ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ ಅಗಲ: ಏರುತ್ತಿದೆಯೇ ಉದ್ಯೋಗಾವಕಾಶ?– ಇಲ್ಲ ಎನ್ನುತ್ತಿದೆ ಪಿಎಫ್ ಅಂಕಿಅಂಶ
ಆಳ ಅಗಲ: ಏರುತ್ತಿದೆಯೇ ಉದ್ಯೋಗಾವಕಾಶ?– ಇಲ್ಲ ಎನ್ನುತ್ತಿದೆ ಪಿಎಫ್ ಅಂಕಿಅಂಶ
Published 6 ಮಾರ್ಚ್ 2024, 23:14 IST
Last Updated 6 ಮಾರ್ಚ್ 2024, 23:14 IST
ಅಕ್ಷರ ಗಾತ್ರ

ದೇಶದಲ್ಲಿ ನಿರುದ್ಯೋಗ ಕಡಿಮೆಯಾಗಿದೆ, ಉದ್ಯೋಗ ಸೃಷ್ಟಿ ಉತ್ತಮವಾಗಿದೆ ಎಂದು ಕೇಂದ್ರ ಸರ್ಕಾರವು ಪದೇ–ಪದೇ ಹೇಳಿದೆ. ಆದರೆ ದೇಶದಲ್ಲಿ ಹೊಸ ಉದ್ಯೋಗ ಸೃಷ್ಟಿಯ ವಾತಾವರಣ ಮೊದಲಿನಂತೆ ಇಲ್ಲ. ಮೊದಲಿನಂತೆ ಈಗ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ ಎನ್ನುತ್ತವೆ ಕಾರ್ಮಿಕರ ಭವಿಷ್ಯ ನಿಧಿಗೆ (ಪಿಎಫ್‌) ಸಂಬಂಧಿಸಿದ ದತ್ತಾಂಶಗಳು. ಉದ್ಯೋಗ ಸೃಷ್ಟಿ ಇರಲಿ, ಉದ್ಯೋಗ ನಷ್ಟದ ಪ್ರಮಾಣ ಏರಿಕೆಯಾಗುತ್ತಿದೆ ಎಂದು ಹೇಳುತ್ತಿವೆ ಕಾರ್ಮಿಕರ ಭವಿಷ್ಯ ನಿಧಿ ಕಚೇರಿ (ಇಪಿಎಫ್‌ಒ) ವಾರ್ಷಿಕ ವರದಿಗಳಲ್ಲಿನ ದತ್ತಾಂಶಗಳು.

ದೇಶದಲ್ಲಿ ಸಂಘಟಿತ ವಲಯದ ಉದ್ಯೋಗಗಳ ಸ್ಥಿತಿಗತಿಯಲ್ಲಿ ಆಗುವ ಬದಲಾವಣೆ ಪಿಎಫ್‌ ದತ್ತಾಂಶಗಳಲ್ಲಿ
ಬಿಂಬಿತವಾಗುತ್ತದೆ. ಉದ್ಯೋಗಗಳ ಸಂಖ್ಯೆ ಏರಿಕೆಯಾದರೆ, ಪ್ರತಿ ತಿಂಗಳೂ ಚಂದಾ ಪಾವತಿಯಾಗುವ ಪಿಎಫ್‌ ಖಾತೆಗಳ ಸಂಖ್ಯೆ ಏರಿಕೆಯಾಗುತ್ತದೆ. ಅದು ಆರ್ಥಿಕ ಪ್ರಗತಿಯನ್ನು ತೋರಿಸುತ್ತದೆ. ಒಂದು ವೇಳೆ ಉದ್ಯೋಗಗಳ ಸಂಖ್ಯೆ ಇಳಿಕೆಯಾದರೆ, ಪ್ರತಿ ತಿಂಗಳೂ ಚಂದಾ ಪಾವತಿಯಾಗುವ ಪಿಎಫ್‌ ಖಾತೆಗಳ ಸಂಖ್ಯೆ ಇಳಿಕೆಯಾಗುತ್ತದೆ. ಈಚಿನ ಆರು ಆರ್ಥಿಕ ವರ್ಷಗಳಲ್ಲಿ ಸಕ್ರಿಯ ಖಾತೆಗಳ ಪ್ರಮಾಣ ಇಳಿಕೆಯಾಗುತ್ತಲೇ ಇದೆ. ಇದು ದೇಶದ ಆರ್ಥಿಕತೆ ಕುಂಟುತ್ತಿದೆ ಎಂಬುದನ್ನು ಸೂಚಿಸುತ್ತದೆ. 

ಇದಲ್ಲದೆ ಪ್ರತಿ ವರ್ಷ ಹೊಸದಾಗಿ ತೆರೆಯಲಾಗುತ್ತಿದ್ದ ಪಿಎಫ್‌ ಖಾತೆಗಳ ಸಂಖ್ಯೆಯಲ್ಲೂ ಇಳಿಕೆಯಾಗುತ್ತಿದೆ. ಹೊಸ ಖಾತೆಗಳ ಸಂಖ್ಯೆ ಇಳಿಕೆಯಾಗುತ್ತಿದೆ ಎಂಬುದು, ಹೊಸ ಉದ್ಯೋಗಗಳ ಸೃಷ್ಟಿ ಇಳಿಕೆಯಾಗುತ್ತಿದೆ ಎಂಬುದರ ಸೂಚಕವೂ ಹೌದು. ಇನ್ನೊಂದೆಡೆ ಚಂದಾ ಪಾವತಿ ನಿಲ್ಲುತ್ತಿರುವ ಪಿಎಫ್‌ ಖಾತೆಗಳ ಸಂಖ್ಯೆಯೂ ಪ್ರತಿ ವರ್ಷ ಏರಿಕೆಯಾಗುತ್ತಿದೆ. ಈ ಎಲ್ಲಾ ಅಂಶಗಳು ದೇಶದಲ್ಲಿ ಉದ್ಯೋಗಾವಕಾಶ ಕ್ಷೀಣಿಸುತ್ತಿದೆ ಮತ್ತು ಹೊಸ ಉದ್ಯೋಗಗಳ ಸೃಷ್ಟಿಯೂ ಇಳಿಕೆಯ ಹಾದಿಯಲ್ಲಿದೆ ಎಂಬುದನ್ನು ಹೇಳುತ್ತವೆ.

ಪಿಎಫ್‌ ಖಾತೆ ದೇಶದ ಸಂಘಟಿತ ವಲಯದ ಉದ್ಯೋಗಗಳ ಸ್ಥಿತಿಯ ಕತೆಯನ್ನಷ್ಟೇ ಹೇಳುತ್ತದೆ. ಅಸಂಘಟಿತ ವಲಯದಲ್ಲಿನ ಉದ್ಯೋಗಗಳು, ಸಣ್ಣ ಮಟ್ಟದ ಸ್ವಯಂ ಉದ್ಯೋಗಗಳ
ಸ್ಥಿತಿಗತಿಯನ್ನು ಹೇಳುವುದಿಲ್ಲ. 

ದೇಶದಲ್ಲಿ ಈಗ ಸಕ್ರಿಯವಾಗಿರುವ ಮತ್ತು ಚಂದಾ ಪಾವತಿಯಾಗುತ್ತಿರುವ ಪಿಎಫ್‌ ಖಾತೆಗಳ ಸಂಖ್ಯೆ– 7.57 ಕೋಟಿ 

ಹೊಸ ಖಾತೆಗಳ ಸಂಖ್ಯೆ ಇಳಿಕೆ

ಪ್ರತಿ ವರ್ಷ ಹೊಸದಾಗಿ ಪಿಎಫ್‌ ಚಂದಾದಾರರಾಗುವ ಅಥವಾ ಪಿಎಫ್‌ ಖಾತೆ ತೆರೆಯುವವರ ಸಂಖ್ಯೆ ಇಳಿಕೆ ಆಗುತ್ತಲೇ ಇದೆ. 2017–18ನೇ ಆರ್ಥಿಕ ವರ್ಷದ ಸೆಪ್ಟೆಂಬರ್‌ಗಿಂತ ಮೊದಲು ಇಂತಹ ಮಾಹಿತಿಯನ್ನು ಇಪಿಎಫ್‌ಒ ವರ್ಗೀಕರಿಸುತ್ತಿರಲೂ ಇಲ್ಲ, ಬಹಿರಂಗಪಡಿಸುತ್ತಿರಲೂ ಇಲ್ಲ. 2017ರ ಸೆಪ್ಟೆಂಬರ್‌ನಿಂದ ಈ ಪದ್ಧತಿಯನ್ನು ಜಾರಿಗೆ ತಂದಿದೆ. ಈ ಪ್ರಕಾರ, ಈ ಹಿಂದಿನ ಆರು ಆರ್ಥಿಕ ವರ್ಷಗಳಲ್ಲಿ ಅತಿಹೆಚ್ಚು ಜನರು ಹೊಸದಾಗಿ ಪಿಎಫ್‌ ಖಾತೆ ತೆರೆದದ್ದು 2018–19ರಲ್ಲಿ. ಆ ಆರ್ಥಿಕ ವರ್ಷದಲ್ಲಿ ಒಟ್ಟು 1.39 ಕೋಟಿ ಹೊಸ ಪಿಎಫ್‌ ಖಾತೆಗಳು ಆರಂಭವಾಗಿದ್ದವು. 2018–19ನೇ ಸಾಲಿನ ನಂತರವೇ ದೇಶದಲ್ಲಿನ ಆರ್ಥಿಕ ಪ್ರಗತಿ ಕುಂಠಿತವಾಗಿತ್ತು. ಆನಂತರದ ಎಲ್ಲಾ ಆರ್ಥಿಕ ವರ್ಷಗಳಲ್ಲಿ ಹೊಸದಾಗಿ ತೆರೆಯಲಾದ ಪಿಎಫ್‌ ಖಾತೆಗಳ ಸಂಖ್ಯೆ ಇಳಿಕೆಯೇ ಆಗಿದೆ. ಕೋವಿಡ್‌ ಅವಧಿಯಲ್ಲಿ ಈ ಸಂಖ್ಯೆ ಕನಿಷ್ಠ ಮಟ್ಟಕ್ಕೆ ಇಳಿದಿತ್ತು. 2020–21ರಲ್ಲಿ ಹೊಸದಾಗಿ 85 ಲಕ್ಷ ಪಿಎಫ್‌ ಖಾತೆಗಳನ್ನಷ್ಟೇ ತೆರೆಯಲಾಗಿದೆ.  2022–23ರಲ್ಲಿ ಆರ್ಥಿಕ ಚಟುವಟಿಕೆಗಳು ಸುಧಾರಿಸಿದ ಕಾರಣ ಹೊಸ ಪಿಎಫ್‌ ಖಾತೆಗಳ ಸಂಖ್ಯೆಯಲ್ಲಿ ಏರಿಕೆಯಾಗಿತ್ತು. ಆದರೂ ಅದು 2018–19ನೇ ಸಾಲಿನಲ್ಲಿದ್ದ ಮಟ್ಟವನ್ನು ಮುಟ್ಟಲಿಲ್ಲ.

2023–24ನೇ ಆರ್ಥಿಕ ವರ್ಷದ ಡಿಸೆಂಬರ್ ಅಂತ್ಯದವರೆಗೆ (ಒಂಬತ್ತು ತಿಂಗಳಲ್ಲಿ) 74.4 ಲಕ್ಷ ಹೊಸ ಖಾತೆಗಳಷ್ಟೇ ಆರಂಭವಾಗಿವೆ. ಉಳಿದ ಮೂರು ತಿಂಗಳಲ್ಲಿ ಎಷ್ಟು ಖಾತೆಗಳು ಆರಂಭವಾಗಿವೆ ಮತ್ತು ಆರಂಭವಾಗಲಿವೆ ಎಂಬ ಮಾಹಿತಿ ಇನ್ನೂ ಬಿಡುಗಡೆಯಾಗಿಲ್ಲ. ದೇಶದಲ್ಲಿ ಉದ್ಯೋಗ ಸೃಷ್ಟಿಯು 2018–19ನೇ ಆರ್ಥಿಕ ವರ್ಷದ ಮಟ್ಟಕ್ಕೆ ಮರಳಿಲ್ಲ ಎಂಬುದನ್ನು ಈ ದತ್ತಾಂಶಗಳು ಸೂಚಿಸುತ್ತವೆ.

ಪಿಎಫ್‌ ಖಾತೆ ಸ್ಥಗಿತಗೊಳಿಸಿದವರ ಸಂಖ್ಯೆ ಭಾರಿ ಏರಿಕೆ

ಹಿಂದಿನ ಆರು ಆರ್ಥಿಕ ವರ್ಷಗಳಲ್ಲಿ ಪ್ರತಿ ವರ್ಷ 1 ಕೋಟಿಗೂ ಹೆಚ್ಚು ಮಂದಿ ಪಿಎಫ್‌ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ ಅಥವಾ ತಮ್ಮ ಖಾತೆಗೆ ಚಂದಾ ಪಾವತಿಯನ್ನು ನಿಲ್ಲಿಸಿದ್ದಾರೆ. 2018ರ ಏಪ್ರಿಲ್‌ 1ರಿಂದ 2023ರ ಡಿಸೆಂಬರ್ 31ರವರೆಗೆ ಈ ರೀತಿ ಒಟ್ಟು 6.81 ಕೋಟಿ ಚಂದಾದಾರರು ಕಾರ್ಮಿಕರ ಭವಿಷ್ಯ ನಿಧಿ ಯೋಜನೆ ವ್ಯಾಪ್ತಿಯಿಂದ ಹೊರಗೆ ಉಳಿದಿದ್ದಾರೆ. ಈ ಕಾರ್ಮಿಕರ ಉದ್ಯೋಗ ನಷ್ಟವಾಗಿರಬೇಕು ಅಥವಾ ಅವರೇ ಕೆಲಸ ಬಿಟ್ಟಿರಬೇಕು. ಅಥವಾ ಅವರು ಬೇರೆ ಹೊಸ ಪಿಎಫ್‌ ಖಾತೆಯನ್ನು ಆರಂಭಿಸಿದ್ದಾರೆಯೇ ಎಂಬ ಮಾಹಿತಿ ಇಪಿಎಫ್‌ಒ ಬಳಿ ಇಲ್ಲ. 

ಎಲ್ಲಕ್ಕಿಂತ ಮುಖ್ಯವಾಗಿ ಹೀಗೆ ಪಾವತಿ ಸ್ಥಗಿತವಾದ ಖಾತೆಗಳ ಸಂಖ್ಯೆ ಈಚಿನ ವರ್ಷಗಳಲ್ಲಿ ಏರಿಕೆಯಾಗುತ್ತಲೇ ಇದೆ. ಈಚಿನ ಆರು ಆರ್ಥಿಕ ವರ್ಷಗಳಲ್ಲಿ 2022–23ರಲ್ಲೇ ಅತ್ಯಂತ ಗರಿಷ್ಠ ಪ್ರಮಾಣದ ಖಾತೆಗಳಿಗೆ ಚಂದಾ ಪಾವತಿ ಸ್ಥಗಿತವಾಗಿದೆ. 2023–24ನೇ ಸಾಲಿನ ಮೊದಲ ಮೂರು ತ್ರೈಮಾಸಿಕದಲ್ಲೇ 1 ಕೋಟಿಗೂ ಹೆಚ್ಚು ಖಾತೆಗಳಿಗೆ ಪಾವತಿ ಸ್ಥಗಿತವಾಗಿದೆ. ಒಟ್ಟಾರೆಯಾಗಿ ಈ ದತ್ತಾಂಶಗಳು ಉದ್ಯೋಗಾವಕಾಶ ಕಡಿಮೆಯಾಗುತ್ತಿದೆ ಮತ್ತು ಉದ್ಯೋಗನಷ್ಟ ಏರಿಕೆಯಾಗುತ್ತಿದೆ ಎಂಬುದನ್ನು ಸೂಚಿಸುತ್ತವೆ.

ನಿಯಮಿತ ಪಾವತಿದಾರರ ಸರಾಸರಿ ಪ್ರಮಾಣ ಇಳಿಕೆ

ದೇಶದಲ್ಲಿ ಈಗ 30 ಕೋಟಿಗೂ ಹೆಚ್ಚು ಪಿಎಫ್‌ ಖಾತೆಗಳು ಇವೆ ಎಂದು ಅಂದಾಜಿಸಬಹುದು. ಏಕೆಂದರೆ 2022–23ನೇ ಆರ್ಥಿಕ ವರ್ಷದ ಅಂತ್ಯದ ವೇಳೆಗೆ 29.88 ಕೋಟಿ ಪಿಎಫ್‌ ಖಾತೆಗಳಲ್ಲಿ ಹಣವಿತ್ತು. ಆನಂತರದ ಅವಧಿಯಲ್ಲಿ ಹೊಸ ಖಾತೆಗಳು ಆರಂಭವಾಗಿರುವ ಕಾರಣ, ಹಣವಿರುವ ಖಾತೆಗಳ ಸಂಖ್ಯೆ 30 ಕೋಟಿ ದಾಟಿರಬಹುದು ಎಂದು ಅಂದಾಜಿಸಬಹುದು. ಈ ಬಗ್ಗೆ ಸರ್ಕಾರದ ಅಧಿಕೃತ ದತ್ತಾಂಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಹಣವಿರುವ ಪಿಎಫ್‌ ಖಾತೆಗಳೆಲ್ಲ ಸಕ್ರಿಯ ಖಾತೆಗಳಲ್ಲ. ವರ್ಷದಲ್ಲಿ ಒಮ್ಮೆಯಾದರೂ ಚಂದಾ ಪಾವತಿಯಾಗಿರುವ ಖಾತೆಯನ್ನಷ್ಟೇ ಸಕ್ರಿಯ ಖಾತೆ ಎಂದು ಪರಿಗಣಿಸಲಾಗುತ್ತದೆ. ಹೀಗೆ ಪ್ರತಿ ಆರ್ಥಿಕ ವರ್ಷದಲ್ಲಿ ವರ್ಷಕ್ಕೆ ಒಮ್ಮೆಯಾದರೂ ಚಂದಾ ಪಾವತಿಯಾದ ಖಾತೆಗಳ ಸರಾಸರಿ ಸಂಖ್ಯೆಯನ್ನು ಇಪಿಎಫ್‌ಒ ಲೆಕ್ಕಹಾಕುತ್ತದೆ. ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪ್ರತಿ ವರ್ಷದ ಆರ್ಥಿಕ ವರದಿಯೊಂದಿಗೆ ಬಿಡುಗಡೆ ಮಾಡುತ್ತದೆ. ಹೀಗೆ ಪ್ರತಿ ವರ್ಷ ಹಣವಿದ್ದ ಪಿಎಫ್‌ ಖಾತೆಗಳ ಸಂಖ್ಯೆಗೆ ಹೋಲಿಸಿದರೆ, ಚಂದಾ ಪಾವತಿಯಾಗುತ್ತಿರುವ ಖಾತೆಗಳ ಸಂಖ್ಯೆ ತೀರಾ ಕಡಿಮೆ ಇರುತ್ತದೆ. ಆದರೆ ಈಚಿನ ವರ್ಷಗಳಲ್ಲಿ ಅಂತಹ ಸಕ್ರಿಯ ಖಾತೆಗಳ ಪ್ರಮಾಣವೂ ಇಳಿಕೆ ಆಗುತ್ತಲೇ ಇದೆ. 2019–20ಕ್ಕೂ ಮುನ್ನ ಒಟ್ಟು ಖಾತೆಗಳಲ್ಲಿ ಸಕ್ರಿಯ ಖಾತೆಗಳ ಸರಾಸರಿ ಪ್ರಮಾಣ ಶೇ 20ಕ್ಕಿಂತಲೂ ಹೆಚ್ಚೇ ಇತ್ತು. ಆದರೆ 2019–20ರ ನಂತರ ಪ್ರತಿ ವರ್ಷವೂ ಈ ಪ್ರಮಾಣ ಇಳಿಕೆಯಾಗುತ್ತಲೇ ಬಂದಿದೆ. 2022–23ರಲ್ಲಿ ಈ ಪ್ರಮಾಣ ಸ್ವಲ್ಪ ಏರಿಕೆಯಾಗಿದೆಯಾದರೂ, ಈ ಹಿಂದಿನ ಮಟ್ಟವನ್ನು ತಲುಪಲು ಸಾಧ್ಯವಾಗಿಲ್ಲ.

2017–18ರಲ್ಲಿ ಇಂತಹ ಸಕ್ರಿಯ ಖಾತೆಗಳ ಪ್ರಮಾಣ ಶೇ 21.39ರಷ್ಟಿತ್ತು. ಇದು ಈ ಹಿಂದಿನ ಏಳು ಆರ್ಥಿಕ ವರ್ಷಗಳಲ್ಲೇ ಗರಿಷ್ಠ ಮಟ್ಟವಾಗಿತ್ತು. 2021–22ರಲ್ಲಿ ಇದು ಏಳು ವರ್ಷಗಳಲ್ಲೇ ಕನಿಷ್ಠಮಟ್ಟಕ್ಕೆ, ಅಂದರೆ ಶೇ 16.69ಕ್ಕೆ ಇಳಿಕೆಯಾಗಿತ್ತು. 2022–23ರಲ್ಲಿ ಶೇ 17.77ಕ್ಕೆ ಏರಿಕೆಯಾಗಿದೆ. ಆದರೆ 2017–18ಕ್ಕಿಂತ ಅದು ಕಡಿಮೆಯೇ ಇದೆ. ಹೀಗಾಗಿ ಈ ವರ್ಷಗಳಲ್ಲಿ ಈ ಮೊದಲಿನಂತೆ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ ಎಂಬುದನ್ನು ಈ ದತ್ತಾಂಶಗಳು ಹೇಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT