ಶುಕ್ರವಾರ, ಅಕ್ಟೋಬರ್ 30, 2020
22 °C
ಟೆಕ್ ದೈತ್ಯ ಆ್ಯಪಲ್

Explainer | ₹ 155 ಲಕ್ಷ ಕೋಟಿ ಬಂಡವಾಳದ ದೈತ್ಯ ಕಂಪನಿಯ ಷೇರು ಮುಖಬೆಲೆ ಸೀಳಿಕೆ

ಡಿ.ಎಂ.ಘನಶ್ಯಾಮ Updated:

ಅಕ್ಷರ ಗಾತ್ರ : | |

Prajavani

ನೀವು ವಾಣಿಜ್ಯ ಸುದ್ದಿಗಳನ್ನು ನಿಯಮಿತವಾಗಿ ಗಮನಿಸುವವರಾಗಿದ್ದರೆ ಆಗಸ್ಟ್ 19ರ ಅಮೆರಿಕ ಷೇರುಪೇಟೆಯ ಬೆಳವಣಿಗೆಯೊಂದು ನಿಮ್ಮ ಗಮನ ಸೆಳೆದಿರಬಹುದು. ಅಮೆರಿಕ ಷೇರುಪೇಟೆಯಲ್ಲಿ 2 ಲಕ್ಷ ಕೋಟಿ ಡಾಲರ್ ಬಂಡವಾಳ ಸಂಚಯದ ಮೊದಲ ಕಂಪನಿ ಎಂಬ ದಾಖಲೆಯನ್ನು 'ಆ್ಯಪಲ್' ಅಂದು ಬರೆಯಿತು.

ಐಫೋನ್, ಐಪಾಡ್ ಸೇರಿದಂತೆ ಹಲವು ಜನಪ್ರಿಯ ಉತ್ಪನ್ನಗಳ ಮೂಲಕ ಜಗತ್ತಿನಾದ್ಯಂತ ಮನೆಮಾತಾಗಿರುವ ಆ್ಯಪಲ್ ಕಂಪನಿಯ ಮುಖಬೆಲೆ ಸೀಳಿಕೆಗೆ ದಿನಾಂಕ ನಿಗದಿಯಾಗಿದೆ. ಆ್ಯಪಲ್‌ನ ಮಾರುಕಟ್ಟೆ ಮೌಲ್ಯವು (ಆಗಸ್ಟ್‌ 21) 2.06 ಲಕ್ಷ ಕೋಟಿ ಡಾಲರ್. ಭಾರತದ ಕರೆನ್ಸಿ ಮೌಲ್ಯದಲ್ಲಿ ಇದು ಸುಮಾರು ₹ 155 ಲಕ್ಷ ಕೋಟಿ ಆಗುತ್ತೆ. ಇದು ಎಷ್ಟೊ ದೊಡ್ಡ ಮೊತ್ತ ಗೊತ್ತೆ? 2020-21ನೇ ಸಾಲಿನ ಭಾರತದ ಬಜೆಟ್ ಗಾತ್ರ ಸುಮಾರು ₹ 30.42 ಲಕ್ಷ ಕೋಟಿ. ಕರ್ನಾಟಕದ ಬಜೆಟ್‌ ಗಾತ್ರ ಇದ್ದುದು ಸುಮಾರು ₹ 2.37 ಲಕ್ಷ ಕೋಟಿ. ಅಂದರೆ ಆ್ಯಪಲ್‌ ಕಂಪನಿಯ ಮಾರುಕಟ್ಟೆ ಮೌಲ್ಯ ಭಾರತದ ಬಜೆಟ್‌ಗಿಂತ ಐದುಪಟ್ಟು, ಕರ್ನಾಟಕದ ಬಜೆಟ್‌ಗಿಂತಲೂ ಸುಮಾರು 70 ಪಟ್ಟು ಹೆಚ್ಚು ಎಂದಂತೆ ಆಯಿತು.

ಭಾರತೀಯ ಹೂಡಿಕೆದಾರರಲ್ಲಿಯೂ ಆಸಕ್ತಿ ಹುಟ್ಟಿಸಿರುವ ಜಾಗತಿಕ ದೈತ್ಯ ಕಂಪನಿಯ ಮುಖಬೆಲೆ ಸೀಳಿಕೆ ವಿದ್ಯಮಾನದ ವಿವರಣೆಯ ಜೊತೆಗೆ ಅಮೆರಿಕ ಷೇರುಪೇಟೆಯಲ್ಲಿ ಹೂಡಿಕೆಗೆ ಭಾರತೀಯರಿಗೆ ಇರುವ ಅವಕಾಶಗಳ ಬಗೆಗಿನ ಮಾಹಿತಿಯೂ ಇಲ್ಲಿದೆ.

ಇದನ್ನೂ ಓದಿ: 


ನ್ಯೂಯಾರ್ಕ್‌ನ ಆ್ಯಪಲ್ ಮಳಿಗೆಯ ಎದುರು ಸೇರಿರುವ ಗ್ರಾಹಕರು

ಷೇರಿನ ಮುಖಬೆಲೆ ಸೀಳಿಕೆ ಎಂದರೇನು?

ಯಾವುದೇ ಕಂಪನಿಯ ಷೇರು ಮೌಲ್ಯ ಬೆಳೆದಾಗ ಸಣ್ಣ ಹೂಡಿಕೆದಾರರ ಕೈಗೆಟುಕದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೆಲವೊಮ್ಮೆ ಇದು ಕಾರಣಕ್ಕೆ ಬೇಡಿಕೆ ಮತ್ತು ವಹಿವಾಟಿನ ಪ್ರಮಾಣ ಕಡಿಮೆಯಾಗಲೂ ಕಾರಣವಾಗುತ್ತದೆ. ಅಂಥ ಸಂದರ್ಭಗಳಲ್ಲಿ ಕಂಪನಿಗಳು ಷೇರಿನ ಮುಖಬೆಲೆ ಸೀಳಿಕೆ ಮಾಡುವ ಮೂಲಕ ಹೂಡಿಕೆದಾರರನ್ನು ಆಕರ್ಷಿಸಲು, ಬಂಡವಾಳ ಸಂಚಯವನ್ನು ವೃದ್ಧಿಸಿಕೊಳ್ಳಲು ಯತ್ನಿಸುತ್ತವೆ. ಇದು ವಿಶ್ವದ ವಿವಿಧ ಷೇರುಪೇಟೆಗಳಲ್ಲಿ ಕಂಡು ಬರುವ ಸಾಮಾನ್ಯ ವಿದ್ಯಮಾನ. ಆದರೆ ಸತತ ಲಾಭಗಳಿಕೆ ಮತ್ತು ಹಲವು ದೇಶಗಳ ಮೊಬೈಲ್ ಫೋನ್‌ಗಳ ಮಾರುಕಟ್ಟೆಯಲ್ಲಿ ಸಿಂಹಪಾಲು ಹೊಂದಿರುವ ದೈತ್ಯ ಕಂಪನಿ ಆ್ಯಪಲ್ ಘೋಷಿಸಿರುವ ಮುಖಬೆಲೆ ಸೀಳಿಕೆ ನಿರ್ಧಾರವು ಹೂಡಿಕೆದಾರರ ಗಮನ ಸೆಳೆದಿದೆ.

ಆ್ಯಪಲ್ ಕಂಪನಿಯು ತನ್ನ ಜಾಲತಾಣದಲ್ಲಿ ನೀಡಿರುವ ಮಾಹಿತಿ ಪ್ರಕಾರ, ಜುಲೈ 30ರಂದು 4:1 ಅನುಪಾತದ ಷೇರು ಮುಖಬೆಲೆ ಸೀಳಿಕೆ ನಿರ್ಧಾರ ಪ್ರಕಟಿಸಲಾಗಿದೆ. ಈ ನಿರ್ಧಾರವು ಆಗಸ್ಟ್ 31ರಿಂದ ಜಾರಿಗೆ ಬರಲಿದೆ.

ಈ ಹಿಂದೆ 2017 (7:1), 2005, 2000 ಮತ್ತು 1987ರಲ್ಲಿ (2:1) ಮುಖಬೆಲೆ ಸೀಳಿಕೆಯಾಗಿದೆ. ಆಗಸ್ಟ್‌ 31ರಂದು ಆ್ಯಪಲ್ ಕಂಪನಿಯ ಷೇರುಗಳ ಮುಖಬೆಲೆ ಸೀಳಿಕೆಯಾಗಿತ್ತು.

ತುಸು ಸರಳವಾಗಿ ವಿವರಿಸಲು ಸಾಧ್ಯವಿಲ್ಲವೇ?

ನಿಮ್ಮ ಮನೆ ಹತ್ತಿರದ ಬೇಕರಿಯವರು ಕೇಕ್ ಮಾಡುವುದರಲ್ಲಿ ಫೇಮಸ್ ಎಂದುಕೊಳ್ಳಿ. ಅವರ ಬಳಿ ಒಂದು ಕೇಕ್‌ಗೆ 100 ರೂಪಾಯಿ ಬೆಲೆ. ಆದರೆ ನಿಮ್ಮ ಹತ್ತಿರ ಅಷ್ಟು ಹಣವಿಲ್ಲ. ಇದನ್ನು ಗಮನಿಸಿದ ಅಂಗಡಿಯಾತ ಒಂದು ದೊಡ್ಡ ಕೇಕ್‌ ಅನ್ನು ನಾಲ್ಕು ಭಾಗವಾಗಿ ವಿಂಗಡಿಸಿ, ಮೂಲ ಬೆಲೆಯ ಕಾಲುಭಾಗಕ್ಕೆ ಮಾರಲು ಮುಂದಾಗುತ್ತಾನೆ ಎಂದುಕೊಳ್ಳೋಣ. ಆಗ ಕೇಕ್‌ನ ಪ್ರತಿ ತುಂಡಿಗೂ 25 ರೂಪಾಯಿ ಬೆಲೆ ನಿಗದಿಯಾಗುತ್ತೆ. ಒಟ್ಟಾರೆಯಾಗಿ ಕೇಕಿನ ಬೆಲೆ ಮಾತ್ರ 100 ರೂಪಾಯಿಯೇ ಇರುತ್ತೆ. ಆದರೆ 100 ರೂಪಾಯಿ ತೆತ್ತು ಇಡಿಯಾಗಿ ಕೇಕ್ ಖರೀದಿಸಲು ಆಗದವರಿಗೂ 25 ರೂಪಾಯಿ ಕೊಟ್ಟು ಅದೇ ಕೇಕ್‌ನ ಒಂದು ಭಾಗ ಖರೀದಿಸಲು ಅವಕಾಶ ಸಿಗುತ್ತೆ.

ಇದೀಗ ಆ್ಯಪಲ್ ಕಂಪನಿ ಮಾಡಲು ಹೊರಟಿರುವುದು ಇಂಥದ್ದೇ ವ್ಯವಹಾರ. ಇಂದು (ಆಗಸ್ಟ್‌ 21) ಅಮೆರಿಕದ ನಾಸ್‌ಡಾಕ್ ಷೇರುಪೇಟೆಯಲ್ಲಿ ಆ್ಯಪಲ್ ಕಂಪನಿಯ ಷೇರುಗಳು 473 ಡಾಲರ್‌ಗೆ (35,457 ರೂಪಾಯಿ) ವಹಿವಾಟಾಗುತ್ತಿದೆ. ಷೇರುಮೌಲ್ಯವನ್ನು ಆ್ಯಪಲ್ 4:1 ಅನುಪಾತದಲ್ಲಿ ಸೀಳಲು ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಷೇರುಮೌಲ್ಯ ಇನ್ನಷ್ಟು ಹೆಚ್ಚಾಗಬಹುದು ಎಂಬ ನಿರೀಕ್ಷೆಯನ್ನೂ ಇದು ಹುಟ್ಟುಹಾಕಿದೆ.

ಇದನ್ನೂ ಓದಿ: 

ಹೂಡಿಕೆದಾರರಿಗೆ ಏನು ಲಾಭ?

ಮುಖಬೆಲೆ ಸೀಳಿಕೆಯಿಂದಾಗಿ ಕಂಪನಿಯ ಷೇರು ಖರೀದಿಸುವ ಹೂಡಿಕೆದಾರರ ಸಂಖ್ಯೆ ಹೆಚ್ಚಾಗಬಹುದು. ಹೊಸಬರಿಗೆ ಆ್ಯಪಲ್ ಕಂಪನಿಯ ಷೇರು ಖರೀದಿಸಲು ಇದೊಂದು ಅವಕಾಶವಾಗಿ ಒದಗಿಬರುತ್ತದೆ. ಷೇರಿಗೆ ಬೇಡಿಕೆ ಹೆಚ್ಚಾದರೆ ಅದರ ಮೌಲ್ಯ ಮತ್ತು ತನ್ಮೂಲಕ ಬಂಡವಾಳ ಸಂಚಯವೂ ಹೆಚ್ಚಾಗುತ್ತೆ. ಆದರೆ ಕಂಪನಿಯ ಒಟ್ಟಾರೆ ವಹಿವಾಟು ಮತ್ತು ಹೂಡಿಕೆದಾರರಿಗೆ ಈವರೆಗೆ ಸಿಗುತ್ತಿದ್ದ ಲಾಭಗಳಲ್ಲಿ ಅಷ್ಟೇನೂ ವ್ಯತ್ಯಾಸವಾಗುವುದಿಲ್ಲ. ಸಾಕಷ್ಟು ಹೊಸ ಹೂಡಿಕೆದಾರರಿಗೆ ಷೇರು ಖರೀದಿಗೆ ಅವಕಾಶ ಸಿಗುವುದರಿಂದ ಲಾಂಭಾಂಶ (ಡೆವಿಡೆಂಡ್) ಹಂಚಿಕೆಯಲ್ಲಿ ಪಾಲುದಾರರು ಹೆಚ್ಚಾಗುತ್ತಾರೆ. ಷೇರು ಮೌಲ್ಯ ಬೆಳೆಯುವ ವೇಗಕ್ಕೂ ಇದು ತೊಡಕಾಗಬಹುದು.

ಮುಖಬೆಲೆ ಸೀಳಿಕೆ ಎಂದು?

ಮುಖಬೆಲೆ ಸೀಳಿಕೆಯ ತಾಂತ್ರಿಕ ವಿಚಾರದಲ್ಲಿ ಭಾರತ ಮತ್ತು ಅಮೆರಿಕ ಪೇಟೆಗಳ ವರ್ತನೆ ವಿಭಿನ್ನವಾಗಿದೆ. ಆ್ಯಪಲ್ ಷೇರುಗಳ ಮುಖಬೆಲೆ ಸೀಳಿಕೆಯ ರೆಕಾರ್ಡ್‌ ಡೇಟ್ ಆಗಸ್ಟ್ 24ಕ್ಕೆ, ಸ್ಪ್ಲಿಟ್ ಡೇಟ್ 28ಕ್ಕೆ ಮತ್ತು ಎಕ್ಸ್‌ಡೇಟ್ 31ಕ್ಕೆ ನಿಗದಿಯಾಗಿದೆ. ಇದರ ತಾಂತ್ರಿಕತೆಯ ಸಂಕೀರ್ಣತೆಗಳನ್ನು ಬದಿಗಿಟ್ಟು ಸರಳವಾಗಿ ಇಷ್ಟು ಹೇಳಬಹುದು. ಆಗಸ್ಟ್ 28ರ (ಶುಕ್ರವಾರ) ಒಳಗೆ ಆ್ಯಪಲ್ ಷೇರು ಖರೀದಿಸಿದ್ದರೆ ನಿಮಗೆ ಮುಖಬೆಲೆ ಸೀಳಿಕೆಯ ಲಾಭ ದೊರೆಯುತ್ತದೆ.

ಇದನ್ನೂ ಓದಿ: 

ನನಗೂ ಆ್ಯಪಲ್ ಷೇರು ಬೇಕು? ತಗೊಳ್ಳೋದು ಹೇಗೆ?

ಡಿಮಾಟ್ ಖಾತೆಯ ಮೂಲಕ ಈಗಾಗಲೇ ನೀವು ಷೇರುಪೇಟೆಯಲ್ಲಿ ಹೂಡಿಕೆ ಮಾಡುವವರಾಗಿದ್ದರೆ ನಿಮ್ಮ ಎಎಂಸಿ (ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ) ಜೊತೆಗೆ ಈ ವಿಚಾರ ಚರ್ಚಿಸಿ. ಅವರು ಅಮೆರಿಕದಲ್ಲಿರುವ ತಮ್ಮ ಸಹವರ್ತಿ ಎಎಂಸಿಗಳ ಸಹಯೋಗದಲ್ಲಿ ನಿಮಗೂ ಅಮೆರಿಕ ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಅವಕಾಶವನ್ನು ಕಲ್ಪಿಸಿಕೊಡಬಹುದು. ಐಸಿಐಸಿಐ, ಎಚ್‌ಡಿಎಫ್‌ಸಿ, ಕೋಟಕ್ ಮತ್ತು ಆಕ್ಸಿಸ್‌ ಎಎಂಸಿಗಳಲ್ಲಿ ಇಂಥ ಸವಲತ್ತು ಲಭ್ಯ. ಆದರೆ ಹೆಚ್ಚುವರಿ ಶುಲ್ಕ ತೆರಬೇಕು.

ಅಮೆರಿಕದ ಕಂಪನಿಗಳಲ್ಲಿ ಹೂಡಿಕೆ ಮಾಡುವ ಮ್ಯೂಚುವಲ್‌ ಫಂಡ್‌ಗಳಲ್ಲಿ ಯೂನಿಟ್ ಖರೀದಿಸುವ ಮೂಲಕ ಅಥವಾ ಎಸ್‌ಐಪಿಗಳ (ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್‌) ಮೂಲಕವೂ ಅಮೆರಿಕದ ಷೇರುಪೇಟೆಗಳಲ್ಲಿ ಹೂಡಿಕೆ ಮಾಡಬಹುದು. ಇದಕ್ಕೆ ಡಿಮಾಟ್ ಖಾತೆಯ ಅಗತ್ಯವಿಲ್ಲ.

ಮೋತಿಲಾಲ್‌ ಓಸ್ವಾಲ್ ನಾಡ್‌ಡಾಕ್ 100 ಫಂಡ್ ಆಫ್ ಫಂಡ್, ಫ್ರಾಕ್ಲಿನ್ ಇಂಡಿಯಾ ಫೀಡರ್ ಫ್ರಾಕ್ಲಿನ್ ಯುಎಸ್ ಆಪರ್ಚುನಿಟಿಸ್ ಫಂಡ್, ಐಸಿಐಸಿಐ ಪ್ರುಡೆನ್ಷಿಯಲ್ ಯುಎಸ್‌ ಬ್ಲೂಚಿಪ್ ಈಕ್ವಿಟಿ ಫಂಡ್‌ಗಳು ಹೂಡಿಕೆಯ ದೊಡ್ಡ ಮೊತ್ತವನ್ನು ಅಮೆರಿಕದ ಮುಂಚೂಣಿ ಕಂಪನಿಗಳಾದ ಆ್ಯಪಲ್, ಮೈಕ್ರೊಸಾಫ್ಟ್, ಆಮೆಜಾನ್, ಫೇಸ್‌ಬುಕ್, ಆಲ್ಫಾಬೆಟ್ ಇಂಕ್ (ಗೂಗಲ್), ಟೆಲ್ಸಾ ಮೋಟಾರ್ಸ್‌, ಎನ್‌ವಿಡಿಯಾ, ನೆಟ್‌ಫ್ಲಿಕ್ಸ್, ಅಡೋಬ್, ಇಂಟೆಲ್, ಪೆಪ್ಸಿಯಂಥವುಗಳಲ್ಲಿ ತೊಡಗಿಸುತ್ತವೆ. ಪರಾಗ್ ಪರೀಖ್ ಲಾಂಗ್‌ಟರ್ಮ್ ಈಕ್ವಿಟಿ ಫಂಡ್ ಸಹ ಗಮನಾರ್ಹ ಮೊತ್ತವನ್ನು ಅಮೆರಿಕ ಷೇರುಪೇಟೆಯಲ್ಲಿ ಹೂಡಿಕೆ ಮಾಡುತ್ತದೆ.

ವಿದೇಶಿ ಹೂಡಿಕೆಗೆ ತೆರಿಗೆ ತುಂಬೋದು ಹೇಗೆ? ಇನ್ನೇನು ತಲೆಬಿಸಿ ಇಲ್ಲವೇ?

ಒಂದು ವರ್ಷಕ್ಕೆ 2.5 ಲಕ್ಷ ಡಾಲರ್ ಮೊತ್ತದಷ್ಟು ಹಣವನ್ನು ವಿದೇಶಿ ಷೇರುಪೇಟೆಯಲ್ಲಿ ಹೂಡಿಕೆ ಮಾಡಲು ಭಾರತೀಯರಿಗೆ ಅವಕಾಶವಿದೆ.

ಅಂತರರಾಷ್ಟ್ರೀಯ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ ಮೊತ್ತವನ್ನು 3 ವರ್ಷಗಳ ಒಳಗಾಗಿ ಹಿಂದಕ್ಕೆ ಪಡೆದರೆ, ಹೂಡಿಕೆಯ ಮೆಲೆ ಬಂದ ಒಟ್ಟು ಲಾಭವನ್ನು ನಿಮ್ಮ ಆದಾಯಕ್ಕೆ ಸೇರಿಸಿ ತೆರಿಗೆ ತುಂಬಬೇಕು. 3 ವರ್ಷಗಳ ನಂತರ ಮಾರಿದರೆ ಹಣದುಬ್ಬರದ ಇಂಡೆಕ್ಷನ್ ಅನುಪಾತದ ರಿಯಾಯ್ತಿ ಪಡೆದು ಶೇ 20ರ ತೆರಿಗೆ ತುಂಬಬೇಕಾಗುತ್ತದೆ. ಆದರೆ ಯೂನಿಟ್‌ಗಳನ್ನು ಇರಿಸಿಕೊಳ್ಳುವುದಕ್ಕೆ ಯಾವುದೇ ತೆರಿಗೆ ತುಂಬಬೇಕಿಲ್ಲ.

ಇದನ್ನೂ ಓದಿ: 

ಇನ್ನು ಏನಾದ್ರೂ ಗಮನಿಸಬೇಕಾದ ವಿಚಾರಗಳಿವೆಯೇ?

ಯಾವುದೇ ವಿದೇಶಿ ಷೇರುಪೇಟೆಯಲ್ಲಿ ಹೂಡಿಕೆ ಮಾಡುವಾಗ ಅಲ್ಲಿನ ಆರ್ಥಿಕ ಸ್ಥಿತಿಗತಿಯ ಅರಿವು ತಕ್ಕಮಟ್ಟಿಗಾದರೂ ಇರಲಿ. ಮ್ಯೂಚುವಲ್ ಫಂಡ್‌ ಇಂಟರ್‌ನ್ಯಾಷನಲ್‌ ಫಂಡ್‌ಗಳಲ್ಲಿ ಎಸ್‌ಐಪಿ ಮಾರ್ಗದ ಮೂಲಕ ಹೂಡಿಕೆ ಮಾಡಿದಾಗ ರಿಸ್ಕ್‌ ತುಸು ಕಡಿಮೆ. ದೀರ್ಘಾವಧಿಯಲ್ಲಿ ಲಾಭದ ಸಾಧ್ಯತೆಯೂ ಹೆಚ್ಚು. ಅಮೆರಿಕ ಕಂಪನಿಗಳು ವಿಶ್ವದ ಹಲವು ದೇಶಗಳಲ್ಲಿ ವ್ಯವಹಾರ ವಿಸ್ತರಿಸಿಕೊಂಡಿರುವುದರಿಂದ ಒಂದಲ್ಲಾ ಒಂದು ದೇಶಗಳಲ್ಲಿ ಇಂಥ ಕಂಪನಿಗಳು ಲಾಭ ಮಾಡುತ್ತಲೇ ಇರುತ್ತವೆ. ಇವುಗಳ ಅಧೀನ ಕಂಪನಿಗಳು ಮಾಡುವ ಲಾಭದ ರಾಯಧನವೂ ಮೂಲ ಕಂಪನಿಗಳಿಗೆ ಸಿಕ್ಕು, ಲಾಭ ವಿಸ್ತರಣೆಯಾಗುತ್ತದೆ. ಹೀಗಾಗಿಯೇ ವಿಶ್ವದ ಬಹುತೇಕ ಹೂಡಿಕೆದಾರರು ಅಮೆರಿಕ ಕಂಪನಿಗಳಲ್ಲಿ ಹೂಡಿಕೆ ಮಾಡಲು ಇಷ್ಟಪಡುತ್ತಾರೆ.

ಏಷ್ಯಾದ ಆರ್ಥಿಕ ಶಕ್ತಿ ಎನಿಸಿದ ಚೀನಾದ ಷೇರುಪೇಟೆಗಳಲ್ಲಿ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್‌ಗಳತ್ತ ಭಾರತೀಯರು ಈ ಹಿಂದೆ ಹೆಚ್ಚು ಗಮನ ಹರಿಸುತ್ತಿದ್ದರು. ಆದರೆ ಗಡಿ ತಿಕ್ಕಾಟದ ನಂತರ ಒಲವು ಕಡಿಮೆಯಾಗಿದೆ. ಅಮೆರಿಕ ಷೇರುಪೇಟೆಯತ್ತ ಹೆಚ್ಚು ಜನರು ಗಮನ ನೀಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಹಲವು ಎಎಂಸಿಗಳೂ ಸಹ ಅಮೆರಿಕ ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಅವಕಾಶ ಕಲ್ಪಸಿಕೊಡಲು ಹೊಸ ಕೊಡುಗೆಗಳೊಂದಿಗೆ ಮುಂದೆ ಬಂದಿವೆ.

ಆದರೆ ಒಟ್ಟಾರೆ ಒಬ್ಬರ ಪೋರ್ಟ್‌ಫೋಲಿಯೊದಲ್ಲಿ ವಿದೇಶಿ ಹೂಡಿಕೆ ಶೇ 10ರ ಮಿತಿಯಲ್ಲಿ ಇದ್ದರೆ ಒಳಿತು ಎಂದು ಹೂಡಿಕೆ ತಜ್ಞರು ಸಲಹೆ ಮಾಡುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು