ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರಡಿಯಲ್ಲಿ 204 ಟನ್ ಪ್ಲಾಸ್ಟಿಕ್‌ ವಿಲೇವಾರಿ: ಸಾಧನೆಗೆ ಭಾರತೀಯ ಪೇಟೆಂಟ್

ಕಾರವಾರದ ಡಾ.ರವಿದಾಸ್ ನಾಯ್ಕ ನೇತೃತ್ವದ ತಂಡದ ಸಾಧನೆಗೆ ಭಾರತೀಯ ಪೇಟೆಂಟ್
Last Updated 19 ಜೂನ್ 2022, 19:30 IST
ಅಕ್ಷರ ಗಾತ್ರ

ಕಾರವಾರ: ಸಮುದ್ರದಲ್ಲಿ ಪ್ಲಾಸ್ಟಿಕ್ ಮಾಲಿನ್ಯ ತಡೆಯಲು, ಕಾರವಾರದ ವಿಜ್ಞಾನಿಯೊಬ್ಬರ ನೇತೃತ್ವದ ತಂಡವು ವಿಶೇಷ ಸಾಧನವೊಂದನ್ನು ಅಭಿವೃದ್ಧಿ ಪಡಿಸಿದೆ. ದಿನವೊಂದಕ್ಕೆ 204 ಟನ್‌ಗಳಷ್ಟು ತ್ಯಾಜ್ಯವನ್ನು ಸಂಗ್ರಹಿಸುವ ಸಾಮರ್ಥ್ಯ ಇದಕ್ಕಿದೆ. ಈಗಾಗಲೇ ಭಾರತೀಯ ಪೇಟೆಂಟ್ ಕೂಡ ಲಭಿಸಿದೆ.

ತಾಲ್ಲೂಕಿನ ಹಣಕೋಣದ ಡಾ.ರವಿದಾಸ್ ಕೆ. ನಾಯ್ಕ ನೇತೃತ್ವದ ತಂಡವು ಈ ಸಾಧನೆ ಮಾಡಿದೆ. ಗೋವಾದ ವಾಸ್ಕೋದಲ್ಲಿರುವ ‘ರಾಷ್ಟ್ರೀಯ ಧ್ರುವ ಮತ್ತು ಸಾಗರ ಸಂಶೋಧನಾ ಕೇಂದ್ರ’ದಲ್ಲಿ (ಎನ್.ಸಿ.ಪಿ.ಒ.ಆರ್) ಇವರು ವಿಜ್ಞಾನಿಯಾಗಿದ್ದಾರೆ.

ಜರಡಿ (ಫಿಲ್ಟರ್) ಮಾದರಿಯಲ್ಲಿ ಕೆಲಸ ಮಾಡುವ ಸಾಧನವನ್ನು ಅಭಿವೃದ್ಧಿ ಪಡಿಸಿದ ಹಿನ್ನೆಲೆಯನ್ನು ಡಾ.ರವಿದಾಸ್ ‘ಪ್ರಜಾವಾಣಿ’ ಜೊತೆಗೆ ಹಂಚಿಕೊಂಡಿದ್ದಾರೆ.

‘ನಾನು ಮೈಕ್ರೊ ಪ್ಲಾಸ್ಟಿಕ್ ಕುರಿತಾದ ಅಧ್ಯಯನ ವರದಿಯೊಂದನ್ನು ಸಂಕಲನ ಮಾಡುತ್ತಿದ್ದೆ. ಆಗ, ಸಮುದ್ರದಲ್ಲಿ ಮಾಲಿನ್ಯ ನಿಯಂತ್ರಿಸಲು ಮಾರ್ಗವೊಂದನ್ನು ಕಂಡುಕೊಳ್ಳುವ ಯೋಚನೆ ಮೂಡಿತು. ಆ ನಿಟ್ಟಿನಲ್ಲಿ ಸಂಶೋಧನೆಯಲ್ಲಿ ತೊಡಗಿಕೊಂಡೆವು’ ಎಂದು ಹೇಳಿದರು.

ಟ್ಯಾಂಕ್‌ಗಳಿಗೆ ಸಮುದ್ರದ ನೀರು: ‘ದೇಶ– ವಿದೇಶಗಳು, ಖಂಡಗಳ ನಡುವೆ ಸಂಚರಿಸುವ ಹಡಗುಗಳಿಂದ ಸರಕನ್ನು ಇಳಿಸಿದ ಬಳಿಕ ಸಮತೋಲನ ಕಾಯ್ದುಕೊಳ್ಳಲು ಬೃಹತ್ ಟ್ಯಾಂಕ್‌ಗಳಲ್ಲಿ ನೀರು ತುಂಬಲಾಗುತ್ತದೆ. ಅವುಗಳ ಗಾತ್ರವು ಹಡಗಿನಿಂದ ಹಡಗಿಗೆ ವ್ಯತ್ಯಾಸವಾಗುತ್ತದೆ. 10 ಲಕ್ಷ ಲೀಟರ್‌ಗಳಷ್ಟು ಸಾಮರ್ಥ್ಯದ ಟ್ಯಾಂಕ್‌ಗಳೂ ಇರುತ್ತವೆ. ಅವುಗಳಿಗೆ ಸಮುದ್ರದ ನೀರನ್ನು ಸೋಸದೇ ನೇರವಾಗಿ ಭರ್ತಿ ಮಾಡಲಾಗುತ್ತದೆ. ನಿರ್ದಿಷ್ಟ ಪ್ರಯಾಣದ ನಂತರ ಆ ನೀರನ್ನು ಮತ್ತೆ ಸಮುದ್ರಕ್ಕೆ ಹಾಗೇ ಬಿಡಲಾಗುತ್ತದೆ’ ಎಂದು ಮಾತು ಮುಂದುವರಿಸಿದರು.

‘ಇದರಿಂದ ನೀರು ತುಂಬಿಕೊಂಡ ಪ್ರದೇಶದಲ್ಲಿದ್ದ ಪ್ಲಾಸ್ಟಿಕ್ ಕಣಗಳು (ಮೈಕ್ರೊ ಕಣಗಳು) ಪ್ರಪಂಚದ ಮತ್ಯಾವುದೋ ಮೂಲೆಗೆ ಅತ್ಯಂತ ವೇಗವಾಗಿ ತಲುಪುತ್ತವೆ. ಆ ಮೂಲಕ ಅಲ್ಲಿಯೂ ಮಾಲಿನ್ಯಕ್ಕೆ ಕಾರಣವಾಗುತ್ತವೆ. ಅವು ಮೀನು, ಏಡಿ, ಸೀಗಡಿ ಮುಂತಾದವುಗಳ ಮೂಲಕ ಮಾನವನ ಆಹಾರ ಸರಪಳಿಯನ್ನೂ ಆಕ್ರಮಿಸಿಕೊಂಡು ಮಾನವನ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಇದುವೇ ಸಂಶೋಧನೆಯ ಮೂಲ ವಿಷಯವಾಗಿತ್ತು’ ಎಂದು ತಿಳಿಸಿದರು.

ಫಿಲ್ಟರ್ ಮಾದರಿಯ ಸಾಧನ: ‘ಇಂಥ ಸಣ್ಣ ಪ್ಲಾಸ್ಟಿಕ್ ಕಣಗಳನ್ನು ಹಡಗಿನಲ್ಲೇ ತಡೆದು ವಿಲೇವಾರಿ ಮಾಡುವ ನಿಟ್ಟಿನಲ್ಲಿ ನಮ್ಮ ತಂಡವು 2019ರಲ್ಲಿ ಸಂಶೋಧನೆ ಆರಂಭಿಸಿತು. ಹಡಗಿನ ಟ್ಯಾಂಕ್‌ನಿಂದ ಸಮುದ್ರಕ್ಕೆ ನೀರು ಹರಿಸುವ ಪೈಪ್‌ಗೆ ಅಳವಡಿಸಬಹುದಾದ ಫಿಲ್ಟರ್‌ ಮಾದರಿಯ ಸಾಧನವನ್ನು ಅಭಿವೃದ್ಧಿಪಡಿಸಿತು. ಈ ಸಾಧನವು ದುಬಾರಿಯಲ್ಲದ, ಸಮುದ್ರದ ಉಪ್ಪು ನೀರಿನಲ್ಲಿ ಕರಗದ ಸ್ಟೀಲ್‌ನಿಂದ ಮಾಡಲಾದ ಜಾಲರಿಯಂತಿದೆ’ ಎಂದು ವಿವರಿಸಿದರು.

‘ಒಂದು ಅಂದಾಜಿನ ಪ್ರಕಾರ ಎಂಟು ಮಿಲಿಯನ್‌ ಟನ್‌ಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವು ಪ್ರತಿ ವರ್ಷ ಸಮುದ್ರಕ್ಕೆ ಸೇರುತ್ತದೆ. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮಗಳ ವರದಿಯ ಪ್ರಕಾರ, 2050ರ ವೇಳೆಗೆ ಸಮುದ್ರದಲ್ಲಿ ಮೀನಿಗಿಂತ ಹೆಚ್ಚು ಇಂಥ ತ್ಯಾಜ್ಯಗಳೇ (ತೂಕದಲ್ಲಿ) ಇರಲಿವೆ ಎಂಬ ಆತಂಕವೂ ಎದುರಿಗಿದೆ. ಇಂಥ ಪರಿಸ್ಥಿತಿಯನ್ನು ನಿಭಾಯಿಸಲು ನಮ್ಮ ಸಂಶೋಧನೆಯು ಒಂದಷ್ಟು ಸಹಕಾರಿಯಾಗಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅವರ ತಂಡದಲ್ಲಿ ಖರಗ್‌ಪುರ ಐ.ಐ.ಟಿ.ಯ ಪಾರ್ಥಸಾರಥಿ ಚಕ್ರಬೊರ್ತಿ, ಸ್ಕೂಲ್ ಆಫ್ ಅರ್ಥ್‌ನ ಪ್ರಿಯಾ ಪ್ರಿಯಾ ಎಂ.ಡಿಕೋಸ್ತ, ಎನ್.ಸಿ.ಪಿ.ಒ.ಆರ್‌.ನ ಆರ್.ಕೆ.ಮಿಶ್ರಾ ಹಾಗೂ ಗೋವಾದ ಪಾರ್ವತಿ ಬಾಯಿ ಚೌಗುಲೆ ಕಲಾ ಕಾಲೇಜಿನ ವಿದ್ಯಾರ್ಥಿನಿ ವೆಲಿಟನ್ ಫರ್ನಾಂಡಿಸ್ ಕೂಡ ಇದ್ದರು.

‘ಅತ್ಯಂತ ಪರಿಣಾಮಕಾರಿ’:

‘ಮೈಕ್ರೊ ಪ್ಲಾಸ್ಟಿಕ್ ಕಣಗಳು ಅತ್ಯಂತ ಅಪಾಯಕಾರಿ. ಸಾಗರದಲ್ಲಿ ಜಲಚರಗಳಲ್ಲಿ ಅವು ಸೇರುವುದು ಕಳವಳಕಾರಿ. ಇಂಥ ಕಣಗಳನ್ನು ಸಾಗರದಿಂದ ಬೇರ್ಪಡಿಸುವುದು ದೊಡ್ಡ ಸವಾಲು. ಡಾ.ರವಿದಾಸ್ ಅವರ ಸಂಶೋಧನೆಯು ಅತ್ಯಂತ ಪರಿಣಾಮಕಾರಿಯಾಗಿದೆ. ಧಾರವಾಡ ವಿಶ್ವವಿದ್ಯಾಲಯದಲ್ಲಿ ನಮ್ಮ ವಿಭಾಗದ ಹಳೆಯ ವಿದ್ಯಾರ್ಥಿ ಸಂಶೋಧನೆ ಮಾಡಿ ಪೇಟೆಂಟ್ ಮಾಡಿರುವುದು ಹೆಮ್ಮೆಯ ಸಂಗತಿ’ ಎನ್ನುತ್ತಾರೆ ಕಾರವಾರದ ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ.

-----

* ಈ ಸಾಧನವು ಹೆಚ್ಚುವರಿ ಖರ್ಚು, ಇಂಧನದ ನೆರವಿಲ್ಲದೇ ಕೆಲಸ ನಿರ್ವಹಿಸುತ್ತದೆ. ಹಡಗುಗಳಲ್ಲಿ ಅಳವಡಿಸಲು ಸರ್ಕಾರ ಆಸಕ್ತಿ ತೋರಿದರೆ ಸಹಕರಿಸಲಾಗುವುದು.

- ಡಾ.ರವಿದಾಸ್ ಕೆ.ನಾಯ್ಕ, ಎನ್.ಸಿ.ಪಿ.ಒ.ಆರ್ ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT