ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿ.ವಿ ಆವರಣದಲ್ಲಿ ಜೀವ–ಜಲ ಸಂರಕ್ಷಣೆಯ ಉದ್ಯಾನ

Last Updated 20 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

‘ನೋಡಿ, ಅಲ್ಲೆಲ್ಲ ನವಿಲುಗಳ ಹಿಂಡು ಇರುತ್ತದೆ. ಆ ದೊಡ್ಡ‍ಪೊದೆ ಇದೆಯಲ್ಲ ಅಲ್ಲಿ ಈಗ ಎರಡ್ಮೂರಾದರೂ ನವಿಲು ಇರಬಹುದು. ಮನುಷ್ಯರ ಮಾತು, ಹೆಜ್ಜೆ ಸಪ್ಪಳ ಕೇಳಿಸಿದರೆ ಅವು ಮೌನವಾಗುತ್ತವೆ’ ಎಂದರು ಪ್ರೊ.ಟಿ.ಜೆ.ರೇಣುಕಪ್ರಸಾದ್‌.

‘ಹಾಗೇನಿಲ್ಲ ಬಿಡಿ ಸಾರ್‌ ನಾವು ಇಲ್ಲೇ ಇದ್ದೀವಿ, ಇದು ನಮ್ಮ ಗಮ್ಯ’ ಎಂದು ಧಮಕಿ ಹಾಕುವಂತೆ ಕೂಗಿ ಕೂಗಿ ಕರೆದವು. ಅದೇ ದಿಕ್ಕಿನಲ್ಲಿ ಕಣ್ಣು ಹಾಯಿಸಿದರೆ ಮೂರು ನವಿಲುಗಳ ಉದ್ದನೆಯ ‘ಜಡೆ’ಗಳು ಪೊದೆಗಳನ್ನು ಸವರುತ್ತಾ ಸಾಗುವುದು ಕಂಡಿತು. ನವಿಲು ಸಿಗದಿದ್ದರೆ ಬಾಲವಾದರೂ ಕಂಡಿತಲ್ಲ ಎಂದು ನಗುತ್ತಾ ಮುಂದೆ ಹೆಜ್ಜೆ ಹಾಕುತ್ತಿರುವಾಗ ಮುಂಗುಸಿ, ಮೊಲ, ಅಳಿಲು, ಹಾವು, ಕಣ್ಣು ಹಾಯಿಸಿದಲ್ಲೆಲ್ಲಾ ಚಿಟ್ಟೆಗಳು ಓಡಾಡಿದವು.

ಮಲೆನಾಡಿನ ಯಾವುದೋ ಕಾಡಿನಂಚಿನ ನಡಿಗೆಯ ಅನುಭವ ಕಥನವಲ್ಲ ಇದು. ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ಜೈವಿಕ ಉದ್ಯಾನದೊಳಗೆ ಕಾಣಸಿಗುವ ಜೀವವೈವಿಧ್ಯ!

ಸಾಮಾನ್ಯವಾಗಿ ವಿಶ್ವವಿದ್ಯಾಲಯಗಳು ಅಕಾಡಮಿಕ್‌ ಚೌಕಟ್ಟಿನಿಂದಾಚೆ ಯೋಜನೆಗಳನ್ನು ಹಮ್ಮಿಕೊಳ್ಳುವುದು ವಿರಳ. ಈ ಮಾತುಬೆಂಗಳೂರು ವಿಶ್ವವಿದ್ಯಾಲಯಕ್ಕೂ 2016ರವರೆಗೆ ಅನ್ವಯವಾಗುತ್ತಿತ್ತು. ಈಗ? ಜೀವವೈವಿಧ್ಯಗಳ ಆಗರ!

ಹೌದು, 2016ರಿಂದ ರೂಪುಗೊಳ್ಳುತ್ತಿರುವ ಜೈವಿಕ ಉದ್ಯಾನ ಯೋಜನೆಯ ಫಲಶ್ರುತಿಯಾಗಿ ವಿ.ವಿ. ಆವರಣ ನಂದಗೋಕುಲದಂತೆ ನಳನಳಿಸುತ್ತಿದೆ. ಗಂಧದ ಮರಗಳ ಕಳ್ಳತನ, ಅತಿಕ್ರಮಣದ ನಿರಂತರ ಪ್ರಯತ್ನಗಳಿಂದ ಪೊಲೀಸ್‌ ಇಲಾಖೆಯಲ್ಲಿ ಈ ವಿ.ವಿ. ಹೆಸರು ದಾಖಲಾಗುತ್ತಲೇ ಇತ್ತು. ಆದರೆ ಈಗ ಅಲ್ಲಿ ಈ ಎರಡೂ ಅಕ್ರಮಗಳಿಗೆ ಕಡಿವಾಣ ಬಿದ್ದಿದೆ.

‘ವಿಶ್ವವಿದ್ಯಾಲಯದ ಜಮೀನು ಎಂದರೆ ಸರ್ಕಾರದ್ದು, ಯಾರೂ ಕೇಳುವವರಿಲ್ಲ’ ಎಂಬ ಅಸಡ್ಡೆ ಇಲ್ಲಿನ ಸ್ಥಳೀಯರಲ್ಲಿಯೂ ಇತ್ತು. ಭೂಗಳ್ಳರಿಗೆ ವರದಾನವಾಗಿತ್ತು ಈ ಜಮೀನು.ನವಿಲುಗಳು ಮತ್ತು ಗರಿಗಳ ಕಳ್ಳತನ ಪ್ರಕರಣಗಳಿಗೂ ಕಮ್ಮಿಯೇನಿರಲಿಲ್ಲ ಇಲ್ಲಿ. ಜಾನುವಾರುಗಳನ್ನು ಮೇಯಲು ಬಿಡುವ ನೆಪದಲ್ಲಿ ವಿ.ವಿ. ಆವರಣ ಪ್ರವೇಶಿಸಿ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಿದ್ದುದೂ ಉಂಟು. ಈಗ ಜೈವಿಕ ಉದ್ಯಾನದ ನೆಪದಲ್ಲಿ ಸ್ಥಳೀಯರೂ ಪರಿಸರ ಸಂರಕ್ಷಣೆಯ ಪಾಠ ಕಲಿತಿದ್ದಾರೆ. ಪರಿಸರ ಸಂರಕ್ಷಣೆಗಾಗಿ ಏನೋ ಮಾಡುತ್ತಿದ್ದಾರೆ, ಇಲ್ಲಿನ ಜಲಮೂಲಗಳು ಅಭಿವೃದ್ಧಿಗೊಂಡರೆ ನಮಗೂ ಲಾಭವಿದೆ ಎಂಬ ವಾಸ್ತವವನ್ನು ಸ್ಥಳೀಯರು ಅರ್ಥ ಮಾಡಿಕೊಂಡಿದ್ದಾರೆ.

ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಕಲ್ಯಾಣಿ
ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಕಲ್ಯಾಣಿ

ಗಮನಿಸಬೇಕಾದ ಅಂಶವೆಂದರೆ, ವಿ.ವಿ. ಅನುದಾನವನ್ನು ಖರ್ಚು ಮಾಡುವ ಉದ್ದೇಶದಿಂದ ಇಲ್ಲಿನ ಯೋಜನೆಗಳು ಕಾರ್ಯರೂಪಕ್ಕೆ ಬಂದಿಲ್ಲ. ಜೈವಿಕ, ಜಲ ಮತ್ತು ಭೂ ಸಂಪತ್ತನ್ನು ಉಳಿಸಿ ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕು ಎಂಬ ನಿಜವಾದ ಆಸ್ಥೆಯಿಂದ ಅನುಷ್ಠಾನಕ್ಕೆ ತಂದಿರುವ ಯೋಜನೆಗಳಿವು. ಬರೋಬ್ಬರಿ 12 ಲಕ್ಷ

ವಿಶ್ವವಿದ್ಯಾಲಯವೊಂದು ಅಕಾಡಮಿಕ್‌ ಚೌಕಟ್ಟಿನಿಂದಾಚೆ ವಿಭಿನ್ನ ಯೋಜನೆಗಳನ್ನು ಕೈಗೆತ್ತಿಕೊಂಡಿರುವುದನ್ನುಕೇಂದ್ರ ಜಲ ಮಂಡಳಿ ಮತ್ತು ನ್ಯಾಕ್‌ ಕೂಡಾ ಪ್ರಶಂಸಿಸಿದೆ. ಹತ್ತಾರು ಕಾರ್ಪೊರೇಟ್‌ ಕಂಪನಿಗಳು ತಮ್ಮ ಕಾರ್ಪೊರೇಟ್‌– ಸಮುದಾಯ ಹೊಣೆಗಾರಿಕೆ ಯೋಜನೆಯಡಿ ಚೆಕ್‌ಡ್ಯಾಂಗಳನ್ನು, ಹನಿ ನೀರಾವರಿ ಸೌಕರ್ಯಗಳನ್ನು ಕೈಗೊಂಡಿವೆ. ಯುಟಿಸಿ, ಇಂಡಸ್‌, ಜೆಡ್ರಿಕ್‌, ಸಿಪ್‌ ಅಕಾಡೆಮಿ, ಸ್ಟೇಟ್‌ಬ್ಯಾಂಕ್‌ ಆಫ್‌ ಮೈಸೂರು, ನಮ್ಮವರು ತಂಡ, ಟೋಟಲ್‌ ಸೊಲ್ಯೂಷನ್‌, ಆ್ಯವೆರಿ, ಟೊಯೊಟ ಉದ್ಯೋಗಿಗಳು, ನಮ್ಮ ಮೆಟ್ರೊ, ಎಲ್‌ಆ್ಯಂಡ್‌ ಟಿ ಕಂಪನಿ, ರೋಟರಿ ಕ್ಲಬ್‌ ಜಯನಗರ ಲಕ್ಷಾಂತರ ಗಿಡಗಳನ್ನು ನೆಟ್ಟು, ನೀರಿನ ಯೋಜನೆಗಳಿಗೆ ನೆರವು ನೀಡಿದೆ.ಉದ್ಯಾನಕ್ಕೆ ಕರ್ತವ್ಯನಿಮಿತ್ತ ಭೇಟಿ ಕೊಟ್ಟಿದ್ದ ಬೆಂಗಳೂರಿನ ಪೊಲೀಸ್‌ ಕಾನ್ಸ್‌ಟೆಬಲ್‌ವೊಬ್ಬರು 1,500 ಗಿಡಗಳನ್ನು ಕೊಡುಗೆಯಾಗಿ ನೀಡಿದ್ದೂ ಇದೆ. ಉತ್ತರ ಕರ್ನಾಟಕದ ಶಿರಸಿಯ, ಒಲೆಟಿ ಎಂಬ ಕಂಪನಿಯು ಅಳಿವಿನಂಚಿನಲ್ಲಿರುವ ಅಪ್ಪೆಮಿಡಿ ಮಾವಿನ 50 ಗಿಡಗಳನ್ನು ನೆಟ್ಟು ಬೋರ್‌ವೆಲ್‌ ಮತ್ತು ಹನಿ ನೀರಾವರಿ ಸೌಕರ್ಯ ಒದಗಿಸಿಕೊಟ್ಟಿದೆ. ತೇಜಸ್ವಿನಿ ಅನಂತಕುಮಾರ್‌ ಅವರ ಅದಮ್ಯ ಚೇತನ ಟ್ರಸ್ಟ್‌ ಪಶ್ಚಿಮ ಘಟ್ಟದ ಅಪರೂಪದ ಜಾತಿಯ 1000 ಗಿಡಗಳನ್ನು ನೆಟ್ಟಿದೆ.ಹೀಗೆ ಕಾರ್ಪೊರೇಟ್‌ ಕಂಪನಿಗಳು ಮತ್ತು ಸರ್ಕಾರೇತರ ಸಂಸ್ಥೆಗಳ ಪಟ್ಟಿ ಬೆಳೆಯುತ್ತದೆ. ವಿ.ವಿ.ಯ ಸಾಮಾಜಿಕ ಕಾಳಜಿಗೆ ಹೀಗೆ ನಾಗರಿಕರ ಬೆಂಬಲ ಸಿಕ್ಕಿರುವುದು ಉದ್ಯಾನ ನಿರ್ಮಾಣ ತಂಡಕ್ಕೆ ದೈತ್ಯ ಬಲ ನೀಡಿದೆ.

ಬೆಳವಣಿಗೆಯ ಗರಿಷ್ಠ ಎತ್ತರದ ಲೆಕ್ಕಾಚಾರದಲ್ಲಿ ಗಿಡಗಳನ್ನು, ಉದ್ಯಾನದೊಳಗೆ ಏರು–ತಗ್ಗಿನ ಪ್ರದೇಶಗಳಲ್ಲಿ ಹಂಚಿಕೆ ಮಾಡಿ ನೆಡಲಾಗುತ್ತದೆ. ವಿ.ವಿ. ಆವರಣದಲ್ಲಿರುವ 145 ಕಟ್ಟಡಗಳಿಗೂ ಗುಣಮಟ್ಟದ ಗಾಳಿ ಒದಗಲೆಂಬ ಉದ್ಧೇಶದಿಂದ ವಿವಿಧ ವಿಭಾಗಗಳ ಆಸುಪಾಸಿನಲ್ಲಿ ಸುಗಂಧಯುಕ್ತ ಮತ್ತು ಔಷಧೀಯ ಸಸ್ಯಗಳನ್ನು ನೆಡಲಾಗುತ್ತದೆ. ಮಣ್ಣಿನ ಸವಕಳಿಯನ್ನು ತಡೆಯುವ ಸಾಮರ್ಥ್ಯವಿರುವ ಗಿಡಗಳನ್ನು ಸೂಕ್ಷ್ಮ ಜಾಗಗಳಲ್ಲಿ ಕಾಣಬಹುದು. ರಸ್ತೆ ಬದಿಗಳಲ್ಲಿ ಹೂ ಬಿಡುವ ಮತ್ತು ನೆರಳು ನೀಡುವ ಗಿಡಗಳನ್ನೇ ನೆಡುತ್ತಾರೆ.

ಮಧುವನ, ಚರಕವನ, ಸಹ್ಯಾದ್ರಿವನ, ಸಂಜೀವಿನಿ ವನ ಎಂದು ವಿಂಗಡಿಸಿ ಅವುಗಳ ಪ್ರಾದೇಶಿಕ ಮತ್ತು ಭೌಗೋಳಿಕ ಮಹತ್ವಕ್ಕೆ ಅನುಗುಣವಾಗಿ ಗಿಡಗಳನ್ನು ವಿಂಗಡಿಸಲಾಗುತ್ತದೆ. ಅಳಲೆ, ಅರಳಿ, ಬೆಟ್ಟದ ನೆಲ್ಲಿಕಾಯಿ, ವಾಟೆ ಹುಳಿ, ಪುನ್ನಾಗ, ನೇರಳೆ, ಬೇಲ, ಬಿಲ್ವ, ಕಾಶಿಬಿಲ್ವ, ಮಂಗಳೂರು ಬಿಲ್ವ, ಬೆಣ್ಣೆಹಣ್ಣು, ಹುಳಿಮಾವು, ಶ್ರೀಗಂಧ, ಅತ್ತಿ, ಬಳಿ ಮತ್ತು ಕಪ್ಪು ಜಾಲಿ, ಬಸರಿ, ಗೋಣಿಮರ ಹೀಗೆ ಅಪರೂಪದ ಹೆಸರುಗಳ ಪಟ್ಟಿ ಸಾಗುತ್ತದೆ. ಚರಕವನ ಔಷಧೀಯ ಸಸ್ಯಗಳಿಗೇ ಮೀಸಲು. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಕ್ಕಳಿಗೆ ಇಲ್ಲಿ ಪ್ರಕೃತಿ ಚಿಕಿತ್ಸೆ ಶಿಬಿರ ನಿಯಮಿತವಾಗಿ ನಡೆಯುತ್ತದೆ.

ಶೈಕ್ಷಣೀಕೇತರ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತಿರುವ ಬೆಂಗಳೂರು ವಿಶ್ವವಿದ್ಯಾಲಯದ ಬಗ್ಗೆ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.ಚೀನಾ ಮತ್ತು ಕ್ಯಾಲಿಫೋರ್ನಿಯಾದ ವಿ.ವಿ.ಗಳ ವಿದ್ಯಾರ್ಥಿಗಳು, ನಮ್ಮ ದೇಶದ ವಿವಿಧ ವಿ.ವಿ.ಗಳ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಇಲ್ಲಿಗೆ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ. ನ್ಯಾಕ್‌ ಮತ್ತು ಕೇಂದ್ರ ಜಲ ಮಂಡಳಿಯ ಮೆಚ್ಚುಗೆಗೂ ಪಾತ್ರವಾಗಿದೆ.

ಉದ್ಯಾನದ ಸಂಯೋಜಕರ ಕನಸಿನಂತೆ ಈಗ ಇದಕ್ಕೆ ‘ಬೆಂಗಳೂರು ಬಯೊ–ಜಿಯೊ–ಹೈಡ್ರೊ–ಪಾರ್ಕ್‌’ ಎಂದು ಮರುನಾಮಕರಣ ಮಾಡಲು ಅಡ್ಡಿಯೇನಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT