ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ಒಳನೋಟ: ನೆಲೆ ಕಸಿದ ನೀರಾವರಿ
ಒಳನೋಟ: ನೆಲೆ ಕಸಿದ ನೀರಾವರಿ
ಜಮೀನು, ಮನೆ ಬಿಟ್ಟುಕೊಟ್ಟ ಸಂತ್ರಸ್ತರು: ದಾಖಲೆಗಳಿಗೆ ತಪ್ಪದ ಅಲೆದಾಟ
Published 29 ಏಪ್ರಿಲ್ 2023, 20:35 IST
Last Updated 29 ಏಪ್ರಿಲ್ 2023, 20:35 IST
ಅಕ್ಷರ ಗಾತ್ರ

ಹಾಸನ: ‘ನಾಡಿಗೆ ಬೆಳಕು ನೀಡಲು ಬದುಕನ್ನೇ ಮುಡುಪಿಟ್ಟ ನಮ್ಮ ಜೊತೆ ಸರ್ಕಾರಗಳು ಚೆಲ್ಲಾಟವಾಡುತ್ತಿವೆ. ಐದು ದಶಕಗಳಲ್ಲಿ ಬಂದು ಹೋದ ಯಾವುದೇ ಸರ್ಕಾರಕ್ಕೆ ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಆಗಿಲ್ಲ. ರಾಜಕಾರಣಿಗಳ ಸುಳ್ಳು ಭರವಸೆಗಳಿಂದ ನಮ್ಮ ಬದುಕಂತೂ ಹಸನಾಗಿಲ್ಲ. ಜೀವಂತ ಶವದಂತೆ ಬದುಕ್ತಿದ್ದೇವೆ.’

–ಶರಾವತಿ ಯೋಜನೆಯ ಸಂತ್ರಸ್ತ ರಾಘವೇಂದ್ರ ಜೋಯಿಸ್ ಹೀಗೆ ಸಂಕಟದಿಂದ ನಿಟ್ಟುಸಿರಿಡುತ್ತಾರೆ.

‘ಜಮೀನು ಮುಳುಗಡೆಯಾದಾಗ 8ನೇ ತರಗತಿಯಲ್ಲಿದ್ದೆ. ಆಗಲೇ ಮನೆ, ಜಮೀನು ಬಿಟ್ಟು ಬರಬೇಕಾಯ್ತು. ಈಗ ನನಗೆ 68 ವರ್ಷ ವಯಸ್ಸು. ಜಮೀನು ದಾಖಲೆ ಸರಿಪಡಿಸಲು ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ, ಕಂದಾಯ ಇಲಾಖೆ ಮುಂದೆ ಪ್ರತಿಭಟನೆ, ಲೋಕಾಯುಕ್ತಕ್ಕೆ ದೂರು ಸೇರಿದಂತೆ ಹಲವು ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಿಲ್ಲ.’

–ಹೇಮಾವತಿ ಜಲಾಶಯ ಯೋಜನೆಯಿಂದ ಜಮೀನು ಕಳೆದುಕೊಂಡು, ಸದ್ಯಕ್ಕೆ ಬ್ಯಾಬ ಫಾರೆಸ್ಟ್‌ 2ನೇ ಕಾಲೊನಿಯಲ್ಲಿ ವಾಸಿಸುತ್ತಿರುವ ಕೃಷ್ಣೇಗೌಡರ ಅಸಹಾಯಕತೆ ಇದು.

ನೀರಾವರಿ, ಜಲ ವಿದ್ಯುತ್‌ ಯೋಜನೆಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿರುವ ಸರ್ಕಾರಗಳು, ಯೋಜನೆಗಳಿಗಾಗಿ ಜಮೀನು, ಮನೆ ಬಿಟ್ಟುಕೊಟ್ಟ ಸಂತ್ರಸ್ತರನ್ನು ಮರೆತಿವೆ ಎಂಬುದಕ್ಕೆ ಈ ಇಬ್ಬರ ಮಾತುಗಳು ಕನ್ನಡಿ ಹಿಡಿಯುತ್ತವೆ. 

‘ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ಸಾಗುವಳಿದಾರರಿಗೆ 30 ವರ್ಷಗಳವರೆಗೆ ಲೀಸ್‌ಗೆ ಕೊಡಲು ಸರ್ಕಾರವೇ ಮುಂದಾಗಿದೆ. ಆದರೆ ಜಮೀನು, ಮನೆ ಬಿಟ್ಟುಕೊಟ್ಟ ನಮಗೆ, ಪರ್ಯಾಯ ಜಮೀನು, ನಿವೇಶನ ಕೊಡಿ ಎಂಬ ಕೂಗಿಗೆ ಅರ್ಧ ಶತಮಾನ ಆದ್ರೂ ಬೆಲೆಯೇ ಇಲ್ಲ’.

ಕೃಷ್ಣಾ ಮೇಲ್ದಂಡೆ ಯೋಜನೆ, ಹೇಮಾವತಿ ಜಲಾಶಯ, ಶರಾವತಿ ಯೋಜನೆ.. ಹೀಗೆ ಸಾಲುಸಾಲು ಯೋಜನೆಗಳಿಂದ ನೀರಾವರಿ ಸೌಲಭ್ಯ ಕಲ್ಪಿಸಿರುವುದಾಗಿ ಸರ್ಕಾರಗಳು ಹೇಳಿಕೊಳ್ಳುತ್ತಿವೆ. ಆದರೆ, ಈ ಯೋಜನೆಗಳ ಸಂತ್ರಸ್ತರ ಬದುಕು ಮಾತ್ರ ನೀರಿನಲ್ಲಿ ಮುಳುಗಿದಂತಾಗಿದೆ. ಸರ್ಕಾರದಿಂದ ಹಂಚಿಕೆಯಾಗಿರುವ ನಿವೇಶನ, ಜಮೀನುಗಳು ಸಂತ್ರಸ್ತರ ಸ್ವಾಧೀನದಲ್ಲಿದ್ದು, ಹಲವರು ಮನೆ ನಿರ್ಮಿಸಿಕೊಂಡಿದ್ದಾರೆ. ಸಾಗುವಳಿ ಮಾಡುತ್ತಿದ್ದು, ಬೆಳೆಗಳನ್ನೂ ಬೆಳೆಯುತ್ತಿದ್ದಾರೆ. ಆದರೆ, ಆ ಜಮೀನು, ನಿವೇಶನಗಳ ಮಾಲೀಕತ್ವ ಇಂದಿಗೂ ಅವರ ಹೆಸರಿನಲ್ಲಿಲ್ಲ.

‘ಸಾಗುವಳಿ ಮಾಡಿದರೂ, ಮನೆ ಕಟ್ಟಿಕೊಂಡಿದ್ದರೂ ಜಮೀನು, ನಿವೇಶನ ಅವರದ್ದಲ್ಲ. ತೆರವುಗೊಳಿಸುವಂತೆ ಆದೇಶಿಸಿದರೆ ಹೊರಗೆ ಹೋಗಲೇಬೇಕು. ಕೋರ್ಟ್‌ಗೆ ಮೊರೆ ಹೋಗಬೇಕೆಂದರೆ, ದಾಖಲೆಗಳೇ ಅವರ ಹೆಸರಿನಲ್ಲಿಲ್ಲ‘ ಎನ್ನುತ್ತಾರೆ ಹೇಮಾವತಿ ಅಣೆಕಟ್ಟೆ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಎಸ್‌.ಕೃಷ್ಣ.

ಸಂತ್ರಸ್ತರು ಬೀದಿ ಪಾಲು:

1960ರಿಂದ 1980ರವರೆಗಿನ ಎರಡು ದಶಕಗಳಲ್ಲಿ ವಿವಿಧ ಯೋಜನೆಗಳಿಗಾಗಿ ಸಾವಿರಾರು ಜನ ನೆಲೆ ಕಳೆದುಕೊಂಡಿದ್ದಾರೆ. ಅಂತಹ ಸಂತ್ರಸ್ತ ಕುಟುಂಬಗಳನ್ನು ಸರ್ಕಾರಿ ಜಾಗಗಳಿಗೆ ಸ್ಥಳಾಂತರಿಸಲಾಗಿದೆ. ಆದರೆ, ತೋಟ, ಗದ್ದೆ, ಜಮೀನು, ಮನೆಗಳ ದಾಖಲೆ ಇದ್ದವರಿಗೆ ಮಾತ್ರ ಪರಿಹಾರ ಹಾಗೂ ಬದಲಿ ಜಮೀನಿನ ಹಕ್ಕುಪತ್ರ ಸಿಕ್ಕಿದೆ.

ಜಲ ವಿದ್ಯುತ್‌ ಯೋಜನೆಗಳಿಂದ ಸಂತ್ರಸ್ತರಾದವರಲ್ಲಿ ಶೇ 90ರಷ್ಟು ಮಂದಿಗೆ ಭೂಮಿಯ ಹಕ್ಕು ಇರಲಿಲ್ಲ. ಶರಾವತಿ ಕಣಿವೆ ಯೋಜನೆಗಳು ಅನುಷ್ಠಾನಗೊಳ್ಳುವಾಗ ಭೂ ಒಡೆತನದ ಹಕ್ಕು ಬೆರಳೆಣಿಕೆಯಷ್ಟು ಜನರಲ್ಲಿತ್ತು. ತಮ್ಮ ಹೆಸರಿನಲ್ಲಿ ಭೂ ದಾಖಲೆ ಇದ್ದವರಿಗೆ ಮಾತ್ರ ಭೂಮಿ ದೊರೆಕಿದೆ. ತಲೆಮಾರುಗಳಿಂದ ಉಳುಮೆ ಮಾಡಿಕೊಂಡು ಬಂದ ಗೇಣಿದಾರರಿಗೆ ಇದುವರೆಗೂ ನಯಾಪೈಸೆ ಸಿಕ್ಕಿಲ್ಲ.

ಮಲೆನಾಡಿನ ತವರು ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿ ತಾಲ್ಲೂಕಿನ ಮೂಲ ನಿವಾಸಿಗಳು ಜಲಾಶಯಗಳಿಗಾಗಿ ಮೂಲನೆಲೆ ಕಳೆದುಕೊಂಡಿದ್ದು, ಕಾಡುಗಳ ನಡುವೆ ಅಲೆದಾಡುತ್ತಲೇ ಇದ್ದಾರೆ. ಒಂದೇ ಕಡೆ ಕೂಡು ಕುಟುಂಬದೊಂದಿಗೆ ಸುಖ ಜೀವನ ನಡೆಸಿದ್ದ ಸಂತ್ರಸ್ತರು, ಈಗ ಬದುಕಿನ ಭದ್ರತೆಗಾಗಿ ಚಡಪಡಿಸುವಂತಾಗಿದೆ. ನೆಂಟರಿಷ್ಟರು ಏಲ್ಲೆಲ್ಲೋ ನೆಲೆಕಂಡಿದ್ದಾರೆ. ಹೊಸ ಪೀಳಿಗೆಗೆ ರಕ್ತಸಂಬಂಧಿಗಳನ್ನು ಮದುವೆ ಸಮಾರಂಭಗಳಲ್ಲಿ ಪರಿಚಯ ಮಾಡಿಕೊಡಬೇಕಾದ ಸ್ಥಿತಿಯಿದೆ. ಇದು ಹಳೆಯ ಪೀಳಿಗೆಯನ್ನು ಆಗಾಗ ಕಸಿವಿಸಿಗೆ ಕೆಡವುತ್ತದೆ.

ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಹಲವರ ಜಮೀನು ಮುಳುಗಡೆಯಾಗಿವೆ. ಆಗ ದಾಖಲೆಗಳಲ್ಲಿ ನಮೂದಾಗಿದ್ದ ಹಲವು ಮಾಲೀಕರು, ಈಗ ಇಲ್ಲ. ಸತ್ತವರ ಮರಣ ಪ್ರಮಾಣ‍ಪತ್ರ, ವಾರಸುದಾರ ಪತ್ರ ಹಿಡಿದುಕೊಂಡು ಮಕ್ಕಳು ಹಕ್ಕುಪತ್ರಕ್ಕಾಗಿ ಅಲೆದಾಡುತ್ತಿದ್ದಾರೆ.

ಜಮೀನಿನ ಹಕ್ಕುಪತ್ರಕ್ಕಾಗಿ ಹಲವು ಹೋರಾಟಗಳು ನಡೆದಿವೆ. ಪ್ರತಿಭಟನೆ, ಮನವಿಗಳಿಗೆ ಲೆಕ್ಕವೇ ಇಲ್ಲ. ಈ ವಿಚಾರವಾಗಿ ಈಚೆಗೆ ಬಾಗಲಕೋಟೆ ಜಿಲ್ಲೆಯ ಕಲಾದಗಿಯಲ್ಲಿ ನಡೆದ ಕಂದಾಯ ಸಚಿವ ಆರ್. ಅಶೋಕ್‌ ಅವರ ಗ್ರಾಮ ವಾಸ್ತವ್ಯದ ಸಂದರ್ಭದಲ್ಲೂ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೂ ಅವರ ಬೇಡಿಕೆ ಅರಣ್ಯರೋದನವಾಗಿ ಉಳಿದಿದೆ.

ನಾರಾಯಣಪುರ ಅಣೆಕಟ್ಟೆಯಲ್ಲಿ 40 ಗ್ರಾಮ, ಆಲಮಟ್ಟಿ ಅಣೆಕಟ್ಟಿನಲ್ಲಿ 136 ಗ್ರಾಮಗಳು ಮುಳುಗಡೆಯಾಗಿವೆ. ಮೂರನೇ ಹಂತದಲ್ಲಿ 20 ಗ್ರಾಮಗಳು ಮುಳುಗಡೆಯಾಗುತ್ತಿವೆ. ಇಲ್ಲಿಯವರೆಗೆ 4.06 ಲಕ್ಷ ಎಕರೆ ಭೂಮಿ, 1,04,404 ಕಟ್ಟಡಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಲಕ್ಷಕ್ಕೂ ಹೆಚ್ಚು ಕುಟುಂಬಗಳು ಬಾಧಿತವಾಗಿವೆ.

ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆಯ ಸಂತ್ರಸ್ತರ ಪೈಕಿ ಬೀಳಗಿ ತಾಲ್ಲೂಕಿನ ಎಷ್ಟೋ ಮಂದಿ ಈಗಲೂ ಹಕ್ಕುಪತ್ರಕ್ಕೆ ಪರದಾಡುತ್ತಿದ್ದಾರೆ. ಹದಿನೆಂಟು ವರ್ಷಗಳ ಹಿಂದೆ ಪಡಿತರ ಚೀಟಿಯಲ್ಲಿ ಎಷ್ಟು ಜನರ ಹೆಸರುಗಳಿದ್ದವೋ ಅವರನ್ನಷ್ಟೇ ಸಂತ್ರಸ್ತರ ಪಟ್ಟಿಗೆ ಸೇರಿಸಲಾಗಿದೆ. ಇಷ್ಟು ದೀರ್ಘ ಕಾಲದ ನಂತರ, ಆಗ ಬಾಲಕರಾಗಿದ್ದವರು ಯುವಕರಾಗಿ, ಸಂಸಾರಗಳನ್ನು ಕಟ್ಟಿಕೊಂಡಿದ್ದಾರೆ. ಕುಟುಂಬ ವಿಸ್ತರಣೆ ಬಳಿಕ ಹೊಸ ಸದಸ್ಯರ ಹೆಸರು ಪಟ್ಟಿಯಲ್ಲಿಲ್ಲ. ಆದರೆ, ಮುಳುಗಡೆಯ ಬಿಸಿ ಅವರಿಗೂ ತಟ್ಟುತ್ತಿದೆ.

ಕಲಾದಗಿಯ 4,037 ಮಂದಿ ಪೈಕಿ ಸಾವಿರ ಜನರಿಗಷ್ಟೇ ಹಕ್ಕುಪತ್ರ ನೀಡಲಾಗಿದೆ. ಉಳಿದವರ ಹೋರಾಟ ಮುಂದುವರೆದಿದೆ. ಬೆಣ್ಣೂರ, ತಳಗಿಹಾಳ, ಇಲಾಳ, ಹಿರೇಹೊದ್ಲೂರ, ಚಿಕ್ಕಹೊದ್ಲೂರ ಗ್ರಾಮಗಳಲ್ಲಿ ಹಕ್ಕುಪತ್ರಗಳನ್ನು ಗ್ರಾಮದ ಮುಖಂಡರ ಕೈಯಲ್ಲಿ ನೀಡಲಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ, ಅವು ಫಲಾನುಭವಿಯನ್ನು ತಲುಪದ್ದರಿಂದ ಹಲವರು ಈಗಲೂ ಅಲೆದಾಡುತ್ತಿದ್ದಾರೆ.

‘2010ರಲ್ಲಿ ಪ್ರತಿ ಇಟ್ಟಿಗೆಗೆ ₹1.40, ಪ್ರತಿ ಚೀಲ ಸಿಮೆಂಟಿಗೆ ₹145 ದರದಂತೆ ಕಟ್ಟಡದ ಸವಕಳಿ ತೆಗೆದು ಪರಿಹಾರ ನೀಡಲಾಗಿದೆ. ಹಕ್ಕುಪತ್ರ, ಮೂಲಸೌಲಭ್ಯಗಳು ಇಲ್ಲದ್ದರಿಂದ ಸ್ಥಳಾಂತರಗೊಂಡಿಲ್ಲ. ಪರಿಹಾರದ ಹಣವು ಮದುವೆ, ಆಸ್ಪತ್ರೆ ವೆಚ್ಚ ಇತ್ಯಾದಿಗಳಿಗೆ ಖರ್ಚಾಗಿ ಹೋಗಿದೆ. ಈಗ ಪ್ರತಿ ಇಟ್ಟಿಗೆಗೆ ₹ 6, ಚೀಲಕ್ಕೆ ಸಿಮೆಂಟ್ ₹350ಕ್ಕೆ ಹೆಚ್ಚಾಗಿದೆ. ಹೊಸ ಮನೆ ಕಟ್ಟಿಸಲು ಸಾಲ ಮಾಡಬೇಕಾಗಿದೆ’ ಎನ್ನುತ್ತಾರೆ ಸಂತ್ರಸ್ತರು.

ಹಲವು ಗ್ರಾಮಗಳ ಜನ ಇನ್ನೂ ಸ್ಥಳಾಂತರವಾಗಿಲ್ಲ. ಆದರೂ ಅಧಿಕಾರಿಗಳೂ ತಲೆಕೆಡಿಸಿಕೊಂಡಿಲ್ಲ. ಪರಿಣಾಮ, ಗ್ರಾಮದಲ್ಲಿ ನಿರ್ಮಿಸಿದ್ದ ಸಮುದಾಯ ಭವನ, ಪ್ರಾಥಮಿಕ ಪಶುಚಿಕಿತ್ಸಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ, ಶಾಲಾ ಕಟ್ಟಡಗಳು ಪಾಳು ಬಿದ್ದಿವೆ. ಕಿಟಕಿ, ಬಾಗಿಲು ಕಿತ್ತು ಹೋಗಿವೆ.

1971ರಲ್ಲಿ ಹೇಮಾವತಿ ಅಣೆಕಟ್ಟು ನಿರ್ಮಿಸಲಾಗಿದ್ದು, ಮುಳುಗಡೆ ಸಂತ್ರಸ್ತರಿಗೆ ಸರ್ಕಾರವು ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಕಸಬಾ ಬ್ಯಾಬ ಅರಣ್ಯ ಪ್ರದೇಶದ 1,500 ಎಕರೆ ಪ್ರದೇಶವನ್ನು 52 ವರ್ಷಗಳ ಹಿಂದೆಯೇ ಮೀಸಲಾಗಿಡಲಾಗಿತ್ತು. ಬ್ಯಾಬ ಫಾರೆಸ್ಟ್, ಬ್ಯಾಬ ಫಾರೆಸ್ಟ್ 1ಪಿ, 2ಪಿ, 3ಪಿ ಎಂದು ನಾಲ್ಕು ವಿಭಾಗಗಳನ್ನಾಗಿ ಮಾಡಿದ್ದು, ಸಂತ್ರಸ್ತರಿಗೆ ತಲಾ ನಾಲ್ಕು ಎಕರೆಯಂತೆ ಹಂಚಿಕೆ ಮಾಡಲು 320 ಬ್ಲಾಕ್‌ಗಳನ್ನು ವಿಂಗಡಿಸಲಾಗಿದೆ. ಸಂತ್ರಸ್ತರಲ್ಲಿ ಸಾಗುವಳಿ ಚೀಟಿಗಳು ಮಾತ್ರವಿದ್ದು, ಜಮೀನಿನ ದಾಖಲೆಗಳನ್ನು ಇನ್ನೂ ಸರಿಪಡಿಸಿಲ್ಲ. ಪೋಡಿ ಆಗದೇ ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಹೇಮಾವತಿ ಮುಳುಗಡೆ ಪ್ರದೇಶದ ನಿವಾಸಿಗಳಿಗೆ ಬ್ಯಾಬ ಫಾರೆಸ್ಟ್‌ನಲ್ಲಿ ಕೊಟ್ಟಿರುವ ಜಮೀನಿನ ದಾಖಲೆಗಳು ಅರ್ಧ ಶತಮಾನ ಕಳೆದರೂ ಸರಿಯಾಗಿಲ್ಲ. ಇದು ಸರ್ಕಾರದ ವೈಫಲ್ಯವೋ, ಅಸಹಾಯಕತೆಯೋ ಗೊತ್ತಾಗುತ್ತಿಲ್ಲ. ಆದರೆ ಇದು ನಾಚಿಕೆಗೇಡು. ಈ  ಬಗ್ಗೆ ವಿಧಾನಸಭೆಯಲ್ಲೂ ಮಾತಾಡಿದ್ದೇನೆ. ಕುಂದೂರು ಗ್ರಾಮದಲ್ಲಿ ನಡೆದ ‘ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ’ ಕಾರ್ಯಕ್ರಮದಲ್ಲೂ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇನೆ’ ಎಂದು ಶಾಸಕ ಎಚ್‌.ಕೆ. ಕುಮಾರಸ್ವಾಮಿ ಹೇಳುತ್ತಾರೆ.

‘ಬ್ಯಾಬ ನಂ. 1 ಅನ್ನು ಒಟ್ಟುಗೂಡಿಸಿದ್ದೇವೆ. ಆದರೆ ದಾಖಲೆಗಳು ತಾಳೆ ಆಗುತ್ತಿಲ್ಲ. ಒಂದು ಸಾವಿರ ಎಕರೆ ಜಮೀನಿದೆ. 1,500 ಎಕರೆ ಆರ್‌ಟಿಸಿ ಬರುತ್ತಿದೆ. ಸಂಬಂಧಿಸಿದ ಎಲ್ಲ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು, ಜನಪ್ರತಿನಿಧಿಗಳು ಗ್ರಾಮದಲ್ಲಿ ಒಟ್ಟಾಗಿ ಸೇರಿ ದಾಖಲೆಗಳನ್ನು ಸರಿಪಡಿಸಬೇಕು’ ಎನ್ನುವುದು ಭೂ ದಾಖಲೆಗಳ ಇಲಾಖೆ ಅಧಿಕಾರಿಗಳ ಸಮಜಾಯಷಿ.

ಸಂತ್ರಸ್ತರ ಬದುಕು ಮತ್ತೆ ಅತಂತ್ರ:

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಅರಣ್ಯಭೂಮಿ ಹಂಚಿಕೆ ಮಾಡಿ ಹೊರಡಿಸಿದ್ದ 56 ಅಧಿಸೂಚನೆಗಳನ್ನು ರದ್ದುಗೊಳಿಸುವಂತೆ ಹೈಕೋರ್ಟ್ ಈಚೆಗೆ ಆದೇಶ ಹೊರಡಿಸಿದೆ. ಕೋರ್ಟ್‌ ಆದೇಶದ ಕಾರಣ 6,458 ಎಕರೆ ಪ್ರದೇಶದ ಭೂಮಿಯ ಪಹಣಿಯಲ್ಲಿ ಅರಣ್ಯ ಇಲಾಖೆಯ ಹೆಸರು ನಮೂದಾಗಲಿದೆ. ಇದರಿಂದ ಸಾವಿರಾರು ಕುಟುಂಬಗಳು ನೆಲೆ ಕಳೆದುಕೊಳ್ಳುವ ಆತಂಕ ಎದುರಾಗಿದೆ.

ಮಲೆನಾಡಿನಲ್ಲಿ 1950ರ ದಶಕದ ಮಧ್ಯ ಭಾಗ, 1960ರ ದಶಕದ ಆರಂಭದಲ್ಲಿ ಮಡೆನೂರು, ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣಕ್ಕಾಗಿ ಈ ಭಾಗದ ಜನರನ್ನು ನಿರ್ವಸತಿಗರನ್ನಾಗಿ ಮಾಡಲಾಗಿತ್ತು. ‘ಕೂಡಲೇ ಗ್ರಾಮಗಳನ್ನು ಬಿಡಬೇಕು. ಶೀಘ್ರ ಜಲಾಶಯದ ನೀರು ನಿಮ್ಮ ಗ್ರಾಮಗಳನ್ನು ಮುಳುಗಿಸಲಿದೆ’ ಎಂದು 1959-60ರಲ್ಲಿ ಕೆಪಿಸಿಯಿಂದ ಗ್ರಾಮಸ್ಥರಿಗೆ ನೋಟಿಸ್ ನೀಡಲಾಗಿತ್ತು.

ಗ್ರಾಮಸ್ಥರು ಹುಟ್ಟಿ ಬೆಳೆದ ಊರನ್ನು ಬಿಟ್ಟರು. ಅವರಿಗೆ ಸಾಗರ, ಸೊರಬ, ಹೊಸನಗರ, ಶಿವಮೊಗ್ಗ, ಭದ್ರಾವತಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರಣ್ಯ ಭೂಮಿ ನೀಡಿ ಪುನರ್ವಸತಿ ಕಲ್ಪಿಸಲಾಯಿತು. ಅವರಿಗೆ ಭೂಮಿಯ ಹಕ್ಕು ನೀಡಲು 1961ರಿಂದ 1967ರವರೆಗೆ 13,800 ಎಕರೆ ಭೂಮಿಯನ್ನು ಅರಣ್ಯ ಇಲಾಖೆ ತನ್ನ ಸುಪರ್ದಿಯಿಂದ ಬಿಡುಗಡೆ ಮಾಡಿ, ‘ಮುಳುಗಡೆ ಸಂತ್ರಸ್ತರಿಗಾಗಿ ಕಾಯ್ದಿರಿಸಿದ ಜಾಗ’ ಎಂದು ಘೋಷಿಸಿದೆ. ಆದರೆ ಈವರೆಗೂ ಸಂತ್ರಸ್ತರಿಗೆ ಭೂಮಿಯ ಹಕ್ಕು ದೊರೆತಿಲ್ಲ.

ರಾಜ್ಯದಲ್ಲಿ ಅರಣ್ಯ ಕಾಯ್ದೆ ಜಾರಿಗೆ ಬಂದಿದ್ದು 1969ರಲ್ಲಿ. ಅರಣ್ಯ ಸಂರಕ್ಷಣಾ ಕಾಯ್ದೆ 1980ರಲ್ಲಿ ಜಾರಿಯಾಗಿದೆ. ಅಲ್ಲಿಯವರೆಗೆ ಅರಣ್ಯ ಭೂಮಿಯನ್ನು ಕಂದಾಯ ಭೂಮಿಯನ್ನಾಗಿ ಪರಿವರ್ತಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇತ್ತು. ಕರ್ನಾಟಕದಲ್ಲಿ ಮುಳುಗಡೆ ಸಂತ್ರಸ್ತರಿಗೆ ಅರಣ್ಯ ಇಲಾಖೆ ಭೂಮಿಯನ್ನು 1959ರಿಂದ 1964ರ ಅವಧಿಯಲ್ಲಿ ಬಿಡುಗಡೆ ಮಾಡಿದ್ದರಿಂದ ಡಿನೋಟಿಫಿಕೇಷನ್‌ಗೆ ಕೇಂದ್ರ ಸರ್ಕಾರದ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ ಎಂಬುದು ಹಿಂದಿನ ಸರ್ಕಾರದ ನಿಲುವಾಗಿತ್ತು.

ಆದರೆ, ‘ಕೇಂದ್ರ ಸರ್ಕಾರದ ಅನುಮತಿ ಪಡೆಯದೇ ಡಿನೋಟಿಫಿಕೇಷನ್ ಮಾಡಿರುವ ಕ್ರಮ ಸರಿಯಲ್ಲ’ ಎಂದು ಹೊಸನಗರ ತಾಲ್ಲೂಕಿನ ಬ್ರಹ್ಮೇಶ್ವರದ ಗಿರೀಶ್ ಆಚಾರ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. 2021ರ ಮಾರ್ಚ್ 3ರಂದು ಹೈಕೋರ್ಟ್ ಈ ಅರ್ಜಿ ಮಾನ್ಯ ಮಾಡಿ ಡಿನೋಟಿಫಿಕೇಷನ್ ರದ್ದುಗೊಳಿಸಿದೆ.

‘1000 ಜನರಿಗೆ ಹಕ್ಕು ಪತ್ರ ನೀಡಲಾಗಿತ್ತು. ಆದರೆ ಹೈಕೋರ್ಟ್‌ ಆದೇಶದ ಕಾರಣ ರಾಜ್ಯ ಸರ್ಕಾರ ಭೂಮಿಯ ಹಕ್ಕನ್ನು ರದ್ದುಪಡಿಸಿದೆ. ಅರಣ್ಯ ಇಲಾಖೆಯವರೇ ಸಂತ್ರಸ್ತರಿಗೆ ಭೂಮಿ ನೀಡಿದ್ದರು. ಆದರೆ ಈ ಆದೇಶದಿಂದ ಸಂತ್ರಸ್ತರು ಅತಂತ್ರರಾಗಿದ್ದಾರೆ. ಆಗ ಮೂರು ಸಾವಿರ ಇದ್ದ ಕುಟುಂಬಗಳ ಜನಸಂಖ್ಯೆ ಹೆಚ್ಚಿದೆ. ಭೂಮಿ ಹೋದರೆ ಶಿವಮೊಗ್ಗ ಜಿಲ್ಲೆಯ ಸುಮಾರು 25 ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳು ಮತ್ತೆ ಮೊದಲಿನಂತೆ ಬೀದಿಗೆ ಬೀಳಲಿವೆ’ ಎಂದು ಮಲೆನಾಡು ಭೂ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ತೀ.ನ. ಶ್ರೀನಿವಾಸ್ ಆತಂಕ ವ್ಯಕ್ತಪಡಿಸಿದರು.

‘ಆದೇಶದ ಹಿನ್ನೆಲೆಯಲ್ಲಿ 2021ರ ಸೆಪ್ಟೆಂಬರ್‌ನಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆಯ ಶಾಸಕರು, ಸಚಿವರ ಸಭೆ ನಡೆದಿತ್ತು. ಈ ಬಗ್ಗೆ ಕೇಂದ್ರದ ಅನುಮತಿ ಪಡೆಯುವುದಾಗಿ ಮುಖ್ಯಮಂತ್ರಿ ತಿಳಿಸಿದ್ದರು. 2022ರಲ್ಲಿ ಮತ್ತೆ ಹಕ್ಕುಪತ್ರ ನೀಡುವುದಾಗಿ ಘೋಷಿಸಿದ್ದರು. ಆದರೆ ಮತ್ತೆ ಅದು ಕಾರ್ಯರೂಪಕ್ಕೆ ಬರಲೇ ಇಲ್ಲ’ ಎಂದು ಅವರು ಆರೋಪಿಸುತ್ತಾರೆ.

‘ಸದ್ಯ ಅರಣ್ಯ ಇಲಾಖೆಯಿಂದ ಸರ್ವೆ ನಡೆದು 9,600 ಎಕರೆ ಪ್ರದೇಶದ ದಾಖಲೆಗಳು ನವದೆಹಲಿಗೆ ತಲುಪಿವೆ. ಆದರೆ ಕುಟುಂಬಗಳ ವಿಸ್ತಾರದ ಕಾರಣ ಈ ಪ್ರದೇಶ ಇನ್ನಷ್ಟು ವಿಸ್ತಾರಗೊಂಡಿದೆ. ಮುಂದಿನ ದಿನಗಳಲ್ಲಿ ಇದು ಮತ್ತೊಂದು ಸಮಸ್ಯೆ ಸೃಷ್ಟಿಸುವ ಆತಂಕ ಇದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಹೈಕೋರ್ಟ್‌ ಆದೇಶದ ಅನ್ವಯ ಇದೀಗ ಪಹಣಿಯಲ್ಲಿ ಅರಣ್ಯ ಭೂಮಿ ಎಂದು ನಮೂದಿಸುವ ಕೆಲಸ ಶುರುವಾಗಿದೆ. ಶರಾವತಿ ಸಂತ್ರಸ್ತರಿಗೆ ನೀಡಿದ್ದ ಭೂಮಿಯ ಮೇಲೆ ಈಗ ಅರಣ್ಯ ಇಲಾಖೆಯ ಹಕ್ಕು ಸ್ಥಾಪನೆಯಾಗಲಿದೆ. 1 ಸಾವಿರ ಜನರಿಗೆ ನೀಡಿರುವ ಹಕ್ಕುಪತ್ರಗಳೂ ರದ್ದಾಗಲಿದ್ದು, ಆ ಭೂಮಿಯೂ ಅರಣ್ಯ ಇಲಾಖೆಗೆ ಸೇರಲಿದೆ. 9,900 ಎಕರೆ ಪ್ರದೇಶದಲ್ಲಿ ಇದುವರೆಗೆ ಸಾಗುವಳಿ ಮಾಡುತ್ತಿರುವ ಹಾಗೂ ಮನೆ ನಿರ್ಮಿಸಿಕೊಂಡಿರುವ ಸಂತ್ರಸ್ತರು, ಇಲಾಖೆಗೆ ಭೂಮಿಯನ್ನು ಬಿಟ್ಟುಕೊಡುವ ಅನಿವಾರ್ಯ ಎದುರಾಗಿದೆ. ಇದ್ದ ಭೂಮಿಯನ್ನೂ ಯೋಜನೆಗೆ ಬಿಟ್ಟುಕೊಟ್ಟು, ಪರ್ಯಾಯ ಭೂಮಿಯನ್ನೂ ಕಳೆದುಕೊಳ್ಳುವಂತಾಗಿದೆ.

ಶರಾವತಿ, ಹೇಮಾವತಿ, ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆ ಸೇರಿದಂತೆ ಎಲ್ಲ ಯೋಜನೆಗಳ ಸಂತ್ರಸ್ತರನ್ನು ಸ್ಥಳಾಂತರಿಸುವಾಗ, ಅವರು ಕಳೆದುಕೊಂಡ ಭೂಮಿಯ ಎರಡು ಪಟ್ಟು ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಕೊಟ್ಟದ್ದು ಅಲ್ಪ ಪ್ರಮಾಣದ ಭೂಮಿ ಮಾತ್ರ. ಕೊಟ್ಟ ಭೂಮಿಯನ್ನು ಅನುಭವಿಸುತ್ತಿದ್ದರೂ ದಾಖಲೆಗಳು ಮಾತ್ರ ಫಲಾನುಭವಿಗಳಿಗೆ ದೊರಕಿಲ್ಲ.

ಸಂತ್ರಸ್ತರು ನೆಲೆ ನಿಂತ ಭೂಮಿಯನ್ನು ಕಂದಾಯ ಭೂಮಿ ಎಂದು ಪರಿಗಣಿಸಿ ಭೂ ಕಂದಾಯ ಕಾಯ್ದೆ 4 (1)ರ ಅಡಿ ಅಧಿಸೂಚನೆಯನ್ನೂ ಹೊರಡಿಸಲಾಗಿತ್ತು. ಆದರೆ, ಅದನ್ನು ಅರಣ್ಯ ಇಲಾಖೆ ದಾಖಲೆಗಳಿಂದ ಬಿಡುಗಡೆ ಮಾಡದ ಪರಿಣಾಮ ಕಂದಾಯ ದಾಖಲೆಗಳಲ್ಲಿ ಆ ಪ್ರದೇಶ ಕಂದಾಯ ಭೂಮಿ ಎಂದು, ಅರಣ್ಯ ದಾಖಲೆಗಳಲ್ಲಿ ಅರಣ್ಯ ಭೂಮಿ ಎಂದೇ ಉಳಿದುಕೊಂಡಿದೆ. ಇದೀಗ ಸರ್ಕಾರ ಅರಣ್ಯ ಭೂಮಿಯಿಂದ 6 ಲಕ್ಷ ಎಕರೆ ಭೂಮಿಯನ್ನು ಹಿಂಪಡೆದಿದೆ. ಆದರೆ, ದಾಖಲೆಗಳಲ್ಲಿ ಮಾತ್ರ ಇದು ಇನ್ನೂ ಸರಿಯಾಗುತ್ತಿಲ್ಲ. ಹೀಗಾಗಿ ಸಂತ್ರಸ್ತರು ತಾವು ನೆಲೆ ನಿಂತಿರುವ ಭೂಮಿ ಹಕ್ಕು ಪಡೆಯಲು ಹೋರಾಟ ಮುಂದುವರಿಸಲೇಬೇಕಾದ ಸನ್ನಿವೇಶದಲ್ಲಿದ್ದಾರೆ.

ಪೂರಕ ಮಾಹಿತಿ: ಬಸವರಾಜ ಹವಾಲ್ದಾರ್‌, ಚಂದ್ರಶೇಖರ್‌ ಆರ್‌.

ಕಲಾದಗಿ ಪುನರ್‌ ವಸತಿ ಕೇಂದ್ರದಲ್ಲಿ ನಿರ್ಮಿಸಿದ್ದ ಶಿಕ್ಷಕರ ವಸತಿ ಗೃಹಗಳು ಪಾಳು ಬಿದ್ದಿವೆ
ಕಲಾದಗಿ ಪುನರ್‌ ವಸತಿ ಕೇಂದ್ರದಲ್ಲಿ ನಿರ್ಮಿಸಿದ್ದ ಶಿಕ್ಷಕರ ವಸತಿ ಗೃಹಗಳು ಪಾಳು ಬಿದ್ದಿವೆ
ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಕಸಬಾ ಮಣಿಪುರ ಗ್ರಾಮದಲ್ಲಿ ಮುಳುಗಡೆ ಸಂತ್ರಸ್ತರಿಗೆ ನೀಡಿರುವ ಜಮೀನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.
ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಕಸಬಾ ಮಣಿಪುರ ಗ್ರಾಮದಲ್ಲಿ ಮುಳುಗಡೆ ಸಂತ್ರಸ್ತರಿಗೆ ನೀಡಿರುವ ಜಮೀನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.
ಹಾಸನ ಜಿಲ್ಲೆಯ ಗೊರೂರು ಬಳಿ ನಿರ್ಮಿಸಿರುವ ಹೇಮಾವತಿ ಅಣೆಕಟ್ಟು
ಹಾಸನ ಜಿಲ್ಲೆಯ ಗೊರೂರು ಬಳಿ ನಿರ್ಮಿಸಿರುವ ಹೇಮಾವತಿ ಅಣೆಕಟ್ಟು
ಹೇಮಾವತಿ ಯೋಜನೆ ಸಂತ್ರಸ್ತರಿಗೆ ಜಮೀನು ಬಿಟ್ಟುಕೊಟ್ಟಿರುವ ಫಲಕ
ಹೇಮಾವತಿ ಯೋಜನೆ ಸಂತ್ರಸ್ತರಿಗೆ ಜಮೀನು ಬಿಟ್ಟುಕೊಟ್ಟಿರುವ ಫಲಕ
ಹೇಮಾವತಿ ಯೋಜನೆಯ ಸಂತ್ರಸ್ತರ ಬಳಿ ಇರುವ ಏಕೈಕ ದಾಖಲೆ ಸಾಗುವಳಿ ಚೀಟಿ
ಹೇಮಾವತಿ ಯೋಜನೆಯ ಸಂತ್ರಸ್ತರ ಬಳಿ ಇರುವ ಏಕೈಕ ದಾಖಲೆ ಸಾಗುವಳಿ ಚೀಟಿ
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಆಲ್ಫೋನ್ಸ್‌ ನಗರದಲ್ಲಿ ಹೇಮಾವತಿ ಯೋಜನೆ ಸಂತ್ರಸ್ತರು ನಿರ್ಮಿಸಿಕೊಂಡಿರುವ ಮನೆಗಳು.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಆಲ್ಫೋನ್ಸ್‌ ನಗರದಲ್ಲಿ ಹೇಮಾವತಿ ಯೋಜನೆ ಸಂತ್ರಸ್ತರು ನಿರ್ಮಿಸಿಕೊಂಡಿರುವ ಮನೆಗಳು.
ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಕೃಷ್ಣಾ ಹಿನ್ನೀರಿನಿಂದ ಹಾನಿಗೆ ಒಳಗಾಗಿರುವ ಮನೆ.
ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಕೃಷ್ಣಾ ಹಿನ್ನೀರಿನಿಂದ ಹಾನಿಗೆ ಒಳಗಾಗಿರುವ ಮನೆ.
ಬಾಗಲಕೋಟೆ ಜಿಲ್ಲೆಯ ಕಲಾದಗಿಯ ಸಂತ್ರಸ್ತರ ಬಡಾವಣೆ
ಬಾಗಲಕೋಟೆ ಜಿಲ್ಲೆಯ ಕಲಾದಗಿಯ ಸಂತ್ರಸ್ತರ ಬಡಾವಣೆ
ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದ ಸಂತ್ರಸ್ತರ ಬಡಾವಣೆಯ ರಸ್ತೆ ಸಂಪೂರ್ಣ ಹದಗೆಟ್ಟಿದೆ.
ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದ ಸಂತ್ರಸ್ತರ ಬಡಾವಣೆಯ ರಸ್ತೆ ಸಂಪೂರ್ಣ ಹದಗೆಟ್ಟಿದೆ.
ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಬ್ಯಾಬ ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡಿರುವ ಹೇಮಾವತಿ ಯೋಜನೆ ಸಂತ್ರಸ್ತರು
ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಬ್ಯಾಬ ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡಿರುವ ಹೇಮಾವತಿ ಯೋಜನೆ ಸಂತ್ರಸ್ತರು
ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಹಾಳಾಗಿರುವ ಸಂತ್ರಸ್ತರ ಮನೆಗಳು
ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಹಾಳಾಗಿರುವ ಸಂತ್ರಸ್ತರ ಮನೆಗಳು

Quote - ಈಗ ಸಾಗುವಳಿ ಮಾಡುತ್ತಿರುವ ರೈತರ ಜಾಗವನ್ನು ಅಳತೆ ಮಾಡಿಸಲಾಗುವುದು. ಅದಕ್ಕೆ ಅನುಗುಣವಾಗಿ ದಾಖಲೆಗಳನ್ನು ಸರಿಪಡಿಸಲಾಗುವುದು. ಮೋಹನ್‌ ಹಾಸನ ಜಿಲ್ಲೆಯ ಆಲೂರಿನ ಹಿಂದಿನ ತಹಶೀಲ್ದಾರ್‌

Quote - ಸ್ಥಳಾಂತರ ಸಂದರ್ಭದಲ್ಲಿ ಗ್ರಾಮದ ಮುಖಂಡರಿಗೆ ಹಕ್ಕುಪತ್ರಗಳನ್ನು ನೀಡಲಾಗಿತ್ತು. ಅವು ನಮಗೆ ತಲುಪಿಲ್ಲ. ಈಗ ಮತ್ತೊಮ್ಮೆ ಪಡೆಯಲು ಅಲೆದಾಡಿಸುತ್ತಿದ್ದಾರೆ. ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಹಣಮಂತ ಮಾದರ ಸಂತ್ರಸ್ತ ಹಿರೇಹೊದ್ಲೂರ ಬಾಗಲಕೋಟೆ ಜಿಲ್ಲೆ

Quote - ಹಾಸನ ತಾಲ್ಲೂಕಿನ ಮಂಚನಹಳ್ಳಿ ಮುಳುಗಿತು. ಊರು ಬಿಡಿಸಿ ಬ್ಯಾಬ ಅರಣ್ಯ ಪ್ರದೇಶದಲ್ಲಿ ಜಮೀನು ಕೊಟ್ಟರು. ಈವರೆಗೂ ದಾಖಲೆ ಸರಿಯಾಗಿಲ್ಲ. ಕಚೇರಿಗೆ ಅಲೆದು ಕಾಲು ಬಿದ್ದುಹೋಗಿವೆ. ಸ್ವಾಮಿಗೌಡ ಆಲೂರು ತಾಲ್ಲೂಕು ಮಣಿಪುರ ಬ್ಯಾಬ ಫಾರೆಸ್ಟ್‌ ನಿವಾಸಿ

Quote - ಹೇಮಾವತಿ ಜಲಾಶಯಕ್ಕಾಗಿ ಜಮೀನು ಕಳೆದುಕೊಂಡ ಜಿಲ್ಲೆಯ ರೈತ ಕುಟುಂಬಗಳಿಗೆ ಈವರೆಗೂ ಖಾತೆ ಪಹಣಿ ಮಾಡಿಕೊಡದೇ ಅನ್ಯಾಯ ಮಾಡಲಾಗುತ್ತಿದೆ. ಎಸ್‌.ಕೃಷ್ಣ ಹೇಮಾವತಿ ಅಣೆಕಟ್ಟೆ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ

Quote - ಕಲಾದಗಿಯಲ್ಲಿ ನಿರ್ಮಿಸಿದ್ದ ರಸ್ತೆ ಚರಂಡಿ ಹಾಳಾಗಿವೆ. ಮತ್ತೊಮ್ಮೆ ಸೌಲಭ್ಯ ಒದಗಿಸಲಾಗುವುದು. ಚುನಾವಣೆ ಬಳಿಕ ಹಂಚಿಕೆ ಮಾಡಲಾಗುವುದು. ಸೋಮಲಿಂಗ ಗೆಣ್ಣೂರ ಯುಕೆಪಿ ಭೂಸ್ವಾಧೀನ ಮತ್ತು ಪುನರ್ವಸತಿ ಕೇಂದ್ರದ ವಿಶೇಷ ಜಿಲ್ಲಾಧಿಕಾರಿ

Cut-off box - ‘ಸರ್ಕಾರದ ಯಾವುದೇ ಸೌಲಭ್ಯ ಸಿಗುತ್ತಿಲ್ಲ’ ‘ಜಮೀನಿಗೆ ಪಹಣಿ ಮಾಡದೇ ಸರ್ಕಾರ ಹಾಗೂ ಬ್ಯಾಂಕ್‌ನಿಂದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಅಂದು ಐದು ನೂರು ಕುಟುಂಬಗಳಿದ್ದವು. ವಿಭಜನೆ ನಂತರ 600 ಕುಟುಂಬಗಳಾಗಿವೆ. ಕೆಲ ಪ್ರಕರಣಗಳು ಹೈಕೋರ್ಟ್‌ವರೆಗೆ ಹೋಗಿವೆ. ಕೂಡಲೇ ಪೋಡಿ ಆಗಬೇಕು’ ಎಂಬುದು ಹೇಮಾವತಿ ಜಲಾಶಯ ಯೋಜನೆ ಸಂತ್ರಸ್ತ ಕೃಷ್ಣೇಗೌಡರ ಆಗ್ರಹ. ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಸಾಲ ಮನ್ನಾ ಅಲ್ಪಾವಧಿ ದೀರ್ಘಾವಧಿ ಬೆಳೆ ಸಾಲ ಬೆಂಬಲ ಬೆಲೆಯಲ್ಲಿ ಉತ್ಪನ್ನಗಳ ಮಾರಾಟದಂತಹ ಸೌಲಭ್ಯಗಳಿಂದಲೂ ಸಂತ್ರಸ್ತರು ವಂಚಿತರಾಗಿದ್ದಾರೆ. ಯೋಜನೆಗಳಿಗೆ ಬೇಕಾದ ಪಹಣಿಯೇ ಅವರ ಹೆಸರಿನಲ್ಲಿ ಇನ್ನೂ ಸಿದ್ಧವಾಗಿಲ್ಲ.

Cut-off box - ‘ರಾಷ್ಟ್ರೀಯ ಪುನರ್ವಸತಿ ನೀತಿ ಅನ್ವಯಿಸಿ’ ‘ರಾಷ್ಟ್ರೀಯ ಪುನರ್ವಸತಿ ನೀತಿಯಡಿ ಭೂಮಿ ಕಳೆದುಕೊಂಡವರಿಗೆ 2.5 ಎಕರೆ ನೀರಾವರಿ ಅಥವಾ ಐದು ಎಕರೆ ಒಣಬೇಸಾಯದ ಭೂಮಿ ನೀಡಬೇಕು’ ಎನ್ನುತ್ತಾರೆ ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ ರಾಜ್ಯ ಸಂಚಾಲಕ ಪ್ರಕಾಶ ಅಂತರಗೊಂಡ. ‘ಪರಿಹಾರ ನೀಡಿ ಕೈತೊಳೆದುಕೊಂಡಿದ್ದರಿಂದ ಸಂತ್ರಸ್ತರು ಕೂಲಿಗೆ ಹೋಗುವಂತಾಗಿದೆ. ನೀತಿ ಅಡಿ ಪ್ರಾಥಮಿಕ ಆರೋಗ್ಯ ಕೇಂದ್ರವಿರಬೇಕು. ಉದ್ಯೋಗ ಸೃಷ್ಟಿಸಬೇಕು. ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು. ಆದರೆ ಯಾವುದೂ ಪಾಲನೆಯಾಗಿಲ್ಲ. ಪುನರ್ವಸತಿ ಕೇಂದ್ರಗಳಲ್ಲಿ ಮೂಲಸೌಲಭ್ಯಗಳಿಲ್ಲ. ರಸ್ತೆ ಚರಂಡಿ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಕೆಲವೆಡೆ ಕುಡಿಯುವ ನೀರಿಗೂ ತೊಂದರೆ ಇದೆ’ ಎನ್ನುತ್ತಾರೆ.

Cut-off box - ಸಂತ್ರಸ್ತರ ಜಮೀನಿನಲ್ಲೂ ಅಕ್ರಮ ಹೇಮಾವತಿ ಪುನರ್ವಸತಿ ಯೋಜನೆಯಲ್ಲಿ ಸಂತ್ರಸ್ತರಿಗೆ ಮೀಸಲಿದ್ದ ಜಮೀನನ್ನು ಬೇರೆಯವರಿಗೆ ಅಕ್ರಮ ಭೂ ಮಂಜೂರಾತಿ ಮಾಡಲಾಗಿದೆ. ‘ಹಾಸನ ಜಿಲ್ಲೆಯಲ್ಲಿ 2015 ರಿಂದ 2019 ರವರೆಗೆ ಪತ್ತೆಯಾದ 977 ಪ್ರಕರಣಗಳ ಮಂಜೂರಾತಿ ರದ್ದು ಮಾಡಲಾಗಿದೆ. ಅದರಲ್ಲಿ 135 ಪ್ರಕರಣಗಳ ಮ್ಯುಟೇಶನ್‌ ಕೂಡ ರದ್ದುಗೊಳಿಸಲಾಗಿದೆ. ಉಳಿದವುಗಳ ರದ್ದತಿ ಪ್ರಗತಿಯಲ್ಲಿದೆ. 2005 ರಿಂದ 2015 ರವರೆಗಿನ 288 ಪ್ರಕರಣಗಳಲ್ಲಿ ಸಂಬಂಧಿಸಿದವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ. ‘ಅಕ್ರಮ ಮಂಜೂರಾತಿ ಮಾಡಿದ ಅಧಿಕಾರಿಗಳ ಪಟ್ಟಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಅವರ ವಿರುದ್ಧ ಕ್ರಮದ ಬಗ್ಗೆ ಸರ್ಕಾರದಿಂದ ಇದುವರೆಗೆ ಯಾವುದೇ ಆದೇಶ ಬಂದಿಲ್ಲ’ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ. ವಿಜಯಪುರ ಜಿಲ್ಲೆಯ ಕೊಲ್ಹಾರ ಪುನರ್ವಸತಿ ಕೇಂದ್ರದಲ್ಲಿ ಸುಳ್ಳು ಮಾಹಿತಿ ನೀಡಿ ನಿವೇಶನ ಪಡೆದ 1117 ಸಂತ್ರಸ್ತರು ಹಾಗೂ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕೊಲ್ಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿಜವಾದ ಸಂತ್ರಸ್ತರಿಗೆ ಸಿಗದ ಸೌಲಭ್ಯಗಳು ನಕಲಿ ಸಂತ್ರಸ್ತರಿಗೆ ಸಿಗುತ್ತಿವೆ ಎಂದು ಕೂಗು ಜೋರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT