ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ಗಣರಾಜ್ಯೋತ್ಸವ ಮೆರವಣಿಗೆಯ ಸ್ತಬ್ಧಚಿತ್ರಗಳ ಆಯ್ಕೆಯ ಸುತ್ತ..
ಆಳ–ಅಗಲ: ಗಣರಾಜ್ಯೋತ್ಸವ ಮೆರವಣಿಗೆಯ ಸ್ತಬ್ಧಚಿತ್ರಗಳ ಆಯ್ಕೆಯ ಸುತ್ತ..
ಗಣರಾಜ್ಯೋತ್ಸವದಂದು ವಿವಿಧ ರಾಜ್ಯಗಳ ಸ್ತಬ್ಧಚಿತ್ರ ಪ್ರದರ್ಶನವು ನಡೆಯುತ್ತದೆ.
Published 10 ಜನವರಿ 2024, 20:36 IST
Last Updated 10 ಜನವರಿ 2024, 20:36 IST
ಅಕ್ಷರ ಗಾತ್ರ

ಗಣರಾಜ್ಯೋತ್ಸವದಂದು ವಿವಿಧ ರಾಜ್ಯಗಳ ಸ್ತಬ್ಧಚಿತ್ರ ಪ್ರದರ್ಶನವು ನಡೆಯುತ್ತದೆ. ಸಾವಿರಾರು ಜನರ ಎದುರು ರಾಜ್ಯವೊಂದು ಸ್ತಬ್ಧಚಿತ್ರದ ಮೂಲಕ ತನ್ನ ಸಂಸ್ಕೃತಿ, ಇತಿಹಾಸ, ಕಲೆಗಳನ್ನು ಪರಿಚಯಿಸುತ್ತದೆ. ರಾಜ್ಯವೊಂದಕ್ಕೆ ಇದೊಂದು ಅಸ್ಮಿತೆಯೂ ಹೌದು. ಮೆರವಣಿಗೆಯಲ್ಲಿ ಭಾಗವಹಿಸುವುದು ರಾಜ್ಯವೊಂದಕ್ಕೆ ಗೌರವವೂ ಹೌದು.

ಆದರೆ, ಈಗ ಕೆಲವು ವರ್ಷಗಳಿಂದ ಕೆಲವು ರಾಜ್ಯಗಳಿಗೆ ಮೆರವಣಿಗೆಯಲ್ಲಿ ಭಾಗವಹಿಸುವುದಕ್ಕೆ ಅವಕಾಶ ಸಿಕ್ಕಿಲ್ಲ. ‘ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಿಗೇ ಅವಕಾಶ ನಿರಾಕರಿಸಲಾಗುತ್ತಿದೆ. ಅವಕಾಶ ನೀಡುವುದರಲ್ಲಿಯೂ ರಾಜಕೀಯ ಮಾಡಲಾಗುತ್ತಿದೆ’ ಎನ್ನುವುದು ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳ ಗಂಭೀರ ಆರೋಪ. 2024ರಲ್ಲಿಯೂ ಗಣರಾಜ್ಯೋತ್ಸವ ಮೆರವಣಿಗೆ ಅವಕಾಶ ನೀಡುವ ಸಂಬಂಧ ವಿವಾದ ಭುಗಿಲೆದ್ದಿದೆ.

ಬಿಜೆಪಿತೇಯರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳ ಆರೋಪಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ನಿರಾಕರಿಸುತ್ತಲೇ ಬಂದಿದೆ. ಮೆರವಣಿಗೆಯಲ್ಲಿ ಯಾವ ರಾಜ್ಯದ ಸ್ತಬ್ಧಚಿತ್ರ ಭಾಗವಹಿಸಬೇಕು ಅಥವಾ ಭಾಗವಹಿಸಬಾರದು ಎಂಬುದನ್ನು ಸರ್ಕಾರದ ಯಾವುದೇ ಇಲಾಖೆ ಅಥವಾ ಸಚಿವಾಲಯವು ನಿರ್ಧರಿಸುವುದಿಲ್ಲ. ಬದಲಿಗೆ, ತಜ್ಞರ ಸಮಿತಿಯೊಂದು ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ ಎನ್ನುತ್ತದೆ ಕೇಂದ್ರ ಸರ್ಕಾರ.

2023ರ ಡಿಸೆಂಬರ್‌ ಅಂತ್ಯದ ಹೊತ್ತಿಗೆ ವಿವಾದವು ಆರಂಭಗೊಂಡಿತು. ಒಂದಾದ ಮೇಲೊಂದು ರಾಜ್ಯದ ಸ್ತಬ್ಧಚಿತ್ರಗಳಿಗೆ ಅವಕಾಶ ನಿರಾಕರಿಸಿರುವುದು ಸಾರ್ವಜನಿಕವಾಗುತ್ತಾ ಬಂತು. ದೆಹಲಿ, ಪಂಜಾಬ್‌, ಪಶ್ಚಿಮ ಬಂಗಾಳದ ಸ್ತಬ್ಧಚಿತ್ರಗಳಿಗೆ ಮೆರವಣಿಗೆಯಲ್ಲಿ ಭಾಗವಹಿಸಲು ಅವಕಾಶವನ್ನು ನಿರಾಕರಿಸಲಾಗಿದೆ. ಈಗ ಈ ಪಟ್ಟಿಗೆ ಕರ್ನಾಟಕವು ಸೇರಿದೆ. ಈ ರಾಜ್ಯಗಳಲ್ಲೇ ವಿವಾದ ಸೃಷ್ಟಿಯಾಗಿದೆ.

ತಜ್ಞರ ಸಮಿತಿ ಮೇಲ್ವಿಚಾರಣೆಯಲ್ಲಿ ಹಲವು ಹಂತಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಪ್ರತೀ ಹಂತದಲ್ಲೂ ಕೆಲವು ರಾಜ್ಯಗಳ ಸ್ತಬ್ಧಚಿತ್ರವು ಪ್ರಕ್ರಿಯೆಯಿಂದ ಹೊರಗುಳಿಯುತ್ತದೆ. ಹೀಗೆ ಯಾವ ರಾಜ್ಯದ ಸ್ತಬ್ಧಚಿತ್ರವು ಆಯ್ಕೆ ಪ್ರಕ್ರಿಯೆಯಿಂದ ಹೊರಗುಳಿಯಿತು ಎಂದು ಕೇಂದ್ರ ಸರ್ಕಾರವು ಸಂಬಂಧಿಸಿದ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಬೇಕಿಲ್ಲ ಎನ್ನುವುದು ನಿಯಮ. ಇದೇ ಪ್ರಥಮ ಬಾರಿಗೆ, ಆಯ್ಕೆ ಪ್ರಕ್ರಿಯೆಯಿಂದ ಹೊರಬಿದ್ದ ಅಥವಾ ಆಯ್ಕೆಯಾಗದೆ ಉಳಿದ ರಾಜ್ಯಗಳ ಸ್ತಬ್ಧಚಿತ್ರಗಳನ್ನು ಕೆಂಪು ಕೋಟೆಯ ಭಾರತ ಪರ್ವದಲ್ಲಿ ಜನವರಿ 23–31ರವರೆಗೆ ಪ್ರದರ್ಶನಕ್ಕೆ ಇಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ. ಈ ಪ್ರದರ್ಶನದಲ್ಲಿ ಭಾಗವಹಿಸುವಂತೆ ಆಯ್ಕೆ ಪ್ರಕ್ರಿಯೆಯಿಂದ ಹೊರಬಿದ್ದ ರಾಜ್ಯದ ಸರ್ಕಾರಗಳಿಗೆ ಕೇಂದ್ರ ಸರ್ಕಾರವು ಮಾಹಿತಿ ನೀಡಿದೆ.

ಈ ಕಾರಣಕ್ಕಾಗಿ ಪಂಜಾಬ್‌, ಪಶ್ಚಿಮ ಬಂಗಾಳ, ದೆಹಲಿಗೆ ತಮ್ಮ ಸ್ತಬ್ಧಚಿತ್ರವು ಆಯ್ಕೆ ಪ್ರಕ್ರಿಯೆಯಿಂದ ಹೊರಗುಳಿದ ಮಾಹಿತಿ ಸಿಕ್ಕಿದೆ. ನಂತರದಲ್ಲಿ, ಈ ಬಗ್ಗೆ ಪಂಜಾಬ್‌, ದೆಹಲಿ ಸರ್ಕಾರವು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದವು. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಎಕ್ಸ್‌’ನಲ್ಲಿ ರಾಜ್ಯದ ಸ್ತಬ್ಧಚಿತ್ರವು ಆಯ್ಕೆ ಪ್ರಕ್ರಿಯೆಯಿಂದ ಹೊರಬಿದ್ದಿದೆ ಎಂದು ಮಾಹಿತಿ ಹಂಚಿಕೊಂಡಿದ್ದರು.

ಕೇಂದ್ರ ಹೇಳುವುದೇನು?

ಕೇಂದ್ರಾಡಳಿತ ಪ್ರದೇಶಗಳು ಹಾಗೂ 30 ರಾಜ್ಯಗಳು ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸುವುದಾಗಿ ಕೇಂದ್ರ ಸರ್ಕಾರಕ್ಕೆ ತಿಳಿಸಿವೆ. ‘ಈ ಪೈಕಿ ಕೇಂದ್ರಾಡಳಿತ ಪ್ರದೇಶಗಳು ಹಾಗೂ 16 ರಾಜ್ಯಗಳ ಸ್ತಬ್ಧಚಿತ್ರಗಳು ಮಾತ್ರವೇ ಮೆರವಣಿಗೆಯಲ್ಲಿ ಭಾಗವಹಿಸಲು ಆಯ್ಕೆಯಾಗಿವೆ’ ಎಂದು ಕೇಂದ್ರ ರಕ್ಷಣಾ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ. 

ಪ್ರತೀ ಬಾರಿಯು ಸ್ತಬ್ಧಚಿತ್ರದ ಮೆರವಣಿಗೆ ಥೀಮ್‌ ಅನ್ನು ಆಯ್ಕೆ ಮಾಡಲಾಗುತ್ತದೆ. ‘ಪ್ರಜಾಪ್ರಭುತ್ವದ ತಾಯಿ’ ಈ ಬಾರಿಯ ಥೀಮ್‌. ಪಂಜಾಬ್‌ ಹಾಗೂ ಪಶ್ಚಿಮ ಬಂಗಾಳದ ಸ್ತಬ್ಧಚಿತ್ರಗಳು ಥೀಮ್‌ಗೆ ಅನುಗುಣವಾಗಿಲ್ಲ ಎಂದು ರಕ್ಷಣಾ ಸಚಿವಾಲಯವು ತಿಳಿಸಿದೆ. ದೆಹಲಿಯ ಸ್ತಬ್ಧಚಿತ್ರಕ್ಕೆ ಯಾಕಾಗಿ ಅವಕಾಶ ನಿರಾಕರಿಸಲಾಗಿದೆ ಎಂಬುದು ತಿಳಿದುಬಂದಿಲ್ಲ.

‘ಎಲ್ಲ ರಾಜ್ಯಗಳಿಗೂ ಸಮಾನ ಅವಕಾಶ ನೀಡಬೇಕು. ಒಂದು ನಿಯಮಾನುಸಾರವಾಗಿ ಎಲ್ಲರಿಗೂ ಮೆರವಣಿಗೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕಾಗುತ್ತದೆ. ಅದಕ್ಕಾಗಿ ‘ಮೂರು ವರ್ಷ ಯೋಜನೆ’ ಎಂಬ ಕಾರ್ಯಕ್ರಮವನ್ನು ಜಾರಿಗೆ ತರುವ ಬಗ್ಗೆ ಸರ್ಕಾರವು ಚಿಂತನೆ ನಡೆಸಿದೆ. ಈ ಕುರಿತು ಸದ್ಯದಲ್ಲಿಯೇ ಮಾಹಿತಿಯನ್ನು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಜೊತೆಯೂ ಹಂಚಿಕೊಳ್ಳಲಾಗುವುದು’ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಕಲಾವಿದರೆಷ್ಟು?

ಸ್ತಬ್ಧಚಿತ್ರಗಳನ್ನು ಹೊತ್ತ ವಾಹನದ ಮೇಲೆ ಇರುವ ಕಲಾವಿದರ ಸಂಖ್ಯೆಗೆ ಈ ಮೊದಲು 10ರ ಮಿತಿ ಇತ್ತು. ಆದರೆ, ವಾಹನದ ಜೊತೆಗೆ ನಡಿಗೆಯಲ್ಲಿ ಇರಬಹುದಾದ ಕಲಾವಿದರ ಸಂಖ್ಯೆಗೆ 25ರ ಮಿತಿ ಇತ್ತು. ಅಂದರೆ ಒಟ್ಟು ಕಲಾವಿದರ ಸಂಖ್ಯೆ 35ರವರೆಗೆ ಇರಲು ಅವಕಾಶವಿತ್ತು. ಸ್ತಬ್ಧಚಿತ್ರದೊಂದಿಗೆ ಜಾನಪದ ನೃತ್ಯವನ್ನು ಪ್ರದರ್ಶಿಸುವಂತಿದ್ದರೆ ಮಾತ್ರ, ವಾಹನದ ಜೊತೆಗೆ ನಡಿಗೆಯಲ್ಲಿ ಕಲಾವಿದರು ಇರಲು ಅವಕಾಶವಿತ್ತು. ಈ ಬಾರಿಯ ಸ್ತಬ್ಧಚಿತ್ರ ನಿಯಮಗಳಲ್ಲಿ ಈ ನಿಯಮಗಳಿಗೆ ತುಸು ಬದಲಾವಣೆ ತರಲಾಗಿದೆ.

ಸ್ತಬ್ಧಚಿತ್ರಗಳನ್ನು ಹೊತ್ತ ವಾಹನದ ಮೇಲೆ ಗರಿಷ್ಠ 12 ಕಲಾವಿದರು ಇರಬಹುದು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ. ಇನ್ನು ಸ್ತಬ್ಧಚಿತ್ರದೊಂದಿಗೆ ಜಾನಪದ ನೃತ್ಯವನ್ನು ಪ್ರದರ್ಶಿಸುವಂತಿದ್ದರೆ ಕಲಾವಿದರನ್ನು ಬಳಸಿಕೊಳ್ಳಬಹುದು ಎಂದು ಹೇಳಲಾಗಿದೆ. ಆದರೆ ಎಷ್ಟು ಕಲಾವಿದರನ್ನು ಹಾಗೆ ಬಳಸಿಕೊಳ್ಳಬಹುದು ಎಂಬುದನ್ನು ಸ್ಪಷ್ಟವಾಗಿ ವಿವರಿಸಿಲ್ಲ. ಒಟ್ಟು ಕಲಾವಿದರ ಸಂಖ್ಯೆ 12 ಇರಬೇಕೇ ಅಥವಾ ಹೆಚ್ಚುವರಿಯಾಗಿ 25 ಕಲಾವಿದರನ್ನು ಬಳಸಿಕೊಳ್ಳಬಹುದೇ ಎಂಬುದನ್ನು ಸುತ್ತೋಲೆ ಸ್ಪಷ್ಟವಾಗಿ ವಿವರಿಸುವುದಿಲ್ಲ.

ಎಲ್‌ಇಡಿ, 4ಕೆ ಪರದೆ: ಈ ಬಾರಿ ಸ್ತಬ್ಧಚಿತ್ರಗಳಲ್ಲಿ ಎಲ್‌ಇಡಿ ಬೆಳಕಿನ ವ್ಯವಸ್ಥೆ, ರೊಬೊಟಿಕ್ಸ್‌ ಉಪಕರಣಗಳು ಮತ್ತು 4ಕೆ ಪರದೆಗಳನ್ನು ಬಳಸಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಜತೆಗೆ ಸ್ತಬ್ಧಚಿತ್ರಗಳಲ್ಲಿ ನೆರಳನ್ನು ತೋರಿಸಲು ಎಲ್‌ಇಡಿ ದೀಪಗಳನ್ನು ಬಳಸಬೇಕು ಎಂದೂ ಹೇಳಲಾಗಿದೆ.

ಮೆರವಣಿಗೆಯಲ್ಲಿ ಹೋಗುವ ಸ್ತಬ್ಧಚಿತ್ರಗಳೆಷ್ಟು?

ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಎಷ್ಟು ಸ್ತಬ್ಧಚಿತ್ರಗಳು ಇರಬೇಕು ಎಂಬುದಕ್ಕೆ ಸಾಂಖ್ಯಿಕ ಮಿತಿ ಇಲ್ಲ. ಕನಿಷ್ಠ ಇಷ್ಟೇ ಸ್ತಬ್ಧಚಿತ್ರಗಳಿರಬೇಕು ಅಥವಾ ಗರಿಷ್ಠ ಇಷ್ಟೇ ಸ್ತಬ್ಧಚಿತ್ರಗಳಿರಬೇಕು ಎಂಬುದನ್ನು ಎಲ್ಲಿಯೂ ವಿವರಿಸಿಲ್ಲ. ಅಲ್ಲದೆ, ಈಚಿನ ವರ್ಷಗಳಲ್ಲಿ ಪ್ರತಿ ಮೆರವಣಿಗೆಯಲ್ಲೂ ಭಾಗವಹಿಸಿದ ಸ್ತಬ್ಧಚಿತ್ರಗಳ ಸಂಖ್ಯೆಯಲ್ಲಿ ಏಕರೂಪತೆ ಇಲ್ಲ. ಬದಲಿಗೆ ಪ್ರತಿವರ್ಷ ಅವುಗಳ ಸಂಖ್ಯೆ ಬದಲಾಗಿದೆ.

2016ರ ಮೆರವಣಿಗೆಯಲ್ಲಿ ವಿವಿಧ ರಾಜ್ಯಗಳ 17 ಮತ್ತು ಕೇಂದ್ರದ ವಿವಿಧ ಸಚಿವಾಲಯಗಳ 6 ಸೇರಿ ಒಟ್ಟು 23 ಸ್ತಬ್ಧಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. 2018ರಲ್ಲಿ 21, 2020ರಲ್ಲಿ 22 ಮತ್ತು 2023ರಲ್ಲಿ 23 ಸ್ತಬ್ಧಚಿತ್ರಗಳನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಲಾಗಿತ್ತು.

ಪ್ರತಿವರ್ಷ ಕೇಂದ್ರ ಸರ್ಕಾರದ ಆರು ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಇದ್ದೇ ಇರುತ್ತವೆ. ರಾಜ್ಯಗಳ ಸ್ತಬ್ಧಚಿತ್ರಗಳ ಸಂಖ್ಯೆ ಹೆಚ್ಚು–ಕಡಿಮೆ ಆಗುತ್ತದೆಯೇ ಹೊರತು, ಕೇಂದ್ರ ಸರ್ಕಾರದ್ದು ಕಡಿಮೆಯಾಗುವುದಿಲ್ಲ. ಬದಲಿಗೆ ಕೆಲವು ವರ್ಷಗಳಲ್ಲಿ ಏರಿಕೆಯಾಗಿದೆ. 2018ರಲ್ಲಿ ರಕ್ಷಣಾ ಸಚಿವಾಲಯವು ಕೇಂದ್ರ ಸರ್ಕಾರದ ವಿವಿಧ ಇಲಾಖೆ ಮತ್ತು ಸಂಸ್ಥೆಗಳ ಒಟ್ಟು ಒಂಬತ್ತು ಸ್ತಬ್ಧಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡಿತ್ತು. ಆ ವರ್ಷ 12 ರಾಜ್ಯಗಳಿಗಷ್ಟೇ ಪ್ರದರ್ಶನದ ಅವಕಾಶ ದೊರೆತಿತ್ತು.

ಕೇಂದ್ರ ಸರ್ಕಾರವು ತನಗೆ ಬೇಕಾದಷ್ಟು, ತನ್ನದೇ ಸ್ತಬ್ಧಚಿತ್ರಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಳ್ಳುತ್ತದೆ. ಆದರೆ ರಾಜ್ಯಗಳಿಗೆ ಅಂತಹ ಅವಕಾಶವಿಲ್ಲ. ಎಲ್ಲಾ ರಾಜ್ಯಗಳ ಸ್ತಬ್ಧಚಿತ್ರಗಳನ್ನು ಮೆರವಣಿಗೆಗೆ ಆಯ್ಕೆ ಮಾಡಲು ಇರುವ ಅಡ್ಡಿ ಏನು ಎಂದು ಪಂಜಾಬ್‌ ಎಎಪಿ ಘಟಕ ಪ್ರಶ್ನಿಸಿತ್ತು.

8–10 ತಿಂಗಳ ಮುನ್ನವೇ ಆಯ್ಕೆ ಪ್ರಕ್ರಿಯೆ ಆರಂಭ

ಸ್ತಬ್ಧಚಿತ್ರಗಳ ಆಯ್ಕೆ ಪ್ರಕ್ರಿಯೆಯು 8–10 ತಿಂಗಳ ಮುನ್ನವೇ ಆರಂಭವಾಗುತ್ತದೆ. ಈ ಸಂಬಂಧ ರಕ್ಷಣಾ ಸಚಿವಾಲಯವು ಮೊದಲಿಗೆ ಸುತ್ತೋಲೆ ಹೊರಡಿಸುತ್ತದೆ. ಸುತ್ತೋಲೆಯು ಆ ವರ್ಷದ ಸ್ತಬ್ಧಚಿತ್ರಗಳ ವಿಷಯ, ತಾಂತ್ರಿಕ ಅವಕಾಶಗಳು ಮತ್ತು ಆಯ್ಕೆ ಪ್ರಕ್ರಿಯೆಯ ವಿವರಗಳನ್ನು ಒಳಗೊಂಡಿರುತ್ತದೆ. ಇದಕ್ಕಾಗಿ ಸಚಿವಾಲಯವು ತಜ್ಞರ ಸಮಿತಿಯೊಂದನ್ನು ರಚಿಸಿರುತ್ತದೆ.

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ತಾವು ರಚಿಸಲಿರುವ ಸ್ತಬ್ಧಚಿತ್ರಗಳ ವಿವರಗಳನ್ನು ಒಳಗೊಂಡ ಪ್ರಸ್ತಾವಗಳನ್ನು ಸಮಿತಿಗೆ ಕಳುಹಿಸಬೇಕು. ಸಮಿತಿಯು ಒಟ್ಟು 6–7 ಹಂತಗಳಲ್ಲಿ ಸ್ತಬ್ಧಚಿತ್ರಗಳ ಪ್ರಸ್ತಾವಗಳನ್ನು ಪರಿಶೀಲಿಸುತ್ತದೆ. ಲಿಖಿತ ಹಂತ, ಚಿತ್ರದ ಹಂತ, ಮಾದರಿ ಹಂತ, ನೈಜ ಮಾದರಿ ಹಂತ... ಹೀಗೆ ಬೇರೆ–ಬೇರೆ ಸ್ವರೂಪದಲ್ಲಿ ಸ್ತಬ್ಧಚಿತ್ರಗಳನ್ನು ಪರಿಶೀಲಿಸಲಾಗುತ್ತದೆ. ಯಾವುದೇ ಹಂತದಲ್ಲೂ ತಜ್ಞರ ಸಮಿತಿಯು ಪ್ರಸ್ತಾವಗಳನ್ನು ತಿರಸ್ಕರಿಸಬಹುದು ಅಥವಾ ಬದಲಾವಣೆಗಳನ್ನು ಸೂಚಿಸಬಹುದು. ಅಂತಿಮ ಪಟ್ಟಿಯಲ್ಲಿ ಉಳಿದ ಸ್ತಬ್ಧಚಿತ್ರಗಳಿಗಷ್ಟೇ, ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತದೆ.

ಸ್ತಬ್ಧಚಿತ್ರ ತಿರಸ್ಕಾರಕ್ಕೆ ಕಾರಣಗಳು?

l ಸ್ತಬ್ಧಚಿತ್ರಗಳ ಸೌಂದರ್ಯಮಟ್ಟ ಮತ್ತು ಅದು ಆಕರ್ಷಕವಾಗಿಲ್ಲದೇ ಇದ್ದರೆ

l ಸ್ತಬ್ಧಚಿತ್ರಗಳ ವಿಷಯ: ರಕ್ಷಣಾ ಸಚಿವಾಲಯವು ನಿಗದಿ ಮಾಡಿದ ವಿಷಯಕ್ಕೆ ಪೂರಕವಾಗಿಲ್ಲದೇ ಇದ್ದರೆ ಮತ್ತು ರಾಜ್ಯಗಳು ಸಲ್ಲಿಸಿದ್ದ ಪ್ರಸ್ತಾವದಲ್ಲಿದ್ದ ವಿವರಕ್ಕೆ ಪೂರಕವಾಗಿ ಇಲ್ಲದೇ ಇದ್ದರೆ

l ಸ್ತಬ್ಧಚಿತ್ರದೊಂದಿಗೆ ಬಳಸಿದ ಸಂಗೀತವು ಹೊಂದಿಕೆಯಾಗದೇ ಇದ್ದರೆ

l ಸ್ತಬ್ಧಚಿತ್ರದೊಂದಿಗೆ ಬಳಸಿಕೊಳ್ಳಲಾದ ಕಲಾವಿದರು ಅದೇ ರಾಜ್ಯದವರು ಆಗಿಲ್ಲದೇ ಇದ್ದರೆ

l ಅಳತೆ ಮತ್ತು ತಾಂತ್ರಿಕ ಮಿತಿಗೆ ಅನುಗುಣವಾಗಿ ಇಲ್ಲದೇ ಇದ್ದರೆ

l ವಿಶೇಷ ಸೂಚನೆಗಳನ್ನು ಪಾಲಿಸದೇ ಇದ್ದರೆ (ಈ ಬಾರಿ ಎಲ್‌ಇಡಿ ದೀಪಗಳು, 4ಕೆ ಪರದೆಗಳು ಮತ್ತು ರೊಬೊಟಿಕ್ಸ್‌ ಉಪಕರಣಗಳನ್ನು ಬಳಸಬೇಕು ಎಂದು ವಿಶೇಷ ಸೂಚನೆ ನೀಡಲಾಗಿತ್ತು)

l ಇವು ಮಾತ್ರವಲ್ಲದೆ ಬೇರೆ ಅಂಶಗಳೂ ಆಯ್ಕೆಯ ವೇಳೆ ಅನ್ವಯವಾಗುತ್ತದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಆದರೆ ಆ ಅಂಶಗಳು ಯಾವುವು ಎಂಬುದನ್ನು ವಿವರಿಸಿಲ್ಲ

––––––

ಆಧಾರ: ಗಣರಾಜ್ಯೋತ್ಸವ ಸ್ತಬ್ಧಚಿತ್ರ ಮಾರ್ಗಸೂಚಿ, ಪಿಟಿಐ

********

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT