ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಹ್ವಾಗ್ ಕೈಬಿಟ್ಟಿದ್ದು ಸರಿ...

ಕ್ರೀಡಾ ಸಂವಾದ
Last Updated 10 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆ ಮಂಡಳಿಯು ವೀರೇಂದ್ರ ಸೆಹ್ವಾಗ್ ಅವರನ್ನು ಕೈಬಿಟ್ಟಿದ್ದು ಅವರ ಅಭಿಮಾನಿಗಳಿಗೆ ಬೇಸರ ತಂದಿರಬಹುದು, ನಿಜ. ಅವರ ಇತ್ತೀಚೆಗಿನ ಕಳಪೆ ಪ್ರದರ್ಶನಕ್ಕೆ ಆಯ್ಕೆದಾರರು ಹೇಗೆ ಸ್ಪಂದಿಸಬಹುದೆಂದು ಕುತೂಹಲ ಮೂಡಿತ್ತು.

13 ವರ್ಷಗಳ ಹಿಂದೆ ತೆಂಡೂಲ್ಕರ್ ಪ್ರತಿರೂಪದಂತೆ ಬಂದು ಮಿಂಚಿದ್ದ ಸೆಹ್ವಾಗ್ ಈಗ ಆತ್ಮವಿಶ್ವಾಸವಿಲ್ಲದೇ ಔಟಾಗುವ ಪರಿ ಕುಗ್ಗಿದ ಮನೋಬಲದ ಪ್ರತೀಕವಾಗಿದೆ. ಅದಕ್ಕೆ ಪುಷ್ಠಿ ಕೊಡುವಂತೆ ಬೌಲಿಂಗ್ ಮಾಡದೇ ಮೈದಾನದಲ್ಲಿ ಅವರು ತೋರುವ ನಿರ್ಲಿಪ್ತ ವರ್ತನೆ, ಬೇಜವಾಬ್ದಾರಿತನದ `ಬಾಡಿ ಲ್ಯಾಂಗ್ವೇಜ್' ಹೊಸಪೀಳಿಗೆಯ ಆಟಗಾರರಿಗೆ ಆದರ್ಶಪ್ರಾಯವಾಗಿಲ್ಲ. ಅವರು 104 ಟೆಸ್ಟ್‌ಗಳಲ್ಲಿ ಗಳಿಸಿದ ಒಟ್ಟು 8,586ರನ್‌ಗಳು, ಜತೆಗೆ ತ್ರಿಶತಕ ಸಿಡಿಸಿ ಮಾಡಿದ್ದ ಅಬ್ಬರಗಳೆಲ್ಲವೂ ನಿಜ. ಆದರೆ ಕ್ರಿಕೆಟ್‌ಪ್ರಿಯರನ್ನು ಈಗ ಹೆಚ್ಚು ಕಾಡುತ್ತಿರುವುದು ಕಳೆದ 9 ಇನ್ನಿಂಗ್ಸ್ ಗಳಲ್ಲಿ ಅವರು ಪೇರಿಸಲು ಸಾಧ್ಯವಾಗಿದ್ದು ಕೇವಲ 163ರನ್‌ಗಳಷ್ಟೇ ಎನ್ನುವುದು. ಇಲ್ಲಿ ನಾವು ಸಂದೀಪ್ ಪಾಟೀಲರ ಅಧ್ಯಕ್ಷತೆಯ ಆಯ್ಕೆಮಂಡಳಿಯಿಂದ ಇಂತಹ ಕಠಿಣ ನಿರ್ಧಾರವನ್ನು ನಿರೀಕ್ಷಿಸಿದ್ದೆವು.

ಮೊದಲಿನಿಂದಲೂ ಸೆಹ್ವಾಗ್ ತಮ್ಮದೇ ವಿಶಿಷ್ಠ ಶೈಲಿಯ `ಹ್ಯಾಂಡ್ ಅಂಡ್ ಐ ಕೋಆರ್ಡಿನೇಷನ್'ಗೆ ಮೊರೆ ಹೋದ ಬ್ಯಾಟ್ಸ್‌ಮನ್. ಒಮ್ಮೆ ಏರುತ್ತಿರುವ ವಯಸ್ಸಿನಿಂದಲೂ, ಕುಂದುತ್ತಿರುವ `ರಿಫ್ಲೆಕ್ಸೆಸ್' ನಿಂದಲೂ ಅಥವಾ ಮಂದದೃಷ್ಟಿಯಿಂದಲೂ ಈ ಹೊಂದಾಣಿಕೆಯನ್ನು ಕಳೆದುಕೊಂಡರೆ, ಮರಳಿ ಶಿಖರಕ್ಕೇರುವುದು ಕಷ್ಟ.

`ರನ್ ಬರುತ್ತಿರುವಾಗ' ಸೆಹ್ವಾಗ್ ಶ್ರಮಿಸುವುದಿಲ್ಲ ಎಂಬ ಗ್ರೆಗ್ ಚಾಪೆಲ್ ಮಾತು ಈ ಸಂದರ್ಭದಲ್ಲಿ ನೆನಪಾಗುತ್ತದೆ. ಈ ಸಂದಿಗ್ಧ ಪರಿಸ್ಥಿತಿಯಿಂದ ಹೊರಬರಲು ಸೆಹ್ವಾಗ್ ದೇಶಿ ಕ್ರಿಕೆಟ್‌ಗೆ ಮೊರೆ ಹೋಗಿ ಸ್ಪರ್ಶ ಕಂಡು ಕೊಳ್ಳಲು ಶ್ರಮಿಸುವರೇ ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕು.

ಇತ್ತ ದೋನಿ ಬ್ಯಾಟಿಂಗ್ ಹಾಗೂ ನಾಯಕತ್ವದ ಬೇಟೆಯಲ್ಲಿದ್ದ ಗಂಭೀರ್ ಹಾಗೂ ಸೆಹ್ವಾಗ್ ಇಬ್ಬರೂ ಸ್ಥಾನ ಕಳೆದು ಕೊಂಡಿದ್ದು ಕಾಕತಾಳೀಯ. ಇದು ಎಡವಿ ಬಿದ್ದ `ಹೀರೊ'ನನ್ನು ಹೊಸಕಿ ಹಾಕುವ ಪ್ರಯತ್ನವಲ್ಲ. ಆದರೆ `ಎಕ್ಸೆಪ್‌ಟೆನ್ಸ್  ಆಫ್ ರಿಯಾಲಿಟಿ'.

ವೀರೇಂದ್ರ ಸೆಹ್ವಾಗ್ ಭಾರತ ಕಂಡ ಅನನ್ಯ ಬ್ಯಾಟ್ಸ್‌ಮನ್. ಭಾರತ ತಂಡದ ನಾಯಕತ್ವಕ್ಕೆ ಸಂಬಂಧಿಸಿದಂತೆ ಎಂ.ಎಸ್.ದೋನಿಯವರ ನಂತರ ಇವರ ಹೆಸರೇ ಕೇಳಿ ಬರುತಿತ್ತು. ಇದೀಗ ಇವರನ್ನು ತಂಡದಿಂದಲೇ ಕೈಬಿಡಲಾಗಿದೆ. ಆಯ್ಕೆ ಮಂಡಳಿಯ ಈ ತೀರ್ಮಾನ ಸರಿ ಎನ್ನುವವರು ಹಲವರಿದ್ದರೆ, ತಪ್ಪು ಎನ್ನುವವರೂ ಬಹಳ ಮಂದಿ ಇದ್ದಾರೆ. ಈ ಕುರಿತು ಮುಕ್ತ ಚರ್ಚೆಗೆ `ಪ್ರಜಾವಾಣಿ' ಅವಕಾಶ ನೀಡುತ್ತಿದೆ.  ಓದುಗರೊಬ್ಬರ ಪತ್ರವನ್ನು ಇಲ್ಲಿ ನೀಡಿದ್ದೇವೆ. ನಿಮ್ಮ ಅನಿಸಿಕೆಗಳಿಗೆ ಸ್ವಾಗತ. ಅಭಿಪ್ರಾಯಗಳನ್ನು ಬರೆದು ಕಳಿಸಿ. ಸಂವಾದದಲ್ಲಿ ಪಾಲ್ಗೊಳ್ಳಿ.
ಬರಹಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ:

ಸಂಪಾದಕರು, ಕ್ರೀಡಾ ವಿಭಾಗ, ಪ್ರಜಾವಾಣಿ, ನಂ-75, ಎಂ.ಜಿ ರಸ್ತೆ, ಬೆಂಗಳೂರು- 560001
(ಇ- ಮೇಲ್: kreede@prajavani.co.in)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT