ಗುರುವಾರ , ಫೆಬ್ರವರಿ 25, 2021
20 °C

ತ್ಯಾಜ್ಯ ಸಂಸ್ಕರಣೆಯ ಜಾಗೃತಿ ಮೂಡಿಸುತ್ತಿರುವ ಪ್ರಖ್ಯಾತಿ ಯುವತಿ ಮಂಂಡಲ

ಶಶಿಧರ್ ರೈ ಕುತ್ಯಾಳ. Updated:

ಅಕ್ಷರ ಗಾತ್ರ : | |

ಬಯೋ ಗ್ಯಾಸ್ ಘಟಕ

ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ.  ಈ ಮಾತು ಕೇವಲ ಭಾಷಣಕ್ಕೆ  ಸೀಮಿತವಾಗಿ ಉಳಿದಿದೆಯೋ ಎಂದೆನಿಸುತ್ತದೆ. ಜನತೆ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಹಿಂದೆ ಬೀಳುತ್ತಿದ್ದು, ಎಲ್ಲಿ ನೋಡಿದರೂ ತ್ಯಾಜ್ಯ ರಾಶಿ ತುಂಬಿಕೊಂಡಿದ್ದು, ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವೊಂದು ಪುತ್ತೂರು ತಾಲ್ಲೂಕಿನ ನರಿಮೊಗ್ರು ಗ್ರಾಮದಲ್ಲಿ ಆರಂಭವಾಗಿದೆ. `ಪ್ರಖ್ಯಾತಿ' ಯುವತಿ ಮಂಡಲ `ಬಯೋ ಗ್ಯಾಸ್ ಘಟಕ ಸ್ಥಾಪನೆ' ಚಿಂತನೆ ನಡೆಸಿದೆ. 

ನಮ್ಮ ಮನೆಯಿಂದಲೇ ಸ್ವಚ್ಛತೆಯ ಬಗ್ಗೆ ಗಮನ ಹರಿಸೋಣ. ನಮ್ಮ ಊರು, ನಮ್ಮ ಗ್ರಾಮ ಸ್ವಚ್ಛವಾಗುವಲ್ಲಿ ನಾವೆಲ್ಲರೂ ಮುಖ್ಯ ಪಾತ್ರ ವಹಿಸೋಣ ಎಂದು ಸದಸ್ಯೆಯರು ತಿಳುವಳಿಕೆ ನೀಡುತ್ತಿದ್ದಾರೆ. ಇತ್ತೀಚೆಗೆ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿರುವುದಕ್ಕೆ ಕೊಳೆಯುತ್ತಿರುವ ತ್ಯಾಜ್ಯ ರಾಶಿಯೇ ಕಾರಣ  ಎಂಬುವುದನ್ನು ಜನತೆಗೆ ಮನವರಿಕೆ ಮಾಡುವ `ಜಾಗೃತಿ' ಕಾಯಕದಲ್ಲಿ ನಿರತರಾಗಿರುವ ಪ್ರಖ್ಯಾತಿ ಯುವತಿ ಮಂಡಲದ ಸದಸ್ಯೆಯರು ಬಯೋಗ್ಯಾಸ್‌ ಸ್ಥಾಪನೆಗೆ ಮುಂದಾಗಿದ್ದಾರೆ. 

ಅಡುಗೆ ಮನೆಯ ತ್ಯಾಜ್ಯಗಳಾದ ಹಸಿ ತರಕಾರಿ,ಹಸಿ ಪದಾರ್ಥ, ತರಕಾರಿ ಸೊಪ್ಪು, ಮನೆಯ ಪಕ್ಕದಲ್ಲಿ ಬೆಳೆಯುವ ಹುಲ್ಲು, ಸೊಪ್ಪು ಇತ್ಯಾದಿಗಳನ್ನು  ಬಳಸಿಕೊಂಡು ಜೈವಿಕ ಅನಿಲ (ಬಯೋ ಗ್ಯಾಸ್) ಉತ್ಪಾದಿಸಬಹುದು.  ಹೀಗೆ ಮಾಡುವುದರಿಂದ ಅಡುಗೆ ಮಾಡಲು ಅನಿಲವೂ ಸಿಗುತ್ತದೆ, ಹಸಿ, ಕೊಳೆತ ತ್ಯಾಜ್ಯಗಳ ವಿಲೇವಾರಿಯೂ ಆಗುತ್ತದೆ. ಅತಿ ಕಡಿಮೆ ಖರ್ಚಿನಲ್ಲಿ ಮತ್ತು ಅತ್ಯಂತ ಸುಲಭ ವಿಧಾನದಲ್ಲಿ ಬಯೋ ಗ್ಯಾಸ್ ಉತ್ಪಾದಿಸಲು ಸಾಧ್ಯವಿದೆ ಎಂಬುದನ್ನು ಸದಸ್ಯೆಯರು ಅರ್ಥಮಾಡಿಕೊಂಡಿದ್ದಾರೆ. 

ತ್ಯಾಜ್ಯದ ವಿಲೇವಾರಿಗೆ ಅನುಕೂಲವಾಗುವಂತೆ ನರಿಮೊಗ್ರು ಗ್ರಾಮದಲ್ಲಿ ಬಯೋಗ್ಯಾಸ್ ಘಟಕ ನಿರ್ಮಿಸುವಂತೆ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿದ್ದಾರೆ. ಶಾಲೆಯ ಅಕ್ಷರ ದಾಸೋಹ ಬಿಸಿಯೂಟ ಯೋಜನೆಗೆ ಬಳಸಬಹುದು ಎಂಬ ಸಲಹೆ ನೀಡಿದ್ದಾರೆ.  ನರಿಮೊಗ್ರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜೇರಾಲ್ಡ್ ಮಸ್ಕರೇನ್ಹಸ್ ಅವರು ಈಗಾಗಲೇ ಪ್ಲಾಸ್ಟಿಕ್ ವಿಲೇವಾರಿ ಘಟಕ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದಾರೆ. ಇದರ ಜತೆಗೆ ಬಯೋಗ್ಯಾಸ್ ಘಟಕ ಸ್ಥಾಪನೆ ಬಗ್ಗೆ ಸಭೆಯಲ್ಲಿ ಪ್ರಸ್ತಾವಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡುವ ಮೂಲಕ ಯುವತಿಯರ ಚಿಂತನೆಯನ್ನು ಪ್ರೋತ್ಸಾಹಿಸಿದ್ದಾರೆ. ಮೂರು ಇಲ್ಲವೇ ಮೂರು ಮಂದಿಗಿಂತ ಜಾಸ್ತಿ ಸದಸ್ಯರಿರುವ ಕುಟುಂಬಗಳು `ಬಯೋಗ್ಯಾಸ್' ಅನುಷ್ಠಾನ ಮಾಡಬಹುದಾಗಿದೆ.  

ನೆಹರು ಯುವ ಕೇಂದ್ರದ ಸ್ಚಚ್ಛಭಾರತ್ ಇಂಟರ್ನ್‍ಶಿಪ್‍ನಲ್ಲಿ ನೋಂದಾಯಿತ `ಪ್ರಖ್ಯಾತಿ ಯುವತಿ' ಮಂಡಲ ಹಲವಾರು ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಪ್ರಸ್ತುತ ನೆಹರು ಯುವ ಕೇಂದ್ರದ ಪುತ್ತೂರು ತಾಲ್ಲೂಕು ಸಂಯೋಜಕಿಯಾಗಿ, ಪುತ್ತೂರು ತಾಲ್ಲೂಕು ಯುವಜನ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಗುರುತಿಸಿಕೊಂಡಿರುವ, ರಾಜ್ಯ ಮಟ್ಟದಲ್ಲಿ ಹೆಸರುಗಳಿಸಿರುವ ಗಾಯಕಿ ಗುರುಪ್ರಿಯಾ ನಾಯಕ್ ಅವರು ಪ್ರಖ್ಯಾತಿ ಯುವತಿ ಮಂಡಲದ ಅಧ್ಯಕ್ಷೆಯಾಗಿದ್ದಾರೆ.
ವಿದ್ಯಾ ಪ್ರಸಾದ್ ಪುರುಷರಕಟ್ಟೆ, ಖುಷಿತಾ ಕೆ. ನರಿಮೊಗ್ರು, ಸ್ವಾತಿ ನರಿಮೊಗ್ರು,ಮೇಘಾ ಮಣಿಯ, ಶಮಿತಾ ಪುರುಷರಕಟ್ಟೆ, ಪವಿತ್ರಾ ಪುರುಷರಕಟ್ಟೆ, ತೇಜಸ್ವಿನಿ ಮುಕ್ವೆ, ಸಮೃದ್ಧಿ ಶೆಣೈ ಕೆಮ್ಮಿಂಜೆ,ಮೇಘಾ ಮಣಿಯ, ಪ್ರಿಯಾ ಕೂಡುರಸ್ತೆ, ಪುಷ್ಪಲತಾ ಮತ್ತಿತರ ಸದಸ್ಯರನ್ನೊಳಗೊಂಡ ಈ ಯುವತಿ ಮಂಡಲ ತಂಡ ಸಾಮಾಜಿಕ ಕಳಕಳಿಯ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. 

ತರಕಾರಿ, ಮಿಕ್ಕುಳಿದ ಪದಾರ್ಥಗಳು, ಸೊಪ್ಪು, ಇತ್ಯಾದಿ ಹಸಿ ತ್ಯಾಜ್ಯಗಳನ್ನು ಶೇಖರಿಸಿ ನಿಶ್ಚಿತ ಮಾದರಿಯ ಘಟಕದಲ್ಲಿ ಹಾಕಬೇಕು. ಹಸಿ ತ್ಯಾಜ್ಯಗಳು ಜೈವಿಕ ಕ್ರಿಯೆಗೆ ಒಳಗಾಗಿ ಅನಿಲ ಉತ್ಪತ್ತಿಯಾಗುತ್ತದೆ. ಆದರೆ ಆರಂಭದಲ್ಲಿ ಸೆಗಣಿ ಬಳಕೆ ಮಾಡಬೇಕಾಗುತ್ತದೆ. ನಂತರದಲ್ಲಿ ತ್ಯಾಜ್ಯಗಳಿದ್ದರೆ ಸಾಕಾಗುತ್ತದೆ. ಕನಿಷ್ಠ 2 ಕಿಲೋ ತ್ಯಾಜ್ಯಗಳಿಂದ 24 ಗಂಟೆಯೊಳಗೆ ಸಾಮಾನ್ಯ 2ಗಂಟೆಗೆ ಬೇಕಾಗುವಷ್ಟು ಅಡುಗೆ ಅನಿಲ ಉತ್ಪಾದನೆ ಮಾಡಬಹುದು. 

ಶಾಲೆ ಮತ್ತು ಅಂಗನವಾಡಿಗಳಲ್ಲಿ ಮಾತ್ರವಲ್ಲ, ಮೂರು ಜನರಿರುವ ಮನೆಗಳಲ್ಲಿಯೂ ಬಯೋಗ್ಯಾಸ್ ಘಟಕ ಅಳವಡಿಸಬಹುದು. ಇದು ಪ್ರಕೃತಿಯ ಒಂದು ಕೊಡುಗೆಯೂ ಆಗಿದೆ
- ಡಾ.ರಾಜೇಶ್ ಬೆಜ್ಜಂಗಳ, ಜೇಸಿಐ ತರಬೇತುದಾರರು.

 

 

 

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು