ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲರಾಶಿಯ ವೈಭವ; ತಪ್ಪಲಿದೆ ಅಭಾವ

ಸತತ ವರ್ಷ ಧಾರೆ: ಕೆರೆ–ಕಟ್ಟೆಗಳು ಭರ್ತಿ
Last Updated 23 ನವೆಂಬರ್ 2020, 7:26 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಕೆಲವು ಕಡೆಗಳಲ್ಲಿ ಪ್ರವಾಹ ಉಂಟಾಗಿ, ಅಲ್ಲಿನ ಜನರು ಸಂಕಷ್ಟಕ್ಕೆ ಒಳಗಾದರು ನಿಜ. ಆದರೆ, ಬಹುತೇಕ ಜಲ ಮೂಲಗಳನ್ನು ಭರ್ತಿ ಮಾಡುವ ಮೂಲಕ ಮಳೆರಾಯ ‘ನೀರ ನೆಮ್ಮದಿ ನಾಳೆ’ಯನ್ನು ತಂದುಕೊಟ್ಟಿದ್ದಾನೆ. ಅಂತರ್ಜಲ ಮಟ್ಟದ ಸುಧಾರಣೆಗೂ ಕಾರಣವಾಗಿದ್ದಾನೆ.

ಘಟಪ್ರಭಾ ನದಿಗೆ ಹಿಡಕಲ್‌ನಲ್ಲಿ ಕಟ್ಟಲಾಗಿರುವ ರಾಜಾ ಲಖಮಗೌಡ ಜಲಾಶಯ, ಮಲಪ್ರಭಾಕ್ಕೆ ಸವದತ್ತಿ ತಾಲ್ಲೂಕಿನ ನವಿಲುತೀರ್ಥದಲ್ಲಿ ನಿರ್ಮಿಸಿರುವ ರೇಣುಕಾಸಾಗರ ಜಲಾಶಯಗಳು ಭರ್ತಿಯಾಗಿವೆ. ಜೊತೆಗೆ ಕೆರೆ, ಕಟ್ಟೆಗಳು, ಹೊಂಡಗಳಲ್ಲೂ ಜಲರಾಶಿಯ ಸೊಬಗು ಕಣ್ಮನ ತಣಿಸುತ್ತಿದೆ. ಮುಂದಿನ ಮಳೆಗಾಲದವರೆಗೆ ಕುಡಿಯುವ ನೀರಿಗೆ ತೊಂದರೆ ಎದುರಾಗುವುದಿಲ್ಲ ಎಂಬ ಶುಭ ಸಂದೇಶವನ್ನು ಸಾರಿದೆ. ಕೃಷಿ ಚಟುವಟಿಕೆಗಳಿಗೂ ನೀರು ಲಭ್ಯವಾಗುವ ಆಶಾಭಾವ ಮೂಡಿದೆ.

ನಿರ್ವಹಣೆಗೆ ನಿರ್ಲಕ್ಷ್ಯ:

ಕೆರೆ, ಕಟ್ಟೆಗಳೇನೋ ತುಂಬಿವೆ. ಆದರೆ, ಹಲವು ಕಡೆಗಳಲ್ಲಿ ಅಲ್ಲಿ ಸಂಗ್ರಹವಾಗಿರುವ ನೀರನ್ನು ಬಳಸಲಾಗದ ಸ್ಥಿತಿ ಇದೆ. ಕೆರೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಇಲಾಖೆ ಅಥವಾ ಸ್ಥಳೀಯ ಸಂಸ್ಥೆಯವರು ಕ್ರಮ ಕೈಗೊಳ್ಳದಿರುವುದು ಇದಕ್ಕೆ ಕಾರಣ.

ಹಲವೆಡೆ ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳುವ ಮೂಲಕ ಅವುಗಳ ಅಸ್ತಿತ್ವವನ್ನೇ ಅಲುಗಾಡಿಸುವ ಪ್ರಯತ್ನವೂ ನಡೆದಿದೆ. ವಿಷಕಾರಿ ಪ್ಲಾಸ್ಟಿಕ್‌ ತ್ಯಾಜ್ಯ, ಡೆಬ್ರಿಸ್‌ ಮೊದಲಾದವುಗಳನ್ನು ಕೆರೆಗಳು ಮೊದಲಾದ ಜಲಮೂಲಗಳ ಒಡಲಿಗೆ ಸೇರಿಸುತ್ತಿರುವುದು ಪ್ರಜ್ಞಾವಂತರ ಆತಂಕಕ್ಕೆ ಕಾರಣವಾಗಿದೆ. ಬೆಳಗಾವಿ ತಾಲ್ಲೂಕಿನ ಕಂಗ್ರಾಳಿ ಗ್ರಾಮದ ಕರೆ, ಹೊರವಲಯದ ಕಣಬರ್ಗಿಯ ಸಣ್ಣ ಕೆರೆಗಳು ಕಳೆಗಿಡಗಳಿಂದಲೇ ತುಂಬಿ ಹೋಗಿವೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾವಿರಾರು ಶ್ರಮಿಕರು ಕೆರೆಗಳ ಹೂಳೆತ್ತುವ ಕಾರ್ಯ ಮಾಡಿದ್ದರು. ಅದರ ಫಲವಾಗಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಕೆರೆ–ಕಟ್ಟೆಗಳಲ್ಲಿ ನೀರು ಸಂಗ್ರಹ ಪ್ರಮಾಣ ಹೆಚ್ಚಾಗಿದೆ.

ಅಂತರ್ಜಲ ಮಟ್ಟ ಹೆಚ್ಚಳ:

ಮುಂಗಾರು ಹಂಗಾಮಿನಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ಮೂಡಲಗಿ ತಾಲ್ಲೂಕಿನ ಬಹುಪಾಲು ಜಲ ಮೂಲಗಳು ತುಂಬಿವೆ. ಕೆರೆ, ಬಾವಿ, ಕೊಳವೆಬಾವಿಗಳಲ್ಲಿ ಈ ಹಿಂದೆ ಕಾಣದಷ್ಟು ಪ್ರಮಾಣದಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ವೆಂಕಟಾಪುರದಲ್ಲಿರುವ ಹಲವು ದಶಕಗಳ ಹಿಂದೆ ಕಟ್ಟಿದ್ದ ಕೆರೆಯೂ ಭರ್ತಿಯಾಗಿದೆ. ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ ಎನ್ನುತ್ತಾರೆ ಗ್ರಾಮಸ್ಥರು. ಇಲ್ಲಿ 600ರಿಂದ 800 ಅಡಿವರೆಗೆ ಆಳವಿರುವ ಕೊಳವೆ ಬಾವಿಗಳಿದ್ದು ಅವೆಲ್ಲವೂ ಸದ್ಯ ತುಂಬಿವೆ. ಇಲ್ಲಿನ ಮಲ್ಲಪ್ಪ ನೇಮಗೌಡರ ತೋಟದಲ್ಲಿರುವ 120 ಅಡಿಯ ಬಾವಿಯು ಒಂದು ತಿಂಗಳಿನಿಂದ ಪೂರ್ತಿ ತುಂಬಿದೆ.

ಹೂಳೆತ್ತಲಾಗಿತ್ತು:

ಹೋದ ವರ್ಷ ಮತ್ತು ಈ ಮುಂಗಾರು ಹಂಗಾಮಿನಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಹುಕ್ಕೇರಿ ತಾಲ್ಲೂಕಿನಲ್ಲಿನ ಬಹುತೇಕ ಕೆರೆಗಳು ಶೇ. 80ರಷ್ಟು ತುಂಬಿವೆ. ಶಾಸಕ ಉಮೇಶ ಕತ್ತಿ ಅವರು ಮುತುವರ್ಜಿ ವಹಿಸಿ ಕೆರೆ ತುಂಬುವ ಕಾಮಗಾರಿ ಮಾಡಿಸಿದ್ದರಿಂದ ಅನುಕೂಲವಾಗಿದೆ.

ಮಳೆ ಪ್ರಮಾಣ ಕಡಿಮೆ ಇರುವ ಪ್ರದೇಶ (ಯಾದಗೂಡ, ಬೆಳವಿ, ಶಿರಹಟ್ಟಿ, ಸಾರಾಪುರ, ಹಣಜ್ಯಾನಟ್ಟಿ ಮೊದಲಾದವು)ಗಳಲ್ಲಿ ಸಂಕೇಶ್ವರ ಬಳಿಯ ಹಿರಣ್ಯಕೇಶಿ ನದಿಯಿಂದ ನೀರೆತ್ತುವ ಮೂಲಕ ನೀರು ತುಂಬಿಸಿರುವುದರಿಂದ ಕೆರೆಗಳಲ್ಲಿ ಜಲ ವೈಭವವಿದೆ. ಪ್ರತಿ ಭಾನುವಾರ ಶಾಸಕ ಕತ್ತಿ ಬೆಂಬಲಿಗರು, ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ಕ್ಷೇತ್ರದಲ್ಲಿನ ಕೆರೆಗಳಿಗೆ ಭೇಟಿ ನೀಡಿ ರೈತರ ಅಭಿಪ್ರಾಯ ಪಡೆಯುತ್ತಿದ್ದಾರೆ. ಕೆರೆಯ ಸುತ್ತಮುತ್ತಲಿನ ರೈತರ ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಕೊಳವೆಬಾವಿಗಳು ಕೂಡ ಬತ್ತಿಲ್ಲ ಎನ್ನುತ್ತಾರೆ ರೈತರು.

‘ಮುಳುಗಿದ ಖಾಸಗಿ ಜಮೀನಿನ ಮಾಲೀಕರಿಗೆ ಪರಿಹಾರ ಕಲ್ಪಿಸುವುದಕ್ಕಾಗಿ ಸರ್ವೆ ನಡೆಸುವಂತೆ ಸೂಚಿಸಿದ್ದೇನೆ’ ಎಂದು ಶಾಸಕ ಕತ್ತಿ ತಿಳಿಸಿದರು.

ತುಂಬುಗೆರೆ ತುಂಬಿದರೆ ನೀರ ಕೊರತೆ ಕಾಡದು

ಹೆದ್ದಾರಿ ಪಕ್ಕದಲ್ಲಿರುವ ತುಂಬುಗೆರೆ ತುಂಬಿದರೆ ಚನ್ನಮ್ಮನ ಕಿತ್ತೂರು ಪಟ್ಟಣಕ್ಕೆ ನೀರಿನ ಕೊರತೆ ಕಾಡುವುದಿಲ್ಲ ಎಂದು ಪ್ರತೀತಿ ಇದೆ. 19 ಎಕರೆ ವಿಸ್ತೀರ್ಣದಲ್ಲಿರುವ ‘ಊರಿನ ತಲೆದಿಂಬು’ ಆಗಿರುವ ಈ ಕೆರೆಯ ಒಡಲು ತುಂಬಿದರೆ ಇಲ್ಲಿನ ಕೊಳವೆ ಬಾವಿಗಳಿಗೆ ನೀರು ಸಮೃದ್ಧಿ. ಇದರ ಆಳ ಹೆಚ್ಚಿಸಿದರೆ ಬೇಸಿಗೆ ಕಾಲದಲ್ಲಿ ಇದೇ ಕೆರೆಯಿಂದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಬಹುದು ಎನ್ನುತ್ತಾರೆ ಹಿರಿಯರು.

ಯುವ ಸಂಘಟನೆಗಳು, ಸಾರ್ವಜನಿಕರು ಸ್ವತಃ ಖರ್ಚು ಮಾಡಿ ಕೆಲ ವರ್ಷಗಳ ಹಿಂದೆ ಈ ಕೆರೆ ಹೂಳೆತ್ತಲು ಶ್ರಮಿಸಿದ್ದರು. ಪರಿಸರ ಪ್ರೇಮಿ ಶಿವಾಜಿ ಕಾಗಣೇಕರ ಚಾಲನೆ ನೀಡಿದ್ದರು. ಅಂದು ಹೂಳೆತ್ತಿರುವ ಪರಿಣಾಮ ನೀರು ಬತ್ತಿಲ್ಲ. ಮಳೆಗಾಲದಲ್ಲಿ ನೀರು ಹರಿದು ಬರುವ ಕಾಲುವೆಗಳ ದುರಸ್ತಿ ಮಾಡಬೇಕಾಗಿದೆ. ಆಗ ಕೆರೆ ಸಮೃದ್ಧಿಯಾಗಿರುತ್ತದೆ ಎನ್ನುತ್ತಾರೆ ಪರಿಸರ ಪ್ರೇಮಿಗಳು.

ಕೆರೆಗಳಿಗೆ ಪುನರುಜ್ಜೀವನ

ಸತತವಾಗಿ ಎರಡು ವರ್ಷ ಉತ್ತಮ ಮಳೆ ಸುರಿದಿರುವ ಪರಿಣಾಮ ಖಾನಾಪುರ ತಾಲ್ಲೂಕಿನಾದ್ಯಂತ ಸದ್ಯ ಕೆರೆಗಳಲ್ಲಿ ನೀರು ಸಂಗ್ರಹಗೊಂಡಿದೆ. ಪಂಚಾಯಿತಿಗಳಿಂದ ಇತ್ತೀಚಿನ ಕೆಲ ವರ್ಷಗಳಿಂದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಂಡಿದ್ದರಿಂದ ಕೆರೆಗಳಿಗೆ ಮರುಜನ್ಮ ದೊರೆತಂತಾಗಿದೆ ಎನ್ನಲಾಗುತ್ತಿದೆ.

ಕೆರೆಗಳಲ್ಲಿ ನೀರು ಸಂಗ್ರಹವಾಗಿರುವ ಕಾರಣ ಅಂತರ್ಜಲ ವೃದ್ಧಿಯಾಗಿ ಕೃಷಿಗೂ ಅನುಕೂಲವಾಗಲಿದೆ. ಈ ವರ್ಷವೂ ಅಕ್ಟೋಬರ್‌ವರೆಗೂ ಸುರಿದ ವರ್ಷಧಾರೆಯ ಪರಿಣಾಮ ಶೇ.90ರಷ್ಟು ಕೆರೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿದೆ. ವಿವಿಧ ಗ್ರಾಮಗಳ ಒಟ್ಟು 165 ಕೆರೆಗಳಲ್ಲಿ ನರೇಗಾ ಯೋಜನೆಯಡಿ ಹೂಳೆತ್ತಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದಲೂ ಕೆಲ ಗ್ರಾಮಗಳಲ್ಲಿ ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಬತ್ತಿದ್ದ ಕೊಳವೆಬಾವಿಗಳಲ್ಲೂ ನೀರಿನ ಸೆಲೆ:

ರಾಮದುರ್ಗ ತಾಲ್ಲೂಕಿನ 80ಕ್ಕೂ ಹೆಚ್ಚು ಕೆರೆಗಳು ಮಳೆಯಿಂದಾಗಿ ತುಂಬಿಕೊಂಡಿವೆ. ಹಿರೇಕೊಪ್ಪ, ಚಿಪ್ಪಲಕಟ್ಟಿ, ಭಾಗೋಜಿಕೊಪ್ಪ, ಹೊಸೂರ, ಬಿಜಗುಪ್ಪಿ, ನಂದಿಹಾಳ, ಉಮತಾರ, ಮುಳ್ಳೂರು, ಗೊಡಚಿ, ಚಿಲುಮೆ ನಾಲಾ, ಗುತ್ತಿಗೋಳಿ, ಕುಳ್ಳೂರು, ಓಬಳಾಪೂರ, ದಾಡಿಭಾವಿ ಮತ್ತು ರೊಕ್ಕದಕಟ್ಟಿ ಗ್ರಾಮಗಳ ಹತ್ತಿರದ ಕೆರೆಗಳು ಸಂಪೂರ್ಣ ಭರ್ತಿಯಾಗಿವೆ.

ಉತ್ತರ ಭಾಗದ ಜನರು ಕೊರೆಸಿದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಬತ್ತಿದ್ದ ಕೊಳವೆಬಾವಿಗಳಲ್ಲೂ ನೀರು ತುಂಬಿಕೊಂಡಿದೆ. ತೆರೆದ ಬಾವಿಗಳಲ್ಲೂ ನೀರು ಮೇಲೇರಿದೆ. ಹೊಸೂರು ಕೆರೆಗೆ ಕಾಲುವೆ ನಿರ್ಮಿಸಿದ್ದರಿಂದ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯವೂ ದೊರೆತೆದೆ. ಉಳಿದ ಕೆರೆಗಳಿಗೆ ಕಾಲುವೆ ಇಲ್ಲ.

‘ಈ ವರ್ಷ ಕೊರೊನಾದಿಂದಾಗಿ, ತಾಲ್ಲೂಕಿನ ಕೆರೆಗಳ ಪುನಶ್ಚೇತನಕ್ಕಾಗಿ ಸರ್ಕಾರದಿಂದ ಅನುದಾನ ದೊರೆತಿಲ್ಲ. ಕೆರೆಗಳಲ್ಲಿ ಬೆಳೆದ ಕಂಟಿ, ಕಸ ತೆರವುಗೊಳಿಸಲು ಮತ್ತು ಕಲ್ಲಿನ ಪಿಚ್ಚಿಂಗ್‌ ಮಾಡಲು ಹಣಕಾಸಿನ ತೊಂದರೆ ಎದುರಾಗಿದೆ’ ಎನ್ನುತ್ತಾರೆ ಜಲಾನಯನ ಇಲಾಖೆ ಸಹಾಯಕ ಎಂಜಿನಿಯರ್‌ ನಾಗೇಶ ಭಜಂತ್ರಿ.

ಕೆರೆಗೆ ತ್ಯಾಜ್ಯ:

ಸವದತ್ತಿ ತಾಲ್ಲೂಕಿನಲ್ಲೂ ಜಲಮೂಲಗಳು ಗಣನೀಯ ಪ್ರಮಾಣದಲ್ಲಿ ಭರ್ತಿಯಾಗಿದ್ದು, ಅಂತರ್ಜಲ ಮಟ್ಟ ಏರಿಕೆಯಾಗಿದೆ. ಉಗರಗೋಳ ಸಮೀಪದ ಹೆಗ್ಗೊಳ್ಳದ ಚೆಕ್ ಡ್ಯಾಂ ಒಡೆದು ಕೆರೆಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದು ಹೊಲಗಳಿಗೆ ನೀರು ನುಗ್ಗಿದ್ದರಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಕೆರೆಯಲ್ಲಿ ತ್ಯಾಜ್ಯ ತುಂಬಿರುವುದರಿಂದ ಜನರು ಆ ನೀರನ್ನು ಉಪಯೋಗಿಸುತ್ತಿಲ್ಲ.

ಜನರು ತ್ಯಾಜ್ಯವನ್ನು ಕೆರೆಯ ದಡದಲ್ಲಿ ಬಿಸಾಡುವುದು ಸಾಮಾನ್ಯವಾಗಿದೆ. ಈ ಕೆರೆ ರಕ್ಷಿಸುವ ಕೆಲಸವನ್ನು ಸಂಬಂಧಿಸಿದವರು ಮಾಡಬೇಕು ಎನ್ನುವುದು ಪರಿಸರ ಪ್ರೇಮಿಗಳ ಒತ್ತಾಯವಾಗಿದೆ.

ಅಥಣಿ, ರಾಮದುರ್ಗ ಹಾಗೂ ಸವದತ್ತಿ ತಾಲ್ಲೂಕುಗಳನ್ನು ಅಂತರ್ಜಲ ಅತಿ ಬಳಕೆ ತಾಲ್ಲೂಕುಗಳು ಎಂದು ಕರ್ನಾಟಕ ಅಂತರ್ಜಲ ಪ್ರಾಧಿಕಾರದಿಂದ ಘೋಷಿಸಲಾಗಿದೆ. ಅಲ್ಲಿ ಕೊಳವೆಬಾವಿ ಕೊರೆಯಲು ಜಿಲ್ಲಾ ಮಟ್ಟದ ಸಮಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT