ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಬಂಧಗಳ ಮುಳುಗಡೆ!

Last Updated 17 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಹಿಂದೊಂದು ಕಾಲವಿತ್ತು! ಆಗೆಲ್ಲ, ಹಳ್ಳಿಗಳಲ್ಲಿ ವಾಸಿಸುವ ಜನರು, ಕೂಡು ಕುಟುಂಬಗಳಲ್ಲಿ ಜೀವನವನ್ನು ನಿರ್ವಹಿಸುವುದರಲ್ಲಿ ನೆಮ್ಮದಿ ಕಂಡುಕೊಂಡಿದ್ದರು. ಜೊತೆಗೆ, ನೆರೆಹೊರೆಯವರೊಂದಿಗೆ ಜಾತಿಭೇದ ಮರೆತು ಹಂಚಿಕೊಂಡು ಉಣ್ಣುವ-ಕುಡಿಯುವ ಗುಣವನ್ನು ಅಳವಡಿಸಿಕೊಂಡಿದ್ದರು. ಜಾತ್ರೆ, ಹಬ್ಬ-ಹರಿದಿನಗಳಲ್ಲಿ ಹಳ್ಳಿಯ ಜನರೆಲ್ಲ ಒಟ್ಟೊಟ್ಟಾಗಿ ಪಾಲ್ಗೊಂಡು ಸಂಭ್ರಮ ಪಟ್ಟರೆ, ಸಾವಿನಂಥ ಸಂದರ್ಭಗಳಲ್ಲಿ ಶವದ ಕರ್ಮಾಚರಣೆಗಳೆಲ್ಲ ಮುಗಿಯುವವರೆಗೂ ಊರಿಗೆ ಊರೇ ಸೂತಕದ ಮನೆಯಲ್ಲಿ ನೆರವಿಗಾಗಿ ಟೊಂಕಕಟ್ಟಿ ನಿಲ್ಲುತ್ತಿತ್ತು. ಆ ಸಾವು ಸಂಭವಿಸಿದ ಕುಟುಂಬದವರ ದುಃಖದಲ್ಲಿ ಊರು ಭಾಗಿಯಾಗುತ್ತಿತ್ತು. ಇದು, ನಮ್ಮ ದೇಶದ ಯಾವುದೇ ಹಳ್ಳಿಯ ಜನರ ಜೀವನಪದ್ಧತಿ ಅಥವಾ ಸಂಸ್ಕೃತಿ ಎನ್ನಬೇಕು.

ಈಗ ಕಾಲ ಬದಲಾಗಿದೆ. ಕೃತ್ರಿಮ ಸಂಬಂಧಗಳ ಮೊರೆ ಹೋಗಿರುವ ಮನುಷ್ಯ, ಇಂದು ತನ್ನ ಬದುಕಿನಲ್ಲಿ ನಗರ ಜೀವನದ ಸಕಲ ಗುಣಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಪರೋಕ್ಷವಾಗಿ ಹಳ್ಳಿಗಳ ಚಿತ್ರಣವೇ ಬದಲಾಗುವುದಕ್ಕೆ ಕಾರಣನಾಗಿದ್ದಾನೆ! ಅದಕ್ಕೇ, ಈ ದೇಶದ ಬೆನ್ನೆಲುಬಾಗಿರುವ ಹಳ್ಳಿಗಳು ನಿಧಾನವಾಗಿ ನಗರೀಕರಣ ಪ್ರಕ್ರಿಯೆಗೆ ಒಳಪಡುತ್ತಲೇ ಮಾನವೀಯ ಸಂಬಂಧಗಳ ಪೊರೆಯನ್ನು ಕಳಚಿಕೊಳ್ಳುತ್ತಿವೆ. ಇದರಿಂದಾಗಿ, ಒಂದಾನೊಂದು ಕಾಲದಲ್ಲಿ ಹಳ್ಳಿಗಳ ಜನರಲ್ಲಿದ್ದ ಪರಸ್ಪರ ಸುಖದುಃಖ, ಸಂಭ್ರಮಗಳನ್ನು ಹಂಚಿಕೊಳ್ಳುವ ಗುಣ ಈಗ ಇಲ್ಲವಾಗಿದೆ. ಕೂಡು ಕುಟುಂಬಗಳು ಇಂದು ಚಿಕ್ಕ ಚಿಕ್ಕ ಕುಟುಂಬಗಳಾಗಿ ಮಾರ್ಪಟ್ಟು, ಕೇವಲ ನಾವಿಬ್ಬರು; ನಮಗಿಬ್ಬರು ಎಂಬ ಗಳಿಕೆ–ಉಳಿಕೆಗೆ ಸಂಬಂಧಿಸಿದ ಹೇಳಿಕೆಗೆ ಸೀಮಿತವಾಗಿರುವುದರ ಮೂಲಕ ದ್ವೀಪಗಳಂತಾಗಿ ಬಿಟ್ಟಿವೆ!

ಈ ಮಾತಿಗೆ ಉದಾಹರಣೆಯಾಗಿ ನನ್ನ ಊರನ್ನೇ ಗಮನಿಸಬಹುದು. ಮೂವತ್ತು-ಮೂವತ್ತೈದು ವರ್ಷಗಳ ಹಿಂದೆ, ಕೇವಲ ಹತ್ತು ಸಾವಿರದಷ್ಟು ಜನಸಂಖ್ಯೆಯನ್ನು ಹೊಂದಿದ್ದ ನನ್ನೂರು ಹಾರೂಗೇರಿಯು, ಇಂದು ಪಟ್ಟಣವಾಗಿ ಬೆಳೆದು ನಿಂತಿದೆ. ಆದರೆ, ಬದಲಾದ ಕಾಲಘಟ್ಟದಲ್ಲಿ ಇರಲೇಬೇಕಾಗಿದ್ದ ಸಂಸ್ಕೃತಿ, ಸಂಪ್ರದಾಯ, ಸೌಹಾರ್ದತೆ ಮತ್ತು ಸಂಬಂಧಗಳನ್ನು ಕಿತ್ತೆಸೆದು ಅವುಗಳ ಜಾಗೆಯಲ್ಲಿ ಯಾಂತ್ರಿಕ ಬದುಕಿಗೆ ಬೇಕಾಗಿರುವ ಗುಣಗಳನ್ನು ಬೆಳೆಸಿಕೊಂಡಿದೆ.

ಶೈಕ್ಷಣಿಕ ಮತ್ತು ವ್ಯಾಪಾರಿ ಕೇಂದ್ರವಾಗಿ ಹಾರೂಗೇರಿ ಈಗ ರೂಪುಗೊಂಡಿದೆ. ಕೃಷಿಯನ್ನೇ ನಂಬಿಕೊಂಡಿದ್ದ ಇಲ್ಲಿನ ರೈತ, ಊರದಂಡೆಯ ತನ್ನ ಜಮೀನುಗಳನ್ನು ನಿವೇಶನಗಳನ್ನಾಗಿಸಿ ಮಾರಾಟ ಮಾಡುತ್ತಿದ್ದಾನೆ. ಹೀಗೆ, ಅನಾಯಾಸವಾಗಿ ದುಡ್ಡು ಮಾಡಿ, ಹವಾನಿಯಂತ್ರಿತ ಕಾರಿನಲ್ಲಿ ಸುತ್ತಾಡುವುದನ್ನೇ ನೆಮ್ಮದಿ ಬದುಕು ಎಂದು ಕೆಲವರು ಭಾವಿಸಿದ್ದಾರೆ. ಕೃಷಿಯಲ್ಲಿ ಸಿಗುತ್ತಿದ್ದ ನಿಜದ ಸುಖ-ಸಂತೋಷ ಮತ್ತು ನೆಮ್ಮದಿ ಈಗ ಯಾರಿಗೆ ಬೇಕು? ಊರ ಸುತ್ತಮುತ್ತಲಿನ ಜಮೀನುಗಳಲ್ಲಿ ಬರೀ ಹಸುರೇ ಕಂಗೊಳಿಸುತ್ತಿದ್ದ ಸ್ಥಳಗಳಲ್ಲಿ ಈಗ ದೊಡ್ಡ ದೊಡ್ಡ ಬಡಾವಣೆಗಳು ನಿರ್ಮಾಣಗೊಂಡು, ಹಾರೂಗೇರಿ ಊರೆಂಬುದು ಇತ್ತಿತ್ತಲಾಗಿ ಕಾಂಕ್ರೀಟ್ ಕಾಡು ಎಂಬಂತಾಗಿ ಬಿಟ್ಟಿದೆ.

ಕೊನೆಯೇ ಇಲ್ಲದಂತೆ ಬೆಳೆಯುತ್ತಿರುವ ನನ್ನೂರು ಹಾರೂಗೇರಿಯು ಮೊದಲಿದ್ದ ಹಳ್ಳಿಯ ಘಮವನ್ನು ಕಳೆದುಕೊಂಡಂತೆ ನನ್ನಂಥವರಿಗೆ ಅನ್ನಿಸಿದರೆ ಅದನ್ನು ಕಾಲಧರ್ಮ ಎನ್ನಬೇಕೋ ಅಥವಾ ಹೊಸ ಕಾಲಕ್ಕೆ ಹೊಂದಿಕೊಳ್ಳಲು ನಾನು ಸೋತಿದ್ದೇನೆ ಎಂದು ಭಾವಿಸಬೇಕೊ?
ಒಂದಂತೂ ನಿಜ. ಲೋಕದಲ್ಲಿ ಧಾರ್ಮಿಕ, ಸಾಮಾಜಿಕ, ರಾಜಕೀಯ ನಿಲುವುಗಳನ್ನು ಮೀರಿದ ಮತ್ತು ಅಂತಃಕರಣದ ಆರ್ದ್ರತೆಯನ್ನು ಸೂಸುವ ಮಾನವೀಯ ಸಂಬಂಧಗಳಿಗೆ ಎಲ್ಲ ಕಾಲದಲ್ಲೂ ಬೆಲೆಯಿದೆ. ಆದರೆ, ನಗರೀಕರಣ ಪ್ರಕ್ರಿಯೆಯು ಮನಸ್ಸುಗಳ ನಡುವೆ ಗೋಡೆಗಳನ್ನು ನಿರ್ಮಿಸುತ್ತಲೇ ನಮ್ಮನ್ನು ದ್ವೀಪಗಳನ್ನಾಗಿಸುತ್ತಿದೆ. ಈಗ ಹಳ್ಳಿಗಳಷ್ಟೇ ಕಾಣೆಯಾಗುತ್ತಿವೆ. ಮುಂದೊಂದು ದಿನ ಮಾನವೀಯತೆ ಎನ್ನುವುದು ಒಂದು ಕಲ್ಪಿತ ವಾಸ್ತವ ಎನ್ನುವಂತಾಗಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT