ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ಮುಖ್ಯಮಂತ್ರಿಯ ಪರಮಾಧಿಕಾರ ಇಲ್ಲದೇ ಇರುವ ಅಧಿಕಾರ

Last Updated 11 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಮುಖ್ಯಮಂತ್ರಿಯವರ ಪರಮಾಧಿಕಾರದ ಪ್ರಶ್ನೆಗೆ ಬರುವ ಮುನ್ನ ನೆಹರೂ ಅವರು ಪ್ರಧಾನಿಯಾಗಿದ್ದ ಕಾಲದ ಸಂದರ್ಭವನ್ನೊಮ್ಮೆ ಮೆಲುಕು ಹಾಕುವೆ. ಚೀನಾ ಜತೆಗಿನ ಸಂಬಂಧದ ವಿಷಯವಾಗಿ ಆಗ ನೆಹರೂ ಅವರಿಗೂ ಗೃಹ ಸಚಿವರಾಗಿದ್ದ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರಿಗೂ ಅಭಿಪ್ರಾಯ ಭೇದಗಳು ಇದ್ದವು. ಆದರೆ, ಈ ಕುರಿತ ಅವರ ಚರ್ಚೆಗಳು ಆಂತರಿಕವಾಗಿ ಪತ್ರ ವಿನಿಮಯದ ಮೂಲಕ ನಡೆಯುತ್ತಿದ್ದವು. ಭಿನ್ನಾಭಿಪ್ರಾಯಗಳನ್ನು ಮುಂದಿಟ್ಟುಕೊಂಡು ಅವರು ಯಾವತ್ತೂ ಮಾಧ್ಯಮದ ಎದುರು ಹೋದವರಲ್ಲ.

ರಾಜ್ಯದಲ್ಲಿ ಹಿಂದೆಯೂ ಮುಖ್ಯಮಂತ್ರಿಯ ಅಧಿಕಾರಕ್ಕೆ ಸಂಬಂಧಿಸಿದಂತೆ ನಡೆದ ಕೆಲವು ಘಟನಾವಳಿಗಳು ಚರ್ಚೆಯನ್ನು ಹುಟ್ಟುಹಾಕಿವೆ. ಎಸ್‌.ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ಡಿ. ದೇವರಾಜ ಅರಸು, ಎಸ್‌. ಬಂಗಾರಪ್ಪ, ಎಂ. ವೀರಪ್ಪ ಮೊಯಿಲಿ ಎಲ್ಲರ ಕಾಲದಲ್ಲೂ ಗುಂಪುಗಾರಿಕೆ ಇದ್ದುದನ್ನು ಅಲ್ಲಗಳೆಯುವಂತಿಲ್ಲ. ಎಲ್ಲರೂ ಸಂಪುಟ ಸಭೆಯಲ್ಲೇ ವಿಷಯ ಪ್ರಸ್ತಾಪಿಸಿ, ಪರಿಹಾರ ಪಡೆಯಲು ಯತ್ನಿಸುತ್ತಿದ್ದರು. ಕೆಲವರ ಭಿನ್ನಾಭಿಪ್ರಾಯ ಅತಿರೇಕಕ್ಕೆ ಹೋಗಿದ್ದೂ ಉಂಟು. ಕೆಲವೊಮ್ಮೆ ಪಕ್ಷದ ವರಿಷ್ಠರ ಮಧ್ಯಪ್ರವೇಶ, ಹೊಂದಾಣಿಕೆಯಿಂದ ಒಟ್ಟಾಗಿ ಸಾಗಿದ ಘಟನೆಗಳೂ ನಡೆದಿವೆ. ಸಚಿವರೇ ರಾಜೀನಾಮೆ ನೀಡಿ ಹೊರ ನಡೆದದ್ದು, ಮುಖ್ಯಮಂತ್ರಿಯವರೇ ಸಚಿವರನ್ನು ವಜಾಗೊಳಿಸಿದ್ದೂ ಎಲ್ಲವನ್ನೂ ಕಂಡದ್ದಾಗಿದೆ (ಸಿದ್ದರಾಮಯ್ಯ ಅವರನ್ನೇ ಸಂಪುಟದಿಂದ ವಜಾಗೊಳಿಸಲಾಗಿತ್ತು). ಆದರೆ, ಈಗಿನ ದಾರಿಯಲ್ಲಿ (ಸಂಪುಟದಲ್ಲಿ ಇದ್ದುಕೊಂಡು ರಾಜ್ಯಪಾಲರ ಬಳಿ ಮುಖ್ಯಮಂತ್ರಿ ವಿರುದ್ಧ ದೂರು ನೀಡಿಕೆ) ಸಾಗಿದ ಬೇರೊಂದು ಉದಾಹರಣೆಯಿಲ್ಲ.

ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಯಾರಿಗೆ ಬಹುಮತ ಇರುತ್ತದೆಯೋ ಅವರು ಆಡಳಿತ ವ್ಯವಸ್ಥೆಯ ಚುಕ್ಕಾಣಿ ಹಿಡಿಯುತ್ತಾರೆ. ಅವರಿಗೆ ಜವಾಬ್ದಾರಿ ಇರುತ್ತದೆಯೇ ಹೊರತು ಯಾವ ಅಧಿಕಾರ ಇರುವುದಿಲ್ಲ. ಸಚಿವರೆಲ್ಲರೂ ಸಮಾನರೇ, ಮುಖ್ಯಮಂತ್ರಿ ಆದವರು ಸಚಿವರಲ್ಲಿ ಮೊದಲಿಗರು. ಹಾಗೆಂದು ಎಲ್ಲರೂ ಮುಖ್ಯಮಂತ್ರಿಗಳಾಗಲು ಸಾಧ್ಯವಿಲ್ಲ. ಅವರು ಸಚಿವ ಸಂಪುಟದ ಅಧ್ಯಕ್ಷತೆ ವಹಿಸಬೇಕಾಗುತ್ತದೆ. ಸಂಪುಟವನ್ನು ಮುನ್ನಡೆಸಿಕೊಂಡು ಹೋಗಬೇಕಾಗುತ್ತದೆ.

ಸಂಪುಟ ವ್ಯವಸ್ಥೆಯಲ್ಲಿ ಬಹುಮತ–ಅಲ್ಪಮತದ ವಿಚಾರಕ್ಕೆ ಅವಕಾಶವಿಲ್ಲ. ಅಭಿಪ್ರಾಯ ಭೇದವನ್ನು ಸಭೆಯಲ್ಲಿ ಹೇಳುವುದಕ್ಕಷ್ಟೇ ಅವಕಾಶವಿದೆ. ತಮ್ಮ ಅಭಿಪ್ರಾಯಕ್ಕೆ ಬಲ ದೊರಕದೇ ಇದ್ದಾಗ ಕೆಲವರು ಹೊರಗೆ ಬರುತ್ತಾರೆ ಅಷ್ಟೆ. ಈಗ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ರಾಜ್ಯಪಾಲರಿಗೆ ಬರೆದಿರುವ ಪತ್ರದ ವಿಷಯ ಆಡಳಿತದಲ್ಲಿನ ವಿಚಾರಕ್ಕೆ ಸಂಬಂಧಿಸಿದ ಅಭಿಪ್ರಾಯ ಭೇದವೇ ಹೊರತು ಅಧಿಕಾರಕ್ಕೆ ಸಂಬಂಧಿಸಿದ್ದಲ್ಲ. ಸಾಮಾನ್ಯವಾಗಿ ಮುಖ್ಯಮಂತ್ರಿಗಳಾದವರು ದೊಡ್ಡಣ್ಣನಂತೆ ಇರಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು. ಸಮಸ್ಯೆಗಳಿದ್ದರೆ ಸಚಿವರನ್ನು ಕರೆದು ಮಾತನಾಡಬೇಕು. ಸಚಿವರಿಗೂ ಆಕ್ಷೇಪಣೆಗಳು ಇದ್ದಲ್ಲಿ, ‘ಏಕೆ ಹೀಗೆ ಮಾಡಿದಿರಿ’ ಎಂದು ಕೇಳುವ ಅವಕಾಶವೂ ಇದೆ. ವಿರೋಧ ಪಕ್ಷಕ್ಕೆ ಸೇರಿದವನಾಗಿ ಇಂತಹ ಒಂದು ಬೆಳವಣಿಗೆಯನ್ನು ರಾಜಕೀಯವಾಗಿಯೇ ವಿಮರ್ಶಿಸಿ, ಅಭಿಪ್ರಾಯವೊಂದನ್ನು ನೀಡಲು ಬಯಸುವುದಿಲ್ಲ.

ಕೆಲವು ಪದಗಳನ್ನು ನಾವು ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸುತ್ತಾ ಬಂದಿದ್ದೇವೆ. ಅದು, ಸರಿಯೋ ತಪ್ಪೋ ಎಂಬುದರ ಕುರಿತು ನಾವು ಯೋಚಿಸಿಯೇ ಇಲ್ಲ. ಪರಮಾಧಿಕಾರ ಎನ್ನುವುದು ಸಹ ಹಾಗೆ ಬಳಕೆಯಲ್ಲಿರುವ ತಪ್ಪು ಪದ. ಜನಪ್ರಾತಿನಿಧ್ಯದಿಂದ ಕೂಡಿದ ಸರ್ಕಾರ ಎನ್ನುವುದು ನೀತಿ ನಿರೂಪಣೆ ಮಾಡುವಂತಹದ್ದು. ಜನಪ್ರಾತಿನಿಧ್ಯದ ವಿಚಾರಕ್ಕೆ ಇದೇ ಸುಪ್ರೀಂ ಆಗಿರುತ್ತದೆ. ಗ್ರಾಮ ಪಂಚಾಯಿತಿ ಸದಸ್ಯನಿಂದ ಶಾಸಕ, ಸಂಸದನವರೆಗೆ ಎಲ್ಲರೂ ಸಾರ್ವಜನಿಕ ಸೇವಕರು. ಹಾಗೆಯೇ ಸಚಿವರು, ಮುಖ್ಯಮಂತ್ರಿಯಾದಿಯಾಗಿ ಪ್ರಧಾನಮಂತ್ರಿಯವರೆಗೆ ಯಾರಿಗೂ ಅಧಿಕಾರವಿಲ್ಲ. ಇರುವುದು ಜವಾಬ್ದಾರಿ.

ಉದಾಹರಣೆಗೆ, ನಾನೀಗ ಶಾಸಕ ಮಾತ್ರ. ನನಗೆ ಅಧಿಕಾರ ಎಂದು ಏನೂ ಇರುವುದಿಲ್ಲ. ಜನಪ್ರತಿನಿಧಿ, ಶಾಸನಸಭೆಗೆ ಹಾಜರಾಗಬೇಕು. ಕಲಾಪಗಳು ಇದ್ದಾಗ ಭಾಗವಹಿಸಬೇಕು. ಜನರ ಸಮಸ್ಯೆಗಳನ್ನು ನಿಯಮಾವಳಿಗಳ ಪ್ರಕಾರ ಪ್ರಸ್ತಾಪಿಸಬೇಕು. ಕಷ್ಟ, ಸುಖದ ಅಹವಾಲು ಹೊತ್ತು ಬರುವ ಜನರ ಮಾತುಗಳನ್ನು ಆಲಿಸಬೇಕು. ಶಾಸಕರ ಜವಾಬ್ದಾರಿ ಅನಂತ. ಚುನಾಯಿತ ಪ್ರತಿನಿಧಿಗಳ ಅಧಿಕಾರ ವ್ಯಾಪ್ತಿಯನ್ನು ನಿಗದಿಪಡಿಸುವ ಸಂಬಂಧ ಸಂವಿಧಾನ ರಚನಾ ಸಭೆಯಲ್ಲಿ ಹತ್ತು ದಿನಗಳ ಕಾಲ ಚರ್ಚೆ ನಡೆದಿತ್ತು. ಆ ರೀತಿ ವ್ಯಾಖ್ಯಾನ ಮಾಡುವುದೇ ದೊಡ್ಡ ಅಪರಾಧವಾಗುತ್ತದೆ ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಚುನಾಯಿತ ಪ್ರತಿನಿಧಿಗಳ ವಿಚಾರದಲ್ಲಿ ‘ಪ್ರತಿಷ್ಠೆ’ ಮತ್ತು ‘ಹಕ್ಕು’ ಎಂಬ ಪದಗಳು ಯಾವಾಗಲೂ ಪ್ರಸ್ತಾಪವಾಗುತ್ತಲೇ ಇರುತ್ತವೆ. ಆದರೆ, ವಾಸ್ತವಿಕವಾಗಿ ಜನಪ್ರತಿನಿಧಿಗಳಿಗೆ ಆ ಎರಡೂ ಸೌಲಭ್ಯಗಳಿಲ್ಲ. ಕರ್ತವ್ಯನಿರ್ವಹಣೆಗೆ ಸಂಬಂಧಿಸಿದಂತೆ ಸೀಮಿತವಾಗಿ ‘ಹಕ್ಕುಚ್ಯುತಿ’ಯ ಬಳಕೆಗೆ ಅವಕಾಶವಿದೆ.

ಇನ್ನು ಈಶ್ವರಪ್ಪ ಅವರ ಪ್ರಕರಣದ ಚರ್ಚೆಗೆ ಬರುವುದಾದರೆ ಇಲ್ಲಿ ವಿಷಯ ನಾಮಕಾವಾಸ್ತೆಗೆ ಇದೆ. ಇರುವುದೆಲ್ಲ ತೆರೆಮರೆಯ ಯುದ್ಧ ಅಷ್ಟೆ. ಸಾರ್ವಜನಿಕ ತೆರಿಗೆಯ ಹಣ ಬಹಳ ಕಡಿಮೆ ಇದೆ. ಅದನ್ನು ರಾಜಕೀಯ ಅನುಕೂಲಗಳಿಗೆ ಬಳಸಿದಾಗ ತಪ್ಪಾಗುತ್ತದೆ. ಕೋವಿಡ್‌ನಂತಹ ಸಂಕಷ್ಟ ಜನರನ್ನು ಬಾಧಿಸುತ್ತಿರುವಾಗ ಈ ರೀತಿ ಹಣ ವ್ಯಯಿಸುವುದು ಸರಿಯೇ ಎಂಬುದೇ ಮುಖ್ಯ ಪ್ರಶ್ನೆಯಾಗಿ ಚರ್ಚೆಗೆ ಬರಬೇಕಿತ್ತು.

ಮುಖ್ಯಮಂತ್ರಿಯವರ ಬಳಿ ಹಣಕಾಸಿನ ಇಲಾಖೆಯೂ ಇದೆ. ಸಣ್ಣಪುಟ್ಟ ಮೊತ್ತವಾದರೆ ಪರವಾಗಿಲ್ಲ. ದೊಡ್ಡ ಪ್ರಮಾಣದ ಅನುದಾನವನ್ನು ಸಂಬಂಧಿಸಿದ ಸಚಿವರ ಗಮನಕ್ಕೆ ತಾರದೆ ನೀಡುವುದು ಸರಿಯಲ್ಲ. ಮುಖ್ಯಮಂತ್ರಿ ಪ್ರಾಥಮಿಕ ಹಂತದಲ್ಲಿ ಮಂತ್ರಿಯನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕಾಗಿತ್ತು ಎಂಬುದು ಸಾಂಪ್ರದಾಯಿಕವಾದ ಬದ್ಧತೆ. ಅದನ್ನು ಮೀರುವುದು ಕಷ್ಟ. ಅದೇ ಉಸಿರಿನಲ್ಲಿ ಮತ್ತೊಂದು ಮಾತನ್ನು ಹೇಳಲು ಬಯಸುತ್ತೇನೆ. ಸಚಿವರಿಗೂ ತಮ್ಮ ಆಕ್ಷೇಪವನ್ನು ನೇರವಾಗಿ ದಾಖಲಿಸಲು ಅವಕಾಶ ಇತ್ತು. ಇಬ್ಬರೂ ಪ್ರಭಾವಶಾಲಿಗಳೇ. ಒಬ್ಬರು ಹಾಲಿ ಮುಖ್ಯಮಂತ್ರಿಯಾದರೆ, ಮತ್ತೊಬ್ಬರು ಹಿಂದೆ ಉಪ ಮುಖ್ಯಮಂತ್ರಿಯಾಗಿದ್ದು, ಈಗ ಪ್ರಮುಖ ಖಾತೆಯನ್ನು ಹೊಂದಿರುವವರು. ಇವರಿಬ್ಬರ ನಡುವಿನ ಘಟನೆಯಲ್ಲಿ ನಾವು ಬೆರಳು ತೂರಿಸಲು ಆಗದು. ಆದರೆ, ವ್ಯವಸ್ಥೆ ಏನು ಆಗುತ್ತದೆ, ಜನರಿಗೆ ಏನು ಆಗುತ್ತದೆ ಎಂಬುದನ್ನು ನಾವು ಯೋಚಿಸಬೇಕು.

ಈ ಪ್ರಕರಣವನ್ನು ಮುಂದಿಟ್ಟುಕೊಂಡು ವಿಶ್ಲೇಷಿಸಿದರೆ, ಶಾಸಕರು ಅನುದಾನ ಕೇಳಿಕೊಂಡು ಈಶ್ವರಪ್ಪನವರ ಬಳಿಯೂ ಹೋಗಬಹುದು. ಆಗ, ತಮ್ಮ ಇಲಾಖೆಗೆ ಎಷ್ಟು ಅನುದಾನ ಹಂಚಿಕೆಯಾಗಿದೆ? ಎಷ್ಟು ಉಳಿದಿದೆ ಎಂಬುದರ ಮಾಹಿತಿಯೇ ಅವರಿಗೆ ಇಲ್ಲದಿದ್ದರೆ ಏನು ಉತ್ತರ ನೀಡಲು ಸಾಧ್ಯ? ತಮ್ಮ ಸಂಪುಟದ ಸಹೋದ್ಯೋಗಿಯೊಬ್ಬರನ್ನು ಮುಜುಗರಕ್ಕೆ ಸಿಲುಕಿಸುವುದು ಯಾವುದೇ ನಾಯಕತ್ವಕ್ಕೆ ಸಾಧುವಲ್ಲ. ಇದು ನನ್ನ ಸ್ಪಷ್ಟ ಅಭಿಪ್ರಾಯ. ಈಶ್ವರಪ್ಪ ಕೂಡ ಸ್ವಲ್ಪ ತಾಳ್ಮೆ ಇರಿಸಿಕೊಳ್ಳಬೇಕಾಗಿತ್ತು ಅನಿಸುತ್ತದೆ. ಅವರು, ‘ಸರ್ಕಾರದ ವ್ಯವಹಾರ ನಿಯಮ’ಗಳನ್ನು ಉಲ್ಲೇಖಿಸಿ ದೂರು ನೀಡಿದ್ದಾರೆ. ಅದು ಸರಿಯೋ ತಪ್ಪೋ ಎಂಬುದರ ಕುರಿತು ಅನುಮಾನಗಳಿವೆ.

ಮುಖ್ಯಮಂತ್ರಿಯವರ ಶಿಫಾರಸಿನ ಮೇಲೆ ಮಂತ್ರಿಗಳ ನೇಮಕ ಆಗುತ್ತದೆ. ಆದರೆ, ಅವರು ಮುಖ್ಯಮಂತ್ರಿಯ ನೌಕರರಲ್ಲ, ಸಹೋದ್ಯೋಗಿಗಳು. ಖಾತೆ ಹಂಚಿಕೆಯನ್ನು ನೇರವಾಗಿ ಮುಖ್ಯಮಂತ್ರಿ ಮಾಡಲು ಬರುವುದಿಲ್ಲ. ಮುಖ್ಯಮಂತ್ರಿಯ ಸೂಚನೆಯನ್ನು ಅಧಿಸೂಚನೆಯಾಗಿ ರಾಜ್ಯಪತ್ರದಲ್ಲಿ ಪ್ರಕಟಿಸುವ ಅಧಿಕಾರ ಇರುವುದು ರಾಜ್ಯಪಾಲರಿಗೆ. ಇಲ್ಲಿಯೇ ಒಂದು ಸಣ್ಣ ಅವಕಾಶವಿದೆ. ಈ ದೃಷ್ಟಿಯಿಂದ ನೋಡಿದರೆ ಈಶ್ವರಪ್ಪ ಅವರು ರಾಜ್ಯಪಾಲರ ಬಳಿ ಅಹವಾಲು ಕೊಂಡೊಯ್ದಿರುವುದು ಅಸಾಂವಿಧಾನಿಕ ನಡೆ ಅಲ್ಲ ಎನ್ನಬಹುದು. ಆದರೆ, ಆ ಪತ್ರ ಹೊರಗೆ ಬರಬಾರದಿತ್ತು. ಎಲ್ಲಿಂದ ಬಂತೋ? ಯಾರು ಹೊರಗೆ ತಂದರೋ? ಅನೇಕ ಸಂದರ್ಭಗಳಲ್ಲಿ ಸಂಪುಟ ಸಭೆಯಲ್ಲಿ ಮಾತನಾಡಿದ್ದೆಲ್ಲ ಹೊರಗಡೆ ಬಂದಿರುತ್ತದೆ. ಇದು ಮೊದಲಿನಿಂದಲೂ ರಾಜಕೀಯ ಮೇಲಾಟ ಸ್ಥಾಪಿಸುವುದಕ್ಕಾಗಿ ನಡೆಯುತ್ತಿರುವ ಪ್ರಯತ್ನಗಳ ಭಾಗ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಅದು ಒಳ್ಳೆಯದಲ್ಲ.

ರಾಜ್ಯದಲ್ಲಿ ಸಂಪನ್ಮೂಲ ಸಂಗ್ರಹಣೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂಬುದನ್ನು ಮುಖ್ಯಮಂತ್ರಿಯವರು ವಿಧಾನಮಂಡಲದಲ್ಲೇ ಹೇಳಿದ್ದಾರೆ. ಹೆಚ್ಚುಸಾಲ ಪಡೆಯುವುದಕ್ಕಾಗಿ ವಿತ್ತೀಯ ಹೊಣೆಗಾರಿಕೆ ಕಾಯ್ದೆಗೆ ತಿದ್ದುಪಡಿಯನ್ನೂ ತರಲಾಗಿದೆ. ಕೇಂದ್ರದಿಂದ ನಮಗೆ ಬರಬೇಕಿದ್ದ ಪಾಲು ಕೂಡ ಕಡಿತವಾಗಿದೆ. ಇಷ್ಟೆಲ್ಲ ನಿರ್ಬಂಧಗಳಿರುವಾಗ ಈ ರೀತಿ ಮಾಡಿದ್ದು ಸರಿಯೇ ಎಂಬ ಪ್ರಶ್ನೆಯೂ ಇದೆ. ಇದನ್ನು ಎರಡು ರೀತಿ ನೋಡಬಹುದು. ರಾಜಕೀಯವಾಗಿ, ರಾಜಕೀಯ ಪಕ್ಷವಾಗಿ ಸಂಕುಚಿತ ಮನೋಭಾವದಿಂದ ಇದನ್ನು ನಾವು ಹೇಗೆ ಬಳಸಿಕೊಳ್ಳಬಹುದು ಎಂಬುದು ಮೊದಲನೆಯದ್ದು. ಎರಡನೆಯದ್ದು, ಒಂದಿಂಚು ಮುಂದಕ್ಕೆ ಹೋಗಿ ನಾವೇನು ಶಾಶ್ವತ ಅಲ್ಲ. ಎಷ್ಟೋ ಜನರ ತ್ಯಾಗ, ಪರಿಶ್ರಮದಿಂದ ಈ ವ್ಯವಸ್ಥೆ ಬಂದಿದೆ. ಲೋಪಗಳಿರುವುದನ್ನು ಅಲ್ಲಗಳೆಯಲಾಗದು. ಆದರೆ, ಶಾಂತಿಯತವಾಗಿ ಪರಿಹಾರ ಮಾಡಿಕೊಳ್ಳುವುದಕ್ಕೂ ಅವಕಾಶವಿದೆ. ಹಿಂಸಾತ್ಮಕ ಘಟನೆಗಳಿಲ್ಲದೇ ರಾಜ್ಯ ಮತ್ತು ಕೇಂದ್ರದಲ್ಲಿ ಸರ್ಕಾರಗಳು ಬದಲಾಗುವಂತಹ ವ್ಯವಸ್ಥೆ ನಮ್ಮದು.

ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ಇರುವುದು ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದ್ದಾಗ ಮಾತ್ರ. ಹಿಂದಿನ ದಿನಗಳಲ್ಲಿ ಶಾಸಕಾಂಗ ಪಕ್ಷದ ಸಭೆಗಳು, ಪಕ್ಷದ ಪ್ರಾದೇಶಿಕ ಸಮಿತಿಗಳ ಸಭೆಗಳು ಇದ್ದಾಗ ಅಧಿಕಾರದಲ್ಲಿದ್ದವರು ದಿನವಿಡೀ ಕುಳಿತು ಎಚ್ಚರಿಕೆಯಿಂದ ಮಾತುಗಳನ್ನು ಕೇಳುತ್ತಿದ್ದರು. ಆಂತರಿಕ ಪ್ರಜಾಪ್ರಭುತ್ವದ ಕಾರಣಕ್ಕಾಗಿಯೇ ಅವರಲ್ಲಿ ಇಂತಹ ಭಯವಿತ್ತು. ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಸತ್ತುಹೋದ ದಿನಗಳಲ್ಲಿ ಹೊರಗೆ ನಿಂತು ಸಂಸದೀಯ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವುದು ವೈದಿಕ ಸಂಪ್ರದಾಯದಲ್ಲಿ ಶ್ರಾದ್ಧ ಮಾಡಿದಂತಾಗುತ್ತದೆಯೇ ಹೊರತು ನಿಜವಾದ ಶ್ರದ್ಧಾಂಜಲಿ ಆಗುವುದಿಲ್ಲ.

ಗಾಂಧಿಯ ಮಾತು ಸದಾ ನೆನಪಿನಲ್ಲಿರಲಿ...

ಬ್ರಿಟಿಷರು ಜಗತ್ತಿನ ಬಹುಪಾಲು ದೇಶಗಳನ್ನು ತಮ್ಮ ವಸಾಹತುಗಳನ್ನಾಗಿ ಮಾಡಿಕೊಂಡಿದ್ದರು. ಈ ಕಾರಣದಿಂದಾಗಿಯೇ ‘ಸೂರ್ಯ ಮುಳುಗದ ಸಾಮ್ರಾಜ್ಯ’ ಎಂಬ ಹೆಸರು ಬಂದಿತ್ತು. ವಸಾಹತುಶಾಹಿಗಳಾಗಿದ್ದು ಬಿಡುಗಡೆ ಹೊಂದಿದ ಕಾಮನ್‌ವೆಲ್ತ್‌ ರಾಷ್ಟ್ರಗಳ ಪೈಕಿ ಅತ್ಯಂತ ಯಶಸ್ವಿಯಾದ ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದು ಭಾರತದಲ್ಲಿ.

ಭಾರತಕ್ಕೆ ಸ್ವಾತಂತ್ರ್ಯ ಘೋಷಣೆ ಆದಾಗ ವೈಸ್‌ರಾಯ್‌ ಲಾರ್ಡ್‌ ಮೌಂಟ್‌ ಬ್ಯಾಟನ್‌ ಅವರ ನಿವಾಸಕ್ಕೆ ಮಹಾತ್ಮ ಗಾಂಧಿಯವರು ಹೋಗುತ್ತಾರೆ. ಗಾಂಧಿಯವರ ಬಳಿ ಒಂದು ಅದ್ಭುತವಾದ ಗುಣವಿತ್ತು. ರಾಜಕೀಯ ವಿರೋಧಿಗಳ ಜತೆಗೂ ವೈಯಕ್ತಿಕ ಸಂಬಂಧ ಚೆನ್ನಾಗಿತ್ತು. ಈ ಕಾರಣಕ್ಕಾಗಿಯೇ ಅಂದು ವೈಸ್‌ರಾ‌ಯ್‌ ನಿವಾಸಕ್ಕೆ ಹೋಗಿ ಔಪಚಾರಿಕವಾಗಿ ಮಾತನಾಡಿಕೊಂಡು ಹಿಂದಿರುಗುವಾಗ ವೈಸ್‌ರಾ‌ಯ್‌ ಅವರ ಪತ್ರಿಕಾ ಕಾರ್ಯದರ್ಶಿ ಚಾರ್ಲ್ಸ್‌ ಕ್ಯಾಂಪ್‌ಬೆಲ್‌ ನಗು ನಗುತ್ತಾ ಗಾಂಧಿಯವರಿಗೆ, ‘ನಿಮ್ಮ ಜನರಿಗೆ ಅಕ್ಷರ ಜ್ಞಾನವೇ ಇಲ್ಲ. ವಯಸ್ಕ ಮತದಾನದ ವ್ಯವಸ್ಥೆಯನ್ನು ತರುವುದಾಗಿ ಹೇಳುತ್ತಿದ್ದೀರಿ. ಇಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗುವುದೇ? ಅರಾಜಕತೆ ಸೃಷ್ಟಿಯಾಗುವುದಿಲ್ಲವೇ’ ಎಂದು ಪ್ರಶ್ನಿಸುತ್ತಾರೆ.

ಗಾಂಧಿಯವರ ಉತ್ತರ ಬಹಳ ಸರಳವಾಗಿತ್ತು. ‘ನಮ್ಮ ದೇಶದ ಜನ ಹಸುಗೂಸುಗಳಂತೆ. ಎಳೆ ಮಕ್ಕಳಂತೆ ಅವರ ಮನಸ್ಸು ಮತ್ತು ಹೃದಯ ಶುದ್ಧವಾಗಿದೆ. ನಿಜ, ನೀವು ಹೇಳಿದಂತೆ ಒಮ್ಮೆ ಅವರನ್ನು ಮೋಸಗೊಳಿಸಬಹುದು. ಮತ್ತೊಮ್ಮೆ, ಮತ್ತೊಮ್ಮೆ ಆ ರೀತಿ ಮಾಡಲು ಸಾಧ್ಯವಿಲ್ಲ. ಒಂದು ಕಹಿ ಗುಳಿಗೆಯನ್ನು ಸಿಹಿಯ ಲೇಪನ ಮಾಡಿಕೊಟ್ಟರೆ ಮಗು ಸಿಹಿಯ ಆಸೆಗೆ ತೆಗೆದುಕೊಳ್ಳುತ್ತದೆ. ಆದರೆ, ಕಹಿ ಎಂದು ಗೊತ್ತಾಗುತ್ತಿದ್ದಂತೆ ಉಗುಳುತ್ತದೆ. ನಂತರ ನೀವು ಸಿಹಿಯಾದ ಗುಳಿಗೆ ಕೊಡಲು ಹೋದರೂ ಮಗು ಪರೀಕ್ಷಿಸಿಯೇ ತೆಗೆದುಕೊಳ್ಳುತ್ತದೆ’ ಎನ್ನುತ್ತಾರೆ.

ಭಾರತದ ಜಮಸಮೂಹದ ಮಾನಸಿಕತೆ ಕುರಿತ ಗಾಂಧಿಯವರ ಅಧ್ಯಯನ ಎಷ್ಟು ನಿಖರವಾಗಿತ್ತು ಎಂಬುದನ್ನು 1972ರ ಚುನಾವಣೆ ಸಾಬೀತುಪಡಿಸುತ್ತದೆ. ಇಂದಿರಾ ಗಾಂಧಿಯವರು ಸಂವಿಧಾನದಲ್ಲಿನ ಕಲಮುಗಳನ್ನೇ ಬಳಸಿಕೊಂಡು ತುರ್ತು ಪರಿಸ್ಥಿತಿ ಘೋಷಣೆ ಮಾಡುತ್ತಾರೆ. ದೇಶದಲ್ಲಿ ಸಂವಿಧಾನದ ವ್ಯಾಪ್ತಿಯನ್ನು ಮೀರಿ ಕೆಲವು ಅಹಿತಕರ ಘಟನೆಗಳು ನಡೆಯುತ್ತವೆ. ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯ ನಾಯಕತ್ವ ವಹಿಸಿದ್ದ ಜಯಪ್ರಕಾಶ್‌ ನಾರಾಯಣ್‌ ಅವರಂತಹವರು ಎಲ್ಲಿಯೂ ಇಂದಿರಾ ಗಾಂಧಿಯವರ ಕುರಿತು ವೈಯಕ್ತಿಕವಾಗಿ ಹೇಳುವುದಿಲ್ಲ. ‘ಯಾವುದೇ ಸಂವಿಧಾನೇತರ ಆಜ್ಞೆಗಳನ್ನು ಗೌರವಿಸಬೇಡಿ’ ಎಂದು ಸೇನೆ ಮತ್ತು ನಾಗರಿಕ ಸೇವೆಗಳಲ್ಲಿರುವ ಅಧಿಕಾರಿಗಳಿಗೆ ಆಗ್ರಹಿಸುತ್ತಾರೆ. ‘ಯಾರು ಜವಾಬ್ದಾರಿ ಸ್ಥಾನದಲ್ಲಿ ಇಲ್ಲವೋ ಅವರ ಆದೇಶಗಳನ್ನು ಹೊಣೆಗಾರಿಕೆ ಇರುವಂತಹವರು ಸ್ವೀಕರಿಸಬಾರದು’ ಎಂದು ಸಂಜಯ್‌ ಗಾಂಧಿ ಅವರನ್ನುದ್ದೇಶಿಸಿ ಗೌರವಯುತವಾಗಿ ಹೇಳುತ್ತಾರೆ.

1972ರಲ್ಲಿ ದೇಶದಲ್ಲಿ ಸಾಕ್ಷರತೆ ಇಷ್ಟು ಪ್ರಮಾಣದಲ್ಲಿ ಇರಲಿಲ್ಲ. ಟೆಲಿವಿಷನ್‌, ಮೊಬೈಲ್‌, ಫೇಸ್‌ಬುಕ್‌ ಸೇರಿದಂತೆ ಯಾವ ಸಾಮಾಜಿಕ ಮಾಧ್ಯಮವೂ ಇರಲಿಲ್ಲ. ಇಂದಿರಾ ಗಾಂಧಿಯವರನ್ನೇ ಲೋಕಸಭೆಗೆ ಕೂಡ ಆಯ್ಕೆಯಾಗದಂತೆ ಮಾಡುತ್ತಾರೆ ಜನ. 85 ಲೋಕಸಭಾ ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಒಂದು ಸ್ಥಾನವೂ ದೊರಕುವುದಿಲ್ಲ. ಗಾಂಧಿ ಸರಿ ಅನಿಸುವುದಿಲ್ಲವೇ ನಮಗೆ?

ನಮ್ಮ ತಂತ್ರ, ಕುತಂತ್ರಗಳು ಅಥವಾ ರಾಜಕೀಯ ಮೇಲಾಟಗಳನ್ನು ಜನರು ಯಾವಾಗಲೂ ಸೂಕ್ಷ್ಮವಾಗಿ ಗಮನಿಸುತ್ತಾ ಇರುತ್ತಾರೆ. ಯಾವಾಗಲೂ ಹಣ ಅಥವಾ ಇತರ ಆಮಿಷಕ್ಕೆ ಒಳಗಾಗಿ ಜನರು ಮತ ಚಲಾಯಿಸುತ್ತಾರೆ ಎಂಬ ಮಾತನ್ನು ಸಾರ್ವತ್ರಿಕವಾಗಿ ಒಪ್ಪಲಾಗದು. ಅದು ಭಾಗಶಃ ನಿಜವಷ್ಟೆ. ಸಾರ್ವತ್ರಿಕ ಚುನಾವಣೆಗಳಲ್ಲಿ ಅನೇಕ ಸಂದರ್ಭಗಳಲ್ಲಿ ಇಡೀ ವಿಶ್ವವೇ ಮೆಚ್ಚುವಂತೆ ಜನರು ತಮ್ಮ ಪ್ರಬುದ್ಧತೆಯನ್ನು ಮೆರೆದಿದ್ದಾರೆ ಎಂಬುದನ್ನು ರಾಜಕೀಯದಲ್ಲಿ ಇರುವವರು ನೆನಪಿನಲ್ಲಿ ಇರಿಸಿಕೊಳ್ಳಬೇಕು.

ಲೇಖಕ: ಶಾಸಕ, ವಿಧಾನಸಭೆಯ ಮಾಜಿ ಸ್ಪೀಕರ್‌

ನಿರೂಪಣೆ: ವಿ.ಎಸ್‌. ಸುಬ್ರಹ್ಮಣ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT