ಗುರುವಾರ , ಏಪ್ರಿಲ್ 15, 2021
30 °C

ಪರಿಸರ ಪ್ರೇಮಿ ಶಿವಮಲ್ಲು

ಶಶಿಕುಮಾರ್ ಸಿ. Updated:

ಅಕ್ಷರ ಗಾತ್ರ : | |

ಶಿವಮಲ್ಲು

ವೃತ್ತಿ ದೇಶ ಸೇವೆ, ಪ್ರವೃತ್ತಿ ಪರಿಸರ ಸೇವೆ. ವೃತ್ತಿಜೀವನದ ನಡುವೆ ಸಿಗುವ ಬಿಡುವಿನ ವೇಳೆ ಪರಿಸರ ಕಾಳಜಿ ಮೆರೆಯುತ್ತಿರುವವರು ರಕ್ಷಣಾ ಇಲಾಖೆಯ ಡಿಆರ್‌ಡಿಒದ ಆಡಳಿತಾಧಿಕಾರಿ ಬೆಂಗಳೂರಿನವರೇ ಆದ ಶಿವಮಲ್ಲು.

ಸೋಮವಾರದಿಂದ ಶನಿವಾರದ ವರೆಗೆ ರಕ್ಷಣಾ ಇಲಾಖೆಯಲ್ಲಿ ದುಡಿಯುವ ಶಿವಮಲ್ಲು ಭಾನುವಾರ ಹಾಗೂ ರಜಾದಿನಗಳಲ್ಲಿ ರಾಜ್ಯದ ಹಲವೆಡೆ ಸುತ್ತಾಡಿ ಪರಿಸರ ಪ್ರಜ್ಞೆ ಮೂಡಿಸುತ್ತಿದ್ದಾರೆ. ವಯಸ್ಕರಿಗಿಂತಲೂ ಮಕ್ಕಳಿಗೆ ಹೆಚ್ಚು ಆದ್ಯತೆ ನೀಡುವ ಅವರು ಪರಿಸರ ಕಾಳಜಿಯ ಚಿಂತನೆಗಳನ್ನು ಅವರಲ್ಲಿ ಬಾಲ್ಯದಿಂದಲೇ ಬಿತ್ತುತ್ತಿದ್ದಾರೆ.

ತಾಯಿಯ ಸ್ಮರಣಾರ್ಥವಾಗಿ ಭಾರತೀಯ ಸಮಾಜ ಸೇವಾ ಟ್ರಸ್ಟ್ ಸ್ಥಾಪಿಸಿರುವ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಶಾಲಾ–ಕಾಲೇಜುಗಳಿಗೆ ಹೋಗಿ ಜಾಗೃತಿ ಮೂಡಿಸುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಕಟ್ಟಿಕೊಂಡು ಜಾಗೃತಿ ಜಾಥ ನಡೆಸುತ್ತಿರುವ ಅವರು ಸಂಸ್ಥೆಯ ಹೆಸರಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಶಾಲಾ–ಕಾಲೇಜುಗಳ ಆವರಣದಲ್ಲಿ ಮಕ್ಕಳಿಂದ ಸಸಿಗಳನ್ನು ನೆಡಿಸಿ, ಅವುಗಳನ್ನು ಚೆನ್ನಾಗಿ ಪೋಷಣೆ ಮಾಡಿದ ವಿದ್ಯಾರ್ಥಿಗೆ ಬಹುಮಾನ ನೀಡುತ್ತಿದ್ದಾರೆ.

ಪರಿಸರ ರಕ್ಷಣಾ ಜಾಗೃತಿ ಜಾಥಾ, ಪರಿಸರಕ್ಕೆ ಸಂಬಂಧಪಟ್ಟಂತೆ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸುವ ಶಿವಮಲ್ಲು ಜಾಥಾದಲ್ಲಿ ಹೆಚ್ಚು ಸಕ್ರಿಯವಾಗಿರುವ ಹಾಗೂ ಸ್ಪರ್ಧೆಯ ಅತ್ಯುತ್ತಮರಿಗೆ ವಿದ್ಯಾರ್ಥಿ ಪರಿಸರ ಸಂರಕ್ಷಣ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದಾರೆ. ವಿಚಾರ ಸಂಕಿರಣ, ಸ್ವಚ್ಛತಾ ಅಭಿಯಾನ, ಉಚಿತವಾಗಿ ಸಸಿಗಳ ನೀಡಿಕೆ, ಶಾಲೆಗಳಲ್ಲಿ ಮಕ್ಕಳಿಂದಲೇ ಸ್ವಚ್ಛತೆ ಕಾಪಾಡುವುದರ ಬಗ್ಗೆ ತಿಳುವಳಿಕೆ ನೀಡುತ್ತಿದ್ದಾರೆ. ಅವರ ಈ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ 2004ರಲ್ಲಿ ರಾಜೀವ್ ಗಾಂಧಿ ಪರಿಸರ ಪ್ರಶಸ್ತಿ ನೀಡಿ ಗೌರವಿಸಿದೆ.

‘ಪರಿಸರ ಮಾಲಿನ್ಯ ತಡೆಗಟ್ಟದಿದ್ದರೆ ಮನುಕುಲಕ್ಕೆ ಕಂಟಕವಾಗುತ್ತದೆ. ಮಾಲಿನ್ಯವನ್ನು ನಾನೊಬ್ಬನೇ ತಡೆಗಟ್ಟಲು ಸಾಧ್ಯವಿಲ್ಲ. ಎಲ್ಲರ ಸಹಕಾರವಿಲ್ಲದೇ ಏನನ್ನೂ ಸಾಧಿಸಲಾಗದು. ನನ್ನಿಂದ ಸಾಧ್ಯವಾಗುವಷ್ಟರ ಮಟ್ಟಿಗೆ ಪರಿಸರ ಸೇವೆ ಮಾಡಲು ಸದಾ ಸಿದ್ಧ’ ಎನ್ನುತ್ತಾರೆ ಶಿವಮಲ್ಲು.

‘ಆಮ್ಲಜನಕ ಪ್ರಮಾಣವು ನಗರದಲ್ಲಿ ಕ್ಷೀಣಿಸುತ್ತಿದೆ. ಮಿತಿ ಮೀರಿದ ವಾಹನಗಳು, ಮಿತಿಯಿಲ್ಲದೆ ಅವುಗಳು ಹೊರ ಸೂಸುವ ಹೊಗೆಯೂ ದಿನೇ ದಿನೇ ಹೆಚ್ಚುತ್ತಿದೆ. ಹುಟ್ಟುವ ಮಕ್ಕಳ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪರಿಸರ ಮಾಲಿನ್ಯವು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ನಗರ ಪ್ರದೇಶದ ಬಹುತೇಕರಿಗೆ ಇದರ ಅರಿವು ಇಲ್ಲ’ ಎನ್ನುವ ಅವರು ಈ ಮಾಹಿತಿಯನ್ನು ಜನರಿಗೆ ತಲುಪಿಸುವ ಅಚಲ ನಿಲುವು ಹೊಂದಿದ್ದಾರೆ.

ಆರೋಗ್ಯವೇ ಭಾಗ್ಯ ಅಭಿಯಾನ

‘ನಗರ ಪ್ರದೇಶದ ಪ್ರತಿಯೊಂದು ಬಡಾವಣೆಗಳ ನಿವಾಸಿಗಳ ಬಳಿಗೆ ಹೋಗಿ ಪರಿಸರ ಮಾಲಿನ್ಯವು ಆರೋಗ್ಯಕ್ಕೆ ಹೇಗೆ ಮಾರಕ ಎಂಬುದನ್ನು ತಿಳಿಸಿಕೊಡಲಿದ್ದೇವೆ. ಅದಕ್ಕಾಗಿ ಆರೋಗ್ಯವೇ ಭಾಗ್ಯ ಜನಜಾಗೃತಿ ಅಭಿಯಾನ ಶೀಘ್ರವೇ ಪ್ರಾರಂಭಿಸಲಿದ್ದೇವೆ ಎನ್ನುತ್ತಾರೆ’ ಶಿವಮಲ್ಲು.

ಮನಸ್ಥಿತಿ ಬದಲಾಗಬೇಕು. ಅದು ಸಾಧ್ಯವಾದರೆ ಮಾತ್ರ ಪರಿಸರ ಉಳಿಸಲು ಸಾಧ್ಯ. ಪರಿಸರ ಸಂರಕ್ಷಣೆ ಸರ್ಕಾರಗಳ ಹೊಣೆ ಎಂಬ ಭಾವನೆ ಜನರ ಮನಸ್ಸಿನಲ್ಲಿ ಇನ್ನೂ ಆಳವಾಗಿ ಬೇರೂರಿದೆ. ಮೊದಲು ಅದನ್ನು ತೊಡೆದುಹಾಕಬೇಕು. ಇಲ್ಲವಾದರೆ, ಸರ್ಕಾರಗಳು ಹಾಗೂ ಪರಿಸರ ವಾದಿಗಳು ಎಷ್ಟೇ ಬೊಬ್ಬೆ ಹಾಕಿದರೂ ಯಾವುದೇ ಪ್ರಯೋಜವಾಗದು. ಹೀಗಾಗಿ, ಮನಸ್ಥಿತಿ ಬದಲಾಯಿಸಲು ಈ ಅಭಿಯಾನದ ಮೂಲಕ ಶ್ರಮಿಸಲಿದ್ದೇವೆ ಎನ್ನುತ್ತಾರೆ ಅವರು.

ಕೋಟ್

ಕಲುಷಿತ ಮನಸುಗಳ ಮನಸ್ಥಿತಿಯೇ ಪರಿಸರ ಮಾಲಿನ್ಯಕ್ಕೆ ಕಾರಣ. ಆ ಮನಸ್ಥಿತಿ ಬದಲಾದರೆ ಮಾಲಿನ್ಯಗೊಂಡ ಪರಿಸರ ತಾನಾಗಿಯೇ ಯಥಾಸ್ಥಿತಿಗೆ ಬರಲಿದೆ.
–ಶಿವಮಲ್ಲು, ಪರಿಸರ ಪ್ರೇಮಿ

ತಾಯಿಯೇ ಪ್ರೇರಣೆ

ಶಿವಮಲ್ಲು ಅವರ ತಾಯಿ ಜಯಮ್ಮ ಕ್ಯಾನ್ಸರ್‌ಗೆ ತುತ್ತಾದರು. ತಾಯಿಗೆ ಕ್ಯಾನ್ಸರ್ ಬರಲು ಕಾರಣವೇನು ಎಂದು ಹುಡುಕಿ ಹೊರಟ ಅವರಿಗೆ ವೈದ್ಯರಿಂದ ಅರಿವಾಗಿದ್ದು ‘ಮಾಲಿನ್ಯ’ ಎಂಬ ಹಂತಕ. 

ಆರೋಗ್ಯಕರ ಜೀವನಕ್ಕೆ ಪರಿಸರ ಎಷ್ಟು ಮುಖ್ಯ ಎಂಬುದನ್ನು ಅರಿತು ತನ್ನ ತಾಯಿಗಾದ ಸ್ಥಿತಿ ಮತ್ಯಾರಿಗೂ ಆಗಬಾರದೆಂಬ ಕಾರಣಕ್ಕೆ 22 ವರ್ಷಗಳಿಂದ ಪರಿಸರದ ಬಗ್ಗೆ ಜಾಗೃತಿ ಮೂಡಿಸಿಕೊಂಡು ಬರುತ್ತಿದ್ದಾರೆ ಶಿವಮಲ್ಲು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು