ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ–ಗಣೇಶ ಹಬ್ಬಕ್ಕೆ ಪರಿಸರ ಸ್ನೇಹ ಸ್ಪರ್ಶ

Last Updated 1 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ವರಮಹಾಲಕ್ಷ್ಮಿ ಹಬ್ಬದ ನಂತರ ಭಣಗುಡುತ್ತಿದ್ದ ಮಾರುಕಟ್ಟೆಯಲ್ಲಿ ಗೌರಿ–ಗಣೇಶ ಚತುರ್ಥಿಯ ಸಂಭ್ರಮದಿಂದ ಕೊಂಚ ಚುರುಕು ಕಾಣಿಸಿಕೊಂಡಿತು. ಚೌತಿಗೆಒಂದು ದಿನ ಬಾಕಿ ಇರುವಾಗ ಹಬ್ಬದ ಸಿದ್ಧತೆಗಳು ಭರ್ಜರಿಯಾಗಿ ನಡೆದಿವೆ.

ಗಣಪನ ಮೂರ್ತಿ ಮತ್ತು ಪೂಜೆಗೆ ಬೇಕಾದ ವಸ್ತುಗಳನ್ನು ಖರೀದಿಸಲು ಜನರು ಭಾನುವಾರಬೆಳಿಗ್ಗೆಯೇ ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟರು. ಸಂಜೆಯವರೆಗೂ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿ ನಡೆದಿತ್ತು.ಸೂಪರ್‌ ಮಾರ್ಕೆಟ್‌, ಕೆ.ಆರ್‌. ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ, ಮೆಜೆಸ್ಟಿಕ್‌, ಗಾಂಧಿನಗರದ ಮಾರುಕಟ್ಟೆಗಳು ಜನಜಂಗುಳಿಯಿಂದ ತುಂಬಿದ್ದವು.

ನಗರದ ರಸ್ತೆ, ಪಾದಚಾರಿ ಮಾರ್ಗ, ಮಾರುಕಟ್ಟೆಗಳು ಹೂವು, ಹಣ್ಣು, ತರಕಾರಿ, ಬಾಳೆಗಿಡ, ಮಾವಿನ ತೋರಣ, ಕುಂಬಳಕಾಯಿ, ಆಲಂಕಾರಿಕ ಸಾಮಗ್ರಿಗಳಿಂದ ತುಂಬಿ ತುಳುಕುತ್ತಿದ್ದವು.

ವರಮಹಾಲಕ್ಷ್ಮಿ ಹಬ್ಬಕ್ಕೆ ಗಗನಕ್ಕೇರಿದ್ದ ಹೂವು, ಹಣ್ಣುಗಳ ಬೆಲೆಗಳು ಯಥಾಸ್ಥಿತಿಗೆ ಬಂದಿದ್ದು, ಜನರಿಗೆ ಬೆಲೆ ಏರಿಕೆ ಬಿಸಿ ಅಷ್ಟಾಗಿ ತಟ್ಟಲಿಲ್ಲ. ಬೆಂಗಳೂರು ಸುತ್ತಮುತ್ತಲಿನ ಗ್ರಾಮಗಳ ರೈತರು ಬೆಳಿಗ್ಗೆಯೇ ಕಬ್ಬು, ಬಾಳೆದಿಂಡು, ಮಾವಿನ ತೋರಣ, ಎಕ್ಕೆ ಹೂವಿನ ಮಾಲೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಾರೆ.

ಗಣೇಶ ಮೂರ್ತಿಗಳ ಮಾರಾಟ ಭರದಿಂದ ನಡೆದಿತ್ತು. ಜನರು ತಮಗಿಷ್ಟವಾದ ವಿಗ್ರಹಗಳನ್ನು ಆಯ್ಕೆ ಮಾಡಿ ಮನೆಗೆ ಕೊಂಡೊಯ್ದರು. ಸಾರ್ವಜನಿಕ ಉತ್ಸವ ಮಂಡಳಿಗಳು ಬೃಹತ್‌ ವಿಗ್ರಹಗಳನ್ನು ಕೊಂಡೊಯ್ಯಲು ವಾಹನ, ಬ್ಯಾಂಡ್‌, ಭಜಂತ್ರಿಗಳೊಂದಿಗೆ ಬಂದಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವ್ಯಾಪಾರ ಮಂದವಾಗಿದೆ ಎನ್ನುತ್ತಾರೆ ವರ್ತಕರು.

ಚೌತಿಗೆ ರಂಗು ತಂದ ರಿಯಾಯಿತಿ ಮಾರಾಟ

ರಿಯಾಯಿತಿ ದರದ ಸೇಲ್‌ಗಳು ಚೌತಿಗೆ ಮತ್ತಷ್ಟು ರಂಗು ತಂದಿದೆ.ಸ್ಮಾರ್ಟ್‌ ಫೋನ್‌, ಕನ್ನಡಕ, ಕೈಗಡಿಯಾರ, ಸಿದ್ಧ ಉಡುಪು ಸೇರಿದಂತೆ ವಿವಿಧ ಉತ್ಪನ್ನಗಳ ಮೇಲೆ ಮಾರಾಟದ ಮೇಲೆ ವಿಶೇಷ ರಿಯಾಯಿತಿ ಮತ್ತು ಆಕರ್ಷಕ ಕೊಡುಗೆ ಘೋಷಿಸಿವೆ. ಆನ್‌ಲೈನ್‌ ಮಾರುಕಟ್ಟೆ ಕೂಡ ಹಿಂದೆ ಬಿದ್ದಿಲ್ಲ. ಹಬ್ಬಕ್ಕಾಗಿ ಆನ್‌ಲೈನ್‌ನಲ್ಲೂ ಭರ್ಜರಿ ಮಾರಾಟ ನಡೆಯುತ್ತಿವೆ.

ಜೇಡಿಮಣ್ಣು ಮತ್ತು ಕೆಮ್ಮಣ್ಣಿನ (ಟೆರಾಕೋಟಾ) ಹಲವು ವಿನ್ಯಾಸದ ಗಣೇಶನ ವಿಗ್ರಹಗಳುಈ ಬಾರಿ ಆನ್‌ಲೈನ್‌ನಲ್ಲಿ (ಇ–ಕಾಮರ್ಸ್‌ ಮಾರುಕಟ್ಟೆ) ಸಿಗುತ್ತಿವೆ. ಪ್ಲಾಸ್ಟರ್‌ ಆಫ್ ಪ್ಯಾರಿಸ್‌ (ಪಿಒಪಿ) ಬದಲು ಪರಿಸರ ಸ್ನೇಹಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಅಭಿಯಾನ ಚುರುಕುಗೊಂಡ ಹಿನ್ನೆಲೆಯಲ್ಲಿ ಗ್ರಾಹಕರು ಮಣ್ಣಿನ ವಿಗ್ರಹಗಳಿಗೆ ಮೊರೆ ಹೋಗುತ್ತಿದ್ದಾರೆ. ನೂರು ರೂಪಾಯಿಯಿಂದ ಸಾವಿರಾರು ರೂಪಾಯಿವರೆಗಿನ ಗಣೇಶ ವಿಗ್ರಹಗಳು ಆನ್‌ಲೈನ್‌ನಲ್ಲಿ ಲಭ್ಯ.

ಸಿದ್ಧ ವಿಗ್ರಹ ಬೇಡ ಎಂದಾದರೆ ಮನೆಯಲ್ಲಿ ಗ್ರಾಹಕರೇ ತಮ್ಮ ಕೈಯಾರೆ ವಿಗ್ರಹ ತಯಾರಿಸಬಹುದು. ಅದಕ್ಕೆ ತಯಾರಿಕೆ ಅಗತ್ಯವಾದ ಜೇಡಿಮಣ್ಣು ಇತ್ಯಾದಿ ಪರಿಕರಗಳ ‘ಡು ಇಟ್‌ ಯೂವರ್‌ಸೆಲ್ಫ್’ (ಡಿಐಯು) ಕಿಟ್‌ಗಳನ್ನು ಇ–ಕಾಮರ್ಸ್‌ ಮಾರುಕಟ್ಟೆಗಳು ಮನೆಗೆ ತಲುಪಿಸುತ್ತವೆ.

ಸೀಡ್ ಪೇಪರ್‌ ಇಂಡಿಯಾ ಸೇರಿದಂತೆ ಹಲವು ಆನ್‌ಲೈನ್ ಮಾರುಕಟ್ಟೆಗಳು ತುಳಸಿ ಬೀಜಗಳಿಂದ ತಯಾರಿಸಿದ ಪರಿಸರ ಸ್ನೇಹಿ ಮೂರ್ತಿಗಳು ಮಾರಾಟ ಮಾಡುತ್ತಿವೆ. ಮನೆಯ ಹಿತ್ತಲಲ್ಲಿ ವಿಗ್ರಹ ವಿಸರ್ಜಿಸಿದರೆ ಅದರಲ್ಲಿರುವ ಬೀಜಗಳು ತುಳಸಿ ಸಸಿಗಳಾಗಿ ಮೊಳಕೆಯೊಡೆಯುತ್ತವೆ.

ಸಾಹೋ ಸುಯೋಧನ...

15 ದಿನಗಳ ಮೊದಲೇ ವೈವಿಧ್ಯಮಯ ಮತ್ತು ಆಕರ್ಷಕ ಗಣಪನ ಮೂರ್ತಿಗಳು ಮಾರುಕಟ್ಟೆಗೆ ಬಂದಿವೆ. ರಸ್ತೆಯ ಇಕ್ಕೆಲಗಳಲ್ಲಿ ವಿಭಿನ್ನ ವಿನ್ಯಾಸದ ಮೂರ್ತಿಗಳು ಎಲ್ಲರ ಚಿತ್ತ ಸೆಳೆಯುತ್ತವೆ. ನೂರರಿಂದ ಇಪ್ಪತ್ತೈದು ಸಾವಿರ ರೂಪಾಯಿವರೆಗಿನ ವಿಗ್ರಹಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ.

ಈ ಬಾರಿ ‘ಕುರುಕ್ಷೇತ್ರ’ ಸಿನಿಮಾದ ದುರ್ಯೋಧನ ಪಾತ್ರಧಾರಿಯ ಗೆಟಪ್‌ನಲ್ಲಿರುವ ಮೂರ್ತಿಗಳು ಎಲ್ಲರ ಗಮನ ಸೆಳೆಯುತ್ತಿವೆ. ದುರ್ಯೋಧನನ ಗತ್ತಿನಲ್ಲಿಕೈಯಲ್ಲಿ ಗದೆ ಹಿಡಿದು ಸಿಂಹಾಸನದಲ್ಲಿ ವಿರಾಜಮಾನನಾಗಿರುವ ವಿನಾಯಕ ಈ ಬಾರಿಯ ಪ್ರಮುಖ ಆಕರ್ಷಣೆ. ಪೈಲ್ವಾನ್‌, ಕೆಜಿಎಫ್‌ ಸಿನಿಮಾದ ಗಡ್ಡಧಾರಿ ಮತ್ತು ಸೈನಿಕನ ವೇಷಧಾರಿ ವಿಗ್ರಹಗಳುಎಲ್ಲರ ಗಮನ ಸೆಳೆಯುತ್ತವೆ.

ಮೂರ್ತಿ ತಯಾರಿಕೆ ಕಾರ್ಯಾಗಾರ

ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ವಿಗ್ರಹಗಳ ವಿರುದ್ಧದಜನಜಾಗೃತಿ ಅಭಿಯಾನ, ಬಿಬಿಎಂಪಿ ಹಾಗೂ ಪರಿಸರ ನಿಯಂತ್ರಣ ಮಂಡಳಿ ಕಟ್ಟುನಿಟ್ಟಿನ ಕ್ರಮಗಳು ಫಲ ನೀಡಿವೆ.

ಪಿಒಪಿ ಮೂರ್ತಿಗಳಿಗಿಂತ ಪರಿಸರಸ್ನೇಹಿ ಮಣ್ಣಿನ ಮೂರ್ತಿಗಳನ್ನು ಜನರು ಮನೆಗೆ ಕೊಂಡೊಯ್ಯುತ್ತಿದ್ದಾರೆ.

ಪರಿಸರವಾದಿ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪರಿಸರಸ್ನೇಹಿ ಮಣ್ಣಿನ ಮೂರ್ತಿಗಳನ್ನು ತಯಾರಿಸುವ ಉಚಿತ ಕಾರ್ಯಾಗಾರ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಪಿಒಪಿ ಮೂರ್ತಿಗಳನ್ನು ವಿಸರ್ಜಿಸುವುದನ್ನು ತಡೆಯಲು ಸ್ಯಾಂಕಿ, ಹಲಸೂರು, ಜಕ್ಕೂರು,ಸಿಂಗಸಂದ್ರ, ಮುನ್ನೇಕುಲಾಲ ಸೇರಿದಂತೆ ಕೆರೆ, ಕಟ್ಟೆಗಳಿಗೆ ಬಿಬಿಎಂಪಿ ಮತ್ತು ಪೊಲೀಸ್‌ ಇಲಾಖೆ ಕಣ್ಗಾವಲು ಹಾಕಿದೆ. ಆದರೂ ಜನರು ಕಣ್ತಪ್ಪಿಸಿ ಪಿಒಪಿ ವಿಗ್ರಹಗಳನ್ನು ವಿಸರ್ಜಿಸುತ್ತಾರೆ.

ಪಿಒಪಿ ಗಣೇಶನಿಗೆ ಕುಗ್ಗದ ಬೇಡಿಕೆ

ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಮೂರ್ತಿಗಳ ಮಾರಾಟ ಮತ್ತು ಪ್ರತಿಷ್ಠಾಪನೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಬಿಬಿಎಂಪಿ ನಿಷೇಧ ನಡುವೆಯೂ ಪಿಒಪಿ ಮೂರ್ತಿಗಳಿಗೆ ಬೇಡಿಕೆ ತಗ್ಗಿಲ್ಲ. ನಗರದ ಹಲವೆಡೆ ಎರಡೂ ಸಂಸ್ಥೆಗಳು ನಡೆಸಿದ ಜಂಟಿ ದಾಳಿಯಲ್ಲಿ ನೂರಾರು ಪಿಒಪಿ ಮೂರ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪರಿಸರಕ್ಕೆ ಮಾರಕವಾದ ಪಿಒಪಿ ಮೂರ್ತಿ ತಯಾರಿಕೆ, ಮಾರಾಟ ಮಾಡಿದರೆ ಟ್ರೇಡ್‌ ಲೈಸನ್ಸ್‌ ರದ್ದು ಮಾಡಲಾಗುವುದು ಎಂಬ ಸಂದೇಶ ರವಾನಿಸಿದ್ದರೂ ಪಿಒಪಿ ಮೂರ್ತಿಗಳ ಹಾವಳಿಗೆ ಸಂಪೂರ್ಣ ಕಡಿವಾಣ ಬಿದ್ದಿಲ್ಲ.

ನಗರದಲ್ಲಿ ಸರಿ ಸುಮಾರು ಎರಡು ಲಕ್ಷದಷ್ಟು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಅದರಲ್ಲಿ ಅರ್ಧದಷ್ಟು ಪಿಒಪಿ ಮೂರ್ತಿಗಳಾಗಿರುತ್ತಿದ್ದವು. ಈ ಬಾರಿ ಪಿಒಪಿ ಮೂರ್ತಿಗಳಿಗೆ ಬಹುತೇಕ ಕಡಿವಾಣ ಬಿದ್ದಿದೆ ಎನ್ನುವುದು ಬಿಬಿಎಂಪಿ ಅಧಿಕಾರಿಗಳ ವಾದ. ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಬಿಬಿಎಂಪಿ ಅಧಿಕಾರಿಗಳು ನಗರದ ಹಲವೆಡೆ ದಾಳಿ ನಡೆಸಿ ಪಿಒಪಿ ಮೂರ್ತಿಗಳನ್ನು ವಶಪಡಿಸಿಕೊಂಡಿದ್ದಾರೆ. ಸಾರ್ವಜನಿಕ ಗಣೇಶ ಉತ್ಸವ ಮಂಡಳಿಗಳಿಗೂ ಖಡಕ್ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಕುಲಕಸುಬಿಗೆ ಕತ್ತರಿ

ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಜೇಡಿಮಣ್ಣಿನ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದೇವೆ. ದೊಡ್ಡಬಳ್ಳಾಪುರದ ಮಾರಸಂದ್ರದಿಂದ ಮೂರ್ತಿಗಳನ್ನು ಮೂರು ದಿನಗಳ ಹಿಂದೆ ಸಣ್ಣ ಲಾರಿಯಲ್ಲಿ ತಂದಿದ್ದೇವೆ. ಸಾಗಾಣಿಕೆಗೆ ನಾಲ್ಕು ಸಾವಿರ ರೂಪಾಯಿ ವೆಚ್ಚವಾಗಿದೆ. ಬೆಲೆ ಕೂಡ ಕಡಿಮೆ. ವ್ಯಾಪಾರವೇ ಆಗುತ್ತಿಲ್ಲ. ಸ್ಥಳೀಯ ವರ್ತಕರು ವಿರೋಧ ಮಾಡುತ್ತಿದ್ದಾರೆ. ಕೆಲವು ಮೂರ್ತಿಗಳನ್ನು ರಾತ್ರೋರಾತ್ರಿ ಧ್ವಂಸ ಮಾಡಿದ್ದಾರೆ. ಹಾಕಿದ ಬಂಡವಾಳ ಕೂಡ ಮರಳಿ ಬರುವ ವಿಶ್ವಾಸವಿಲ್ಲ. ಕುಂಬಾರಿಕೆ ನಮ್ಮ ಕುಲ ಕಸುಬು. ಬೇರೆಯವರೂ ಮೂರ್ತಿ ಮಾರಾಟದಲ್ಲಿ ತೊಡಗಿರುವುದರಿಂದ ನಮ್ಮ ಅನ್ನಕ್ಕೆ ಕಲ್ಲು ಬೀಳುತ್ತಿದೆ. ನಮಗೆ ಕುಂಬಾರಿಕೆ ಬಿಟ್ಟು ಬೇರೆ ಕಸುಬು ಗೊತ್ತಿಲ್ಲ. ಸೋಮವಾರ ಸಂಜೆ ಒಳಗೆ ಎಲ್ಲ ವಿಗ್ರಹಗಳು ಮಾರಾಟವಾದರೆ ಒಳ್ಳೆಯದು. ಮೂರ್ತಿಗಳನ್ನು ಇಲ್ಲಿಯೇ ಬಿಟ್ಟು ಹೋಗಲು ಸಾಧ್ಯವಿಲ್ಲ. ಮರಳಿ ನಮ್ಮ ಊರು ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋಗಲು ವಾಹನ ಬಾಡಿಗೆ ಕೊಡಬೇಕು. ಏನು ಮಾಡುವುದು ಎಂದು ದಿಕ್ಕು ತೋಚುತ್ತಿಲ್ಲ. ಮುಂದಿನ ವರ್ಷ ಮೂರ್ತಿ ಮಾಡುವುದು ಬೇಡ ಎಂದು ನಿರ್ಧರಿಸಿದ್ದೇವೆ.

-ಪರಿಮಳ, ಚಿಕ್ಕಬಳ್ಳಾಪುರದ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT