ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೀಚಿಕೆಯಾದ ಮುನ್ನೂರು!

Last Updated 3 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

‘ಮುನ್ನೂರು’ ರನ್ನುಗಳ ಮ್ಯಾಜಿಕ್ ನಂಬರ್ ಕಾಣದ ವಿಶ್ವಕಪ್ ಟೂರ್ನಿಯ ನಾಕೌಟ್ ಹಂತ ಬೌಲರ್‌ಗಳ ಕೈಬೆರಳುಗಳ ಮೇಲೆಯೇ ನಿರ್ಧಾರವಾಯಿತು. ಹೌದು. ನಾಲ್ಕು ಕ್ವಾರ್ಟರ್‌ಫೈನಲ್‌ಗಳು ಮತ್ತು ಎರಡು ಸೆಮಿಫೈನಲ್‌ಗಳಲ್ಲಿ  (ಈ ಲೇಖನ ಓದುವ ಹೊತ್ತಿಗೆ ಫೈನಲ್ ಪಂದ್ಯವೂ ಮುಗಿದಿರುತ್ತದೆ) ಯಾವ ತಂಡವೂ 300ರ ಗಡಿ ಮುಟ್ಟಲೇ ಇಲ್ಲ.

ಅಬ್ಬರದ ಬ್ಯಾಟಿಂಗ್ ಯುಗದಲ್ಲಿ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ 300 ರನ್ನುಗಳ ಮೊತ್ತ ಸರ್ವೇಸಾಮಾನ್ಯ. ಅದನ್ನು ಬೆನ್ನತ್ತಿ ಯಶಸ್ವಿಯಾದ ತಂಡಗಳೂ ಇವೆ. ಆದರೆ, ಈ ಬಾರಿಯ ವಿಶ್ವಕಪ್ ಟೂರ್ನಿಯ ನಾಕೌಟ್ ಹಂತದಲ್ಲಿ ಮಾತ್ರ ಬ್ಯಾಟಿಂಗ್ ಅಬ್ಬರ ಮತ್ತು ರನ್ನುಗಳ ಹೊಳೆ ಕಾಣಲೇ ಇಲ್ಲ. ಎಂಟರ ಘಟ್ಟಕ್ಕೆ ಬಂದ ಎಲ್ಲ ತಂಡಗಳಲ್ಲಿಯೂ  ಪ್ರತಿಭಾವಂತ  ಬ್ಯಾಟ್ಸಮನ್ನರು ಇದ್ದರು. ಸಿಕ್ಸರ್, ಬೌಂಡರಿ ಎತ್ತುವ ಸಾಮರ್ಥ್ಯವಿರುವಂತಹ ಬ್ಯಾಟಿಂಗ್ ವೀರರು ಎಂಟೂ ತಂಡಗಳಲ್ಲಿಯೂ ಇದ್ದರು.

ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್, ಪೋಲಾರ್ಡ್, ಪಾಕಿಸ್ತಾನದ ಶಾಹೀದ್ ಅಫ್ರಿದಿ, ಕಮ್ರನ್ ಅಕ್ಮಲ್, ಯೂನಿಸ್ ಖಾನ್, ಮಿಸ್ಬಾ-ಉಲ್-ಹಕ್, ಆಸ್ಟ್ರೇಲಿಯದ ರಿಕಿ ಪಾಂಟಿಂಗ್ (ಕ್ವಾರ್ಟರ್‌ಫೈನಲ್‌ನಲ್ಲಿ ಶತಕ ಬಾರಿಸಿದರು), ಶೇನ್ ವ್ಯಾಟ್ಸನ್, ಮೈಕ್ ಹಸ್ಸಿ, ಮೈಕೆಲ್ ಕ್ಲಾರ್ಕ್, ಭಾರತ ತಂಡದಲ್ಲಿ ಸೆಹ್ವಾಗ್, ಸಚಿನ್, ಯುವರಾಜ್ ಸಿಂಗ್, ವಿರಾಟ್ ಕೋಹ್ಲಿ, ಸುರೇಶ್ ರೈನಾ, ನ್ಯೂಜಿಲೆಂಡ್‌ನ ರಾಸ್ ಟೇಲರ್, ಜೆಸ್ಸಿ ರೈಡರ್, ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್, ಜ್ಯಾಕ್ ಕಾಲಿಸ್, ಎಬಿ ಡಿವೆಲಿಯರ್ಸ್‌, ಇಂಗ್ಲೆಂಡ್‌ನ ಆ್ಯಂಡ್ರ್ಯೂ ಸ್ಟ್ರಾಸ್, ಶ್ರೀಲಂಕಾದ ದಿಲ್ಶಾನ್, ಮಹೇಲ ಜಯವರ್ಧನೆ ರನ್ನುಗಳ ಸರದಾರರೇ. ಆದರೆ, ಇವರೆಲ್ಲರೂ ತಂಡದ ಕುಸಿತ ತಡೆಯಲು ಎಚ್ಚರಿಕೆಯಿಂದ ಆಡುವಂತೆ ಮಾಡುವಲ್ಲಿ ಬಹುತೇಕ ಬೌಲರ್‌ಗಳು ಸಫಲರಾದರು.

ಜಹೀರ್‌ಖಾನ್, ಶಾಹಿದ್ ಆಫ್ರಿದಿ, ಡೇಲ್ ಸ್ಟೇಯ್ನಿ ಮತ್ತಿತರರ ಕಮಾಲ್ ನೋಡುವ ಅವಕಾಶ ಇಲ್ಲಿತ್ತು. ಕ್ವಾರ್ಟರ್‌ಫೈನಲ್‌ನ ಮೊದಲ ಪಂದ್ಯದಲ್ಲಿ ವಿಂಡೀಸ್ ಆಟಗಾರರು ಮೊದಲು ಬ್ಯಾಟಿಂಗ್ ಮಾಡಿದರೂ ಗಳಿಸಿದ್ದು ಕೇವಲ 112 ರನ್ನುಗಳನ್ನು ಮಾತ್ರ. ಪಾಕ್ ಆಟಗಾರರಿಗೆ ಇದು ಸುಲಭದ ತುತ್ತಾಯಿತು. ಈ ಪಂದ್ಯದಲ್ಲಿ ಒಟ್ಟು 10 ವಿಕೆಟ್‌ಗಳು ಉರುಳಿದವು.

ಎರಡನೇ ಪಂದ್ಯದಲ್ಲಿ ಪಾಂಟಿಂಗ್ ಶತಕ ಹೊಡೆದರೂ ಆಸೀಸ್ ಗಳಿಸಿದ್ದು 260 ರನ್ ಮಾತ್ರ. ಯುವಿ ಮತ್ತು ರೈನಾ ಉತ್ತಮ ಜೊತೆಗಾರಿಕೆ ಆಟದಿಂದಾಗಿ ಭಾರತ ಈ ಪಂದ್ಯ ಗೆದ್ದಿತ್ತು. ಸತತ ಮೂರು ಬಾರಿಯ ವಿಶ್ವ ಚಾಂಪಿಯನ್ ಟೂರ್ನಿಯಿಂದ ಹೊರಬಿದ್ದಿತ್ತು. ಈ ಪಂದ್ಯದಲ್ಲಿ ಒಟ್ಟು 11 ವಿಕೆಟ್‌ಗಳನ್ನು ಬೌಲರ್‌ಗಳು ಕಬಳಿಸಿದರು.

ಮೂರನೇ ಪಂದ್ಯದಲ್ಲಿಯೂ ಒಟ್ಟು 18 ವಿಕೆಟ್‌ಗಳು ಬೌಲರ್‌ಗಳ ಪಾಲಾದವು. ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 8 ವಿಕೆಟ್ ನಷ್ಟಕ್ಕೆ 221 ರನ್ನು ಗಳಿಸಿದರೆ, ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ 172 ರನ್ನುಗಳಿಗೆ ತನ್ನೆಲ ವಿಕೆಟ್‌ಗಳನ್ನು ಚೆಲ್ಲಿತ್ತು. ಕೊನೆಯ ಪಂದ್ಯದಲ್ಲಿಯೂ 300 ಮೊತ್ತ ಕಾಣಲಿಲ್ಲ.ಇಂಗ್ಲೆಂಡ್ ನೀಡಿದ 229 ರನ್ನುಗಳ ಗುರಿಯನ್ನು ಒಂದೂ ವಿಕೆಟ್ ನಷ್ಟವಿಲ್ಲದೇ ಶ್ರೀಲಂಕಾ ಮುಟ್ಟಿಬಿಟ್ಟಿತ್ತು. 

ನಾಲ್ಕರ ಹಂತದ ಪಂದ್ಯಗಳಲ್ಲಾದರೂ ರನ್ನುಗಳ ಹೊಳೆ ಹರಿಯಬಹುದು ಎಂಬ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆ ಹುಸಿ ಹೋಯಿತು. ಮೊಹಾಲಿಯಲ್ಲಿ ವೀರೇಂದ್ರ ಸೆಹ್ವಾಗ್ ಅಬ್ಬರದ ಆರಂಭ ನೀಡಿದರಾದರೂ, 300ರ ಗಡಿ ತಲುಪಲು ಭಾರತಕ್ಕೆ ಸಾಧ್ಯವಾಗಲಿಲ್ಲ. 50 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 260 ರನ್ನು ಸೇರಿಸಿತು. ಈ ಸಾಧಾರಣ ಮೊತ್ತವನ್ನು ಗಳಿಸುವ ಹಾದಿಯಲ್ಲಿ ಪಾಕ್ ಎಡವಿತು. 29 ರನ್ನುಗಳ ಸೋಲು ಅನುಭವಿಸಿತ್ತು.

1996ರ ವಿಶ್ವಕಪ್ ಟೂರ್ನಿಗೂ ಮುನ್ನ 300ರ ಗಡಿ ದಾಟುವುದು ದೊಡ್ಡ ಸಾಹಸದ ಕೆಲಸವಾಗಿತ್ತು. ಪ್ರತಿ ಓವರಿಗೆ ಸರಾಸರಿ 6 ರನ್ನುಗಳ ಅಂದರೆ 50 ಓವರುಗಳಲ್ಲಿ ಎಸೆತವೊಂದಕ್ಕೆ ಒಂದು ರನ್ ಗಳಿಸುವ ಸವಾಲು ಅದು. ಮೊದಲು ಬ್ಯಾಟ್ ಮಾಡಿದ ತಂಡ 300 ದಾಟಿ ಬಿಟ್ಟರೆ, ಎದುರಾಳಿಗೆ ಮಾನಸಿಕವಾಗಿ ಒತ್ತಡ ಹೆಚ್ಚಿ ಸೋಲುವುದು ಖಚಿತ ಎನ್ನುವ ಕಾಲ ಇತ್ತು.

ಆದರೆ, 1996 ವಿಶ್ವಕಪ್‌ನಲ್ಲಿ ಮೊದಲ 15 ಓವರುಗಳಲ್ಲಿ ಶ್ರೀಲಂಕಾದ ಜಯಸೂರ್ಯ ಮತ್ತು ಕಲುವಿತರಣ ಜೋಡಿ ಆರಂಭಿಸಿದ್ದು 300ರ ಮೊತ್ತ ದೊಡ್ಡ ಸವಾಲಾಗಿ ಉಳಿಯಲೇ ಇಲ್ಲ. ಏಕದಿನ ಪಂದ್ಯಗಳಲ್ಲಿ ಬ್ಯಾಟಿಂಗಿಗೇ ಮೊದಲ ಆದ್ಯತೆ ಸಿಕ್ಕಿತ್ತು. ಬಹುತೇಕ ಏಕದಿನ ಸರಣಿಗಳು ಮತ್ತು ಟೂರ್ನಿಗಳಲ್ಲಿ ಬ್ಯಾಟ್ಸ್‌ಮನ್‌ಗಳದ್ದೇ ದರ್ಬಾರು. ಆದರೆ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಬೌಲರ್‌ಗಳ ಭುಜಬಲಕ್ಕೆ ಮತ್ತೆ ಗೌರವ ಸಿಕ್ಕಿದೆ. ಪಂದ್ಯದ ಫಲಿತಾಂಶದಲ್ಲಿ ಬೌಲರ್‌ಗಳ ಸಾಮರ್ಥ್ಯವೇ ಮೆರೆಯಿತು. ಮಧ್ಯಮ ವೇಗಿಗಳು ಮತ್ತು ಸ್ಪಿನ್ನರ್‌ಗಳ ಕೈಬೆರಳುಗಳ ಮೋಡಿ ಈ ಟೂರ್ನಿಯಲ್ಲಿ ಗಮನ ಸೆಳೆಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT