ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ರನ್ ಹೊಳೆಯಲ್ಲಿ ಭೀಕರ ‘ಬೆಟ್ಟಿಂಗ್’ ಸುಳಿ

Last Updated 4 ಮೇ 2019, 20:15 IST
ಅಕ್ಷರ ಗಾತ್ರ

ವಯಸ್ಸಿನ ಭೇದವಿಲ್ಲದೆ ಲಕ್ಷಾಂತರ ಮಂದಿ ಬೆಟ್ಟಿಂಗ್ ಕೂಪದಲ್ಲಿ ಬಿದ್ದು ಹಣ, ಆಸ್ತಿ ಕಳೆದುಕೊಂಡು ಸಾಲಗಾರರಾಗಿದ್ದಾರೆ. ಸಾಲ ತೀರಿಸಲಾಗದೆ ಅನೇಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮತ್ತೆ ಕೆಲವರು ಸಾಲಗಾರರ ಕಾಟ ಎದುರಿಸಲಾಗದೆ, ಮನೆ – ಊರು ತೊರೆದು ನಾಪತ್ತೆಯಾಗಿದ್ದಾರೆ. ಇಷ್ಟೆಲ್ಲಾ ಅವಾಂತರಗಳು ನಡೆಯುತ್ತಿದ್ದರೂ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಬೇಕಿದ್ದ ಸರ್ಕಾರ ತನಗೂ, ಅದಕ್ಕೂ ಸಂಬಂಧವಿಲ್ಲ ಎಂಬಂತಿದೆ. ಪೊಲೀಸರು ಆಗೊಮ್ಮೆ, ಈಗೊಮ್ಮೆ ದಾಳಿ ನಡೆಸಿದಂತೆ ಮಾಡಿ ಸುಮ್ಮನಾಗುತ್ತಿದ್ದಾರೆ.

***

ಬೆಂಗಳೂರು: ಟೆಸ್ಟ್, ಏಕದಿನ ಪಂದ್ಯಗಳನ್ನು ಹಿಂದಿಕ್ಕಿ ಅಭಿಮಾನದ ಹುಚ್ಚು ಹೆಚ್ಚಿಸಿಕೊಂಡ ಐಪಿಎಲ್ ಎಂಬ ಚುಟುಕು ಕ್ರಿಕೆಟ್, ತನ್ನ ಮೆರುಗಿನಿಂದ ಇಡೀ ಜಗತ್ತಿನ ಕಣ್ಣುಗಳೇ ಭಾರತದತ್ತ ಹೊರಳುವಂತೆ ಮಾಡಿದೆ. ಮೈದಾನದಲ್ಲಿ ರನ್ ಹೊಳೆ ಹರಿದಷ್ಟೇ ವೇಗದಲ್ಲಿ, ಬೌಂಡರಿ ಗೆರೆಯಿಂದಾಚೆ ‘ಬಾಜಿ’ಯ ಮೀಟರ್ ಓಡುತ್ತಿದೆ. ಕ್ರಿಕೆಟ್‌ನ ಅಪ್ಪಟ ಅಭಿಮಾನಿಗಳು ಮಾತ್ರ ಸಂಭ್ರಮದಲ್ಲಿ ಮಿಂದೇಳುತ್ತಿದ್ದರೆ, ಜೂಜಿಗೆ ಬಿದ್ದ ‘ಅಂದಾಭಿಮಾನಿ’ಗಳು ತಮ್ಮ ಬದುಕನ್ನು ಆ ರನ್ ಹೊಳೆಯ ಸುಳಿಯಲ್ಲೇ ಮುಳುಗಿಸಿಕೊಂಡು ಒದ್ದಾಡುತ್ತಿದ್ದಾರೆ...

ಈ ಬಾರಿ ಲೋಕಸಭಾ ಚುನಾವಣೆ ಭರಾಟೆ ನಡುವೆಯೇ ಐಪಿಎಲ್ ಅಬ್ಬರ ಶುರುವಾಗಿದ್ದರಿಂದ, ಗಲ್ಲಿಗಲ್ಲಿಗಳಲ್ಲಿ ಈಗಲೂ ಸೋಲು–ಗೆಲುವಿನದ್ದೇ ಲೆಕ್ಕಾಚಾರ. ಪಂದ್ಯದ ಮೇಲಷ್ಟೇ ಅಲ್ಲದೆ ನಾಣ್ಯ ಚಿಮ್ಮಿಕೆ, ಬೌಂಡರಿ, ಸಿಕ್ಸರ್, ವಿಕೆಟ್ ಪತನ... ಹೀಗೆ, ಪಂದ್ಯದ ಪ್ರತಿ ಹಂತಕ್ಕೂ ಬಾಜಿ ನಡೆಯುತ್ತಿದೆ. ದೇಶದ ಯಾವುದೋ ಮೈದಾನದಲ್ಲಿ ಆಟಗಾರ ಸಿಕ್ಸರ್ ಎತ್ತಿದರೆ, ರಾಜ್ಯದ ಗಲ್ಲಿ ಹುಡುಗನ ಹೃದಯ ಚಿಟ್ಟೆಯಂತೆ ಹಾರುತ್ತದೆ. ಇನ್ಯಾರೋ ಔಟ್ ಆದರೆ, ಆತನ ಹೃದಯ ಬಡಿತ ಒಂದು ಕ್ಷಣ ನಿಂತು ಹೋಗುತ್ತದೆ.

ಮೊದಲೆಲ್ಲ ಅಂತರರಾಷ್ಟ್ರೀಯ ಮಟ್ಟದಲ್ಲಿ ಕದ್ದು ಮುಚ್ಚಿ ನಡೆಯುತ್ತಿದ್ದ ಬೆಟ್ಟಿಂಗ್ ವ್ಯವಹಾರ, ಈಗ ಹಳ್ಳಿ–ಹಳ್ಳಿಗೂ ವಿಸ್ತರಿಸಿದೆ. ಯಾವ ತಂಡದ ಪರ ಬೆಟ್ಟಿಂಗ್ ಆಡುವುದು ಸೂಕ್ತ? ಯಾವ ಆಟಗಾರ ಚೆನ್ನಾಗಿ ಆಡಬಲ್ಲ? ಎಷ್ಟು ಹಣದವರೆಗೆ ಬಾಜಿ ಕಟ್ಟಬಹುದು ಎಂಬುದನ್ನು ತಿಳಿಸುವುದಕ್ಕೇ ಸದ್ಯ 40ಕ್ಕೂ ಹೆಚ್ಚು ವೆಬ್‌ಸೈಟ್‌ಗಳಿವೆ. ಕ್ರಿಕೆಟ್‌ನ ಗಂಧ–ಗಾಳಿ ಗೊತ್ತಿಲ್ಲದವರ ಮೊಬೈಲ್‌ಗಳಲ್ಲೂ ಈಗ ಅವೇ ಆ್ಯಪ್‌ಗಳು ಕುಣಿಯುತ್ತಿವೆ.

ಹಣಕಾಸಿನ ವ್ಯವಹಾರ ಕೂಡ ಆನ್‌ಲೈನ್‌ನಲ್ಲೇ ನಡೆಯುತ್ತಿದ್ದು, ಜನ ತಮ್ಮ ಬ್ಯಾಂಕ್ ಖಾತೆಗಳನ್ನೂ ವೆಬ್‌ಸೈಟ್‌ಗಳಿಗೆ ಲಿಂಕ್ ಮಾಡಿಬಿಟ್ಟಿದ್ದಾರೆ. ತಾವು ಯಾರ ಬಳಿ ಬಾಜಿ ಕಟ್ಟುತ್ತಿದ್ದೇವೆ? ಗೆದ್ದಾಗ ತಮಗೆ ಯಾರು ಹಣ ಕೊಡುತ್ತಾರೆ ಎಂಬ ಜ್ಞಾನವೂ ಇಲ್ಲದೇ ಯುವಕರು ಜೂಜಾಡುತ್ತಿದ್ದಾರೆ. ತಾವಾಯಿತು, ತಮ್ಮ ಕೆಲಸವಾಯಿತು ಎಂದು ನಿತ್ಯ ಸಂಸಾರದ ನೊಗ ಎಳೆಯುತ್ತಿರುವ ಪೋಷಕರಿಗೆ, ತಮ್ಮ ಮಕ್ಕಳ ಈ ಹುಚ್ಚಾಟ ಗೊತ್ತೂ ಆಗುತ್ತಿಲ್ಲ. ‘ಎಲ್ಲರಂತೆ ನಮ್ಮ ಮಗನೂ ಕ್ರಿಕೆಟ್ ಗೀಳು ಬೆಳೆಸಿಕೊಂಡಿದ್ದಾನೆ’ ಎಂದು ಅವರೂ ಅವನೊಂದಿಗೇ ಕುಳಿತು ಪಂದ್ಯ ವೀಕ್ಷಿಸುತ್ತಿದ್ದಾರೆ.

ಆದರೆ, ಬಾಜಿಯ ಇಳಿಜಾರಿನಲ್ಲಿ ನಿಂತಿರುವವರು ತಮ್ಮ ಬಂಧು–ಮಿತ್ರರು, ನೆರೆ–ಹೊರೆಯವರು ಎನ್ನದೇ ಎಲ್ಲರ ಬಳಿಯೂ ಸಾಲಕ್ಕಾಗಿ ಕೈಚಾಚುತ್ತಿದ್ದಾರೆ. ಅದನ್ನು ತೀರಿಸಲಾಗದೆ ಜೀವ ಬಿಡುತ್ತಿದ್ದಾರೆ. ಶಾಶ್ವತವಾಗಿ ಕಣ್ಮರೆ ಆಗುತ್ತಿದ್ದಾರೆ.

ಮಂಡ್ಯ ಜಿಲ್ಲೆ ತಾವರಗೆರೆಯ ಫೈನಾನ್ಶಿಯರ್ ಆತ್ಮಹತ್ಯೆಗೆ ಶರಣಾದ, ಆಲೂರಿನ ಎಂಜಿನಿಯರಿಂಗ್ ಪದವೀಧರ ಕುಖ್ಯಾತ ಸರಗಳ್ಳನಾದ, ಬಾಗಲಕೋಟೆಯ ಇಳಕಲ್, ಕೆರೂರಿನಲ್ಲಿ ವಿದ್ಯಾರ್ಥಿಗಳು ನೇಣಿಗೆ ಕೊರಳೊಡ್ಡಿದ, ಹಣ ಕೊಡಲಿಲ್ಲವೆಂದು ಮಂಗಳೂರಿನ ಉದ್ಯಮಿ ಶರಾಬಿಗೆ ವಿಷ ಬೆರೆಸಿ ಕುಡಿದ, ಹಾಸನದ ಕುಂದೂರು ಹೋಬಳಿಯ ಡಿಪ್ಲೊಮಾ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ, ಚಾಮರಾಜನಗರ ಸರಗೂರಿನಲ್ಲಿ ಯುವಕ ಊರು ಬಿಟ್ಟ... ಇಂತಹ ಹತ್ತು–ಹಲವು ನಿದರ್ಶನಗಳು ಬೆಟ್ಟಿಂಗ್ ದಂಧೆಯ ಕರಾಳ ಮುಖವನ್ನು ಬಿಚ್ಚಿಡುತ್ತವೆ.

ಏಳು ಸೆಕೆಂಡ್, ಕೋಟಿ–ಕೋಟಿ ಬಾಜಿ: ದೇಶದ ಯಾವುದೋ ಮೂಲೆಗಳಲ್ಲಿ (ಪ್ರಮುಖವಾಗಿ ಮುಂಬೈ, ರಾಜಸ್ಥಾನ, ಪಂಜಾಬ್ ಹಾಗೂ ಹರಿಯಾಣ) ಕೂತ ‘ಬುಕ್ಕಿ’ಗಳು, ತಮ್ಮ ಕೈಕೆಳಗೆ ‘ಪಂಟರ್‌’ಗಳನ್ನು ಇಟ್ಟುಕೊಂಡಿರುತ್ತಾರೆ. ಪ್ರತಿ ಪಂಟರ್, ನೂರಾರು ಏಜೆಂಟ್‌ಗಳನ್ನು ಹೊಂದಿರುತ್ತಾನೆ. ಹೆಚ್ಚು ಬಾಜಿ ಕಟ್ಟುತ್ತಿರುವ ವ್ಯಕ್ತಿಗಳನ್ನು ಹುಡುಕಿ, ತಮ್ಮ ಜಾಲದಲ್ಲೇ ಬೆಟ್ಟಿಂಗ್‌ಗೆ ತೊಡಗಿಸುವಂತೆ ಅವರನ್ನು ಪುಸಲಾಯಿಸುವುದು ಆ ಏಜೆಂಟ್‌ಗಳ ಕೆಲಸ.

ಸಾಮಾನ್ಯವಾಗಿ ಮೈದಾನದಲ್ಲಿ ನಡೆಯುವ ಪಂದ್ಯಕ್ಕೂ, ಅದು ಟಿ.ವಿಯಲ್ಲಿ ಪ್ರಸಾರವಾಗುವುದಕ್ಕೂ ಏಳು ಸೆಕೆಂಡ್ ವ್ಯತ್ಯಾಸವಿರುತ್ತದೆ. ಹೀಗಾಗಿ, ಬುಕ್ಕಿಗಳು ಮೈದಾನದಲ್ಲಿರುವ ತಮ್ಮ ಹುಡುಗರಿಂದ ಮಾಹಿತಿ ಪಡೆದು, ಏಳು ಸೆಕೆಂಡ್‌ಗಳ ಅಂತರದಲ್ಲೇ ಬೆಟ್ಟಿಂಗ್ ಕಟ್ಟಿಸಿಕೊಂಡು ಕೋಟಿ–ಕೋಟಿ ಲೂಟಿ ಹೊಡೆಯುತ್ತಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ
ಕ್ರೀಡಾಂಗಣದಲ್ಲಿ ಪ್ರತಿ ಪಂದ್ಯ ನಡೆದಾಗಲೂ, ಇಂತಹ ಕನಿಷ್ಠ ಇಬ್ಬರು ಹುಡುಗರು ಪೊಲೀಸರಿಗೆ ಸಿಕ್ಕಿಬೀಳುತ್ತಿದ್ದಾರೆ.

ಬೆಟ್ಟಿಂಗ್‌ನಲ್ಲಿ ಆಸಕ್ತಿವುಳ್ಳ ಹಾಗೂ ಉದ್ಯೋಗವಿಲ್ಲದ ಯುವಕರನ್ನು ಗುರುತಿಸಿಕೊಳ್ಳುವ ಏಜೆಂಟ್‌ಗಳು, ಅವರಿಗೆ ಹಣದ ಆಮಿಷವೊಡ್ಡಿ ತಮ್ಮ ಜಾಲಕ್ಕೆ ಸೇರಿಸಿಕೊಳ್ಳುತ್ತಾರೆ. ಯಾವ ರಾಜ್ಯದಲ್ಲಿ ಪಂದ್ಯ ಇರುತ್ತದೋ, ಏಜೆಂಟ್‌ಗಳು ಕೊಡುವ ‘ರೂಟರ್’ ಹಾಗೂ ‘3–ಡಿ ಮೊಬೈಲ್’ ಸಾಧನಗಳನ್ನು ತೆಗೆದುಕೊಂಡು ಯುವಕರು ಆ ಪಂದ್ಯ ವೀಕ್ಷಣೆಗೆ ತೆರಳಬೇಕು. ಅವರಿಗೆ ವಿಮಾನ ಪ್ರಯಾಣಕ್ಕೆ ಏಜೆಂಟ್‌ಗಳೇ ಟಿಕೆಟ್ ಮಾಡಿಸಿ, ಪ್ರತಿಷ್ಠಿತ ಹೋಟೆಲ್‌ನಲ್ಲಿ ರೂಮ್‌ ಕೂಡ ಕೊಡಿಸುತ್ತಾರೆ. ಜತೆಗೆ ಒಂದು ಪಂದ್ಯಕ್ಕೆ ₹ 10 ಸಾವಿರ ಕಮಿಷನ್ ನೀಡುತ್ತಾರೆ.

ಮೂರೇ ಬಟನ್‌ಗಳು: 3–ಡಿ ಫೋನ್‌ನಲ್ಲಿ #,1,2 ಎಂಬ ಮೂರು ಬಟನ್‌ಗಳಿರುತ್ತವೆ. # ಎಂದರೆ ವಿಕೆಟ್, 1 ಎಂದರೆ ಬೌಂಡರಿ (4 ರನ್) ಹಾಗೂ 2 ಎಂದರೆ ಸಿಕ್ಸರ್ ಎಂತಲೂ ಸಂಕೇತ ಪದಗಳು ನಿಗದಿಯಾಗಿರುತ್ತವೆ. ಪಂಟರ್ ಹಾಗೂ ಬುಕ್ಕಿಗಳು, ಆ 3–ಡಿ ಫೋನ್‌ಗಳನ್ನು ತಮ್ಮ ಲ್ಯಾಪ್‌ಟಾಪ್‌ಗಳಿಗೆ ಲಿಂಕ್ ಮಾಡಿರುತ್ತಾರೆ. ವಿಕೆಟ್ ಪತನವಾದರೆ ಮೈದಾನದಲ್ಲಿರುವ ಹುಡುಗ ತಕ್ಷಣ ಫೋನ್‌ನಲ್ಲಿ # ಬಟನ್ ಒತ್ತುತ್ತಾನೆ.

ಅದು ಕ್ಷಣಮಾತ್ರದಲ್ಲಿ ಬುಕ್ಕಿಗಳ ಲ್ಯಾಪ್‌ಟಾಪ್‌ಗೆ ಹೋಗುತ್ತದೆ. ಕೂಡಲೇ ಅವರು, ‘ಈ ಬಾಲ್ ವಿಕೆಟ್ ಹೋಗುತ್ತದೆ’ ಎಂದು ಆನ್‌ಲೈನ್‌ನಲ್ಲೇ ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಾರೆ. ಹೀಗೆ, ಕ್ಷಣ ಕ್ಷಣವೂ ಅವರು ದುಡ್ಡಿಗಾಗಿ ಹೋರಾಟ ನಡೆಸುತ್ತಾರೆ. ಪ್ರತಿ ಎಸೆತಕ್ಕೂ ಲಕ್ಷಾಂತರ ಮಂದಿ ಬಾಜಿ ಕಟ್ಟುವುದರಿಂದ, ಪಂದ್ಯ ಮುಗಿಯುವ ಹೊತ್ತಿಗೆ ಒಬ್ಬ ಬುಕ್ಕಿ ₹ 300 ಕೋಟಿಯಿಂದ ₹ 400 ಕೋಟಿವರೆಗೆ ವಹಿವಾಟು ನಡೆಸಿರುತ್ತಾನೆ ಎಂದು ಪೊಲೀಸ್ ಮೂಲಗಳು ಹೇಳುತ್ತವೆ.

ಬೆಂಗಳೂರಿನಲ್ಲಿರುವ ಬುಕ್ಕಿಗಳು ತಮ್ಮ ಭದ್ರತೆಗೆ ಗನ್‌ಮ್ಯಾನ್‌ಗಳನ್ನು ಇಟ್ಟುಕೊಂಡು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಅವರು ಪೊಲೀಸರು, ರಾಜಕಾರಣಿಗಳ ನೆರಳಿನಲ್ಲೇ ಸಲೀಸಾಗಿವ್ಯವಹಾರನಡೆಸುತ್ತಿರುವ ಸಂಗತಿ ಗುಟ್ಟಾಗಿಉಳಿದಿಲ್ಲ. ಕೆಲ ದಿನಗಳ ಹಿಂದಷ್ಟೇ, ‘ಬೆಟ್ಟಿಂಗ್

ಬುಕ್ಕಿ ಹಾಗೂ ಕೆಲ ದಂಧೆಕೋರರು ಸೇರಿಕೊಂಡು ಸರ್ಕಾರ ಬೀಳಿಸಲು ಕಸರತ್ತು ನಡೆಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೇ ಹೇಳಿದ್ದರು. ಅಂತಹ ತಾಕತ್ತೂ ಬುಕ್ಕಿಗಳಿಗಿದೆ.

ಕಾನೂನು ಏನು ಹೇಳುತ್ತೆ?

‘ಸಾರ್ವಜನಿಕ ಜೂಜು ಕಾಯ್ದೆ-1867’ರ ಪ್ರಕಾರ ಯಾವುದೇ ಆಟದ ಫಲಿತಾಂಶದ ಮೇಲೆ ಬೆಟ್ಟಿಂಗ್ ಕಟ್ಟುವುದು ಕಾನೂನಿಗೆ ವಿರೋಧ.

ಹುಬ್ಬಳ್ಳಿಯೇ ಡೆಲಿವರಿ ಪಾಯಿಂಟ್!

ಕರ್ನಾಟಕಕ್ಕೆ ಬೆಂಗಳೂರು ರಾಜಧಾನಿಯಾದರೆ, ಇಡೀ ರಾಜ್ಯದ ಬೆಟ್ಟಿಂಗ್ ಸಾಮ್ರಾಜ್ಯಕ್ಕೆ ಹುಬ್ಬಳ್ಳಿಯೇ ರಾಜಧಾನಿ. ಬುಕ್ಕಿಗಳು ತಮ್ಮ ಜಾಲವನ್ನು ಹರಡಿಕೊಳ್ಳಲು ‘ಛೋಟಾ ಮುಂಬೈ’ ಖ್ಯಾತಿಯ ಹುಬ್ಬಳ್ಳಿಯನ್ನು ‘ಡೆಲಿವರಿ ಪಾಯಿಂಟ್’ ಆಗಿ ಬಳಸಿಕೊಳ್ಳುತ್ತಿದ್ದಾರೆ!

‘ಠೋಕಾ’ ಅಥವಾ ‘ಸಾಮಾನ್’ ಎಂದು ಕರೆಯಲಾಗುವ ಬಾಜಿ ಹಣವನ್ನು ಹವಾಲಾ ಮೂಲಕವೇ ಏಜೆಂಟ್‌ಗಳು ಬೆಂಗಳೂರಿನಿಂದ ಹುಬ್ಬಳ್ಳಿ ಮೂಲಕ ಮುಂಬೈಗೆ ಸಾಗಿಸುತ್ತಾರೆ. ಮೈಸೂರು ಕರ್ನಾಟಕ ಭಾಗದ ಬೆಟ್ಟಿಂಗ್ ಹಣ ಬೆಂಗಳೂರಿಗೆ ಬಂದು ತಲುಪಿದರೆ, ಅಲ್ಲಿಂದ ಬಾಜಿ ಹಣ ಹರಿಯುವುದು ಹುಬ್ಬಳ್ಳಿ ಕಡೆಗೆ. ಬುಕ್ಕಿಗಳು ಇಲ್ಲಿನ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರ ಜತೆ ನೇರ ಒಡನಾಟ ಇಟ್ಟುಕೊಂಡಿರುವ ಕಾರಣ ಪೊಲೀಸರೂ ಇವರನ್ನು ಮುಟ್ಟುವುದಿಲ್ಲ.

ರಾಜಸ್ಥಾನ, ಮಧ್ಯಪ್ರದೇಶ, ಮುಂಬೈ, ಕೇರಳ.. ಹೀಗೆ ಎಲ್ಲೆಂದರಲ್ಲಿ ಹಣ ಬಟವಾಡೆ ಮಾಡುವ ಪ್ರಮುಖ ಹವಾಲಾ ಏಜೆಂಟರಿಗೆ ಹುಬ್ಬಳ್ಳಿಯೇ ಸ್ವರ್ಗ ಎಂದೇ ಹೇಳಲಾಗುತ್ತದೆ.

ಪ್ರತಿ ಮೊಬೈಲ್‌ನಲ್ಲೂ ‘ಡ್ರೀಮ್–11’

ತಾವೇ ಆಟಗಾರರನ್ನು ಆಯ್ಕೆ ಮಾಡಿ ಹಣ ಹೂಡುವ ತಂತ್ರಗಾರಿಕೆಯ ಆಟ ‘ಡ್ರೀಮ್–11’. ಇದೂ ಬೆಟ್ಟಿಂಗ್‌ನ ಇನ್ನೊಂದು ಆಯಾಮವಷ್ಟೆ. ಬಾಜಿಯ ಗೀಳಿಗೆ ಬಿದ್ದ ಪ್ರತಿಯೊಬ್ಬರೂ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಇಲ್ಲೂ ಪ್ರತಿ ಪಂದ್ಯಕ್ಕೂ ಕೋಟ್ಯಂತರ ರೂಪಾಯಿಯ ವಹಿವಾಟು ನಡೆಯುತ್ತದೆ. ₹ 15 ರಿಂದ ₹ 10 ಸಾವಿರದವರೆಗೆ ಹೂಡಿಕೆಗೆ ಅವಕಾಶವಿರುತ್ತದೆ. ಯಾವುದೋ ಒಂದು ಪಂದ್ಯದಲ್ಲಿ ಲಾಭ ಪಡೆಯುವ ಯುವಕರು, ಹಿಂದೆ ಹತ್ತು ಪಂದ್ಯಗಳಲ್ಲಿ ಸೋತಿರುವುದನ್ನೂ ಮರೆತು ಮತ್ತೆ ಟೀಂ ಕಟ್ಟುತ್ತಾರೆ. ಹಣ ಹೂಡುತ್ತಾರೆ. ಐಪಿಎಲ್ ಮಾತ್ರವಲ್ಲದೆ, ಬಿಗ್ ಬ್ಯಾಶ್ (ಆಸ್ಟ್ರೇಲಿಯಾ), ಬಿಪಿಎಲ್ (ಬಾಂಗ್ಲಾದೇಶ), ಸಿಸಿಎಲ್ (ವೆಸ್ಟ್‌ಇಂಡೀಸ್), ಎಸ್‌ಎಲ್‌ಪಿಎಲ್ (ಶ್ರೀಲಂಕಾ) ಹಾಗೂ ಮಹಿಳಾ ಕ್ರಿಕೆಟ್ ಪಂದ್ಯಗಳ ಬಾಜಿಗೂ ಈ ಆ್ಯಪ್ ವೇದಿಕೆಯಾಗಿದೆ.

‘ಹೈವೊಲ್ಟೇಜ್’ ಮ್ಯಾಚ್‌ಗೆ ಹೆಚ್ಚು ಬಾಜಿ

ಚೆನ್ನೈ ಸೂಪರ್‌ಕಿಂಗ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪ್ರತಿ ಐಪಿಎಲ್‌ನಲ್ಲೂ ಬಾಜಿ ಕಟ್ಟುವವರ ಪಾಲಿನ ನೆಚ್ಚಿನ ತಂಡಗಳು.

ಈ ತಂಡಗಳು ಮುಖಾಮುಖಿಯಾದಾಗ ಬುಕ್ಕಿಗಳೂ ಗೊಂದಲಕ್ಕೆ ಒಳಗಾಗುತ್ತಾರೆ. ಆಗ, ‘₹ 1,000ಕ್ಕೆ ₹1,300ರಂತೆ ಕೊಟ್ಟು ನೀವೇ ಯಾವುದಾದರೂ ತಂಡವನ್ನು ಆರಿಸಿಕೊಳ್ಳಿ’ ಎಂದು ಆಯ್ಕೆಯ ಅವಕಾಶವನ್ನು ಬೆಟ್ಟಿಂಗ್ ಆಡುವವರಿಗೇ ಬಿಟ್ಟುಕೊಡುತ್ತಾರೆ.

ಆಪ್ತನೇ ‘ಮೃತ್ಯುಕೂಪದ’ ಏಜೆಂಟ್

‘ಬೆಟ್ಟಿಂಗ್ ವ್ಯವಹಾರ ಜೋರಿರುವ ಪ್ರತಿ ಊರು–ಕೇರಿಗಳಲ್ಲೂ ಒಬ್ಬೊಬ್ಬ ಏಜೆಂಟ್ ಇರುತ್ತಾನೆ. ಅವನು, ಬೆಟ್ಟಿಂಗ್ ಆಡುವವರ ಬಾಲ್ಯ ಅಥವಾ ಆಪ್ತ ಸ್ನೇಹಿತನೇ ಆಗಿರುತ್ತಾನೆ. ಗೆಳೆಯರನ್ನು ಅದರ ಕೂಪದಲ್ಲಿ ದೂಡಿ, ತಾನು ಪಂಟರ್‌ಗಳಿಂದ ಕಮಿಷನ್ ಪಡೆದು ಸುಖವಾಗಿರುತ್ತಾನೆ. ಇದನ್ನು ಅರಿಯುವ ಹೊತ್ತಿಗೆ, ಯುವಕರ ಬಾಳು ಬೀದಿಗೆ ಬಿದ್ದಿರುತ್ತದೆ’ ಎನ್ನುತ್ತಾರೆ ಪೊಲೀಸರು.

‘ಜಾಮರ್’ಗೇ ಸಡ್ಡು ಹೊಡೆದರು!

ಬುಕ್ಕಿಗಳು ಮೊದಲೆಲ್ಲ ಕ್ರೀಡಾಂಗಣದಲ್ಲಿ ಇರುವ ತಮ್ಮ ಹುಡುಗರನ್ನು ಮೊಬೈಲ್‌ ಮೂಲಕವೇ ಸಂಪರ್ಕಿಸುತ್ತಿದ್ದರು. ಆದರೆ, ‘ಜಾಮರ್’ ಅಳವಡಿಕೆ ಬಳಿಕ ಮೊಬೈಲ್ ಸಂಪರ್ಕ ಸಿಗುವುದು ಕಷ್ಟವಾಯಿತು. ಆಗ ಅವರು ‘3–ಡಿ’ ಫೋನ್ ಅಸ್ತ್ರ ಬಳಸಿದರು. ಜಾಮರ್‌ಗೆ ಈ ಫೋನನ್ನು ನಿಯಂತ್ರಿಸುವ ಸಾಮರ್ಥ್ಯ ಇರದ ಕಾರಣ, ಸಂಪರ್ಕ ಇನ್ನೂ ಆರಾಮಾವಾಗಿದೆ.

ಬೆಟ್ಟಿಂಗ್ ಸಂಬಂಧ 2016 ರಿಂದ 2019ರ ಏಪ್ರಿಲ್‌ವರೆಗೆ ದಾಖಲಾಗಿರುವ ಪ್ರಕರಣಗಳ ವಿವರ

ಜಿಲ್ಲೆ – ದಾಖಲಾದ ಪ್ರಕರಣ

ಬೆಂಗಳೂರು –104

ದಾವಣಗೆರೆ – 67

ಮೈಸೂರು – 63

ಬೆಳಗಾವಿ – 47

ಬಳ್ಳಾರಿ – 40

ಹುಬ್ಬಳ್ಳಿ–ಧಾರವಾಡ – 38

ಚಿಕ್ಕಬಳ್ಳಾಪುರ – 36

ರಾಯಚೂರು – 34

ವಿಜಯಪುರ –34

ಕೊಪ್ಪಳ – 31

ಶಿವಮೊಗ್ಗ – 30

ಬಾಗಲಕೋಟೆ –19

ಬೀದರ್ –17

ಚಿತ್ರದುರ್ಗ –15

ಗದಗ –15

ಮಂಗಳೂರು –15

ಕಲಬುರ್ಗಿ –13

ತುಮಕೂರು –12

ಹಾವೇರಿ –11

ಯಾದಗಿರಿ –10

ಹಾಸನ – 7

ಚಿಕ್ಕಮಗಳೂರು –5

ಕೋಲಾರ – 5‌

ಉತ್ತರ ಕನ್ನಡ – 3

ರಾಮನಗರ –3

ಚಾಮರಾಜನಗರ – 2

ದಕ್ಷಿಣ ಕನ್ನಡ – 2

ಕೊಡಗು – 2

ಉಡು‍ಪಿ – 2

ಮಂಡ್ಯ –1

ಒಟ್ಟು – 683

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT