ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಮುಳುಗಿಸಿದ ಮೊರ್ಬಿ ತೂಗುಸೇತುವೆ: ಇಲ್ಲಿವೆ ಹತ್ತಾರು ಕಣ್ಣೀರಿನ ಕಥೆಗಳು

ಮೊರ್ಬಿ ಅವಘಡ: ಮಸಣದಂತಾದ ಮಚ್ಚು ನದಿ ದಂಡೆ, ತಮ್ಮವರಿಗಾಗಿ ಆಸ್ಪತ್ರೆ – ನದಿ ದಡದಲ್ಲಿ ಜನರ ಹುಡುಕಾಟ
Last Updated 31 ಅಕ್ಟೋಬರ್ 2022, 21:14 IST
ಅಕ್ಷರ ಗಾತ್ರ

ಮೊರ್ಬಿ/ಅಹಮದಾಬಾದ್‌/→ವರ್ಧಮಾನ್‌: ಮೊರ್ಬಿ ತೂಗುಸೇತುವೆ ಕುಸಿತವು ಹಲವರ ಬದುಕುಗಳನ್ನು ಕಿತ್ತುಕೊಂಡಿದೆ. ಕೆಲವು ಕುಟುಂಬಗಳು ತಮ್ಮ ಆಪ್ತರನ್ನು ಕಳೆದುಕೊಂಡಿದ್ದರೆ, ಕೆಲವು ಕುಟುಂಬಗಳೇ ನಾಶವಾಗಿ ಹೋಗಿವೆ. ಕೆಲವು ಮಕ್ಕಳು ತಮ್ಮ ಹೆತ್ತವರನ್ನು ಕಳೆದುಕೊಂಡಿದ್ದರೆ, ಕೆಲವರು ತಮ್ಮ ಎಲ್ಲಾ ಮಕ್ಕಳನ್ನು ಕಳೆದುಕೊಂಡಿದ್ದಾರೆ. ನೂರಾರು ಜನರು ತಮ್ಮವರಿಗಾಗಿ ಮೊರ್ಬಿ ಆಸ್ಪತ್ರೆಯ ಶವಾಗಾರದಲ್ಲಿ ಹುಡುಕಾಡುತ್ತಿದ್ದರೆ, ನೂರಾರು ಜನರು ಮಚ್ಚು ನದಿ ದಡದಲ್ಲಿ ನಿಂತು ತಮ್ಮವರಿಗಾಗಿ ಕಾಯುತ್ತಿದ್ದಾರೆ.

10 ವರ್ಷದ ಶಿವಂ ತನ್ನ ಕಣ್ಣೆದುರೇ ಅಪ್ಪ–ಅಮ್ಮ ಮತ್ತು ಅಣ್ಣ ನೀರಿನಲ್ಲಿ ಮುಳುಗಿ ಸತ್ತಿದ್ದನ್ನು ಕಂಡಿದ್ದಾನೆ. ಕುಟುಂಬದ ಎಲ್ಲರೂ ನೀರಿಗೆ ಬಿದ್ದರೆ, ಶಿವಂ ಸೇತುವೆಯ ಬೇಲಿಗೆ ಸಿಲುಕಿ
ಬದುಕುಳಿದಿದ್ದಾನೆ. ಎಲ್ಲರನ್ನೂ ಕಳೆದುಕೊಂಡ ಬಾಲಕನನ್ನು ಸಂತೈಸಲು ಯತ್ನಿಸಿ ಅವನ ಸಂಬಂಧಿಕರು ಸೋತಿದ್ದಾರೆ.

ಮೊರ್ಬಿ ಪಟ್ಟಣದಲ್ಲಿ ಸಣ್ಣ ಹೋಟೆಲ್‌ ನಡೆಸುವ ಜಡೇಜಾ ಸೋದರರ ಕುಟುಂಬವೇ ಬಹುತೇಕ ನಾಶವಾಗಿದೆ. ಮೂವರು ಸೋದರರ ಕುಟುಂಬದ ಏಳು ಮಂದಿ ಮೊರ್ಬಿ ಸೇತುವೆಗೆ ಭಾನುವಾರ ಭೇಟಿ ನೀಡಿದ್ದರು. ಆದರೆ, ಒಬ್ಬರೂ ಮರಳಿಲ್ಲ.

ಮೂವರೂ ಸೋದರರು ತಮ್ಮ ಹೋಟೆಲ್‌ ಕೆಲಸದಲ್ಲಿ ನಿರತರಾಗಿ ರಾತ್ರಿ ಮನೆಗೆ ವಾಪಸಾಗಿದ್ದಾರೆ. ಆದರೆ ಮನೆಯ ಬಾಗಿಲಿಗೆ ಬೀಗ ಹಾಕಿತ್ತು. ಮೂವರು ತಮ್ಮ ತಮ್ಮ ಪತ್ನಿಯರಿಗೆ ಕರೆ ಮಾಡಿದ್ದಾರೆ. ಆದರೆ, ಯಾರೊಬ್ಬರ ಫೋನ್‌ ಸಹ ಕರೆ ವ್ಯಾಪ್ತಿಗೆ ಬಂದಿಲ್ಲ. ಹಲವು ಗಂಟೆಗಳ ಹುಡುಕಾಟದ ನಂತರ ಮೂವರು ಸೋದರರ ಪತ್ನಿಯರು ಮತ್ತು ನಾಲ್ವರು ಮಕ್ಕಳ ಶವಗಳು ಮೊರ್ಬಿ ಆಸ್ಪತ್ರೆಯ ಶವಾಗಾರದಲ್ಲಿ ಪತ್ತೆಯಾಗಿವೆ. ತಮ್ಮವರನ್ನು ಕಳೆದುಕೊಂಡ ಜಡೇಜಾ ಸೋದರರು ಶವಾಗಾರದ ಹೊರಗೆ ದಿಗ್ಭ್ರಾಂತರಾಗಿ ಕೂತಿದ್ದರು.

ರಾಜ್‌ಕೋಟ್‌ ಲೋಕಸಭಾ ಕ್ಷೇತ್ರದ ಸಂಸದ ಮೋಹನ್ ಕುಂದಾರಿಯಾ ಅವರ ಸೋದರನ ಸಂಬಂಧಿಯ ಕುಟುಂಬದ ಎಲ್ಲಾ 12 ಜನರು ಮಚ್ಚು ನದಿ ನೀರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಕುಂದಾರಿಯಾ ಅವರ ಸೋದರನ ಮಾವನ ಕುಟುಂಬದ ಮೂವರು ಪುರುಷರು, ನಾಲ್ವರು ಮಹಿಳೆಯರು ಮತ್ತು ಐವರು ಮಕ್ಕಳು ಈ ದುರಂತದಲ್ಲಿ ಮೃತಪಟ್ಟು ಇಡೀ ಕುಟುಂಬವೇ ಇಲ್ಲದಂತಾಗಿದೆ.

ಮೊರ್ಬಿಯಲ್ಲಿ ಇಂತಹ ಹತ್ತಾರು, ಕಣ್ಣೀರಿನ ಕಥೆಗಳು ಇವೆ.

ಮೊರ್ಬಿ ತೂಗು ಸೇತುವೆಯ ನವೀಕರಣ ಮತ್ತು ನಿರ್ವಹಣೆಯನ್ನು ಒರೆವಾ ಗ್ರೂಪ್‌ಗೆ ವಹಿಸಲಾಗಿತ್ತು ಎಂದು ಮೊರ್ಬಿ ಜಿಲ್ಲಾಡಳಿತವು ಹೇಳಿದೆ. ‘ಸೇತುವೆಯನ್ನು ₹ 2 ಕೋಟಿ ವೆಚ್ಚದಲ್ಲಿ ಸಂಪೂರ್ಣವಾಗಿ ನವೀಕರಣ ಮಾಡಲಾಗಿದೆ’ ಎಂದು ಒರೆವಾ ಗ್ರೂಪ್‌ನ ಅಧಿಕಾರಿಗಳು ಇದೇ ಅಕ್ಟೋಬರ್ 24ರಂದು ಹೇಳಿಕೆ ನೀಡಿದ್ದರು. ಆದರೆ, ನವೀಕರಣಕ್ಕೆ ಸಂಬಂಧಿಸಿದ ಟೆಂಡರ್ ಅಥವಾ ಒಪ್ಪಂದ ದಾಖಲೆಗಳು ಲಭ್ಯವಿಲ್ಲ.

ಮೊರ್ಬಿ ಜಿಲ್ಲಾಡಳಿತದ ಅಧಿಕೃತ ಜಾಲತಾಣದಲ್ಲಿ 2018ರ ನಂತರದ ಯಾವುದೇ ಟೆಂಡರ್‌ ದಾಖಲೆಗಳು ಇಲ್ಲ. ಹೀಗಾಗಿ ನವೀಕರಣಕ್ಕೆ ಸಂಬಂಧಿಸಿದ ಯಾವುದೇ ಲಿಖಿತ ದಾಖಲೆ ಲಭ್ಯವಿಲ್ಲ.

ಅಜಂತಾ ಗಡಿಯಾರ ತಯಾರಿಸುವ ಒರೆವಾ ಗ್ರೂಪ್‌ ಈ ಸೇತುವೆಯ ನಿರ್ವಹಣೆಯ ಜವಾಬ್ದಾರಿ ಹೊತ್ತುಕೊಂಡಿತ್ತು. ನವೀಕರಣದ ಗುತ್ತಿಗೆ ಪಡೆದಿದ್ದ ಒರೆವಾ ಕಂಪನಿಯು, ಕಾಮಗಾರಿ ನಡೆಸಲು ಬೇರೆ ಕಂಪನಿಗೆ ಉಪಗುತ್ತಿಗೆ ನೀಡಿದೆ. ಈ ಬಗ್ಗೆ ಒರೆವಾ ಕಂಪನಿಯ ವಕ್ತಾರರೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ, ಈ ಗುತ್ತಿಗೆ ಮತ್ತು ಉಪಗುತ್ತಿಗೆಗೆ ಸಂಬಂಧಿಸಿದಂತೆ ದಾಖಲೆಗಳು ಲಭ್ಯವಿಲ್ಲ. ಒರೆವಾ ಕಂಪನಿಯ ಜಾಲತಾಣಗಳು ಸೋಮವಾರ ಬೆಳಿಗ್ಗೆಯಿಂದ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಯಾವ ದಾಖಲೆಗಳೂ ಲಭ್ಯವಿಲ್ಲ.

‘ಟೆಂಡರ್‌ ಇಲ್ಲದೆಯೇ ಕಂಪನಿಗೆ ನವೀಕರಣದ ಗುತ್ತಿಗೆ ನೀಡಲಾಗಿದೆ’ ಎಂದು ಎನ್‌.ಡಿ.ಟಿವಿ ವರದಿ ಮಾಡಿದೆ.

ಗುಜರಾತ್‌ ಹ್ಯಾಶ್‌ಟ್ಯಾಗ್‌ಗೆ ತಡೆ

ಮೊರ್ಬಿ ತೂಗುಸೇತುವೆ ಅವಘಡವು ವರದಿಯಾಗುತ್ತಿದ್ದಂತೆಯೇ ಟ್ವಿಟರ್‌ ಮತ್ತು ಫೇಸ್‌ಬುಕ್‌ನಲ್ಲಿ #Gujarat ಮತ್ತು #Morbi ಹ್ಯಾಶ್‌ಟ್ಯಾಗ್‌ ಟ್ರೆಂಡ್‌ ಆಗಿದ್ದವು. ‘ಅಭಿವೃದ್ಧಿಯ ಗುಜರಾತ್‌ ಮಾದರಿ’ಯ ಅಸಲಿಯತ್ತು ಜಗಜ್ಜಾಹೀರಾಗಿದೆ ಎಂದು ಹಲವರು #Gujarat ಹ್ಯಾಶ್‌ಟ್ಯಾಗ್‌ ಬಳಸಿ ಪೋಸ್ಟ್‌ ಮಾಡಿದ್ದರು. ಗುಜರಾತ್ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಲು ಈ ಹ್ಯಾಶ್‌ಟ್ಯಾಗ್‌ ಅನ್ನು ಬಳಸಲಾಗಿತ್ತು. ಈ ಹ್ಯಾಶ್‌ಟ್ಯಾಗ್‌ನಲ್ಲಿ ಪೋಸ್ಟ್‌ಗಳ ಸಂಖ್ಯೆ ಹೆಚ್ಚಾದ ಬೆನ್ನಲ್ಲೇ, ಸೋಮವಾರ ಬೆಳಿಗ್ಗೆ ಈ ಹ್ಯಾಶ್‌ಟ್ಯಾಗ್‌ ಅನ್ನು ಫೇಸ್‌ಬುಕ್‌ ಸ್ಥಗಿತಗೊಳಿಸಿತು.

‘ಸಮುದಾಯ ನೀತಿಗಳನ್ನು ಉಲ್ಲಂಘಿಸಿದ ಕಾರಣ #Gujarat ಹ್ಯಾಶ್‌ಟ್ಯಾಗ್‌ ಬಳಸಿದ ಪೋಸ್ಟ್‌ಗಳು ಲಭ್ಯವಿಲ್ಲ’ ಎಂದು ಫೇಸ್‌ಬುಕ್‌ನಲ್ಲಿ ಬಿತ್ತರವಾಗುತ್ತಿತ್ತು. ಇದಕ್ಕೆ ಭಾರಿ ಆಕ್ಷೇಪ ವ್ಯಕ್ತವಾಯಿತು. ತನ್ನ ವಿರುದ್ಧದ ಟೀಕೆಯನ್ನು ಹತ್ತಿಕ್ಕಲು ಬಿಜೆಪಿ ಸರ್ಕಾರವು ಫೇಸ್‌ಬುಕ್‌ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ. ಫೇಸ್‌ಬುಕ್‌ ನಡೆಗೆ ಟೀಕೆ ವ್ಯಕ್ತವಾಗಿದೆ.

ನೆನಪಾದ ಅಣೆಕಟ್ಟೆ ದುರಂತ

ಭಾನುವಾರದ ತೂಗುಸೇತುವೆ ದುರಂತವು 43 ವರ್ಷ ಹಿಂದಿನ ಭೀಕರ ದುರಂತವನ್ನು ನೆನಪಿಸಿದೆ. ಮೊರ್ಬಿ ನಗರದ ಉತ್ತರಕ್ಕೆ ಮಚ್ಚು ನದಿಗೆ ನಿರ್ಮಿಸಲಾಗಿದ್ದ ಮೊರ್ಬಿ ಅಣೆಕಟ್ಟೆ 1979ರಲ್ಲಿ ಒಡೆದಿತ್ತು. ಆ ವರ್ಷದ ಆಗಸ್ಟ್‌ನಲ್ಲಿ ಸತತ ಎರಡು ವಾರ ಸುರಿದಿದ್ದ ಭಾರಿ ಮಳೆಯಿಂದ ಅಣೆಕಟ್ಟೆ ಭರ್ತಿಯಾಗಿತ್ತು. ಹೊರಹರಿವಿಗಿಂತ ಒಳಹರಿವು ಹೆಚ್ಚಾದ ಕಾರಣ, ಅಣೆಕಟ್ಟೆ ದುರ್ಬಲವಾಗಿತ್ತು.

ಇದನ್ನು ಗಮನಿಸದ ಮೊರ್ಬಿ ನಿವಾಸಿಗಳು ಆಗಸ್ಟ್‌ 10ರಂದು ನಿದ್ರೆಗೆ ಜಾರಿದ್ದರು. ಆದರೆ, ಆಗಸ್ಟ್‌ 11ರ ನಸುಕಿನಲ್ಲಿ ಅಣೆಕಟ್ಟೆ ಒಡೆಯಿತು. ಭಾರಿ ಪ್ರಮಾಣದ ನೀರು ಮೊರ್ಬಿ ಪಟ್ಟಣವನ್ನು ಮುಳುಗಿಸಿತು. ಆ ಅವಘಡದಲ್ಲಿ ಮೃತಪಟ್ಟವರೆಷ್ಟು ಎಂಬುದರ ನಿಖರ ದಾಖಲೆ ಇಲ್ಲ. 1,800 ಜನರು ಮೃತಪಟ್ಟಿದ್ದರು ಎಂದು ಕೆಲವು ದಾಖಲೆಗಳು ಹೇಳಿದರೆ, 26,000ಕ್ಕೂ ಹೆಚ್ಚು ಜನರು ಆ ಅವಘಡದಲ್ಲಿ ಮೃತಪಟ್ಟಿದ್ದರು ಎಂದು ಮತ್ತೆ ಕೆಲವು ದಾಖಲೆಗಳು ಹೇಳುತ್ತವೆ.

ಗಿನ್ನೆಸ್ ವಿಶ್ವ ದಾಖಲೆ ಪುಸ್ತಕದಲ್ಲಿ ಇದು ಅತ್ಯಂತ ದೊಡ್ಡ ಅಣೆಕಟ್ಟೆ ದುರಂತ ಎಂದು ದಾಖಲಾಗಿತ್ತು. ಈ ಅವಘಡವನ್ನು ‘ನೋ ಒನ್‌ ಹ್ಯಾಡ್ ಎ ಟಂಗ್‌ ಟು ಸ್ಪೀಕ್‌: ದಿ ಅನ್‌ಟೋಲ್ಡ್‌ ಸ್ಟೋರಿ ಆಫ್‌ ಒನ್‌ ಆಫ್‌ ಹಿಸ್ಟರೀಸ್‌ ಡೆಡ್ಲಿಯೆಸ್ಟ್‌ ಫ್ಲಡ್ಸ್‌’ ಎಂಬ ಪುಸ್ತಕದಲ್ಲಿ ಚಿತ್ರಿಸಲಾಗಿದೆ. ಮೊರ್ಬಿ ತೂಗುಸೇತುವೆ ದುರಂತದ ಸಂದರ್ಭದಲ್ಲಿ ಇಲ್ಲಿನ ಜನ, 43 ವರ್ಷಗಳ ಹಿಂದಿನ ಭೀಕರ ದುರಂತವನ್ನು
ನೆನಪಿಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT