೆಯಲಿ ಜೊತೆಯಲಿ‍...
ಬೇಸಿಗೆ ರಜೆ ಮುಗಿದು ಶಾಲೆ ಶುರುವಾಗುವ ಹೊತ್ತಿಗೆ ಮಳೆಗಾಲವೂ ಆರಂಭ. ಬಾಲ್ಯದಲ್ಲಿ ಶಾಲೆಯಲ್ಲಿ ಪಾಠ ಮಾಡುವಾಗ ಮಳೆ ಬಂದರೆ ಸಾಕು ಶಿಕ್ಷಕರು, ಸಿಡಿಲು–ಗುಡುಗು–ಮಳೆ ಶಬ್ದಕ್ಕೆ ಪಾಠ ಮಾಡದೇ ನೀವೇ ಓದಿಕೊಳ್ಳಿ ಅಂತ ಬಿಡುತ್ತಿದ್ದರು. ಅವರು ತಮ್ಮ ಇತರ ಸಹ ಶಿಕ್ಷಕರ ಜತೆ ಮಾತನಾಡುತ್ತಿದ್ದರೆ ನಮಗೂ ಅಷ್ಟೇ ಬೇಕಾಗುತ್ತಿತ್ತು ನಮ್ಮ ಪಾಡಿಗೆ ನಾವು ಮಜಮಾಡಲು. ಒಂದರ್ಥದಲ್ಲಿ ಮಳೆ ನಮ್ಮ ಆಸೆಯನ್ನು ಪೂರೈಸುತ್ತಿತ್ತು!

ಆ ವಯಸ್ಸಿನಲ್ಲಿ ನಮಗೆ ಪಾಠಕ್ಕಿಂತ ಆಟವೇ ಮುಖ್ಯವಾಗಿತ್ತು. ಮಳೆಯಲ್ಲೇ ನಾಲ್ಕು ಜನರ ಗುಂಪು ಕಟ್ಟಿಕೊಂಡು ಕಳ್ಳ ಪೊಲೀಸ್ ಆಟ ಆಡುತ್ತಿದ್ದರೆ, ಮತ್ತೆ ಕೆಲವರು ಪುಸ್ತಕ ಎಡಬದಿಯ ಪುಟದ ಚಿತ್ರಗಳನ್ನು ಲೆಕ್ಕಾ ಹಾಕಿ ಎದುರಾಳಿ ಕೈಗೆ ಕೊಡೋದು, ಅವರು ಬಲಬದಿಯ ಪುಟದಲ್ಲಿರುವ ಚಿತ್ರಗಳನ್ನು ಲೆಕ್ಕ ಹಾಕಿ ವಾಪಸ್ ಕೊಡುವ ಆಟ ಆಡುತ್ತಿದ್ದರು. ಹೀಗೆ ಅನೇಕ ಆಟಗಳನ್ನು ಆಡುತ್ತಿದ್ದೆವು. ಅವೆಲ್ಲಾ ಈಗ ನೆನಪು ಮಾತ್ರ. ಇನ್ನು ಮಳೆಯಲ್ಲಿ ಪೇಪರ್ ದೋಣಿ ಮಾಡಿ ಆಡುತ್ತಿದ್ದನ್ನು ಮರೆಯುವುದುಂಟೇ?

ಮಳೆಯಲ್ಲಿ ನೆನೆದು ಮನೆಗೆ ಹೋದಾಗ ಅಮ್ಮ ನಮ್ಮ ತಲೆ ಒರೆಸಿ, ಬಟ್ಟೆ ಬದಲಿಸಲು ಹೇಳಿ, ಬಿಸಿಬಿಸಿಯಾಗಿ ಏನಾದರೂ ತಿಂಡಿ ಮಾಡಿಕೊಡುತ್ತಿದ್ದಳು. ಒಟ್ಟಾರೆ ಹೇಳಬೇಕೆಂದರೆ ಬಾಲ್ಯದ ಮಳೆಗಾಲ ನನ್ನ ಪಾಲಿಗೆ ಅದ್ಭುತವಾಗಿತ್ತು.
 –ರಷೀದ್ ಮಸೂತಿ, ಶಿರಹಟ್ಟಿ

*
ಬಾಲ್ಯದ ನೆನಪು
ಮಳೆಗಾಲ ಅಂದರೆ ಸಾಕು ಮೈರೋಮಾಂಚನವಾಗುತ್ತದೆ. ಬಾಲ್ಯದ ನೆನಪು ಮರುಕಳಿಸುತ್ತದೆ. ಬಾಲ್ಯದಲ್ಲಿ ಧೋ ಎಂದು ತಿಂಗಳಾನುಗಟ್ಟಲೇ ಎಡೆಬಿಡದೇ ಸುರಿಯುತ್ತಿದ್ದ ಮಳೆಯ ನೆನಪಾಗುತ್ತದೆ. ಮಳೆಗಾಲದಲ್ಲಿ ಶಾಲೆಗೆ ಹೋಗುವಾಗ ರೇನ್ ಕೋಟ್ ಹಾಕಿ ಕೊಳ್ಳುತ್ತಿದ್ದೆವು. ರೇನ್ ಕೋಟ್ ಹರಿದಿದ್ದರೆ ಆ ಜಾಗಕ್ಕೆ ಪ್ಲಾಸ್ಟಿಕ್ ಹೊಂಚುತ್ತಿದ್ದೆವು. ತಲೆ ನೆನಯಬಾರದು ಎಂದು ಪಾಟಿಚೀಲವನ್ನು ತಲೆಯ ಮೇಲೆ ಹಿಡಿದು ಗಡಿಬಿಡಿಯಾಗಿ ಓಡಿ ಹೋಗುತ್ತಿದ್ದೆವು.

ನಮ್ಮದು ಹಂಚಿನ ಮನೆ. ಅದಕ್ಕೆ ನೂರಾರು ತೂತುಗಳು. ಆ ತೂತಿನಿಂದ ಮಳೆಹನಿ ಬೀಳುತ್ತಿದ್ದನ್ನು ತಡೆಯಲು ಮನೆಯಲ್ಲಿದ್ದ ಸಣ್ಣಪುಟ್ಟ ಪಾತ್ರೆಗಳನ್ನು ಇಡುತ್ತಿದ್ದೆವು. ಮಳೆ ಜೋರಾಗಿ ಬಂದಾಗ ಮಳೆ ಹೊರಗೆ ಬರುತ್ತಿದೆಯೋ ಅಥವಾ ನಮ್ಮನೆಯೊಳಗೆ ಬರುತ್ತಿದೆಯೇ ಅನ್ನುವ ಭಾವ ಮೂಡುತ್ತಿತ್ತು. ಮಳೆ ನಿಂತ ಮೇಲೆ ಪಾತ್ರೆಯಲ್ಲಿ ತುಂಬಿರುತ್ತಿದ್ದ ನೀರನ್ನು ಹೊರಗೆ ಚೆಲ್ಲುವುದು ನಮ್ಮ ಕಾಯಕವಾಗಿತ್ತು.
–ವೀಣಾ ಕೆ.ಕೆ., ವಿದ್ಯಾನಗರ, ಹುಬ್ಬಳ್ಳಿ

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !