ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಜಾಗೃತಿಗೆ ಬಟ್ಟೆಯ ಕಾಗದ

Last Updated 26 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಹೆಚ್ಚಿತ್ತಿರುವ ಜಾಗತಿಕ ತಾಪಮಾನಕ್ಕೆ ಮರಗಳ ಮಾರಣಹೋಮ ಪ್ರಮುಖ ಕಾರಣಗಳಲ್ಲಿ ಒಂದು. ಕಾಗದ ತಯಾರಿಗೆ ಹೆಚ್ಚಾಗಿ ಮರಗಳನ್ನು ಬಳಸಲಾಗುತ್ತಿದೆ. ಕಾಗದಕ್ಕಾಗಿ ಮರಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಏನಿದೆ ಎಂದು ಯುವ ಉದ್ಯಮಿ ಕಾವ್ಯಾ ಮಾದಪ್ಪ ಯೋಚಿಸಿದರು. ಯೋಚಿಸಿ ಸುಮ್ಮನಾಗದೇ ಇದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನೂ ಅವರು ಮಾಡಿದರು.

ಸತತ ಎರಡು ವರ್ಷಗಳ ಅಧ್ಯಯನ ಮತ್ತು ಪರಿಶ್ರಮದ ಫಲದಿಂದ ಮರಗಳ ಬದಲಿಗೆ ಚಿಂದಿ ಬಟ್ಟೆಗಳಿಂದ ಕಾಗದ ತಯಾರಿಸಬಹುದೆಂದು ಕಂಡುಕೊಂಡರು. ಅವರ ಪ್ರಯೋಗ ಫಲ ನೀಡಿತು. ತಡಮಾಡದೇ ಪೀಣ್ಯದಲ್ಲಿ ಏಳು ತಿಂಗಳ ಹಿಂದೆ ‘ಬ್ಲೂ ಕ್ಯಾಟ್‌ ಪೇಪರ್‌’ ಕಾರ್ಖಾನೆಯೊಂದನ್ನು ಸ್ಥಾಪಿಸಿ ಕಾವ್ಯಾ ಚಿಂದಿ ಬಟ್ಟೆಗಳಿಂದ ಕಾಗದ ತಯಾರಿಸುತ್ತಿದ್ದಾರೆ.

‘ಗಾರ್ಮೆಂಟ್ಸ್‌ಗಳಲ್ಲಿ ಉಡುಪು ತಯಾರಿಸಿದ ನಂತರ ಉಳಿಯುವ ಚಿಂದಿ ಬಟ್ಟೆಗಳನ್ನು ನಾವು ಸಂಗ್ರಹಿಸಿದೆವು. ಅವನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ದ್ರವರೂಪಕ್ಕೆ ಬದಲಾಯಿಸುತ್ತೇವೆ. ಆ ದ್ರವರೂಪದ ಚಿಂದಿಯನ್ನು ಬಳಸಿ ದೊಡ್ಡ ಗಾತ್ರದ ಕಾಗದ ಹಾಳೆಗಳನ್ನು ತಯಾರಿಸುತ್ತೇವೆ. ಈ ಹಾಳೆಗಳನ್ನು ಬಿಸಿಲಿಗಿಟ್ಟು ಒಣಗಿಸುತ್ತೇವೆ’ ಎಂದು ಕಾಗದ ತಯಾರಿ ಕುರಿತು ಸಂಕ್ಷಿಪ್ತವಾಗಿ ವಿವರಿಸುತ್ತಾರೆ ಕಾವ್ಯಾ.

ಮರಗಳು ಮತ್ತು ಪರಿಸರವನ್ನು ರಕ್ಷಿಸುವ ಉದ್ದೇಶದಿಂದ ಈಚೆಗಷ್ಟೇ ಅವರು ‘ಬೆಂಗಳೂರು ಬೈ ಡಿಸೈನ್’ ಉತ್ಸವದ ಅಂಗವಾಗಿ ಯುಬಿಸಿಟಿಯ ಮುಖ್ಯದ್ವಾರದ ಮೆಟ್ಟಿಲುಗಳ ಮೇಲೆ ಚಿಂದಿಯಿಂದ ತಯಾರಿಸಿದ ಕಾಗದದ ಹಾಳೆಗಳನ್ನು ಹಾಸಿ ಅದರ ಮೇಲೆ ಕಾಗದದಿಂದಲೇ ತಯಾರಿಸಿದ ಹಕ್ಕಿಯ ಕಲಾಕೃತಿಗಳನ್ನು ಹರಡಿ ಜಾಗೃತಿ ಮೂಡಿಸಿದ್ದಾರೆ.

‘ಮರಗಳನ್ನು ರಕ್ಷಿಸಿದರೆ, ಪರಿಸರ ಸಂರಕ್ಷಣೆ ಜತೆಗೆ ಪಕ್ಷಿ ಸಂಕುಲಕ್ಕೂ ನೆಲೆ ಸಿಕ್ಕಂತಾಗುತ್ತದೆ. ಕಾಗದ ತಯಾರಿಗೆ ಮರಗಳನ್ನೇ ಅವಲಂಬಿಸಬೇಕಾದ ಅವಶ್ಯಕತೆ ಇಲ್ಲ ಎಂಬುದನ್ನು ತಿಳಿಸಲು ಈ ಪ್ರಯತ್ನ ಮಾಡಿದ್ದೇವೆ’ ಎಂದು ಅವರು ಹೇಳಿದರು.

‘ಈ ವಿಷಯವನ್ನು ಪರಿಣಾಮಕಾರಿಯಾಗಿ ಮನದಟ್ಟು ಮಾಡಿಕೊಡಬೇಕು ಎಂಬ ಉದ್ದೇಶದಿಂದ ಯುಬಿಸಿಟಿಯ ಮೆಟ್ಟಿಲುಗಳ ಮೇಲೆ, ವಿಶೇಷ ಕಲಾಕೃತಿ ಮೂಡಿಸಬೇಕೆಂದು ನಿರ್ಧರಿಸಿದೆವು. ಸ್ಥಳಾವಕಾಶ ಹೆಚ್ಚಾಗಿ ಇದ್ದುದರಿಂದ ಮತ್ತಷ್ಟು ಪರಿಣಾಮಕಾರಿಯಾಗಿ ತೋರಿಸಬಹುದು ಎನಿಸಿತು. ಈ ಕಲಾಕೃತಿಯ ಕೆಳಭಾಗದಲ್ಲಿ ಹಕ್ಕಿಗಳು ವಿರಳವಾಗಿರುವಂತೆ ತೋರಿಸಲಾಗಿದ್ದು, ಮೇಲ್ಭಾಗಕ್ಕೆ ಹೋದಂತೆಲ್ಲಾ ಒಟ್ಟು ಗೂಡಿರುವಂತೆ ಮಾಡಲಾಗಿದೆ. ಪಕ್ಷಿಗಳ ಬಣ್ಣವನ್ನು ಬದಲಾಯಿಸುತ್ತಾ ಅವು ಬೆಳಕಿನ ಆಕರ್ಷಣೆಗೆ ಒಳಗಾಗುತ್ತವೆ ಎಂದು ವಿವರಿಸಲಾಗಿದೆ. ಸಾಮಾನ್ಯವಾಗಿ ಹಕ್ಕಿಗಳು ತಮ್ಮ ಗುರಿ ಅಥವಾ ಗೂಡು ಸಮೀಪಿಸುತ್ತಿದ್ದಂತೆಯೇ ಒಟ್ಟುಗೂಡುತ್ತವೆ ಎಂಬುದನ್ನೂ ಈ ಮೂಲಕ ವಿವರಿಸುವ ಪ್ರಯತ್ನ ಮಾಡಿದ್ದೇವೆ’ ಎಂದು ಅವರು ಹೇಳಿದರು.

‘ಈ ಕಲಾಕೃತಿ 300 ಅಡಿ ಉದ್ದವಿದ್ದು, 3,500 ಚ.ಅಡಿ ವಿಸ್ತೀರ್ಣವಿದೆ. ಇದಕ್ಕಾಗಿ ಸುಮಾರು ಸಾವಿರ ಕಾಗದ ಹಾಳೆಗಳನ್ನು ಬಳಸಿದ್ದೇವೆ. ಅದರ ಮೇಲೆ ಸುಮಾರು 1,300 ಕಾಗದ ಹಕ್ಕಿಗಳನ್ನು ತಯಾರಿಸಿದ್ದೇವೆ. ಇದಕ್ಕಾಗಿ 35 ಮಂದಿ ಶ್ರಮಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಈ ಪ್ರದರ್ಶನ ಮುಗಿದ ನಂತರ ಇವನ್ನು ಪುನರ್ಬಳಕೆ ಮಾಡಿ ಹೊಸದಾಗಿ ಏನಾದರೂ ತಯಾರಿಸುವ ಉದ್ದೇಶವಿದೆ ಎಂದರು.

ಹೆಚ್ಚಿನ ಮಾಹಿತಿಗೆ: bengalurubydesign.com

**

ಬೆಂಗಳೂರು ಬೈ ಡಿಸೈನ್ ಉತ್ಸವದಲ್ಲಿ ಕಲಾಕೃತಿಗಳ ಪ್ರದರ್ಶನ ಮತ್ತು ಕಾರ್ಯಾಗಾರ: ಸ್ಥಳಗಳು–ಯುಬಿಸಿಟಿ, ಯಲಹಂಕದ ಸೇಂಟ್ ಮಾರ್ಕ್ಸ್ ವೃತ್ತ, ಎಲೆಕ್ಟ್ರಾನಿಕ್ಸ್ ಸಿಟಿ, ವಿಆರ್ ಬೆಂಗಳೂರು, ರೆಸಿಡೆನ್ಸಿ ರಸ್ತೆ, ಕಫ್ನು, ಶಿರಸಿ ಸ್ಕೂಲ್ ಆಫ್ ಆರ್ಟ್ ವೈಟ್‌ಫೀಲ್ಡ್ ಮತ್ತು ವೀ ವರ್ಕ್‌ನಲ್ಲಿ ನಡೆಯಲಿದೆ. ಪ್ರವೇಶ ಉಚಿತ. ಕಾರ್ಯಾಗಾರ ಡಿ. 2ರವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT