‘ಎಸ್ಕಲೇಡ್‌’ ಕನವರಿಕೆಯಲ್ಲಿ

7
ನಟ ಯೋಗಿ ಫಸ್ಟ್‌ಡ್ರೈವ್‌ ಕಥನ

‘ಎಸ್ಕಲೇಡ್‌’ ಕನವರಿಕೆಯಲ್ಲಿ

Published:
Updated:

ನಾನು ಮೊದಲನೇ ಬಾರಿ ಸ್ಟೀರಿಂಗ್ ಹಿಡಿದಿದ್ದು 8ನೇ ತರಗತಿಯಲ್ಲಿ. ನನ್ನ ಅಣ್ಣ, ಅಪ್ಪ ಇಬ್ಬರೂ ಕಾರು ಓಡಿಸುವುದನ್ನು ನೋಡಿ ನನಗೂ ಕಲಿಯಬೇಕೆಂಬ ಆಸೆಯಾಯಿತು. ಹೀಗಾಗಿ ಡ್ರೈವಿಂಗ್‌ ಕಲಿಯಲೇಬೇಕೆಂದು ಪಟ್ಟು ಹಿಡಿದೆ. ನನ್ನ ಸಂಬಂಧಿ ಸೋಮು ಎನ್ನುವವರು ಡ್ರೈವಿಂಗ್‌ ಹೇಳಿಕೊಟ್ಟರು. 

ಮಾರುತಿ 800 ನಾನು ಮೊದಲು ಓಡಿಸಿದ ಕಾರು. ಪ್ರಾರಂಭದಲ್ಲಿ ಸಾಕಷ್ಟು ಪೀಕಲಾಟ ಅನುಭವಿಸಿದ್ದೇನೆ. ಕ್ಲಚ್, ಗಿಯರ್ ಯಾವ ಸಂದರ್ಭದಲ್ಲಿ ಬಳಸಬೇಕು ಎಂಬುದೇ ಗೊಂದಲವಾಗುತ್ತಿತ್ತು. ಫಸ್ಟ್‌, ಸೆಕೆಂಡ್‌ ಯಾವ ಗೇರ್‌ನಲ್ಲಿ ಇದ್ದೇನೆ ಎಂಬುದೇ ತಿಳಿಯುತ್ತಿರಲಿಲ್ಲ.

ರಸ್ತೆ ಮೇಲೆ ಕಾರು ತರಲು ರಸ್ತೆ ನಿಯಮಗಳಷ್ಟೇ ಸಾಲುವುದಿಲ್ಲವಲ್ಲ, ಜೊತೆಗೆ ಧೈರ್ಯವೂ ಬೇಕು. ಎಷ್ಟೇ ಕಲಿತರೂ ‌ರಸ್ತೆ ಮೇಲೆ ಒಬ್ಬರೇ ಕಾರು ತರಲು ಭಯ ಇದ್ದೇ ಇರುತ್ತದೆ. ಆದರೆ ನನಗೆ ಧೈರ್ಯ ಜಾಸ್ತಿ, ಒಂದು ವಾರದಲ್ಲಿಯೇ ಕಾರು ಓಡಿಸಲು ಕಲಿತೆ. ಮೈದಾನದಲ್ಲಿ ನಾನು ಕಾರು ಓಡಿಸುವುದನ್ನು ಕಲಿತದ್ದಲ್ಲ. ಬೆಂಗಳೂರಿನ ಕನಕಪುರ ಮುಖ್ಯರಸ್ತೆಯಲ್ಲಿಯೇ ಕಲಿತ್ತಿದ್ದೆ. ಡ್ರೈವಿಂಗ್‌ ಕಲೆಯಲ್ಲಿ ಪಕ್ವತೆ ಗಳಿಸುವುದು ಇದರಿಂದ ಸುಲಭವಾಯಿತು. ಆಗೆಲ್ಲ ಆ ರಸ್ತೆಯಲ್ಲಿ ಈಗಿನಷ್ಟು ವಾಹನಗಳ ಜಂಜಾಟ ಇರಲಿಲ್ಲ. ಕಲಿಯೋ ಸಮಯದಲ್ಲಿ ಸಣ್ಣ ಪುಟ್ಟ ಘಟನೆಗಳು ನಡೆದಿವೆ. ನನಗೆ ಅಷ್ಟಾಗಿ ನೆನಪಿಲ್ಲ.

ಮೊದಲ ಬಾರಿ ಒಬ್ಬನೇ ಕಾರು ಓಡಿಸಿದ್ದು ನೆನಪಾಗುತ್ತಿಲ್ಲ. ಆದರೆ ಯಾವತ್ತೂ ವಿಪರೀತ ಭಯ ಪಟ್ಟಿಲ್ಲ. ಸಲೀಸಾಗಿ ತೆಗೆದುಕೊಂಡು ಹೋಗುತ್ತೇನೆ. ಕಾರು ಕಲಿಯುವ ಪ್ರಾರಂಭದಲ್ಲಿ ಅದನ್ನು ಓಡಿಸುವುದು ಒಂದು ರೀತಿ ಮಜಾ. ಮನಸ್ಸಿನಲ್ಲಿ ಭಯದ ಜೊತೆಗೆ ಖುಷಿಯೂ ಇರುತ್ತದೆ. ಅಪ್ಪ ಟಯೋಟ ಕ್ವಾಲಿಸ್‌ ಕಾರು ಕೊಂಡಿದ್ದರು. ಅವರನ್ನು ಕೆಲಸಕ್ಕೆ ಬಿಟ್ಟು ಬರುವಾಗ ಬಸ್ಸಿಗೆ ಗುದ್ದಿಬಿಟ್ಟಿದ್ದೆ. ಹೆಚ್ಚಿನ ಅಪಾಯವೇನು ಆಗಿರಲಿಲ್ಲ. ಹೀಗೆ ಪ್ರಾರಂಭದಲ್ಲಿ ಒಂದೆರಡು ಬಾರಿ ಚಿಕ್ಕಪುಟ್ಟ ಅಪಘಾತವಾಗಿದ್ದು ಇದೆ. ಆದರೆ ಇದರಿಂದ ನನ್ನ ಕಾರ್‌ ಕ್ರೇಜ್‌ ಕಡಿಮೆಯಾಗಿಲ್ಲ.

ಕೆಲವರಿಗೆ ಲಾಂಗ್‌ ಡ್ರೈವ್‌ ಹೋಗುವುದೆಂದರೆ ಇಷ್ಟ. ಕೆಲವರ ಒತ್ತಡಕ್ಕೆ ಡ್ರೈವಿಂಗ್‌ ಮದ್ದು. ಆದರೆ ನನಗೆ ಡ್ರೈವ್‌ ಮಾಡುವುದು ಕಷ್ಟದ ಕೆಲಸ. ದೂರದ ಪ್ರಯಾಣ ಮಾಡುವಾಗ ಡ್ರೈವಿಂಗ್‌ ಮಾಡುವುದಕ್ಕಿಂತ ಸುಮ್ಮನೆ ಕುಳಿತು ಸುತ್ತಮುತ್ತಲಿನ ಪರಿಸರವನ್ನು ಕಣ್ತುಂಬಿಕೊಳ್ಳುವುದು ಇಷ್ಟ. ಹಾಗಾಗಿ ಇಂಥದ್ದೇ ಸ್ಥಳಕ್ಕೆ ಲಾಂಗ್‌ ಡ್ರೈವ್‌ ಹೋಗಬೇಕೆಂಬ ಕನಸೇನು ಇಲ್ಲ. 

ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಒಮ್ಮೆ ನಾನೇ ಕಾರು ಚಲಾಯಿಸಿಕೊಂಡು ಬಂದಿದ್ದೆ. ಬಹುಶಃ ಅದುವೇ ನಾನೇ ಡ್ರೈವ್‌ ಮಾಡಿದ ದೂರದ ಪಯಣ. ಹೈದರಾಬಾದ್‌, ಚೆನ್ನೈಗೆ ಹೋಗುವಾಗ ವಿಮಾನದಲ್ಲಿ ಹೋಗುವುದಕ್ಕಿಂತ ಕಾರಿನಲ್ಲಿ ಹೋಗುವುದೇ ನನಗೆ ಇಷ್ಟ. ಆದರೆ ಜೊತೆಗೆ ಡ್ರೈವರ್‌ ಇರುತ್ತಾರೆ. 

ಬೆಂಗಳೂರಿನಲ್ಲಿ ಟ್ರಾಫಿಕ್‌ ಕಿರಿಕಿರಿ ಎಂಬ ಕಾರಣಕ್ಕೆ ಹಲವರಿಗೆ ಕಾರು ಓಡಿಸುವುದು ಇಷ್ಟವಾಗುವುದಿಲ್ಲ. ಆದರೆ ನನಗೆ ಅಭ್ಯಾಸವಾಗಿದೆ. ಇಲ್ಲಿ ನನ್ನ ಕಾರಿಗೆ ನಾನೇ ಡ್ರೈವರ್‌. 

ಮೊದಲೆಲ್ಲ ಬೈಕ್‌ ಕ್ರೇಜ್‌ ತುಂಬಾ ಇತ್ತು. ಸಮಯ ಸಿಕ್ಕರೆ ಬೈಕ್‌ ಹತ್ತಿ ಸುತ್ತಾಡುತ್ತಿದ್ದೆ. ಹುಡುಗಾಟಿಕೆಯ ವಯಸ್ಸದು, ಹೊಸ ಬೈಕ್‌ಗಳನ್ನು ಕಂಡಾಗ ಆಸೆ ಕಣ್ಣು ತುಂಬುತ್ತಿತ್ತು. ಆರು ವರ್ಷಗಳ ಹಿಂದೆ ಬೈಕ್‌ನಲ್ಲಿ ಹೋಗುವಾಗ ಅಪಘಾತವಾಯಿತು. ಎರಡು ತಿಂಗಳು ಬೆಡ್‌ರೆಸ್ಟ್‌ ತೆಗೆದುಕೊಳ್ಳಬೇಕಾಯಿತು. ಅಂದಿನಿಂದ ಬೈಕ್ ಮೇಲಿರುವ ಮೋಹ ಕಡಿಮೆಯಾಗಿದೆ. ಹಾಗೆಂದು ಕಾರಿನ ಮೇಲಿನ ಪ್ರೀತಿ ಕಡಿಮೆ ಆಗಿಲ್ಲ.

ಡ್ರೈವಿಂಗ್‌ ಮಾಡುವಾಗ ಹೆಚ್ಚು ಜಾಗೃತನಾಗಿ ಇರುತ್ತೇನೆ. ರಸ್ತೆ ನಿಯಮಗಳನ್ನು ಪಕ್ಕಾ ಪಾಲಿಸುತ್ತೇನೆ. ನಿಯಮ ಪಾಲಿಸುವುದು ನಮ್ಮ ಕರ್ತವ್ಯ. ಯಾವತ್ತೂ ತಪ್ಪಿಸಿಲ್ಲ. ಸ್ವಲ್ಪ ಹೆಚ್ಚೇ ಅನುಸರಿಸುತ್ತೇನೆ. 

ಸದ್ಯ ನನ್ನ ಬಳಿ ಫಾರ್ಚುನರ್‌ ಕಾರಿದೆ. ಎಸ್ಕಲೇಡ್‌ ಕಾರನ್ನು ಸದ್ಯದಲ್ಲಿಯೇ ತೆಗೆದುಕೊಳ್ಳುತ್ತಿದ್ದೇನೆ. ಅದರ ಶೋ ರೂಂ ಭಾರತದಲ್ಲಿಲ್ಲ. ಹೊರದೇಶದಿಂದ ತರಿಸಿಕೊಳ್ಳಬೇಕು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !