ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

'ಬೆಟ್ಟಿಂಗ್‌ ಭೂತದ ತಾಂಡವ': ಒಳನೋಟ ಪ್ರತಿಕ್ರಿಯೆಗಳು

Published 7 ಮೇ 2023, 13:22 IST
Last Updated 7 ಮೇ 2023, 13:22 IST
ಅಕ್ಷರ ಗಾತ್ರ

‘ಬೆಟ್ಟಿಂಗ್‌ ಭೂತದ ತಾಂಡವ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ಮೇ 7) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರ ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.

‘ಬೆಟ್ಟಿಂಗ್‌ ಹಾವಳಿ ನಿಯಂತ್ರಿಸಿ’

ಇತ್ತೀಚೆಗೆ ರಮ್ಮಿಗೆ ಜೊತೆಗೆ ಆನ್‌ಲೈನ್‌ ಕ್ರಿಕೆಟ್‌ ಬೆಟ್ಟಿಂಗ್‌ ಹಾವಳಿ ಹೆಚ್ಚಾಗಿದೆ. ಮೊಬೈಲ್‌ ಮೂಲಕ ಲಕ್ಷಾಂತರ ಹಣವನ್ನು ಕುಳಿತಲ್ಲೇ ಕಳೆದುಕೊಳ್ಳುತ್ತಿದ್ದಾರೆ. ಈ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ? ಎಷ್ಟು ಸೀಟ್‌ ಗೆಲ್ಲತಾರೆ ಎನ್ನುವುದನ್ನು ಆನ್‌ಲೈನ್‌ ಬೆಟ್ಟಿಂಗ್‌ ಮಾಡಬಹುದಂತೆ. ಈ ರೀತಿ ಮಾಡುವಂತೆ ಪ್ರತಿದಿನ ಕರೆಗಳು ಬರುತ್ತಿವೆ. ಕಷ್ಟಪಟ್ಟು ದುಡಿದ ಕ್ಷಣದಲ್ಲಿ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಕೂಡಲೇ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು.

–ದೀಪಕ್ ಶಿರಾಲಿ, ಬೆಂಗಳೂರು

**

‘ಸಂಸಾರವನ್ನೇ ನಾಶ ಮಾಡುತ್ತಿರುವ ಕ್ರಿಕೆಟ್‌ ಬೆಟ್ಟಿಂಗ್‌’

ಟಿ-20 ಕ್ರಿಕೆಟ್ ಪ್ರಾರಂಭವಾದ ದಿನಗಳಲ್ಲೇ, ನಾಡಿನ ಖ್ಯಾತ ಸಾಹಿತಿರೊಬ್ಬರು, ‘ಒನ್ ಡೇ ಮ್ಯಾಚ್ ಹೆಂಡತಿ ಇದ್ದಂತೆ, ಟಿ-20 ವೈಶ್ಯೆ ಇದ್ದಂತೆ’ ಎಂದಿದ್ದರು ಏಕೆಂದರೆ ಇದಕ್ಕಿಂತಲೂ ಕೆಟ್ಟ ಪದ ಉಪಯೋಗಿಸಲು ಬರುವುದಿಲ್ಲ ಎಂದು ಹೇಳಿದ್ದರು. ನಮ್ಮ ಸ್ನೇಹಿತರ ಮಗಳನ್ನು ಹುಚ್ಚು ಕ್ರಿಕೆಟ್ ಪ್ರೇಮಿಯೊಬ್ಬನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಈತ ತನ್ನ ಹೆಂಡತಿ ಬಳಿ ಇದ್ದ ಎಲ್ಲಾ ಚಿನ್ನಾಭರಣಗಳನ್ನು ಮಾರಿ ಕ್ರಿಕೆಟ್ ಬೆಟ್ಟಿಂಗ್ ಕಟ್ಟಿ ಬೀದಿ ಪಾಲಾದ. ವರದಕ್ಷಿಣೆಯ ಹೆಸರಿನಲ್ಲಿ ಹೆಂಡತಿಗೆ ತೊಂದರೆ ಕೊಡಲು ಪ್ರಾರಂಭಿಸಿ, ಕಡೆಗೆ ವಿವಾಹ ವಿಚ್ಛೇಧನದಲ್ಲಿ ಕೊನೆಯಾಯಿತು. ಈ ದಂಪತಿಯ 5 ವರ್ಷದ ಮಗು ಈಗ ಅನಾಥವಾಗಿದೆ.

ಮನರಂಜನೆಗಾಗಿ ಇರಬೇಕಾದ ಟಿ-20, ಈಗ ದೊಡ್ಡ ಬೆಟ್ಟಿಂಗ್ ದಂಧೆಯಾಗಿ ಮಾರ್ಪಟ್ಟು, ಅನೇಕ ಸಂಸಾರಗಳನ್ನೇ ನಾಶ ಮಾಡುತ್ತಿದೆ.

–ಬೂಕನಕೆರೆ ವಿಜೇಂದ್ರ, ಮೈಸೂರು.

*

‘ಬೆಟ್ಟಿಂಗ್‌: ಹಳ್ಳಿಗಳಲ್ಲಿ ವೈರಸ್ ರೀತಿ ಹಬ್ಬಿದೆ’

ಐಪಿಎಲ್ ಬಂತೆಂದರೆ ಹಳ್ಳಿಗಳಲ್ಲಿ ದುಡಿದ ಹಣ ಬೆಟ್ಟಿಂಗ್‌ಗೆ ಹಾಕಲಾಗುತ್ತಿದೆ. ಹೆಂಡತಿ ಮಕ್ಕಳ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಜನ ಕೆಲಸ ಮಾಡದೇ ಬೆಳಗಿನಿಂದ ಸಂಜೆಯವರೆಗೂ ಆ ದಿನ ನಡೆಯುವ ಪಂದ್ಯಗಳ ಬಗ್ಗೆ ಪರಾಮರ್ಶೆ ಮಾಡುತ್ತಿರುತ್ತಾರೆ. ವಿದ್ಯಾರ್ಥಿಗಳಿಗೆ ಈ ಆಟದ ಬಗ್ಗೆ ಜಾಸ್ತಿ ಒಲವಿದ್ದು, ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ. ಆದ್ದರಿಂದ, ಸರ್ಕಾರ ಈ ಬೆಟ್ಟಿಂಗ್ ಭೂತವನ್ನು ನಿಷೇಧ ಮಾಡಬೇಕು.

- ಎಂ ಪರಮೇಶ್ವರ, ಮದ್ದಿಹಳ್ಳಿ, ಹಿರಿಯೂರು, ಚಿತ್ರದುರ್ಗ

**

‘ಬೆಟ್ಟಿಂಗ್‌ ಜಾಹೀರಾತು‌ ನಿಷೇಧಿಸಿ’

ಕ್ರಿಕೆಟ್‌ಗೆ ಸಂಬಂಧಿಸಿದ ಆನ್‌ಲೈನ್‌ ಬೆಟ್ಟಿಂಗ್‌ ಜಾಹಿರಾತುಗಳನ್ನು ನಿಷೇಧಿಸುವ ಕೆಲಸವಾಗಬೇಕು. ಬಹುತೇಕ ಸಂದರ್ಭಗಳಲ್ಲಿ, ಹಣಕಾಸಿನ ಅನಿವಾರ್ಯತೆಗೆ ಯುವ ಸಮುದಾಯ ಜೂಜಿನ ಜಾಹೀರಾತುಗಳಿಂದ ಪ್ರಚೋದನೆಗೆ ಒಳಗಾಗಿ ಈ ಆಟಕ್ಕೆ ವ್ಯಸನಿಗಳಾಗುತ್ತಿದ್ದಾರೆ. ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಕೆಲವು ಸೆಲೆಬ್ರಿಟಿಗಳು, ಕ್ರೀಡಾಪಟುಗಳು ಜೂಜಾಟದ ಜಾಹೀರಾತಿನಲ್ಲಿ ಅಭಿನಯಿಸುವ ಮೊದಲು ಸಾಮಾಜಿಕ ಪ್ರಜ್ಞೆ ಮತ್ತು ಜವಾಬ್ದಾರಿಯನ್ನು ಅರಿಯಲಿ.

–ಪ್ರವೀಣ ನಾಗಪ್ಪ ಯಲವಿಗಿ, ಹಾವೇರಿ

‘ಆನ್‌ಲೈನ್‌ ಕ್ರಿಕೆಟ್ ಬೆಟ್ಟಿಂಗ್‌ನಿಂದ ಕುತ್ತು’

ಬೆಟ್ಟಿಂಗ್ ಎನ್ನುವುದು ಪ್ರತಿಯೊಬ್ಬರ ಜೀವನವನ್ನು ಆವರಿಸಿಕೊಂಡಿರುವ ಸಾಮಾಜಿಕ ಪಿಡುಗಾಗಿದೆ. ಆನ್‌ಲೈನ್‌ ಮೂಲಕವು ನಿತ್ಯ ಕೋಟ್ಯಂತರ ರೂಪಾಯಿ ಬೆಟ್ಟಿಂಗ್ ನಡೆಯುತ್ತಿದೆ. ಇದರಿಂದ ಹಲವಾರು ಕುಟುಂಬಗಳು ಬೀದಿಗೆ ಬರುತ್ತಿವೆ. ಆನ್‌ಲೈನ್ ಬೆಟ್ಟಿಂಗ್ ಎನ್ನುವುದು ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿಲ್ಲ. ಇದು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ನಡೆಯುತ್ತಿದೆ. ಕಾಲೇಜು ವಿದ್ಯಾರ್ಥಿಗಳು ಸಹ ಆನ್‌ಲೈನ್‌ ಬೆಟ್ಟಿಂಗ್ ಆಡುವುದರ ಮೂಲಕ ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಯುವಜನತೆ ಬೆಟ್ಟಿಂಗ್ ಎನ್ನುವ ಚಟಕ್ಕೆ ಬಲಿಯಾಗುತ್ತಿದ್ದಾರೆ.

–ಗಿರೀಶ ಜೆ. ಪತ್ರಿಕೋದ್ಯಮ ಸ್ನಾತಕೋತ್ತರ ವಿದ್ಯಾರ್ಥಿ, ತುಮಕೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT