ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶದಲ್ಲೂ ಇದೆ ಕಸ

Last Updated 9 ಮಾರ್ಚ್ 2019, 19:35 IST
ಅಕ್ಷರ ಗಾತ್ರ

ಮಾನವನು ಭೂಮಿಯ ಮೇಲೆ ಮಾತ್ರವಲ್ಲ ಬಾಹ್ಯಾಕಾಶದಲ್ಲೂ ಟನ್‌ಗಟ್ಟಲೆ ಕಸವನ್ನು ಸುರಿದಿದ್ದಾನೆ. ಈ ಕಸವು ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ಯೋಜನೆಗಳಿಗೆ ಅಡ್ಡಿ ಉಂಟುಮಾಡಬಹುದೆಂಬ ಕಾರಣಕ್ಕೆ ಬಾಹ್ಯಾಕಾಶವನ್ನು ಶುಚಿಗೊಳಿಸುವ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲಾಗಿದೆ. ಯುರೋಪ್‌ನ ಕೆಲವು ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಸೇರಿಕೊಂಡು ಆರಂಭಿಸಿದ ಈ ಯೋಜನೆಗೆ ‘ರಿಮೂವ್‌ ಡೆಬ್ರಿಸ್‌’ ಎಂದು ಹೆಸರಿಡಲಾಗಿದೆ.

ಒಂದು ಅಂದಾಜಿನ ಪ್ರಕಾರ ಬಾಹ್ಯಾಕಾಶದಲ್ಲಿ ಮಾನವ ನಿರ್ಮಿತ ಸುಮಾರು 30 ಕೋಟಿ ವಸ್ತುಗಳು ಹಾರಾಡುತ್ತಿವೆ. ಇಂಥ ಪ್ರತಿ ವಸ್ತುವೂ ಗಂಟೆಗೆ 37 ಸಾವಿರ ಕಿ.ಮೀ. ವೇಗದಲ್ಲಿ ಚಲಿಸುತ್ತವೆ. ಇವೆಲ್ಲ ಭೂಮಿಯಿಂದ 850 ಕಿ.ಮೀ ಎತ್ತರದಿಂದ ಆರಂಭಿಸಿ 36 ಸಾವಿರ ಕಿ.ಮೀ ಎತ್ತರದವರೆಗಿನ ಪ್ರದೇಶದಲ್ಲಿ ಚಲಿಸುತ್ತಿವೆ. ಇದರಲ್ಲಿ ಕಾರ್ಯಾವಧಿ ಮುಗಿಸಿದ ರಾಕೆಟ್‌ಗಳು, ರಾಕೆಟ್‌ಗಳಿಗೆ ಬಳಿದಿದ್ದ ಪೇಂಟ್‌ನ ತುಣುಕುಗಳು, ಪ್ಲಾಸ್ಟಿಕ್‌ ಬ್ಯಾಗ್‌ಗಳು, ರಾಕೆಟ್‌ಗಳಿಂದ ಸ್ರವಿಸಿ, ಘನೀಕೃತವಾಗಿರುವ ಕೂಲೆಂಟ್‌... ಹೀಗೆ ಅನೇಕ ವಸ್ತುಗಳಿವೆ.

ಒಂದು ಮಿ.ಮೀ. ಉದ್ದದ ಕಸದ ತುಣುಕೊಂದು ಗಂಟೆಗೆ 37 ಸಾವಿರ ಕಿ.ಮೀ. ವೇಗದಲ್ಲಿ ಬಂದು ಯಾವುದೇ ವಸ್ತುವಿಗೆ ಬಡಿದರೆ ಅದರ ಹೊಡೆತವು ಒಂದು ಬುಲೆಟ್‌ನ ಹೊಡೆತದಷ್ಟೇ ಅಪಾಯಕಾರಿಯಾಗಿರುತ್ತದೆ. ಒಂದು ಕಾಳಿನ ಗಾತ್ರದ ಕಸದ ತುಣುಕು ಸ್ಯಾಟಲೈಟ್‌ನ ಇಂಧನ ಟ್ಯಾಂಕ್‌ ಅಥವಾ ಬಾಹ್ಯಾಕಾಶ ಯಾನಿಗಳು ಧರಿಸುವ ಸೂಟ್‌ಗೆ ಹಾನಿ ಉಂಟುಮಾಡಬಲ್ಲದು.

ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ‘ರಿಮೂವ್‌ ಡೆಬ್ರಿ’ ಎಂಬ ಯೋಜನೆಯನ್ನು ಪ್ರಾಯೋಗಿಕವಾಗಿ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯಡಿ ಸ್ಯಾಟಲೈಟ್‌ ಒಂದನ್ನು ಕಳುಹಿಸಲಾಗಿದ್ದು, ಅದರಲ್ಲಿ ಒಯ್ದಿರುವ ಬಲೆ ಹಾಗೂ ಇತರ ವಸ್ತುಗಳು ಬಾಹ್ಯಾಕಾಶದ ಕಸವನ್ನು ಸಂಗ್ರಹಿಸುವವು. ಹೀಗೆ ಸಂಗ್ರಹಿಸಿದ ಕಸವನ್ನು ಅಲ್ಲಿಯೇ ಸುಟ್ಟು ನಾಶಪಡಿಸಲಾಗುವುದು.

ಬಾಹ್ಯಾಕಾಶದಲ್ಲಿ ಸುತ್ತಾಡುತ್ತಿದ್ದ ಇಂಥ ವಸ್ತುಗಳು ಭೂಮಿಯ ಗುರುತ್ವಾಕರ್ಷಣ ವ್ಯಾಪ್ತಿಯೊಳಗೆ ಬಂದು ಮತ್ತೆ ಭೂಮಿಗೆ ಬೀಳುವುದಿದೆ. 1999ರಲ್ಲಿ ಹೀಗೆ ಸುಮಾರು 1.93 ಲಕ್ಷ ಕೆ.ಜಿ. ತ್ಯಾಜ್ಯ ಭೂಮಿ ಮೇಲೆ ಬಿದ್ದಿದೆ. ಅವುಗಳು ಜನವಸತಿ ಇಲ್ಲದ ಪ್ರದೇಶಗಳಲ್ಲಿ ಮತ್ತು ಸಮುದ್ರದಲ್ಲಿ ಬಿದ್ದಿವೆ ಎಂಬುದು ಸಮಾಧಾನದ ವಿಚಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT