ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸ್ಯಗಳು: ನಮ್ಮ ಮಾನಸಿಕ ಆರೋಗ್ಯಕ್ಕೆ, ಉಲ್ಲಾಸಕ್ಕೆ ಪೂರಕ

Last Updated 18 ಏಪ್ರಿಲ್ 2023, 8:48 IST
ಅಕ್ಷರ ಗಾತ್ರ

ಸಸ್ಯಗಳು ಪ್ರಾಣಿಗಳಿಗಿಂತ ಭಿನ್ನವೆಂಬ ಕಲ್ಪನೆ ನಮ್ಮಲ್ಲಿ ಸಾಮಾನ್ಯವಾಗಿದೆ. ಮಾನವನು ಪ್ರಾಣಿಗಳನ್ನಾದರೂ ಆತನ ಬದುಕಿಗೆ ಹತ್ತಿರವಾಗಿ ನೋಡಲು ಬಯಸುತ್ತಾನೆ. ಹೊರತು, ಸಸ್ಯಗಳನ್ನು ಆತನ ಬದುಕಿನಿಂದ ಪ್ರತ್ಯೇಕಿಸಿ ಯೋಚಿಸುತ್ತಿರುವುದು ಕಂಡು ಬರುತ್ತಿವೆ ಎಂದು ‘ದಿ ಕಾ‌ನ್ವಸೇಷನ್‌‘ (The Conversation) ನಿಯತಕಾಲಿಕೆ ಪ್ರಕಟಿಸಿದ ವರದಿ ತಿಳಿಸಿದೆ.

ಹೆಚ್ಚಿನ ಜನರು ಹೂವುಗಳು ಮತ್ತು ಮರಗಳು ಹೇಗೆ ಸುಂದರವಾಗಿ ಕಾಣುತ್ತವೆ ಹಾಗೂ ದ್ಯುತಿಸಂಶ್ಲೇಷಣೆಯು ಜೀವನಕ್ಕೆ ಎಷ್ಟು ಅತ್ಯಗತ್ಯ ಎಂದು ತಿಳಿದಿರುತ್ತಾರೆ. ಆದರೆ ದೈಹಿಕ ಮತ್ತು ಮಾನಸಿಕವಾಗಿ ಮನುಷ್ಯನ ಬದುಕು ಸಸ್ಯದ ಜೀವನಕ್ರಿಯೆಯೊಂದಿಗೆ ಆಳವಾಗಿ ಮಿಳಿತಗೊಂಡಿದೆ.

ಈ ಸಂಬಂಧ ನಾವು ಊಹಿಸುವುದಕ್ಕಿಂತಲೂ ಗಾಢವಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ.

ನಮ್ಮ ಮಾನಸಿಕ ಸ್ಥಿತಿಯನ್ನು ರೂಪಿಸುವಲ್ಲಿ ಮತ್ತು ಮಾನಸಿಕ ಮತ್ತು ದೈಹಿಕ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುವಲ್ಲಿ ಸಸ್ಯಗಳು ಮೂಲಭೂತ ಪಾತ್ರವನ್ನು ವಹಿಸುತ್ತವೆ ಎಂಬ ವೈಜ್ಞಾನಿಕ ಪುರಾವೆಗಳು ಹೆಚ್ಚಾಗಿ ದೊರಕುತ್ತಿವೆ ಎನ್ನುತ್ತಾರೆ.

ಸಸ್ಯಗಳು ನಮ್ಮ ಮಾನಸಿಕ ಖಿನ್ನತೆಯನ್ನು ಕಡಿಮೆ ಮಾಡಲು ಸಹಕರಿಸುತ್ತವೆ. ‘ಕಾರ್ಟಿಸೋಲ್ (cortisol) ಎಂಬ ಒತ್ತಡಕ್ಕೆ ಕಾರಣವಾಗಿರುವ ಹಾರ್ಮೋನ್‌ನ ಮಟ್ಟವನ್ನು ಕುಗ್ಗಿಸುವುದರ ಮೂಲಕ ಆತಂಕ ಹಾಗೂ ಭಾವನೆಗಳಲ್ಲಿನ ಶೀಘ್ರ ಬದಲಾವಣೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಫೀಲ್ ಗುಡ್ ಮನಸ್ಥಿತಿಗೆ ಹೃದಯದ ಬಡಿತವನ್ನು ಕಡಿಮೆ ಮಾಡುವುದರಲ್ಲೂ ಸಸ್ಯಗಳ ಪಾತ್ರವಿದೆ.

ಮೇಜಿನ ಮೇಲಿರುವ ಪುಟ್ಟ ಗಿಡಗಳೂ ಸಹ ನಿಮಗೇ ಗೊತ್ತಾಗದಂತೆ ನಿಮ್ಮ ಮೇಲೆ ಹೆಚ್ಚು ಪ್ರಭಾವ ಬೀರಬಹುದು. ನಿಮ್ಮ ಮನೆ ಅಥವಾ ಕೆಲಸದ ಸ್ಥಳವನ್ನು ಆಕರ್ಷಕಗೊಳಿಸಲು ಬೆಳೆಸುವ ಗಿಡಗಳು ಹೆಚ್ಚು ಸ್ಪಷ್ಟವಾಗಿ ಯೋಚಿಸಲು ಸಹಾಯ ಮಾಡುತ್ತವಂತೆ. ಸಸ್ಯಗಳು ನಿಮ್ಮನ್ನು ಸುತ್ತುವರಿದಿದ್ದರೆ, ಅದರಿಂದ ಮನುಷ್ಯನ ಏಕಾಗ್ರತೆ 20%ರಷ್ಟು ಅಧಿಕಗೊಳ್ಳುತ್ತದೆ, ಅಲ್ಲದೇ, ಯಾವಗಲೋ ಮನಸ್ಸಿನಿಂದ ಮರೆಯಾದ ಮಾಹಿತಿಯಲ್ಲಿ ಪುನರ್‌ ಮನನ ಮಾಡಲು ಶೇ 15-20ರಷ್ಟುವ ಜ್ಞಾಪಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. CO₂ ಸಾಂದ್ರತೆಯನ್ನು ಕಡಿಮೆ ಮಾಡುವ ಮೂಲಕ ಮತ್ತು ಗಾಳಿಯ ಗುಣಮಟ್ಟವನ್ನು ಸುಧಾರಿಸುವ ಮೂಲಕ ಸಸ್ಯಗಳು ಇದನ್ನು ಮಾಡುತ್ತವಂತೆ ಎಂದು ಅಧ್ಯಯನಗಳು ತೋರಿಸಿವೆ.

ಅಮೆರಿಕದ ಆರೋಗ್ಯ ಮತ್ತು ಸುರಕ್ಷತೆ ಕಾರ್ಯನಿರ್ವಾಹಕ (HSE) ಮಾರ್ಗಸೂಚಿಗಳ ಪ್ರಕಾರ, ಕಚೇರಿಗಳಲ್ಲಿ CO₂ ಸಾಂದ್ರತೆಯು ಪ್ರತಿ ಮಿಲಿಯನ್‌ಗೆ 1,000 ಭಾಗಗಳನ್ನು (ppm) ಮೀರಬಾರದು, ಇಂಗಾಲದ ಸಾಂಧ್ರತೆ ಏರಿದರೆ ತಲೆನೋವು, ಆಯಾಸ ಮತ್ತು ತಲೆತಿರುಗುವಿಕೆಗೆ ಕಾರಣವಾಗಬಹುದು. ಆದ್ದರಿಂದ ಇತ್ತೀಚೆಗೆ ಕಚೇರಿಗಳ ಒಳಗೆ ಸಸ್ಯಗಳನ್ನು ಬೆಳೆಸುತ್ತಿರುವುದು ಕಾಣಬಹುದು.
ಇಂಗಾಲದ ಡೈಆಕ್ಸೈಡ್ ಅನ್ನು ಪರಿಣಾಮಕಾರಿಯಾಗಿ ತೆಗೆದುಹಾಕುವ ಜನಪ್ರಿಯ ಮನೆಗಳ ಒಳಾಂಗಣದಲ್ಲಿ ಬೆಳೆಯುವ ಸಸ್ಯಗಳೆಂದರೆ ನೀಲಿ ನಕ್ಷತ್ರದ ಜರೀಗಿಡ (ಫ್ಲೆಬೋಡಿಯಮ್ ಔರಿಯಮ್), ವೀಪಿಂಗ್ ಅಂಜೂರದ ಹಣ್ಣುಗಳು (Ficus benjamina), ಜೇಡ ಸಸ್ಯಗಳು (Chlorophytum comosum) ಮತ್ತು ಆಂಥೂರಿಯಂ ಪ್ರಭೇದಗಳು (flamingo flower).

ತೋಟ-ಸಂಸ್ಕೃತಿ:

‘ತೋಟ‘ ಎಂಬುದು ಬರೀ ಸಸ್ಯಗಳ ಗುಂಪನ್ನು ಬೆಳೆಸುವುದಲ್ಲ, ಅದೊಂದು ಸಂಸ್ಕೃತಿಯಾಗಿದೆ. ಮೊದಲಿನಿಂದಲೂ ಸಸ್ಯಗಳು ಮಾನವ ಸಮಾಜಕ್ಕೆ ಕೇಂದ್ರವಾಗಿದ್ದು, ಸಸ್ಯಗಳೊಂದಿಗಿನ ನಮ್ಮ ಸಂಬಂಧ ತಲೆಮಾರಿನಿಂದ ತಲೆಮಾರಿಗೆ ಬದಲಾಗಿದೆ. ಸುಮಾರು 11,000 ವರ್ಷಗಳ ಹಿಂದೆ ಮಾನವನು ಆಹಾರ ಮತ್ತು ಔಷಧಕ್ಕಾಗಿ ಸಸ್ಯಗಳ ಮೇಲೆ ಅವಲಂಬಿತನಾಗಿದ್ದನು. ಬರಬರುತ್ತಾ ಆಧುನಿಕ ಸಮಾಜವು ಅನೇಕ ವಿಧಗಳಲ್ಲಿ ಸಸ್ಯಗಳ ಬಗ್ಗೆ ತನ್ನ ಮೆಚ್ಚುಗೆ ಮತ್ತು ಅರಿವನ್ನು ಕಳೆದುಕೊಳ್ಳುತ್ತಿರುವುದು ಕಂಡುಬರುತ್ತಿದೆ.

ಸಂಶೋಧನೆಗಳ ಪ್ರಕಾರ 2050ರ ಹೊತ್ತಿಗೆ ಹತ್ತರಲ್ಲಿ ಏಳು ಜನರು ನಗರಗಳಲ್ಲಿ ವಾಸಿಸುತ್ತಾರೆ ಎನ್ನಲಾಗುತ್ತಿದೆ. ಆ ಸಂದರ್ಭ ಅವರ ಪರಿಸರದಲ್ಲಿ ನೈಸರ್ಗಿಕವಾಗಿ ಸಸ್ಯಗಳನ್ನು ಬೆಳೆಸುವುದು ಸವಾಲಿನ ಸಂಗತಿಯಾಗಿರಬಹುದು ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. 21ನೇ ಶತಮಾನದ ತಂತ್ರಜ್ಞಾನವು ನಮಗೆ ನೀಡುವ ಸೌಕರ್ಯ ಮತ್ತು ವಿರಾಮಕ್ಕಾಗಿನ ಎಲ್ಲಾ ಆಯ್ಕೆಗಳ ಹೊರತಾಗಿಯೂ, ನಾವು ಪ್ರಕೃತಿಯಿಂದ ಸಂಪರ್ಕ ಕಡಿತಗೊಳ್ಳುತ್ತಿರುವುದು ಬೇಸರದ ಸಂಗತಿ.

ಸಸ್ಯಗಳನ್ನು ಕುಂಡದ ಮೂಲಕ ಒಳಾಂಗಣದಲ್ಲಿ ಬೆಳೆಸುವುದು ಶ್ರೀಮಂತಿಕೆ, ಶೋಕಿ ಪ್ರದರ್ಶನವಲ್ಲ ಎಂಬ ಅರಿವು ಹೆಚ್ಚಬೇಕಿದೆ. ಸಸ್ಯಗಳು ನಮ್ಮ ಜೀವನದ ಭಾಗವಲ್ಲ. ಬದಲಾಗಿ, ಮನುಷ್ಯ ಸಸ್ಯಗಳ ಜೀವನದಲ್ಲಿನ ಭಾಗವಾಗಿದ್ದಾನೆ ಎಂಬುದು ನಿಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT