‘ಬಿಸು ಪರ್ಬ’ಕ್ಕೆ ಮಾವಿನ ಸಾಸಿವೆ

ಭಾನುವಾರ, ಏಪ್ರಿಲ್ 21, 2019
32 °C

‘ಬಿಸು ಪರ್ಬ’ಕ್ಕೆ ಮಾವಿನ ಸಾಸಿವೆ

Published:
Updated:
Prajavani

ಕರಾವಳಿ, ಕೇರಳ ಮತ್ತು ತಮಿಳುನಾಡಿನ ಮಂದಿಗೆ ಹೊಸ ವರ್ಷ ಅಧಿಕೃತವಾಗಿ ಆರಂಭವಾಗುವುದು ಸೌರಮಾನ ಯುಗಾದಿಯಂದು. ಅವರಿಗೆ ಚಾಂದ್ರಮಾನ ಯುಗಾದಿಗೆ ಧಾರ್ಮಿಕ ಮತ್ತು ಆಧ್ಯಾತ್ಮಿಕವಾಗಿ ಮಹತ್ವದ್ದು. ದೇವಸ್ಥಾನ ಭೇಟಿ ಮತ್ತು ಪಂಚಾಂಗ ಶ್ರವಣಕ್ಕಷ್ಟೇ ಚಾಂದ್ರಮಾನ ಯುಗಾದಿಯನ್ನು ಸೀಮಿತಗೊಳಿಸುವುದೂ ಇದೆ. ಆದರೆ ಅಸಲಿ ಹಬ್ಬದ ಆಚರಣೆ ಸೌರಮಾನ ಯುಗಾದಿಯಂದು.

ಆ ವರ್ಷದ ಮೊದಲ ಬೆಳೆಗಳನ್ನು ಒಪ್ಪವಾಗಿ ಜೋಡಿಸಿಟ್ಟು ಪೂಜಿಸುವ ‘ವಿಷು ಕಣಿ’ ಇಡೀ ಹಬ್ಬದ ಆಚರಣೆಗೆ ಮುಕುಟದಂತೆ. ಅಂದಿನ ಊಟಕ್ಕೆ ತಮ್ಮದೇ ತೋಟದ, ಕೈತೋಟದ ತರಕಾರಿ, ಸೊಪ್ಪು, ಕಾಯಿ ಬಳಸುವ ಸಂಭ್ರಮ.

ಮಾವಿನ ಕಾಯಿಯ ಬಗೆ ಬಗೆಯ ಖಾದ್ಯಕ್ಕೆ ಊಟದಲ್ಲಿ ಅಗ್ರಸ್ಥಾನ. ಮಾವಿನ ಹಣ್ಣಿನ ಸೀಸನ್‌ ಶುರುವಾಗಿರುವುದಿಲ್ಲ. ಹಾಗಾಗಿ ಕಾಯಿಯ ಖಾದ್ಯಗಳಿಗೆ ಬೆಲ್ಲ ಸೇರಿಸಿ ಸಿಹಿ ಮಾಡಿಕೊಂಡು ಚಪ್ಪರಿಸುವುದು! ಇಂತಹ ಖಾದ್ಯಗಳಲ್ಲಿ ಮಾವಿನ ಸೀಕರಣೆ ಮತ್ತು ಮಾವಿನ ಸಾಸಿವೆ ಇರಲೇಬೇಕು! ತಯಾರಿ ವಿಧಾನ ಬಹಳ ಸರಳ. ಮಾವಿನ ಸಾಸಿವೆಯನ್ನು ತಮಿಳುನಾಡಿನಲ್ಲಿ ಮಾವಿನ ಸಿಹಿ ಚಟ್ನಿ ಅಥವಾ ಆರುಸುವೈ ಎನ್ನುತ್ತಾರೆ. ಆರುಸುವೈ ಎಂದರೆ ಆರು ಬಗೆಯ ಸ್ವಾದಗಳ ಸಮಪಾಕ ಎಂದರ್ಥ. ಉಪ್ಪು, ಸಿಹಿ, ಹುಳಿ, ಕಹಿ, ಬಿಸಿ ಮತ್ತು ಜಿಗುಟು. ಯುಗಾದಿ/ವಿಷುಗೆ ಸಿಹಿ ಮತ್ತು ಕಹಿಯನ್ನು ಸಮಾನವಾಗಿ ಬೆರೆಸಿ ತಿನ್ನಬೇಕು ಎಂಬ ಕಾರಣಕ್ಕೆ ಈ ಖಾದ್ಯಕ್ಕೆ ಕಹಿಬೇವಿನ ಎಲೆಯನ್ನು ಸೇರಿಸುತ್ತಾರೆ. ಕಹಿಯನ್ನು ಹೊಡೆದುಹಾಕಲು ಹೇಗಿದ್ದರೂ ಬೆಲ್ಲ ಮತ್ತು ಇತರ ಸಾಮಗ್ರಿಗಳು ಇರುತ್ತವಲ್ಲ! ಮಾವು ಹುಳಿಯಾಗಿಲ್ಲದಿದ್ದರೆ ಹುಣಸೆ ಹುಳಿ ಬಳಸುತ್ತಾರೆ. 

ಮಾಡುವ ವಿಧಾನ
ಬೇಕಾಗುವ ಸಾಮಗ್ರಿಗಳು:
 ಒಂದು ದೊಡ್ಡ ಮಾವಿನಕಾಯಿ (ಹುಳಿಯಾಗಿದ್ದಷ್ಟೂ ಉತ್ತಮ); ಅರ್ಧ ಅಥವಾ ಮುಕ್ಕಾಲು ಕಪ್‌ ಬೆಲ್ಲದ ಪುಡಿ; ಒಗ್ಗರಣೆಗೆ ಸಾಸಿವೆ; 2–3 ಚಮಚ ತುಪ್ಪ; ಚಿಟಿಕೆ ಅರಸಿನ; 2–3 ಒಣಮೆಣಸು; ಚಿಟಿಕೆ ಉಪ್ಪು

ಮಾವಿನಕಾಯಿ ಸಿಪ್ಪೆ ಸುಲಿದು ಮಧ್ಯಮ ಗಾತ್ರದ ಹೋಳು ಮಾಡಿಕೊಳ್ಳಿ. ಪ್ಯಾನ್‌ ಅಥವಾ ಬಾಣಲೆಯನ್ನು ಸ್ಟೌನಲ್ಲಿರಿಸಿ ಒಂದು ಕಪ್‌ ನೀರಿನಲ್ಲಿ ಬೆಲ್ಲವನ್ನು ಕರಗಿಸಿ ಸೋಸಿಕೊಳ್ಳಿ.

ಅದೇ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು ಸಾಸಿವೆ ಹಾಕಿ. ಅದು ಸಿಡಿಯುತ್ತಿದ್ದಂತೆ ಒಣಮೆಣಸು ತುಂಡು ಮಾಡಿ ಹಾಕಿ. ಘಮ್ಮನೆ ಸುವಾಸನೆ ಬಂದ ಮೇಲೆ ಮಾವಿನ ಹೋಳು ಸೇರಿಸಿ ಸೌಟಿನಲ್ಲಿ ಕೆದಕಿ, ಅರಸಿನ ಸೇರಿಸಿ ಸ್ವಲ್ಪ ಕೆದಕಿ ಒಂದೂವರೆ ಕಪ್‌ನಷ್ಟು ನೀರು ಬೆರೆಸಿ 10 ನಿಮಿಷ ಮುಚ್ಚಿ ಬೇಯಲು ಬಿಡಿ.

ಬಳಿಕ ಮುಚ್ಚಳ ತೆಗೆದು ಮಾವಿನ ಹೋಳುಗಳನ್ನು ಸೌಟಿನಲ್ಲಿ ಮೆತ್ತಗೆ ಒತ್ತಿ ರಸ ಬಿಟ್ಟುಕೊಳ್ಳುವಂತೆ ಮಾಡಿ ಬೇಯಲು ಬಿಡಿ. ಈಗ ಬೆಲ್ಲದ ನೀರು ಸೇರಿಸಿ ಮತ್ತೆ 10 ನಿಮಿಷ ಕುದಿಯಲು ಬಿಡಿ. ಎಲ್ಲವೂ ಜಿಗುಟು ಜಿಗುಟಾಗಿ ಒಂದೇ ಪಾಕದಂತೆ ಮರೂನ್‌ ಬಣ್ಣಕ್ಕೆ ತಿರುಗುತ್ತದೆ. ಸಾಸಿವೆ ಎಷ್ಟು ದಪ್ಪಗಿರಬೇಕು ಎಂಬುದರ ಆಧಾರದಲ್ಲಿ ನೀರು ಮತ್ತು ಬೆಲ್ಲದ ನೀರು ಎಷ್ಟು ಸೇರಿಸಬೇಕು ಎಂಬುದು ನೆನಪಿನಲ್ಲಿರಲಿ.

ಕೆಲವರು ಇದೇ ಖಾದ್ಯವನ್ನು ಕುಕ್ಕರ್‌ನಲ್ಲಿ ಮಾಡುವುದುಂಟು. ಆದರೆ ಬೆಲ್ಲದ ಪಾಕವನ್ನು ಸೇರಿಸಿದ ಬಳಿಕವೇ ಕುಕ್ಕರ್‌ ಮುಚ್ಚಿ ಬೇಯಲು ಬಿಡಬೇಕು. ಆದರೆ 2–3 ಸೀಟಿಗೇ ಆಫ್ ಮಾಡಲು ಮರೆಯಬೇಡಿ. ಹಬ್ಬದ ಊಟಕ್ಕೆ ವೈವಿಧ್ಯಮಯ ಸ್ವಾದದ ಮಾವಿನ ಸಾಸಿವೆ ಸವಿದು ನೋಡಿ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !