2008ರ ಸೆಪ್ಟೆಂಬರ್ 29ರ ರಾತ್ರಿ 9.35ರ ಹೊತ್ತು. ಹಿಂದೂಗಳಿಗೆ ನವರಾತ್ರಿಯ ದಿನವಾಗಿದ್ದರೆ, ಮುಸ್ಲಿಮರಿಗೆ ರಂಜಾನ್ ಮಾಸದ ದಿನ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೇಗಾಂವ್ ಪಟ್ಟಣದ ಭಿಕ್ಕು ಚೌಕದಲ್ಲಿ ಬೈಕ್ ಒಂದು ಏಕಾಏಕಿ ಸ್ಫೋಟಗೊಂಡಿತು. ಆರು ಮಂದಿ ಮೃತಪಟ್ಟು, 101 ಜನರು ಗಾಯಗೊಂಡರು. ಕೊನೆಯುಸಿರೆಳೆದವರು, ಗಾಯಗೊಂಡವರಲ್ಲಿ ಬಹುತೇಕರು ಮುಸ್ಲಿಮರು. ಬೈಕ್ನಲ್ಲಿ ಆರ್ಡಿಎಕ್ಸ್ ಇಟ್ಟು ಸ್ಫೋಟಿಸಲಾಗಿತ್ತು. ಘಟನೆ ನಡೆದು ಮೂರು ವಾರಗಳ ನಂತರ (ಅ.21) ಪ್ರಕರಣದ ತನಿಖೆಯನ್ನು ಕೈಗತ್ತಿಕೊಂಡಿದ್ದ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ಪಡೆಯು (ಎಟಿಎಸ್) ಎರಡನೇ ದಿನಕ್ಕೆ ಪ್ರಮುಖ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್ ಹಾಗೂ ಇತರ ಮೂವರನ್ನು ಬಂಧಿಸಿತ್ತು. ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಬಲಪಂಥೀಯ ತೀವ್ರವಾದಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪ್ರತಿಪಾದಿಸಿದ್ದ ಎಟಿಎಸ್, ಅಭಿನವ್ ಭಾರತ್ ಎಂಬ ಹಿಂದೂ ಮೂಲಭೂತವಾದಿ ಸಂಘಟನೆಯತ್ತ ಬೊಟ್ಟು ಮಾಡಿತ್ತು. ಸೇನಾ ಗುಪ್ತಚರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಲೆಪ್ಟಿನೆಂಟ್ ಕರ್ನಲ್ ( ಪ್ರಸಾದ್ ಶ್ರೀಕಾಂತ್ ಪುರೋಹಿತ) ಮತ್ತು ನಿವೃತ್ತ ಮೇಜರ್ (ರಮೇಶ್ ಉಪಾಧ್ಯಾಯ) ಕೂಡ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದರು.

ಆರಂಭದಲ್ಲಿ ಮಹಾರಾಷ್ಟ್ರ ಎಟಿಎಸ್ ತನಿಖೆ ನಡೆಸಿದ್ದರೆ ನಂತರ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ಕೈಗೆತ್ತಿಕೊಂಡಿತ್ತು. ಒಟ್ಟು 14 ಮಂದಿಯನ್ನು ಬಂಧಿಸಲಾಗಿತ್ತು. ಈ ಪೈಕಿ ಏಳು ಮಂದಿ ಮೊದಲೇ ಆರೋಪ ಮುಕ್ತಗೊಂಡಿದ್ದರು. ಘಟನೆ ನಡೆದು ಒಂದು ವರ್ಷದ ನಂತರ, ಪ್ರಜ್ಞಾ ಠಾಕೂರ್, ಪುರೋಹಿತ, ರಮೇಶ್ ಉಪಾಧ್ಯಾಯ, ಸಮೀರ್ ಕುಲಕರ್ಣಿ, ಅಜಯ್ ರಾಹಿರ್ಕರ್, ಸುಧಾಕರ್ ದ್ವಿವೇದಿ ಮತ್ತು ಸುಧಾಕರ್ ಚತುರ್ವೇದಿ ವಿರುದ್ಧ ಎನ್ಐಎ ನ್ಯಾಯಾಲಯ ದೋಷಾರೋಪ ನಿಗದಿ ಮಾಡಿತ್ತು. ಅಷ್ಟರಲ್ಲಾಗಲೇ ಎಲ್ಲ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಇದಾಗಿ, ಏಳು ವರ್ಷಗಳು ಕಳೆದಿವೆ. ಈಗ ಎನ್ಐಎನ ವಿಶೇಷ ನ್ಯಾಯಾಲಯ ಎಲ್ಲಾ ಆರೋಪಿಗಳನ್ನೂ ಖುಲಾಸೆಗೊಳಿಸಿ ತೀರ್ಪು ನೀಡಿದೆ.

‘ಹಿಂದೂ ಭಯೋತ್ಪಾದನೆ’ ಚರ್ಚೆಗೆ

ಈ ಪ್ರಕರಣವು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭಾರಿ ರಾಜಕೀಯ ಜಟಾಪಟಿಗೆ ಕಾರಣವಾಗಿತ್ತು.

2008ರಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್–ಎನ್ಸಿಪಿ ನೇತೃತ್ವದ ಸರ್ಕಾರವಿದ್ದರೆ, ಕೇಂದ್ರದಲ್ಲಿ ಯುಪಿಎ ಸರ್ಕಾರ ಇತ್ತು. ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹಿಂದೂ ಮೂಲಭೂತವಾದಿಗಳು ನಡೆಸಿದ ಕೃತ್ಯ ಇದು ಎಂದು ತನಿಖೆ ನಡೆಸಿದ್ದ ಮಹಾರಾಷ್ಟ್ರ ಎಟಿಎಸ್ನ ಪ್ರತಿಪಾದನೆಯು ರಾಜಕೀಯ ಕದನಕ್ಕೆ ಇಂಬು ನೀಡಿತು. ಕಾಂಗ್ರೆಸ್ನ ಕೆಲವು ಪ್ರಮುಖ ಮುಖಂಡರು ಇದನ್ನು ‘ಹಿಂದೂ ಭಯೋತ್ಪಾದನೆ’ ಕೃತ್ಯ ಎಂದು ಕರೆದರು. ಇನ್ನೂ ಕೆಲವರು ‘ಕೇಸರಿ ಭಯೋತ್ಪಾದನೆ’ ಎಂದು ಜರಿದರು. ಇದು ಬಿಜೆಪಿ, ಆರ್ಎಸ್ಎಸ್, ಹಿಂದೂ ಸಂಘಟನೆಗಳನ್ನು ಕೆರಳಿಸಿತು. ‘ಒಂದು ಸಮುದಾಯದ ಮತಗಳನ್ನು ಗಳಿಸುವುದಕ್ಕಾಗಿ ಕಾಂಗ್ರೆಸ್ ಹಿಂದೂ/ಕೇಸರಿ ಭಯೋತ್ಪಾದನೆ ಎಂಬ ಸಂಕಥನವನ್ನು ಸೃಷ್ಟಿಸಿದೆ’ ಎಂದು ಆರೋಪಿಸಿದ ಬಿಜೆಪಿಯು ಇದನ್ನು ಹಲವು ರಾಜ್ಯಗಳಲ್ಲಿ ಚುನಾವಣಾ ವಿಷಯವನ್ನಾಗಿಯೂ ಮಾಡಿತು.

ಒತ್ತಡ ಹಾಕಿತ್ತೇ ಕೇಂದ್ರ?

ಆರಂಭದಲ್ಲಿ ಈ ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದವರು ಮಂಗಳೂರಿನವರಾದ ರೋಹಿಣಿ ಸಾಲಿಯಾನ್. 2015ರಲ್ಲಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ‘2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಈ ಪ್ರಕರಣದ ಆರೋಪಿಗಳ ಬಗ್ಗೆ ‘ಮೃದು’ ಧೋರಣೆ ತಳೆಯುವಂತೆ ಎನ್ಐಎ ಒತ್ತಡ ಹಾಕುತ್ತಿದೆ. ಎನ್ಐಎಯ ಉನ್ನತ ಅಧಿಕಾರಿಯೊಬ್ಬರು ನನ್ನ ಬಳಿಗೆ ಬಂದು ಇದನ್ನು ತಿಳಿಸಿದ್ದರು’ ಎಂದು ಹೇಳಿದ್ದರು. ಅವರು ಈ ಹೇಳಿಕೆ ನೀಡಿದ ನಂತರ ಎನ್ಐಎಯು ರೋಹಿಣಿಯವರನ್ನು ವಕೀಲರ ಸಮಿತಿಯಿಂದ ತೆಗೆದುಹಾಕಿತ್ತು.

ರೋಹಿಣಿಯವರ ಹೇಳಿಕೆಯು ತನಿಖೆಯ ಕುರಿತಾಗಿ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.

ಪ್ರಜ್ಞಾಸಿಂಗ್ ಮೇಲಿದ್ದ ಆರೋಪ ಏನು?

ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಪ್ರಜ್ಞಾ ಸಿಂಗ್ ಠಾಕೂರ್ ಹೆಸರಿನಲ್ಲಿ ನೋಂದಣಿಯಾಗಿದ್ದ ಬೈಕ್ ಅನ್ನು ಸ್ಫೋಟಕ್ಕೆ ಬಳಸಲಾಗಿತ್ತು ಎಂಬ ಆರೋಪದಲ್ಲಿ ಮಹಾರಾಷ್ಟ್ರ ಎಟಿಎಸ್ ಅವರನ್ನು ಬಂಧಿಸಿತ್ತು. ಆ ಬೈಕ್ನಲ್ಲಿ ಆರ್ಡಿಎಕ್ಸ್ ಅಳವಡಿಸಲಾಗಿತ್ತು.

ಸ್ಫೋಟದ ಸಂದರ್ಭದಲ್ಲಿ ಬೈಕ್ ಹೊಂದಿದ್ದ ನೋಂದಣಿ ಸಂಖ್ಯೆ ನಕಲಿಯಾಗಿತ್ತು. ಬೈಕ್ ಚಾಸಿ ಮತ್ತು ಎಂಜಿನ್ ಸಂಖ್ಯೆಗಳನ್ನೂ ಅಳಿಸಿಹಾಕಲಾಗಿತ್ತು. ತನಿಖಾಧಿಕಾರಿಗಳು ವಿಧಿ ವಿಜ್ಞಾನ ಪ್ರಯೋಗಾಲಯದ ನೆರವಿನಿಂದ ಮೂಲ ಚಾಸಿ ಮತ್ತು ಎಂಜಿನ್ ಸಂಖ್ಯೆಗಳನ್ನು ಸಂಗ್ರಹಿಸಿದ್ದರು. ಆ ಬೈಕ್ ಪ್ರಜ್ಞಾ ಹೆಸರಲ್ಲಿ ನೋಂದಣಿಯಾಗಿದ್ದುದು ತನಿಖೆಯಿಂದ ತಿಳಿದು ಬಂದಿತ್ತು. ಆದರೆ, ಬೈಕ್ ತನ್ನದಾಗಿದ್ದರೂ ಅದನ್ನು ಎರಡು ವರ್ಷಗಳ ಹಿಂದೆಯೇ ಮಾರಾಟ ಮಾಡಿದ್ದಾಗಿ ಪ್ರಜ್ಞಾ ಹೇಳಿದ್ದರು.

ಇದಲ್ಲದೇ, ದಾಳಿಗೆ ಸಂಚು ರೂಪಿಸುವುದಕ್ಕಾಗಿ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದ ಸಭೆಯಲ್ಲಿ ಪ್ರಜ್ಞಾ ಕೂಡ ಭಾಗವಹಿಸಿದ್ದರು ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು. ಸ್ಫೋಟಕ್ಕೆ ಅಗತ್ಯವಾದ ಮಾನವ ಸಂಪನ್ಮೂಲವನ್ನು ಒದಗಿಸುವ ಭರವಸೆಯನ್ನೂ ಪ್ರಜ್ಞಾ ನೀಡಿದ್ದರು ಎಂದೂ ದೂರಿತ್ತು.

ಜಾಮೀನು ಸಿಗುವುದಕ್ಕೂ ಮೊದಲು ಅವರು ಜೈಲಿನಲ್ಲಿ ಎಂಟು ವರ್ಷಗಳನ್ನು ಕಳೆದಿದ್ದರು. 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಅವರು ಬಿಜೆಪಿಯಿಂದ ಭೋಪಾಲ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಿಸಿದ್ದರು. ಕಳೆದ ವರ್ಷದ (2024) ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅವರಿಗೆ ಟಿಕೆಟ್ ನೀಡಿರಲಿಲ್ಲ.

ಸೇನೆಯಲ್ಲಿದ್ದವರೂ ಆರೋಪಿಗಳು

ಪ್ರಕರಣದಲ್ಲಿ ಬಂಧಿತರಾಗಿದ್ದ ಮತ್ತೊಬ್ಬ ಪ್ರಮುಖ ಆರೋಪಿ ಪ್ರಸಾದ್ ಶ್ರೀಕಾಂತ್ ಪುರೋಹಿತ. 2008ರ ನವೆಂಬರ್ನಲ್ಲಿ ಎಟಿಎಸ್ ಅವರನ್ನು ಬಂಧಿಸುವಾಗ ಅವರು ಸೇನೆಯ ಗುಪ್ತಚರ ವಿಭಾಗದಲ್ಲಿ ಕರ್ತವ್ಯದಲ್ಲಿದ್ದರು. ಸೇವೆಯಲ್ಲಿದ್ದ ಸೇನಾ ಸಿಬ್ಬಂದಿಯೊಬ್ಬರ ಮೇಲೆ ಭಯೋತ್ಪಾದನೆಯ ಆರೋಪ ಕೇಳಿಬಂದಿದ್ದು ಅದೇ ಮೊದಲು.

‘ಸ್ಫೋಟದ ಯೋಜನೆಯನ್ನು ಕಾರ್ಯಗತಗೊಳಿಸಲು ನಡೆಸಿದ ಸಭೆಯಲ್ಲಿ ಪುರೋಹಿತ ಹಾಜರಿದ್ದರು. ಆರ್ಡಿಎಕ್ಸ್ ತಯಾರಿಸಲು ಬೇಕಾದ ಕಚ್ಚಾ ವಸ್ತುಗಳನ್ನು ಜಮ್ಮು ಮತ್ತು ಕಾಶ್ಮೀರದಿಂದ ತಂದು, ತಮ್ಮ ಮನೆಯಲ್ಲೇ ಅದನ್ನು ಸಿದ್ಧಪಡಿಸಿದ್ದರು’ ಎಂದು ಆರೋಪಿಸಲಾಗಿತ್ತು. ಆರೋಪಗಳನ್ನು ನಿರಾಕರಿಸಿದ್ದ ಅವರು, ವಿಚಾರಣೆಯ ಸಂದರ್ಭದಲ್ಲಿ ಎಟಿಎಸ್ನ ಹಿರಿಯ ಅಧಿಕಾರಿಗಳು ತಮಗೆ ದೈಹಿಕ ಹಿಂಸೆ ನೀಡಿದ್ದರು. ಕೆಲವು ಮುಖಂಡರ ಹೆಸರುಗಳನ್ನು ಹೇಳಲು ಒತ್ತಡ ಹಾಕಿದ್ದರು’ ಎಂದು ನ್ಯಾಯಾಲಯಕ್ಕೆ ನೀಡಿದ್ದ ಅಂತಿಮ ಹೇಳಿಕೆಯಲ್ಲಿ ಪುರೋಹಿತ ತಿಳಿಸಿದ್ದರು. ಒಂಬತ್ತು ವರ್ಷ ಅವರು ಸೆರೆವಾಸ ಅನುಭವಿಸಿದ್ದರು.

ಸೇನೆಯಲ್ಲಿ ಮೇಜರ್ ಆಗಿ ನಿವೃತ್ತರಾದ ರಮೇಶ್ ಉಪಾಧ್ಯಾಯ ಅವರು ಈ ಪ್ರಕರಣದ ಇನ್ನೊಬ್ಬ ಪ್ರಮುಖ ಆರೋಪಿಯಾಗಿದ್ದವರು. ಅಭಿನವ ಭಾರತ ಸಂಘಟನೆಯ ಸಂಸ್ಥಾಪಕರಲ್ಲಿ ಒಬ್ಬರು. ‘ಭೋಪಾಲ್ನಲ್ಲಿ ನಡೆದ ಸ್ಫೋಟ ಸಂಚಿನ ಸಭೆಯಲ್ಲಿ ಇವರು ಭಾಗವಹಿಸಿದ್ದರು. ‘ಹಿಂದೂ ರಾಷ್ಟ್ರ’ ನಿರ್ಮಿಸಬೇಕು ಎಂಬುದು ಅವರ ಕನಸು’ ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು.

ಭಗವಾಕ್ಕೆ ಸಂದ ಜಯ: ಪ್ರಜ್ಞಾ

ತಮ್ಮನ್ನು ಖುಲಾಸೆಗೊಳಿಸಿ ನ್ಯಾಯಾಲಯ ತೀರ್ಪು ನೀಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಪ್ರಜ್ಞಾ ಠಾಕೂರ್, ‘ಭಗವಾ ಕಿ ಜೀತ್ ಹುಯಿ, ಹಿಂದುತ್ವ ಕಿ ಜೀತ್ ಹುಯಿ (ಭಗವಾ ಗೆದ್ದಿತು, ಹಿಂದುತ್ವ ಗೆದ್ದಿತು) ಎಂದು ಭಾವುಕರಾಗಿ ಹೇಳಿದರು.

‘ಇದು ನನಗೆ ಸಿಕ್ಕ ಗೆಲುವು ಮಾತ್ರವಲ್ಲ, ಇದು ಭಗವಾಕ್ಕೂ (ಕೇಸರಿ) ಸಂದ ಜಯ. ಕಳೆದ 17 ವರ್ಷ ನನ್ನ ಜೀವನ ಹಾಳಾಯಿತು. ಭಗವಾಕ್ಕೆ ಅವಮಾನ ಮಾಡಲು ಯತ್ನಿಸಿದವರನ್ನು ದೇವರು ಶಿಕ್ಷಿಸದೇ ಬಿಡುವುದಿಲ್ಲ’ ಎಂದರು.

‘ನಾನು ಸನ್ಯಾಸಿನಿ ಆಗಿರುವುದರಿಂದಲೇ ಇಂದು ಜೀವಂತವಾಗಿರುವೆ. ಪಿತೂರಿ ನಡೆಸುವ ಮೂಲಕ ಅವರು ಭಗವಾಧ್ವಜಕ್ಕೆ ಅವಮಾನಿಸಿದರು. ಇಂದು ಭಗವಾಕ್ಕೆ ಜಯ ಸಿಕ್ಕಿದೆ’ ಎಂದು ಹೇಳಿದರು.

‘ಯಾವ ಕಾರಣವೂ ಇಲ್ಲದೆಯೇ ವಿಚಾರಣೆಗೆ ಹಾಜರಾಗುವಂತೆ ನನಗೆ ಸೂಚಿಸಲಾಗುತ್ತಿತ್ತು. ವಿಚಾರಣೆಗೆ ಬರುವಂತೆ ನನ್ನನ್ನು ಕರೆಸಿಕೊಂಡಿದ್ದ ಅಧಿಕಾರಿಗಳು ನಂತರ ನನ್ನನ್ನು ಬಂಧಿಸಿ, ಚಿತ್ರಹಿಂಸೆ ನೀಡಿದರು. ಈ ಪ್ರಕರಣ ನನ್ನ ಇಡೀ ಜೀವನವನ್ನೇ ಹಾಳುಮಾಡಿತು’ ಎಂದು ಹೇಳಿದರು.

ಸೇನೆಗೆ ಧನ್ಯವಾದ: ಪುರೋಹಿತ

‘ಈ ಪ್ರಕರಣಕ್ಕೆ ಸಂಬಂಧಿಸಿ, ತನಿಖೆಯುದ್ದಕ್ಕೂ ನನ್ನ ಬೆನ್ನಿಗೆ ನಿಂತ ಭಾರತೀಯ ಸೇನೆಗೆ ಧನ್ಯವಾದ ಹೇಳಲು ನಾನು ಬಯಸುತ್ತೇನೆ’ ಎಂದು ಸೇನೆಯ ಗುಪ್ತಚರ ವಿಭಾಗದ ಮಾಜಿ ಅಧಿಕಾರಿ, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ ಪ್ರತಿಕ್ರಿಯಿಸಿದರು.

‘ನನ್ನ ಪಾಲಿಗೆ ದೇಶವೇ ಸರ್ವಸ್ವ. ಸೇನೆ ಮತ್ತು ಆ ಮೂಲಕ ದೇಶ ಸೇವೆ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ನಿಮಗೆ ಧನ್ಯವಾದ ಹೇಳುವೆ. ನನ್ನ ಎಲ್ಲ ಸಹೋದ್ಯೋಗಿಗಳು ಹಾಗೂ ಗೆಳೆಯರಿಗೂ ಧನ್ಯವಾದ ಹೇಳುವೆ’ ಎಂದರು.

‘ಇಷ್ಟೆಲ್ಲಾ ನಡೆದಿರುವುದಕ್ಕೆ ಸಂಬಂಧಿಸಿ ನಾನು ಯಾವ ಸಂಘಟನೆಗಳನ್ನೂ ದೂಷಿಸಲು ಇಚ್ಛಿಸುವುದಿಲ್ಲ. ತನಿಖಾ ಸಂಸ್ಥೆಗಳ ತಪ್ಪು ಇಲ್ಲ. ಆದರೆ, ಸಂಸ್ಥೆಯಲ್ಲಿನ ಕೆಲ ವ್ಯಕ್ತಿಗಳು ತಪ್ಪು ಮಾಡಿದರು. ವ್ಯವಸ್ಥೆ ಕುರಿತಂತೆ ಸಾಮಾನ್ಯ ಜನರಿಗೆ ಇರುವ ನಂಬಿಕೆಯನ್ನು ಮರುಸ್ಥಾಪನೆ ಮಾಡಿದ್ದಕ್ಕಾಗಿ ನಿಮಗೆ ಧನ್ಯವಾದ ಹೇಳುತ್ತೇನೆ’ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ಭಾಗವತ್ ಹೆಸರಿಸುವಂತೆ ಒತ್ತಡ’

ಅದೊಂದು ಭಯಾನಕ ಅನುಭವ. ನಾನು ಕಸ್ಟಡಿಯಲ್ಲಿದ್ದಾಗ, ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮೋಹನ್ ಭಾಗವತ್ (ಈಗ ಆರ್ಎಸ್ಎಸ್ ಮುಖ್ಯಸ್ಥ), ಯೋಗಿ ಆದಿತ್ಯನಾಥ (ಸದ್ಯ ಉತ್ತರ ಪ್ರದೇಶ ಮುಖ್ಯಮಂತ್ರಿ) ಅವರನ್ನು ಹೆಸರಿಸುವಂತೆ ಒತ್ತಡ ಹಾಕಲಾಗುತ್ತಿತ್ತು. ಇದೊಂದು ಸಂಪೂರ್ಣ ರಾಜಕೀಯ ಪ್ರೇರಿತ ಪ್ರಕರಣ ಎಂದು ಸುಧಾಕರ್ ಚತುರ್ವೇದಿ ಹೇಳಿದ್ದಾರೆ.

ಈಗ ಖುಲಾಸೆಗೊಂಡಿದ್ದೇನೆ. ಆದರೆ, ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬಾಂಬೆ ಹೈಕೋರ್ಟ್, ನಂತರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವುದು ಖಾತ್ರಿ. ನಮ್ಮ ಹೋರಾಟ ಮುಂದುವರಿಯತ್ತದೆ ಎಂದಿದ್ದಾರೆ.

‘ಕೆಲ ವರ್ಷಗಳ ಹಿಂದೆಯಷ್ಟೆ ನಾನು ಸನ್ಯಾಸ ಸ್ವೀಕರಿಸಿದ್ದೇನೆ. ಈಗ ಏನು ಮಾಡಬೇಕು ಎಂದು ತೋಚುತ್ತಿಲ್ಲ. ಎಲ್ಲಿ ಹೋಗಬೇಕು ಎಂದು ತಿಳಿಯುತ್ತಿಲ್ಲ’ ಎಂದು ಹೇಳಿದ್ದಾರೆ.

‘ಖುಲಾಸೆಯ ವಿಶ್ವಾಸ ಇತ್ತು’

17 ವರ್ಷಗಳಿಂದ ನಾನು ಈ ದಿನಕ್ಕಾಗಿ ಕಾಯುತ್ತಿದ್ದೆ. ನನಗೆ ನ್ಯಾಯಾಂಗದಲ್ಲಿ ನಂಬಿಕೆ ಇದೆ. ನಾವು ನಿರಪರಾಧಿಗಳು ಎಂಬ ಸತ್ಯಸಂಗತಿಗೆ ನ್ಯಾಯಾಲಯ ಮುದ್ರೆ ಒತ್ತುತ್ತದೆ ಎಂಬ ವಿಶ್ವಾಸ ಇತ್ತು ಎಂದು ಸಮೀರ್ ಕುಲಕರ್ಣಿ ಹೇಳಿದ್ದಾರೆ.

ಪ್ರಕರಣ ನಡೆದು ಬಂದ ಹಾದಿ

2008, ಸೆ. 29: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೇಗಾಂವ್ನಲ್ಲಿ ದ್ವಿಚಕ್ರ ವಾಹನದಲ್ಲಿ ಅಳವಡಿಸಲಾಗಿದ್ದ ಬಾಂಬ್ ಸ್ಫೋಟ. ಘಟನೆಯಲ್ಲಿ ಆರು ಮಂದಿ ಸಾವು, 101 ಮಂದಿಗೆ ಗಾಯ

2008, ಸೆ. 30: ಮಾಲೇಗಾಂವ್ನ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು

2008, ಅ. 21: ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ಪಡೆ (ಎಟಿಎಸ್)

2008, ಅ.23: ಎಟಿಎಸ್ನಿಂದ ಪ್ರಜ್ಞಾಸಿಂಗ್ ಠಾಕೂರ್ ಮತ್ತು ಇತರ ಮೂವರ ಬಂಧನ. ಬಲಪಂಥೀಯ ತೀವ್ರವಾದಿಗಳು ಕೃತ್ಯ ಎಸಗಿರುವುದಾಗಿ ಎಟಿಎಸ್ ಪ್ರತಿಪಾದನೆ

2008, ನವೆಂಬರ್: ಪ್ರಕರಣ ಸಂಬಂಧ ಪಿತೂರಿ ನಡೆಸಿದ ಆರೋಪದ ಮೇಲೆ ಎಟಿಎಸ್ನಿಂದ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಬಂಧನ

2009, ಜ. 20: 11 ಬಂಧಿತ ಆರೋಪಿಗಳ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ ಎಟಿಎಸ್. ಮಹಾರಾಷ್ಟ್ರ ಸಂಘಟಿತ ಅಪರಾಧ ತಡೆ ಕಾಯ್ದೆ (ಮೋಕಾ), ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ), ಐಪಿಸಿಯ ಕಠಿಣ ನಿಯಮಗಳ ಅಡಿ ಪ್ರಕರಣ ದಾಖಲು. ರಾಮ್ಜಿ ಅಲಿಯಾಸ್ ರಾಮಚಂದ್ರ ಮತ್ತು ಸಂದೀಪ್ ಡಾಂಗೆ ಅವರನ್ನು ‘ಬೇಕಾಗಿರುವ ಆರೋಪಿಗಳು’ ಎಂದು ಹೆಸರಿಸಲಾಗಿತ್ತು

2009 ಜುಲೈ: ಪ್ರಕರಣವು ‘ಮೋಕಾ’ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದ ವಿಶೇಷ ನ್ಯಾಯಾಲಯ; ನಾಸಿಕ್ನ ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿಸುವಂತೆ ನಿರ್ದೇಶನ

2009 ಆಗಸ್ಟ್: ವಿಶೇಷ ನ್ಯಾಯಾಲಯದ ಆದೇಶವನ್ನು ಬಾಂಬೆ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಮಹಾರಾಷ್ಟ್ರ ಸರ್ಕಾರ

2010 ಜುಲೈ: ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಿ, ಪ್ರಕರಣವು ‘ಮೋಕಾ’ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಆದೇಶಿಸಿದ ಬಾಂಬೆ ಹೈಕೋರ್ಟ್

2010 ಆಗಸ್ಟ್: ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪ್ರಜ್ಞಾ ಸಿಂಗ್ ಮತ್ತು ಪುರೋಹಿತ್

2011 ಫೆ. 1: ಮುಂಬೈ ಎಟಿಎಸ್ನಿಂದ ಮತ್ತೊಬ್ಬ ಆರೋಪಿ ಪ್ರವೀಣ್ ಮುತಾಲಿಕ್ ಬಂಧನ. ಬಂಧಿತರ ಸಂಖ್ಯೆ 12ಕ್ಕೆ ಏರಿಕೆ

2011 ಏ 13: ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಪ್ರಕರಣದ ಹಸ್ತಾಂತರ

2012 ಫೆಬ್ರುವರಿ ಮತ್ತು ಡಿಸೆಂಬರ್: ಎನ್ಐಎಯಿಂದ ಆರೋಪಿಗಳಾದ ಲೋಕೇಶ್ ಶರ್ಮ ಮತ್ತು ಧನಸಿಂಗ್ ಚೌಧರಿ ಬಂಧನ. ಬಂಧಿತರ ಸಂಖ್ಯೆ 14ಕ್ಕೆ ಏರಿಕೆ

2015 ಏಪ್ರಿಲ್: ‘ಮೋಕಾ’ ಅನ್ವಯವಾಗುತ್ತದೆಯೇ ಎಂಬ ಬಗ್ಗೆ ಪುನರ್ಪರಿಶೀಲಿಸುವಂತೆ ಪ್ರಕರಣವನ್ನು ವಿಶೇಷ ನ್ಯಾಯಾಲಯಕ್ಕೆ ವಾಪಸ್ ಕಳುಹಿಸಿದ ಸುಪ್ರೀಂ ಕೋರ್ಟ್

2016 ಫೆಬ್ರುವರಿ: ಪ್ರಕರಣಕ್ಕೆ ‘ಮೋಕಾ’ ಅನ್ವಯಿಸುತ್ತದೆಯೇ ಎನ್ನುವ ಬಗ್ಗೆ ಅಟಾರ್ನಿ ಜನರಲ್ ಅವರ ಅಭಿಪ್ರಾಯ ಪಡೆಯಲಾಗಿದೆ ಎಂದು ಕೋರ್ಟ್ಗೆ ತಿಳಿಸಿದ ಎನ್ಐಎ

2016, ಮೇ 13: ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ ಎನ್ಐಎ. ‘ಮೋಕಾ’ದಿಂದ ಪ್ರಕರಣ ಹೊರಕ್ಕೆ; ಏಳು ಆರೋಪಿಗಳು ಆರೋಪಮುಕ್ತ

2017, ಏ. 25: ಬಾಂಬೆ ಹೈಕೋರ್ಟ್ನಿಂದ ಪ್ರಜ್ಞಾ ಸಿಂಗ್ ಅವರಿಗೆ ಜಾಮೀನು; ಪುರೋಹಿತ್ ಅವರಿಗೆ ಜಾಮೀನು ನಿರಾಕರಣೆ

2017, ಸೆ. 21: ಪುರೋಹಿತ್ ಅವರಿಗೆ ಸುಪ್ರೀಂ ಕೋರ್ಟ್ನಿಂದ ಜಾಮೀನು; ವರ್ಷಾಂತ್ಯದ ಹೊತ್ತಿಗೆ ಎಲ್ಲ ಆರೋಪಿಗಳಿಗೂ ಜಾಮೀನು

2017, ಡಿ. 27: ಶಿವನಾರಾಯಣ, ಶ್ಯಾಮ್ ಸಾಹು ಮತ್ತು ಪ್ರವೀಣ್ ಮುತಾಲಿಕ್ ನಾಯ್ಕ್ ಅವರನ್ನು ಪ್ರಕರಣದಿಂದ ಮುಕ್ತಗೊಳಿಸಿದ ಎನ್ಐಎ ವಿಶೇಷ ನ್ಯಾಯಾಲಯ. ಭಯೋತ್ಪಾದನಾ ಸಂಘಟನೆಗೆ ಸೇರಿದವರು ಎನ್ನುವ ಆರೋಪದಿಂದ ಮುಕ್ತಿ; ಯುಎಪಿಎ ಅಡಿ ದಾಖಲಾಗಿದ್ದ ಭಯೋತ್ಪಾದನಾ ಚಟುವಟಿಕೆಗಳಿಗಾಗಿ ಧನಸಂಗ್ರಹ ಆರೋಪದಿಂದಲೂ ಮುಕ್ತಿ

2018, ಅ. 30: ಪ್ರಜ್ಞಾ, ಪುರೋಹಿತ್, ರಮೇಶ್ ಉಪಾಧ್ಯಾಯ, ಸಮೀರ್ ಕುಲಕರ್ಣಿ, ಅಜಯ್ ರಾಹಿರ್ಕರ್, ಸುಧಾಕರ್ ದ್ವಿವೇದಿ ಮತ್ತು ಸುಧಾಕರ್ ಚತುರ್ವೇದಿ– ಈ ಏಳು ಆರೋಪಿಗಳ ವಿರುದ್ಧ ದೋಷಾರೋಪ ನಿಗದಿ

2018 ಡಿ. 3: ನ್ಯಾಯಾಲಯದಲ್ಲಿ ಪ್ರಕರಣದ ಮೊದಲ ಸಾಕ್ಷಿಯ ವಿಚಾರಣೆ ಆರಂಭ

2023, ಸೆ. 14: 323 ಪ್ರಾಸಿಕ್ಯೂಷನ್ ಸಾಕ್ಷಿಗಳ ವಿಚಾರಣೆಯೊಂದಿಗೆ (ಈ ಪೈಕಿ 37 ಸಾಕ್ಷಿಗಳು ಪ್ರತಿಕೂಲ ಸಾಕ್ಷಿಗಳಾಗಿ ಬದಲಾದರು) ಪ್ರಾಸಿಕ್ಯೂಷನ್ ವಾದ ಅಂತ್ಯ

2024, ಜುಲೈ 23: ಎಂಟು ಮಂದಿ ಆರೋಪಿಪರ ಸಾಕ್ಷಿಗಳ ವಿಚಾರಣೆ ಅಂತ್ಯ

2024, ಆ. 12: ವಿಶೇಷ ನ್ಯಾಯಾಲಯದಿಂದ ಆರೋಪಿಗಳ ಅಂತಿಮ ಹೇಳಿಕೆ ದಾಖಲು. ಪ್ರಾಸಿಕ್ಯೂಷನ್ ಮತ್ತು ಪ್ರತಿವಾದಿಗಳಿಂದ ಅಂತಿಮ ಹಂತದ ವಾದ ಮಂಡನೆ

2025, ಏ. 19: ವಿಚಾರಣೆ ಅಂತ್ಯಗೊಳಿಸಿದ ವಿಶೇಷ ನ್ಯಾಯಾಲಯ

2025, ಜುಲೈ 31: ‘ಸಮರ್ಪಕ ಹಾಗೂ ವಿಶ್ವಾಸಾರ್ಹ’ ಸಾಕ್ಷ್ಯಗಳಿಲ್ಲ ಎಂದು ಎಲ್ಲ ಏಳು ಆರೋಪಿಗಳನ್ನು ದೋಷಮುಕ್ತಗೊಳಿಸಿದ ಎನ್ಐಎ ವಿಶೇಷ ನ್ಯಾಯಲಯದ ನ್ಯಾಯಾಧೀಶ ಎ.ಕೆ.ಲಾಹೋಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.