ಶುಕ್ರವಾರ, 24 ಅಕ್ಟೋಬರ್ 2025
×
ADVERTISEMENT
ಆಳ–ಅಗಲ | ಮರಣದಂಡನೆ: ಯಾವುದು ‘ಮಾನವೀಯ’ ವಿಧಾನ?
ಆಳ–ಅಗಲ | ಮರಣದಂಡನೆ: ಯಾವುದು ‘ಮಾನವೀಯ’ ವಿಧಾನ?
ಫಾಲೋ ಮಾಡಿ
Published 23 ಅಕ್ಟೋಬರ್ 2025, 23:30 IST
Last Updated 23 ಅಕ್ಟೋಬರ್ 2025, 23:30 IST
Comments
ಭಾರತದಲ್ಲಿ ಮರಣದಂಡನೆ ವಿಧಿಸಲಾಗಿರುವ ಅಪರಾಧಿಗಳಿಗೆ ಯಾವ ವಿಧಾನದ ಮೂಲಕ ಪ್ರಾಣಹರಣ ಮಾಡಬೇಕು ಎನ್ನುವುದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದ್ದು, ಚರ್ಚೆಗೆ ಗ್ರಾಸವಾಗಿದೆ. ಗಲ್ಲಿಗೇರಿಸುವುದರ ಬದಲು ವಿಷದ ಇಂಜೆಕ್ಷನ್ ನೀಡುವ ಮೂಲಕ ಅಪರಾಧಿ ಸಾಯುವಂತೆ ಮಾಡಬೇಕು ಎನ್ನುವ ವಾದ ಕೇಳಿಬಂದಿದೆ. ಆದರೆ, ಕೇಂದ್ರ ಸರ್ಕಾರವು ಈ ವಿಚಾರದಲ್ಲಿ ಯಾವ ಬದಲಾವಣೆಗೂ ಸಿದ್ಧವಿರುವಂತೆ ಕಾಣುತ್ತಿಲ್ಲ
ಗಲ್ಲು ಶಿಕ್ಷೆಯ ಸಾಂವಿಧಾನಿಕತೆ:
ಮರಣದಂಡನೆಯ ವಿಧಾನವು ನಾಲ್ಕು ಮುಖ್ಯ ಆಶಯಗಳನ್ನು ಒಳಗೊಳ್ಳಬೇಕು ಎಂದು 1983ರ ದೀನಾ ಮತ್ತು ಭಾರತ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿತ್ತು. ಸಾವಿನ ವಿಧಾನವು ಸರಳವಾಗಿರಬೇಕು ಮತ್ತು ಕ್ಷಿಪ್ರವಾಗಿ ಸಾವು ತರುವಂತಿರಬೇಕು, ಅಪರಾಧಿಯು ಬೇಗ ಪ್ರಜ್ಞಾಶೂನ್ಯನಾಗಿ ಸಾವಿಗೀಡಾಗಬೇಕು, ಘನತೆಯಿಂದ ಕೂಡಿರಬೇಕು ಮತ್ತು ದೇಹ/ಅಂಗ ವಿರೂಪಗೊಳ್ಳುವಂತೆ ಇರಬಾರದು ಎಂದು ಉನ್ನತ ನ್ಯಾಯಾಲಯ ಸೂಚಿಸಿತ್ತು. ಕೊನೆಗೆ, ಸುಪ್ರೀಂ ಕೋರ್ಟ್ ಇದೇ ಪ್ರಕರಣದಲ್ಲಿ ಗಲ್ಲು ಶಿಕ್ಷೆಯ ವಿಧಾನದ ಸಾಂವಿಧಾನಿಕತೆಯನ್ನು ಎತ್ತಿಹಿಡಿದಿತ್ತು. ದೇಶದಲ್ಲಿ ಗಲ್ಲು ಶಿಕ್ಷೆಯೊಂದೇ ಮರಣದಂಡನೆಯ ಜಾರಿ ವಿಧಾನ ಎಂದು ಸ್ಪಷ್ಟಪಡಿಸಿತ್ತು. ವಿಷದ ಇಂಜೆಕ್ಷನ್ ಮೂಲಕ ಪ್ರಾಣಹರಣ ಮಾಡುವ ವಿಧಾನವು ಎಲ್ಲ ಸಂದರ್ಭಗಳಲ್ಲಿಯೂ ಕ್ಷಿಪ್ರವಾಗಿ ಸಾವು ತರುತ್ತದೆ ಎನ್ನುವುದಕ್ಕೆ ಆಧಾರವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತ್ತು.
ಗಲ್ಲು ಏಕೆ ಬೇಡ?:
2017ರಲ್ಲಿ ಹಿರಿಯ ವಕೀಲ ರಿಷಿ ಮಲ್ಹೋತ್ರಾ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿ, ನೇಣಿಗೆ ಬದಲು ಮರಣದಂಡನೆಗೆ ಪರ್ಯಾಯ ಮಾರ್ಗ ಅನುಸರಿಸಲು ಆದೇಶಿಸಬೇಕು ಎಂದು ಕೋರಿದರು. ಗಲ್ಲಿಗೇರಿಸಿದರೆ, ಅವರ ದೇಹವು ನೇಣು ಹಗ್ಗದಲ್ಲಿಯೇ 40 ನಿಮಿಷಗಳವರೆಗೆ ಇರುತ್ತದೆ; ಅದು ಕ್ರೂರ ಮತ್ತು ಬರ್ಬರ. ಅದರ ಬದಲು ಮಾನವೀಯವಾದ, ಘನತೆಯಿಂದ ಕೂಡಿದ ವಿಷದ ಚುಚ್ಚುಮದ್ದಿನ ಮಾರ್ಗ ಅನುಸರಿಸುವುದು ಉತ್ತಮ. ಸಂವಿಧಾನದ 21ನೇ ವಿಧಿಯು ಜೀವಿಸುವ ಹಕ್ಕು ಮತ್ತು ಘನತೆಯ ಹಕ್ಕುಗಳನ್ನು ಒಳಗೊಂಡಿರುವಂತೆಯೇ ಘನತೆಯಿಂದ ಸಾಯುವ ಹಕ್ಕನ್ನೂ ನೀಡಿದೆ; ಅಮೆರಿಕದ ಹೆಚ್ಚಿನ ರಾಜ್ಯಗಳಲ್ಲಿ ವಿಷದ ಇಂಜೆಕ್ಷನ್ ನೀಡುವ ಪದ್ಧತಿ ಇದೆ ಎನ್ನುವುದು ಅವರ ವಾದ.
ಬದಲಾಗದ ಕೇಂದ್ರದ ಧೋರಣೆ:
ತಾನು ಯಾವ ವಿಧಾನದ ಮೂಲಕ ಸಾಯಬೇಕು ಎನ್ನುವ ಆಯ್ಕೆಯನ್ನು ಮರಣದಂಡನೆ ವಿಧಿಸಲ್ಪಟ್ಟಿರುವ ಅಪರಾಧಿಗೇ ನೀಡಬೇಕು ಎನ್ನುವುದು ಮಲ್ಹೋತ್ರಾ ಅವರ ವಾದ. ಆದರೆ, ಅದು ಕಾರ್ಯಸಾಧುವಲ್ಲ ಎಂದು ಕೇಂದ್ರವು ಪ್ರತಿಕ್ರಿಯಿಸಿದೆ.
ವೈದ್ಯರ ವಿರೋಧ
ಗಲ್ಲು ಶಿಕ್ಷೆಯ ವಿಧಾನದಲ್ಲಿ, ಅಪರಾಧಿ ಸತ್ತಿದ್ದಾನೆಯೇ ಇಲ್ಲವೇ ಎನ್ನುವುದನ್ನು ದೃಢೀಕರಿಸುವುದಕ್ಕಷ್ಟೇ ವೈದ್ಯರ ಪಾತ್ರವು ಸೀಮಿತವಾಗಿರುತ್ತದೆ. ಆದರೆ, ವಿಷದ ಇಂಜೆಕ್ಞನ್ ಚುಚ್ಚುವ ವಿಧಾನದಲ್ಲಿ ವೈದ್ಯರೇ ಮರಣದಂಡನೆ ಜಾರಿ ಮಾಡುವವರೂ ಆಗಿರುತ್ತಾರೆ. ಹಲವು ದೇಶಗಳಲ್ಲಿ ವೈದ್ಯರು ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ವೈದ್ಯರ ಕಾರ್ಯವು ಜೀವ ಉಳಿಸುವುದೇ ವಿನಾ ಜೀವ ತೆಗೆಯುವುದಲ್ಲ ಎನ್ನುವುದು ಅವರ ವಾದ. ಮರಣದಂಡನೆ ಜಾರಿಯಲ್ಲಿ ವೈದ್ಯರ ಪಾತ್ರ ಪ್ರಮುಖವಾಗಿರುವ ಯಾವುದೇ ವಿಧಾನವನ್ನು ತಾನು ವಿರೋಧಿಸುವುದಾಗಿ ಬ್ರಿಟಿಷ್ ಮೆಡಿಕಲ್ ಕೌನ್ಸಿಲ್ ಹೇಳಿತ್ತು. ವಿಶ್ವ ವೈದ್ಯಕೀಯ ಸಂಘವೂ ಇದರ ವಿರುದ್ಧ ನಿಲುವು ತಳೆದಿದೆ. ಅಮೆರಿಕದಲ್ಲಿಯೂ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಅಮೆರಿಕದಲ್ಲಿ ವೈದ್ಯರು ಜೈಲು ಅಧಿಕಾರಿಗಳಿಗೇ ಚುಚ್ಚುಮದ್ದು ನೀಡುವ ತರಬೇತಿ ನೀಡುವ ಪದ್ಧತಿ ಅನುಸರಿಸಲಾಯಿತು. ಆದರೆ, ವೈದ್ಯರ ಅನುಪಸ್ಥಿತಿಯಲ್ಲಿ ಈ ವಿಧಾನವು ದೀರ್ಘವೂ ತ್ರಾಸದಾಯಕವೂ ಆಗಿದೆ ಎನ್ನುವ ವರದಿಗಳಿವೆ.
ಭಾರತದಲ್ಲಿ ಹೆಚ್ಚು
ಜಗತ್ತಿನಲ್ಲಿ ಅತಿ ಹೆಚ್ಚು ಮರಣದಂಡನೆ ‌ವಿಧಿಸುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಅದರಲ್ಲೂ ಕೆಳಹಂತದ ನ್ಯಾಯಾಲಯಗಳು ಹೆಚ್ಚಿನ ಪ್ರಮಾಣದಲ್ಲಿ ಮರಣದಂಡನೆ ವಿಧಿಸುತ್ತಿವೆ. ಮರಣದಂಡನೆ ವಿಧಿಸಲ್ಪಟ್ಟ ಪ್ರತಿ ನಾಲ್ವರಲ್ಲಿ ಒಬ್ಬರು ಉತ್ತರ ಪ್ರದೇಶಕ್ಕೆ (130) ಸೇರಿದವರು. ನಂತರದ ಸ್ಥಾನಗಳಲ್ಲಿ ಗುಜರಾತ್ (71), ಮಹಾರಾಷ್ಟ್ರ (42), ಹರಿಯಾಣ (38), ಪಶ್ಚಿಮ ಬಂಗಾಳ (37), ಕೇರಳ (35), ಮಧ್ಯಪ್ರದೇಶ ಇವೆ. ಕರ್ನಾಟಕದಲ್ಲಿ 22 ಮಂದಿಗೆ ಈ ಶಿಕ್ಷೆ ವಿಧಿಸಲಾಗಿದ್ದು, ಜೈಲುವಾಸ ಅನುಭವಿಸುತ್ತಿದ್ದಾರೆ. ಪ್ರಸ್ತುತ ಭಾರತದ ವಿವಿಧ ಜೈಲುಗಳಲ್ಲಿ ಮರಣದಂಡನೆ ವಿಧಿಸಲ್ಪಟ್ಟ 564 ಮಂದಿ (2024ರ ಕೊನೆಗೆ) ಇದ್ದು, ಶಿಕ್ಷೆ ಜಾರಿಯನ್ನು ಎದುರು ನೋಡುತ್ತಿದ್ದಾರೆ. ಇದು ಎರಡು ದಶಕಗಳಲ್ಲಿಯೇ ಅತಿ ದೊಡ್ಡ ಸಂಖ್ಯೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT