ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ಆಳ–ಅಗಲ: ಬ್ರೂನೈ ಸುಲ್ತಾನ.. ವಿಲಾಸಿ ಜೀವನ..!
ಆಳ–ಅಗಲ: ಬ್ರೂನೈ ಸುಲ್ತಾನ.. ವಿಲಾಸಿ ಜೀವನ..!
ಅವರ ಅಷ್ಟೈಶ್ವರ್ಯದ ಬಗ್ಗೆ, ಅವರ ವೈಭೋಗದ ಬಗ್ಗೆ ತಿಳಿಯುತ್ತಾ ಹೋದಂತೆ ಅದು ದಂತಕತೆಯಂತೆ ಭಾಸವಾಗುತ್ತದೆ
ಫಾಲೋ ಮಾಡಿ
Published 5 ಸೆಪ್ಟೆಂಬರ್ 2024, 19:14 IST
Last Updated 5 ಸೆಪ್ಟೆಂಬರ್ 2024, 19:14 IST
Comments

ಅವರು ಒಂದು ಪುಟ್ಟ ರಾಜ್ಯದ ದೊರೆ. ಆದರೆ, ಅವರ ಕೀರ್ತಿ ದೊಡ್ಡದು. ಆ ಕೀರ್ತಿಗೆ ಕಾರಣ ಆ ರಾಜನ ಬಳಿ ಇರುವ ಸಂಪತ್ತು ಮತ್ತು ಅವರ ಐಷಾರಾಮಿ ಜೀವನ ಶೈಲಿ. ಗಿನ್ನಿಸ್ ದಾಖಲೆ ಸೇರಿರುವ ಅವರ ಅರಮನೆ, ಅವರ ಬಳಿ ಇರುವ ಕಾರುಗಳು, ಅವರು ಕಟ್ಟಿಸಿರುವ ಮಸೀದಿ ಎಲ್ಲವೂ ಆ ಸುಲ್ತಾನನ ಸಿರಿವಂತಿಕೆಯ ಪ್ರತೀಕಗಳಂತಿವೆ. ಅವರ ಹೆಸರು ಹಸನಲ್ ಬೊಲ್ಕಿಯಾ. ಅವರ ಅಷ್ಟೈಶ್ವರ್ಯದ ಬಗ್ಗೆ, ಅವರ ವೈಭೋಗದ ಬಗ್ಗೆ ತಿಳಿಯುತ್ತಾ ಹೋದಂತೆ ಅದು ದಂತಕತೆಯಂತೆ ಭಾಸವಾಗುತ್ತದೆ.

––––––––––––––––––

ಜಗತ್ತಿನ ಭೂಪಟದಲ್ಲಿರುವ ಪುಟ್ಟ ದೇಶ ಬ್ರೂನೈ. ರಾಜಮನೆತನದ ಆಡಳಿತಕ್ಕೆ ಒಳಪಟ್ಟ ಆಗ್ನೇಯ ಏಷ್ಯಾದಲ್ಲಿರುವ ಈ ರಾಷ್ಟ್ರಕ್ಕೆ ಎರಡು ದಿನಗಳ ಹಿಂದೆಯಷ್ಟೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ವಾಪಸ್‌ ಆಗಿದ್ದಾರೆ. ನಮ್ಮ ಕೆಲವು ತಾಲ್ಲೂಕು ಕೇಂದ್ರಗಳಿಗಿಂತಲೂ ಪುಟ್ಟದಾದ ಈ ದೇಶದ ದೊರೆ, ಸುಲ್ತಾನ್‌ ಹಸನಲ್ ಬೊಲ್ಕಿಯಾ. ವಿಲಾಸಿ ಜೀವನ ಶೈಲಿಯಿಂದಾಗಿ ಸದಾ ಸುದ್ದಿಯಲ್ಲಿರುವ ಈ ಸುಲ್ತಾನ, ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಯಾವಾಗಲೂ ಕಾಣಿಸಿಕೊಳ್ಳುತ್ತಾರೆ. ಅವರ ಆಸ್ತಿಯ ಮೌಲ್ಯ ಅಂದಾಜು ₹2.35 ಲಕ್ಷ ಕೋಟಿ (2,800 ಕೋಟಿ ಡಾಲರ್‌)! 

ಅವರ ಸಂಪತ್ತಿಗೆ ತಕ್ಕಂತೆ ಅವರ ಅರಮನೆ ಕೂಡ ದೊಡ್ಡದೇ. ಬ್ರೂನೈನ ರಾಜಧಾನಿಯಾದ ಬಂದಾರ್ ಸೆರಿ ಬೆಗವಾನ್‌ನಲ್ಲಿರುವ ಇಸ್ತಾನಾ ನೂರುಲ್ ಇಮಾನ್ ಜಗತ್ತಿನ ಅತಿ ದೊಡ್ಡ ಅರಮನೆ ಎಂದು ಹೆಸರಾಗಿದ್ದು, ಗಿನ್ನಿಸ್ ದಾಖಲೆಗೆ ಕೂಡ ‍ಪಾತ್ರವಾಗಿದೆ. ಅರಮನೆಯ ಮೇಲೆ ಹೊಂಬಣ್ಣ ಸೂಸುವ, 24 ಕ್ಯಾರೆಟ್‌ ಬಂಗಾರದ ಗುಮ್ಮಟವು ಅದರ ವೈಭವಕ್ಕೆ ಸಾಕ್ಷಿ.   

ಚಿನ್ನದ ಬಗ್ಗೆ ಅವರಿಗೆ ಇನ್ನಿಲ್ಲದ ಮೋಹ. ಅವರ ಅರಮನೆಯ ಪೀಠೋಪಕರಣಗಳು ಚಿನ್ನದ ಲೇಪನ ಹೊಂದಿವೆ. ನಗರದಲ್ಲಿರುವ ಮಸೀದಿಯ ಗುಮ್ಮಟಕ್ಕೂ ಚಿನ್ನದ ಲೇಪನ ಮಾಡಲಾಗಿದೆ. 30 ಬಂಗಾಳದ ಹುಲಿಗಳು ಮತ್ತು ಇತರ ಪಕ್ಷಿ ಪ್ರಭೇದಗಳಿರುವ ಖಾಸಗಿ ಪ್ರಾಣಿ ಸಂಗ್ರಹಾಲಯವೂ ಇಲ್ಲಿದೆ. 7000 ಕ್ಕೂ ಹೆಚ್ಚು ಕಾರುಗಳು, ದುಬಾರಿ ವಿಮಾನಗಳ ಒಡೆಯರಾಗಿರುವ ಅವರು, ಪೈಲಟ್ ಲೈಸೆನ್ಸ್ ಕೂಡ ಹೊಂದಿದ್ದಾರೆ. ಕ್ಷೌರ ಮಾಡಿಸುವುದಕ್ಕಾಗಿ ಪ್ರತಿ ಬಾರಿ ಸ್ವಂತ ವಿಮಾನದಲ್ಲಿ ಲಂಡನ್‌ಗೆ ತೆರಳುವ ಅವರು ಕೇಶ ವಿನ್ಯಾಸಕಾರನಿಗೆ ₹16.80 ಲಕ್ಷ ಪಾವತಿಸುತ್ತಾರಂತೆ!

ಹಸನಲ್ ಬೊಲ್ಕಿಯಾ ಬ್ರೂನೈನ 29ನೇ ಸುಲ್ತಾನರಾಗಿ 1968ರ ಆಗಸ್ಟ್ 1ರಂದು ಪಟ್ಟವೇರಿದರು. ಬ್ರಿಟನ್‌ ರಾಣಿ ಎಲಿಜಬೆತ್ –2 ಅವರ ನಂತರ ಅತಿ ದೀರ್ಘ ಕಾಲ ಅಧಿಕಾರದಲ್ಲಿರುವ ದೊರೆ ಎಂಬ ಖ್ಯಾತಿ ಗಳಿಸಿದ್ದಾರೆ. 600 ವರ್ಷಗಳಿಂದಲೂ ಇವರ ವಂಶಜರೇ ದೇಶವನ್ನು ಆಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

19ನೇ ಶತಮಾನದಲ್ಲಿ ಬ್ರಿಟಿಷರ ಅಧಿಪತ್ಯಕ್ಕೆ ಒಳಪಟ್ಟಿದ್ದ ದೇಶವು 1984ರಲ್ಲಿ ಸ್ವಾತಂತ್ರ್ಯ ಪಡೆಯಿತು. ಬ್ರಿಟಿಷರ ನಿರ್ಗಮನದ ನಂತರ ಹಸನಲ್ ಬೊಲ್ಕಿಯಾ ಅವರು ದೇಶವನ್ನು ವ್ಯಾಪಕವಾಗಿ ಸುತ್ತಿ ಜನರನ್ನು ತಮ್ಮತ್ತ ಸೆಳೆದುಕೊಳ್ಳುವ ಮೂಲಕ ತಮ್ಮ ಅಧಿಕಾರ ಸ್ಥಾಪಿಸಿದ್ದರು. 

ಸಿರಿವಂತಿಗೆಗೆ ಏನು ಕಾರಣ?

ರಾಜನಷ್ಟೇ ಅಲ್ಲ, ಈ ಪುಟ್ಟ ದೇಶದ ಪ್ರಜೆಗಳೂ ಕೂಡ ಶ್ರೀಮಂತರೇ. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಪ್ರಕಾರ, ಬ್ರೂನೈನ ಜನರ ವಾರ್ಷಿಕ ತಲಾ ಆದಾಯ ₹30,22,882. ಜಗತ್ತಿನ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲೊಂದಾಗಿರುವ ಬ್ರೂನೈನಲ್ಲಿ ಜನರು ಆದಾಯ ತೆರಿಗೆ ಪಾವತಿಸುವುದಿಲ್ಲ. ರಾಜನೇ ಪ್ರಜೆಗಳಿಗೆ ಮನೆ ಮತ್ತು ಇತರ ಮೂಲಸೌಕರ್ಯಗಳನ್ನು ಉಚಿತವಾಗಿ ಒದಗಿಸುತ್ತಾರೆ.

ರಾಜನ ವೈಭೋಗ ಮತ್ತು ಐಷಾರಾಮಿತನದ ಹಿಂದಿರುವುದು ತೈಲ ಮತ್ತು ಅನಿಲ ನಿಕ್ಷೇಪಗಳು. ಸುಲ್ತಾನನಾದ ಹಸನಲ್ ಬೊಲ್ಕಿಯಾ ದೇಶದ ಮೇಲೆ ನಿರಂಕುಶ ಅಧಿಕಾರ ಹೊಂದಿದ್ದು, ಸಂಸತ್ ಆಗಲಿ, ಇತರೆ ಮಂತ್ರಿಗಳಾಗಲಿ ಅವರ ಅಧೀನರಾಗಿರುತ್ತಾರೆ. ದೇಶದ ಪ್ರಧಾನಿ, ರಕ್ಷಣಾ ಸಚಿವ, ಹಣಕಾಸು ಸಚಿವ ಎಲ್ಲವೂ ಸುಲ್ತಾನನೇ. ಇಲ್ಲಿ ಅವರು ಹೇಳಿದ್ದೇ ಶಾಸನ, ಮಾಡಿದ್ದೇ ಕಾನೂನು. ದೇಶದಲ್ಲಿ1962ರಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿ ಇಂದಿಗೂ ಜಾರಿಯಲ್ಲಿದೆ. ಭಿನ್ನಮತ, ವಿರೋಧ, ಪ್ರತಿಭಟನೆಗಳಿಗೆ ಇಲ್ಲಿ ಅವಕಾಶವಿಲ್ಲ. ವಾಕ್ ಸ್ವಾತಂತ್ರ್ಯವಾಗಲಿ, ಪತ್ರಿಕಾ ಸ್ವಾತಂತ್ರ್ಯವಾಗಲಿ ಇಲ್ಲ.

ಮುಸ್ಲಿಂ ರಾಷ್ಟ್ರ

ದೇಶದಲ್ಲಿ ಹಿಂದೆ ಬೌದ್ಧ ಮತ್ತು ಹಿಂದೂ ಧರ್ಮಗಳ ಪ್ರಭಾವವೂ ಸ್ವಲ್ಪ ಇತ್ತು. ದೇಶದ ದೊರೆಗಳು 14ನೇ ಶತಮಾನದಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ನಂತರ ಇದು ಮುಸ್ಲಿಂ ದೇಶವಾಯಿತು. ಇಲ್ಲಿ ಶೇ 80ರಷ್ಟು ಮುಸ್ಲಿಮರಿದ್ದಾರೆ. ಮಲಯ ಭಾಷೆ, ಸಂಸ್ಕೃತಿ, ಪದ್ಧತಿ ಇಲ್ಲಿ ಆಚರಣೆಯಲ್ಲಿದೆ. 

2014ರಲ್ಲಿ ದೇಶದ ದಂಡ ಸಂಹಿತೆಗೆ ಷರಿಯಾ ಕಾನೂನನ್ನು ಅಳವಡಿಸಿಕೊಳ್ಳುವ ಮೂಲಕ, ಷರಿಯಾ ಕಾನೂನನ್ನು ಅಳವಡಿಸಿಕೊಂಡ ಪೂರ್ವ ಏಷ್ಯಾದ ಮೊದಲ ದೇಶ ಎಂದು ಬ್ರೂನೈ ಗುರುತಿಸಿಕೊಂಡಿತ್ತು. 2019ರಲ್ಲಿ ಮತ್ತಷ್ಟು ಕಠಿಣ ಕಾನೂನು ಜಾರಿ ಮಾಡಿತು. ವ್ಯಭಿಚಾರ, ಸಲಿಂಗ ಕಾಮದಂಥ ಕೆಲವು ಅಪರಾಧಗಳಿಗೆ, ಕೈಕಾಲು ಮುರಿಯುವುದು ಮತ್ತು ಕಲ್ಲು ಹೊಡೆದು ಸಾಯಿಸುವುದರಂಥ ಕ್ರೂರ ಶಿಕ್ಷೆಗಳು ಅದರಲ್ಲಿದ್ದವು. ಅವಕ್ಕೆ ವಿಶ್ವಸಂಸ್ಥೆಯೂ ಸೇರಿದಂತೆ ಜಾಗತಿಕ ಮಟ್ಟದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಆ ಕಾನೂನು ಜಾರಿಗೆ ಬರಲಿಲ್ಲ. 

ಬ್ರೂನೈ ರಾಜಧಾನಿ ಬಂದಾರ್ ಸೆರಿ ಬೆಗವಾನ್‌ನಲ್ಲಿರುವ ಚಿನ್ನ ಲೇಪಿತ ಗೋಪುರವಿರುವ ಮಸೀದಿಯಲ್ಲಿ ನಡೆದಿದ್ದ ಸುಲ್ತಾನನ ಮಕ್ಕಳ ಮದುವೆಗಳು ಬ್ರೂನೈನ ಅದ್ದೂರಿತನ, ಐಷಾರಾಮಿ ಬದುಕು ಮತ್ತು ಕಣ್ಣುಕುಕ್ಕುವ ಸಂಪತ್ತನ್ನು ಜಗತ್ತಿನ ಮುಂದಿಟ್ಟದ್ದವು. 2017ರಲ್ಲಿ ನಡೆದಿದ್ದ ಸುಲ್ತಾನನ ಪಟ್ಟಾಭಿಷೇಕದ ಸುವರ್ಣಮಹೋತ್ಸವ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ವೈಭವಯುತವಾಗಿ ನಡೆದಿತ್ತು. 

ಆಡಳಿತದಲ್ಲಿ ಚಾಣಾಕ್ಷರಾಗಿರುವ ಸುಲ್ತಾನ, ಪ್ರತಿಕೂಲ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವುದಕ್ಕೆ ಹೆಸರುವಾಸಿ. ಕಿರಿಯ ಸೋದರ ಜಾಫ್ರಿ ಬೊಲ್ಕಿಯಾ ಹಣಕಾಸು ಸಚಿವರಾಗಿದ್ದಾಗ (1990ರಲ್ಲಿ) ಕೋಟ್ಯಂತರ ರೂಪಾಯಿ ಅವ್ಯವಹಾರ ಮಾಡಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಅದು ಸುಲ್ತಾನ ಮತ್ತು ತಮ್ಮನ ನಡುವೆ ಮನಸ್ತಾಪಕ್ಕೆ ಕಾರಣವಾಗಿತ್ತು. ತಮ್ಮನನ್ನು ಅಧಿಕಾರದಿಂದಲೂ ಅವರು ಕಿತ್ತೊಗೆದಿದ್ದರು. 

ಐದು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಸುಲ್ತಾನನ ಪಟ್ಟದಲ್ಲಿರುವ ಹಸನಲ್‌ಗೆ ಈಗ 77 ವರ್ಷ ವಯಸ್ಸು. ವಿರೋಧವೇ ಇಲ್ಲದ ಸರ್ವಾಧಿಕಾರಿ. ಇತ್ತೀಚಿನ ವರ್ಷಗಳಲ್ಲಿ ಅವರ ಜನಪ್ರಿಯತೆಗೆ ಕುಂದು ತರುವ ಕೆಲವು ವಿದ್ಯಮಾನಗಳು ಘಟಿಸಿವೆ.

–––––––––––––––––––––

3 ಮದುವೆ, 12 ಮಕ್ಕಳು

ಬ್ರೂನೈ ರಾಜಮನೆತನದ ಅಧಿಕೃತ ವೆಬ್‌ಸೈಟ್‌ ಪ್ರಕಾರ, ಹಸನಲ್‌ ಅವರಿಗೆ ಒಬ್ಬರೇ ಪತ್ನಿ ಇದ್ದು, ಐವರು ಪುತ್ರರು, ಏಳು ಹೆಣ್ಣುಮಕ್ಕಳು ಇದ್ದಾರೆ. ಆದರೆ, ಅವರು ಈವರೆಗೆ ಮೂರು ಮದುವೆಯಾಗಿದ್ದು, ಎರಡನೇ ಮತ್ತು ಮೂರನೇ ಪತ್ನಿಯರಿಂದ ದೂರವಾಗಿದ್ದಾರೆ ಎಂದು ಮಾಧ್ಯಮಗಳ ವರದಿಗಳು ಹೇಳುತ್ತವೆ.

1965ರಲ್ಲಿ ತಮ್ಮ 19ನೇ ವರ್ಷದಲ್ಲಿ ಸಂಬಂಧಿ ಪೆಂಗಿರನ್‌ ಅನಾಕ್‌ ಸಲೇಹಾ ಅವರನ್ನು ವರಿಸಿದ್ದರು. 1981ರಲ್ಲಿ ಗಗನಸಖಿಯಾಗಿದ್ದ ಮರಿಯಮ್‌ ಎಂಬುವವರನ್ನು ಮದುವೆ ಯಾಗಿದ್ದರು. 2003ರಲ್ಲಿ ಈ ಸಂಬಂಧ ಮುರಿದು ಬಿದ್ದಿತ್ತು. 2005ರಲ್ಲಿ ತಮಗಿಂತ 33 ವರ್ಷ ಕಿರಿಯರಾಗಿದ್ದ ಮಲೇಷ್ಯಾದ ಟಿವಿ ನಿರೂಪಕಿ ಅಝ್ರಿನಾಜ್‌ ಮಝರ್‌ ಹಕೀಂ ಅವರನ್ನು ಮದುವೆಯಾಗಿದ್ದರು. 2010ರಲ್ಲಿ ವಿಚ್ಛೇದನ ಪಡೆದಿದ್ದರು..

ಕಾರುಗಳ ಮೋಹಿ

ಸುಲ್ತಾನನಿಗೆ ವಿಪರೀತ ಕಾರುಗಳ ಹುಚ್ಚು. ಅವರು ಹೊಂದಿರುವಷ್ಟು ಕಾರುಗಳನ್ನು ಜಗತ್ತಿನಲ್ಲಿ ಯಾರೂ ಹೊಂದಿಲ್ಲ. 7000 ಕಾರುಗಳು ಅವರ ಬಳಿ ಇವೆ ಎಂದು ಅಂದಾಜಿಸಲಾಗಿದೆ. ಈ ಕಾರುಗಳ ಮೌಲ್ಯವೇ ₹42 ಸಾವಿರ ಕೋಟಿ.

ದುಬಾರಿ ರೋಲ್ಸ್‌ ರಾಯ್ಸ್‌ ಕಾರುಗಳೇ 600ರಷ್ಟಿವೆ. 2011ರಲ್ಲೇ ಅವರು 500ಕ್ಕೂ ಹೆಚ್ಚು ರೋಲ್ಸ್‌ ರಾಯ್ಸ್‌ ಕಾರುಗಳನ್ನು ಹೊಂದಿದ್ದರು. ಗಿನ್ನಿಸ್‌ ದಾಖಲೆಯನ್ನೂ ಬರೆದಿದ್ದರು. 24 ಕ್ಯಾರೆಟ್‌ ಚಿನ್ನ ಲೇಪಿತ ರೋಲ್ಸ್‌ ರಾಯ್ಸ್‌ ಕಾರು ಕೂಡ ಇದ್ದು, ಇದು ಕೂಡ ಗಿನ್ನಿಸ್‌ ದಾಖಲೆಗೆ ಸೇರಿದೆ. ಮದುವೆ ಸೇರಿದಂತೆ ವಿಶೇಷ ಸಮಾರಂಭಗಳಲ್ಲಿ ನಡೆಯುವ ವೈಭವೋಪೇತ ಮೆರವಣಿಗೆಯಲ್ಲಿ ಈ ಕಾರೇ ಪ್ರಮುಖ ಆಕರ್ಷಣೆ.  

ಮಾಧ್ಯಮ ವರದಿಗಳ ಪ್ರಕಾರ, 450 ಫೆರಾರಿ ಕಾರುಗಳು, 380 ಬೆಂಟ್ಲಿ ಕಾರುಗಳು, ಪೋಶೆ, ಲ್ಯಾಂಬೊರ್ಗಿನಿ, ಮರ್ಸಿಡಿಸ್‌ ಬೆಂಜ್‌, ಮೆಕ್‌ಕ್ಲಾರನ್‌ ಸೇರಿದಂತೆ ಜಗತ್ತಿನ ಅತ್ಯಂತ ದುಬಾರಿ, ಐಷಾರಾಮಿ ಎಲ್ಲ ಕಾರುಗಳ ಸಂಗ್ರಹ ಸುಲ್ತಾನನ ಬಳಿ ಇವೆ.

ಸ್ವತಃ ಪೈಲಟ್‌ ಆಗಿರುವ ಸುಲ್ತಾನ್‌ ಬಳಿ ಎರಡು ಬೋಯಿಂಗ್‌, ಒಂದು ಏರ್‌ಬಸ್‌ ವಿಮಾನಗಳಿವೆ. ಹೆಲಿಕಾಪ್ಟರ್‌ಗಳನ್ನೂ ಹೊಂದಿದ್ದಾರೆ. ಒಂದು ವಿಮಾನವನ್ನು ‘ಹಾರಡುವ ಅರಮನೆ’ ಎಂದು ಕರೆಯಲಾಗುತ್ತಿದ್ದು, ಚಿನ್ನಲೇಪಿತ ಒಳಾಂಗಣ ವಿನ್ಯಾಸ ಹೊಂದಿದೆ ಎಂದು ಹೇಳುತ್ತವೆ ವರದಿಗಳು. 

ಕರಗುತ್ತಿದೆ ಸಂಪತ್ತು!

ಬ್ರೂನೈನ ಶ್ರೀಮಂತಿಕೆಗೆ ಮೂಲ ಕಾರಣವಾದ ತೈಲ ನಿಕ್ಷೇಪಗಳು ಕರಗುತ್ತಿದೆ. ದೇಶವು ಭವಿಷ್ಯದಲ್ಲಿ ಸಂಕಷ್ಟಕ್ಕೆ ಈಡಾಗಬಹುದು ಎಂದು ಎಚ್ಚರಿಸಿರುವ ತಜ್ಞರು, ಇನ್ನು ಎರಡು ದಶಕಗಳಲ್ಲಿ ತೈಲದ ನಿಕ್ಷೇಪ ಖಾಲಿಯಾಗಬಹುದು ಎಂದು ಹೇಳಿದ್ದಾರೆ. 

ಇಂಧನ ಬೆಲೆಗಳ ಏರಿಳಿತವೂ ಬ್ರೂನೈನ ಆರ್ಥಿಕ ಬೆಳವಣಿಗೆಗೆ ತೊಡಕಾಗಿದೆ. ದೇಶದ ಯುವಜನತೆಯಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದೆ.  

ಈ ಸವಾಲನ್ನು ಎದುರಿಸುವುದಕ್ಕಾಗಿ ಹಸನಲ್‌ ಬೊಲ್ಕಿಯಾ ‘ಸರ್ಕಾರ ವಿಷನ್ –2035’ ಎನ್ನುವ ಯೋಜನೆ ರೂಪಿಸಿದ್ದಾರೆ. ಹೈಡ್ರೋಕಾರ್ಬನ್ಸ್ ಮೇಲಿನ ಅವಲಂಬನೆ ಕಡಿಮೆ ಮಾಡಿ, ದೇಶವನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸಬೇಕು ಎನ್ನುವುದು ಅದರ ಉದ್ದೇಶ. ಆದರೆ, ಯೋಜನೆ ಅಷ್ಟಾಗಿ ಪ್ರಗತಿ ಕಂಡಿಲ್ಲ.

ಆಧಾರ: ಪಿಟಿಐ, ಬಿಬಿಸಿ, ಅಮೆರಿಕದ ಸಿಐಎ ವೆಬ್‌ಸೈಟ್‌, ಬ್ರೂನೈ ರಾಜಮನೆತನ, ಟೂರಿಸಂ ವೆಬ್‌ಸೈಟ್‌

****

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT