ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಣಸಿನಕಾಯಿಗೂ 3 ಪರ್ಸೆಂಟ್‌ ಕಮಿಷನ್ !

ಮೆಣಸಿನಕಾಯಿಗೆ ವಿಶ್ವವಿಖ್ಯಾತಿ ಪಡೆದ ಬ್ಯಾಡಗಿಯ ಕೃಷಿ ಉತ್ಪನ್ನ ಮಾರುಕಟ್ಟೆ
Last Updated 27 ಏಪ್ರಿಲ್ 2019, 20:45 IST
ಅಕ್ಷರ ಗಾತ್ರ

ಹಾವೇರಿ: ಮೆಣಸಿನಕಾಯಿಗೆ ಪ್ರಸಿದ್ಧವಾದ ಇಲ್ಲಿನ ಬ್ಯಾಡಗಿ ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಅನಧಿಕೃತವಾಗಿ ‘3 ಪರ್ಸೆಂಟ್‌ ಕಮಿಷನ್’ ವಸೂಲು ಮಾಡುತ್ತಾರೆ ಎಂಬುದು ರೈತರ ಆರೋಪವಾಗಿದೆ.

ಇಲ್ಲಿ ಇ– ಟೆಂಡರಿಂಗ್ ವ್ಯವಸ್ಥೆ ಇದೆ. ರೈತರ ಬ್ಯಾಂಕ್ ಖಾತೆಗೆ (ನಗದು ರಹಿತ) ನೇರವಾಗಿ ಹಣ ವರ್ಗಾಯಿಸಲಾಗುತ್ತದೆ. ಅದಕ್ಕಾಗಿ ಮುಂಗಡದಲ್ಲೇ 3 ಪರ್ಸೆಂಟ್ ಕಮಿಷನ್ ಮುರಿದುಕೊಳ್ಳಲಾಗುತ್ತಿದೆ.

ಪರ್ಸೆಂಟೇಜ್ ಹೀಗಿದೆ: ರೈತರ ಮೆಣಸಿನಕಾಯಿಗೆ ಇ– ಟೆಂಡರಿಂಗ್ ಮೂಲಕ ದಲ್ಲಾಳಿಗಳು ದರ (ಕೋಟ್‌) ಘೋಷಿಸುತ್ತಾರೆ. ಆದರೆ, ಮೆಣಸಿನಕಾಯಿ ತಂದ ರೈತರು ಲಾರಿ ಬಾಡಿಗೆ, ಹಮಾಲಿ, ಊಟೋಪಚಾರಕ್ಕಾಗಿ ದಲ್ಲಾಳಿಗಳಿಂದ ‘ಮುಂಗಡ’ ಪಡೆದು ಕೊಂಡಿರುತ್ತಾರೆ. ಹೀಗಾಗಿ, ರೈತರಿಗೆ ಮೆಣಸಿನಕಾಯಿಯ ಪೂರ್ಣ ಹಣವನ್ನು ಪಾವತಿಸುವ ಸಂದರ್ಭದಲ್ಲಿ ದಲ್ಲಾಳಿಗಳು ಈ ಮುಂಗಡವನ್ನು ಮುರಿದುಕೊಳ್ಳುತ್ತಾರೆ. ಆದರೆ, ಮುಂಗಡದಲ್ಲೇ ಶೇ 3ರಷ್ಟು ಕಮಿಷನ್‌ ಸೇರಿಸಿ ಕಡಿತಗೊಳಿಸುತ್ತಿದ್ದು, ಇದು ಯಾವುದೇ ದಾಖಲೆಗಳಲ್ಲೂ ನಮೂದಾಗುತ್ತಿಲ್ಲ.

ಇತರ ಕಡಿತ: ಮೆಣಸಿನಕಾಯಿ ಹಸಿ ಇದೆ ಎಂದು ಸ್ಯಾಂಪಲ್ (ಮಾದರಿ)ಗಾಗಿ ಎರಡು– ಮೂರು ಕೆ.ಜಿ. ತೆಗೆಯುತ್ತಾರೆ ಎಂದು ರೈತರು ದೂರುತ್ತಾರೆ.

ಎಪಿಎಂಸಿಗೆ ಶೇ 1.5ರಷ್ಟು (ಆವರ್ತನಿಧಿ, ಸೆಸ್, ಅಭಿವೃದ್ಧಿ ಶುಲ್ಕ ಇತ್ಯಾದಿ) ಹಣ ಪಾವತಿಸಬೇಕು. ಅದಕ್ಕಾಗಿ ಕೆಲವರು ಇ–ಟೆಂಡರ್‌ ಮೂಲಕ ಮೆಣಸಿನಕಾಯಿ ಹರಾಜುಗೊಂಡಿರುವುದನ್ನು ತೋರಿಸದೇ, ಪ್ರತ್ಯೇಕವಾಗಿ ಹೊರಗಡೆ ಖರೀದಿಸುತ್ತಾರೆ. ಶೇ 1.5 ಅನ್ನೂ ಪಾವತಿಸುತ್ತಿಲ್ಲ ಎಂಬ ದೂರುಗಳೂ ಇವೆ.

ಮೂಲಸೌಕರ್ಯದ ಕೊರತೆ: ಪ್ರತಿ ಸೋಮವಾರ ಮತ್ತು ಗುರುವಾರ ಇ –ಟೆಂಡರಿಂಗ್ ನಡೆಯುತ್ತದೆ. ಆಗ, ರಾಜ್ಯದ ವಿವಿಧ ಜಿಲ್ಲೆಗಳು ಮಾತ್ರವಲ್ಲ, ಸಮೀಪದ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಿಂದಲೂ ರೈತರು ಮೆಣಸಿ ನಕಾಯಿ ತರುತ್ತಾರೆ. ಆದರೆ, ಇಲ್ಲಿಗೆ ಬರುವ ರೈತರಿಗೆ ಮೂಲಸೌಕರ್ಯಗಳಿಲ್ಲ. ರೈತಭವನ, ವಸತಿಗೃಹಗಳು, ಶೌಚಾಲಯಗಳು ಇಲ್ಲ.

‘ದಲ್ಲಾಳಿಗಳು ರೈತರಿಂದ ಯಾವುದೇ ಕಮಿಷನ್ ಪಡೆಯಬಾರದು ಎಂಬ ನಿಯ ಮವಿದೆ. ಆದರೆ ಹಿಂದಿನಿಂದಲೂ ರೈತರಿಂದ ಶೇ 3ರಷ್ಟು ಕಮಿಷನ್‌ ತೆಗೆದುಕೊಳ್ಳುತ್ತಿದ್ದಾರೆ' ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ದೂರಿದರು.

ಮೆಣಸಿನಕಾಯಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು. ಆಗ ರೈತರಿಗೆ ತಕ್ಕಮಟ್ಟಿನ ಬೆಲೆ ಸಿಗಲು ಸಾಧ್ಯ ಎಂಬ ಆಗ್ರಹ ಅವರದ್ದು.

‘ರೈತರಿಂದ ಕಮಿಷನ್‌ ಪಡೆಯಬಾರದು ಎಂದು ದಲ್ಲಾಳಿಗಳಿಗೆ ಬಿಗಿ ಮಾಡಿದರೆ ಅವರು ಮೆಣಸಿನಕಾಯಿ ರಾಶಿಗೆ ಕಡಿಮೆ ದರ ಕೋಟ್‌ ಮಾಡುತ್ತಾರೆ. ಅದಕ್ಕಾಗಿ ಅಧಿಕಾರಿಗಳೇ ರೈತರಿಗೆ ಹೊರೆಯಾಗದಂತೆ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ರೈತರು ದೂರು ನೀಡುತ್ತಿಲ್ಲ

‘ನಮಗೆ ಈ ತನಕ ಯಾವುದೇ ದೂರುಗಳು ಬಂದಿಲ್ಲ. ದಲ್ಲಾಳಿಗಳು ಕಮಿಷನ್‌ ಕೇಳಿದರೆ ದೂರು ನೀಡಿ ಎಂದು ರೈತರ ಬಳಿ ಮನವಿ ಮಾಡಿದ್ದೇವೆ. ಆದರೆ ಯಾರೂ ದೂರು ನೀಡಿಲ್ಲ’ ಎಂದು ಎಪಿಎಂಸಿ ಕಾರ್ಯದರ್ಶಿ ಎಸ್.ಬಿ. ನ್ಯಾಮಗೌಡ ತಿಳಿಸಿದರು.

‘ದಲ್ಲಾಳಿಗಳು ಮತ್ತು ರೈತರ ನಡುವೆ ಹೊಂದಾಣಿಕೆ ಇರುತ್ತದೆ. ರೈತರು ವೈಯಕ್ತಿಕ ಸಮಸ್ಯೆಗಳಿಗಾಗಿ ದಲ್ಲಾಳಿಗಳಿಂದ ಮುಂಗಡ ಪಡೆದಿರುತ್ತಾರೆ. ಹೀಗಾಗಿ ಅಧಿಕಾರಿಗಳು ಎಷ್ಟೇ ವಿನಂತಿಸಿದರೂ ರೈತರು ಕಮಿಷನ್‌ ಬಗ್ಗೆ ದೂರು ನೀಡುತ್ತಿಲ್ಲ’ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT