ನಮ್ಮ ನೆರೆಯ ದೇಶ ಪಾಕಿಸ್ತಾನವು ಶೋಚನೀಯ ಸ್ಥಿತಿ ತಲುಪಿದೆ. ಕಳೆದ ವರ್ಷ ಬಂದ ಪ್ರವಾಹದಿಂದಾಗಿ ದೇಶದ ಮುಕ್ಕಾಲು ಭಾಗ ತತ್ತರಿಸಿತ್ತು. ಪ್ರವಾಹದಿಂದ ಆಗಿರುವ ನಷ್ಟವು ಮೂರು ಸಾವಿರ ಕೋಟಿ ಡಾಲರ್ಗೂ ಹೆಚ್ಚು (ಭಾರತದ ರೂಪಾಯಿ ಮೌಲ್ಯದಲ್ಲಿ ಸುಮಾರು ₹2.4 ಲಕ್ಷ ಕೋಟಿ) ಎಂದು ಅಂದಾಜಿಸಲಾಗಿತ್ತು. ಆ ದೇಶದ ರಾಜಕೀಯ ಸ್ಥಿತಿಯು ಸದಾ ಅಸ್ಥಿರವೇ ಎಂಬುದು ಜಗತ್ತಿಗೇ ಗೊತ್ತು. ಈಗಿನ ಅಲ್ಲಿನ ರಾಜಕೀಯ ಸ್ಥಿತಿಯು ಹಿಂದೆಂದಿಗಿಂತಲೂ ತಳಕ್ಕೆ ಕುಸಿದಿದೆ. ಇಮ್ರಾನ್ ಖಾನ್ ಅವರ ಸರ್ಕಾರವನ್ನು ವಿರೋಧ ಪಕ್ಷಗಳೆಲ್ಲ ಒಂದಾಗಿ ಕಳೆದ ಏಪ್ರಿಲ್ನಲ್ಲಿ ಉರುಳಿಸಿದವು. ಶಹಬಾಜ್ ಷರೀಫ್ ನೇತೃತ್ವದ ಮೈತ್ರಿ ಸರ್ಕಾರ ನಂತರ ಅಸ್ತಿತ್ವಕ್ಕೆ ಬಂದಿದೆ. ಆದರೆ, ಈವರೆಗೂ ಆಡಳಿತದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಿಲ್ಲ. ಉಚ್ಚಾಟಿತರಾದ ಇಮ್ರಾನ್ ಅವರು ದೇಶದಾದ್ಯಂತ ರ್ಯಾಲಿಗಳನ್ನು ನಡೆಸಿ ಜನರನ್ನು ಸಂಘಟಿಸುತ್ತಿದ್ದಾರೆ. ಇದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಪ್ರಾಂತ್ಯಗಳಲ್ಲಿ ಕೂಡ ರಾಜಕೀಯ ಅಸ್ಥಿರತೆ ಇದೆ. ಈಗ ಬಹುದೊಡ್ಡ ಆರ್ಥಿಕ ಬಿಕ್ಕಟ್ಟಿನಲ್ಲಿ ದೇಶ ಇದೆ.

ದೇಶದ ವಿದೇಶಿ ವಿನಿಮಯ ಮೀಸಲು ದಾಖಲೆ ಮಟ್ಟಕ್ಕೆ ಕುಸಿದಿದೆ. ಕಳೆದ ಡಿಸೆಂಬರ್ ಕೊನೆಯ ಹೊತ್ತಿಗೆ ಇದ್ದ ಮೀಸಲು ಮೊತ್ತವು ಸುಮಾರು 1,000 ಕೋಟಿ ಡಾಲರ್ಗೆ (ರೂಪಾಯಿ ಲೆಕ್ಕದಲ್ಲಿ ಸುಮಾರು 82 ಸಾವಿರ ಕೋಟಿ) ಇಳಿದಿದೆ. ದೇಶದ ವಿದೇಶಿ ಸಾಲ ವಿಪರೀತ ಮಟ್ಟದಲ್ಲಿದೆ. ಈ ಸಾಲವನ್ನು ಸರಿಯಾಗಿ ಮರುಪಾವತಿ ಮಾಡಿದರೆ ದೇಶದಲ್ಲಿ ಇರುವ ಮೀಸಲು ಹಣವು 25 ದಿನಗಳ ಆಮದು ವೆಚ್ಚ ಪಾವತಿಸಲಷ್ಟೇ ಸಾಕಾಗಬಹುದು ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ಇಂಧನ ಮತ್ತು ಆಹಾರ ಸಮಸ್ಯೆ ಹಿಂದೆಂದೂ ಕಂಡರಿಯದ ಹಂತಕ್ಕೆ ತಲುಪಿದೆ. ಗೋಧಿ ಎಲ್ಲಿಯೂ ದೊರೆಯತ್ತಿಲ್ಲ. ಒಂದು ಕೆ.ಜಿ. ಗೋಧಿಯ ದರ 160 ಪಾಕಿಸ್ತಾನಿ ರೂಪಾಯಿಗಿಂತ ಹೆಚ್ಚಾಗಿದೆ. ಒಂದು ರೊಟ್ಟಿಯ ದರ 30 ರೂಪಾಯಿಯನ್ನು ದಾಟಿದೆ. ದೇಶದ ವಿವಿಧ ಭಾಗಗಳಲ್ಲಿ ಗೋಧಿ ಅಂಗಡಿಗಳ ಮುಂದೆ ಜನ ದಟ್ಟಣೆಯಾಗಿ ಕಾಲ್ತುಳಿತಕ್ಕೆ ಹಲವರು ಬಲಿಯಾಗಿದ್ದಾರೆ. ಈರುಳ್ಳಿಯ ದರ ಐದು ಪಟ್ಟು ಹೆಚ್ಚಾಗಿ, 220 ಪಾಕಿಸ್ತಾನಿ ರೂಪಾಯಿಗೆ ಮುಟ್ಟಿದೆ.

ಅತ್ಯಂತ ಕಡಿಮೆ ಪ್ರಮಾಣದ ಆರ್ಥಿಕ ಪ್ರಗತಿ, ಅತಿಯಾದ ಹಣದುಬ್ಬರ ದೇಶವು ಇನ್ನಷ್ಟು ಕಂಗೆಡುವಂತೆ ಮಾಡಿದೆ. ಇದೇ ಜೂನ್ಗೆ ಕೊನೆಯಾಗಲಿರುವ ಆರ್ಥಿಕ ವರ್ಷದಲ್ಲಿ ದೇಶದ ಪ್ರಗತಿಯು ಶೇ 2ರಷ್ಟು ಮಾತ್ರ ಇರಲಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಕೂಡ ಒಟ್ಟು ಆಂತರಿಕ ಉತ್ಪನ್ನದ ಪ್ರಗತಿಯು ಶೇ 3.2ರಷ್ಟು ಮಾತ್ರ ಇರಲಿದೆ ಎಂದೂ ವಿಶ್ವ ಬ್ಯಾಂಕ್ ಅಂದಾಜಿಸಿದೆ. ಹಾಗಾಗಿ, ದೇಶದ ಆರ್ಥಿಕ ಚೇತರಿಕೆಯು ತಕ್ಷಣಕ್ಕೆ ಸಾಧ್ಯವಿಲ್ಲ. ಹಣದುಬ್ಬರವು ಜನರ ಬದುಕನ್ನು ಹೈರಾಣಾಗಿಸಿದೆ. 2022ರ ಡಿಸೆಂಬರ್ನಲ್ಲಿ ಹಣದುಬ್ಬರವು ಶೇ 24.5ರಷ್ಟು ಇತ್ತು ಎಂದು ಪಾಕಿಸ್ತಾನದ ಕೇಂದ್ರೀಯ ಬ್ಯಾಂಕ್– ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ– ಹೇಳಿದೆ (2021ರ ಡಿಸೆಂಬರ್ನಲ್ಲಿ ಹಣದುಬ್ಬರವು ಶೇ 12.3ರಷ್ಟಿತ್ತು). ನಗರಗಳಲ್ಲಿ ಆಹಾರ ಹಣದುಬ್ಬರವು ಶೇ 32.7ರಷ್ಟಕ್ಕೆ ತಲುಪಿದೆ.

ನಿರುದ್ಯೋಗ ಸಮಸ್ಯೆಯಿಂದ ಯುವ ಜನರು ಕಂಗಾಲಾಗಿದ್ದಾರೆ. 1,167 ಕಾನ್ಸ್ಟೆಬಲ್ ಹುದ್ದೆಗಳಿಗೆ ಇತ್ತೀಚೆಗೆ ಲಿಖಿತ ಪರೀಕ್ಷೆ ನಡೆದಿತ್ತು. 32 ಸಾವಿರ ಅಭ್ಯರ್ಥಿಗಳು ಈ ಪರೀಕ್ಷೆ ಬರೆದಿದ್ದಾರೆ. ನಿರುದ್ಯೋಗ ಸ್ಥಿತಿ ಹೇಗಿದೆ ಎಂಬುದಕ್ಕೆ ಇದು ಕನ್ನಡಿ ಹಿಡಿದಿದೆ. 32 ಸಾವಿರ ಮಂದಿ ಪರೀಕ್ಷೆ ಬರೆದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಒಟ್ಟಿನಲ್ಲಿ ದೇಶವು ಚೇತರಿಸಲಾಗದ ಸ್ಥಿತಿ ತಲುಪಿದೆ. ಎಲ್ಲದರ ಪರಿಣಾಮವಾಗಿ 90 ಲಕ್ಷಕ್ಕೂ ಹೆಚ್ಚು ಜನರು ಬಡತನಕ್ಕೆ ತಳ್ಳಲ್ಪಡಲಿದ್ದಾರೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. \

ಬಿಕ್ಕಟ್ಟಿಗೆ ಸರ್ಕಾರದ ನೀತಿಗಳೇ ಕಾರಣ: ವಿಶ್ವ ಬ್ಯಾಂಕ್
ಪಾಕಿಸ್ತಾನದ ಇಂದಿನ ಆರ್ಥಿಕ ಬಿಕ್ಕಟ್ಟಿಗೆ ಕೋವಿಡ್–19 ಮತ್ತು ಕಳೆದ ವರ್ಷದ ಪ್ರವಾಹವೇ ಮುಖ್ಯ ಕಾರಣ ಎನ್ನಲಾಗುತ್ತಿದೆ. ಆದರೆ, ಅಲ್ಲಿನ ಸರ್ಕಾರದ ನೀತಿಗಳೇ ಇದಕ್ಕೆ ಕಾರಣ ಎಂದು ವಿಶ್ವ ಬ್ಯಾಂಕ್ ಇದೇ 13ರಂದು ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ಹೇಳಿದೆ.

ರಿಯಲ್ ಎಸ್ಟೇಟ್ಗೆ ಕಡಿಮೆ ದರದ ತೆರಿಗೆ: ಪಾಕಿಸ್ತಾನದಲ್ಲಿ ತಯಾರಿಕೆ ಮತ್ತು ಸೇವಾ ವಲಯಕ್ಕೆ ವಿಧಿಸಲಾಗುತ್ತಿರುವ ತೆರಿಗೆಗೆ ಹೋಲಿಸಿದರೆ, ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ವಿಧಿಸುತ್ತಿರುವ ತೆರಿಗೆ ತೀರಾ ಕಡಿಮೆ. 20 ವರ್ಷಗಳಲ್ಲಿ ದೇಶದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರವು ಭಾರಿ ಪ್ರಮಾಣದ ಪ್ರಗತಿ ಸಾಧಿಸಿದೆ. ಈ ಕ್ಷೇತ್ರಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಹಿಂದಿನ ಸರ್ಕಾರಗಳೆಲ್ಲವೂ ತೆರಿಗೆ ಕಡಿತವನ್ನು ಘೋಷಿಸಿದ್ದವು. ಇದರಿಂದ ಸರ್ಕಾರಕ್ಕೆ ಬರಬಹುದಾಗಿದ್ದ ದೊಡ್ಡ ಪ್ರಮಾಣದ ತೆರಿಗೆ ಆದಾಯವು ಖೋತಾ ಆಯಿತು. ರಿಯಲ್ ಎಸ್ಟೇಟ್ ಕ್ಷೇತ್ರದಿಂದ ವರ್ಷಪ್ರತಿ ಬರುತ್ತಿದ್ದ ತೆರಿಗೆಯ ಮೊತ್ತದಲ್ಲಿ ಗಣನೀಯ ಏರಿಕೆಯಾಗಲಿಲ್ಲ. ಹೀಗಿದ್ದೂ, ಸರ್ಕಾರವು ತೆರಿಗೆ ಕಡಿತವನ್ನು ರದ್ದುಪಡಿಸಲಿಲ್ಲ. ಇದರ ಪರಿಣಾಮವಾಗಿ ಪ್ರತಿ ವರ್ಷದ ಬಜೆಟ್ನಲ್ಲಿ ವಿತ್ತೀಯ ಕೊರತೆಯ ಪ್ರಮಾಣ ಹೆಚ್ಚಾಯಿತು.

ತೆರಿಗೆ ಪ್ರಮಾಣ ಕಡಿಮೆ ಇದ್ದ ಕಾರಣ, ಈ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಜನರು ಮುಂದಾದರು. ಹೂಡಿಕೆ ಮಾಡುವಲ್ಲಿಯೂ ಕಡಿಮೆ ತೆರಿಗೆ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಅಗತ್ಯವಿದ್ದ ಸರಕುಗಳ ಮೇಲಿನ ತೆರಿಗೆಯೂ ಕಡಿಮೆ ಇದ್ದ ಕಾರಣ ಈ ಕ್ಷೇತ್ರಕ್ಕೆ ಬಂಡವಾಳ ಹರಿದುಬಂತು. 20 ವರ್ಷಗಳ ಅವಧಿಯಲ್ಲಿ ಈ ಕ್ಷೇತ್ರದಲ್ಲಿ ಭಾರಿ ಪ್ರಮಾಣದ ಬಂಡವಾಳ ಹೂಡಿಕೆಯಾಯಿತು. ತಯಾರಿಕೆ ಮತ್ತು ಸೇವಾ ವಲಯಗಳಲ್ಲಿ ಹೂಡಿಕೆಯಾದ ಬಂಡವಾಳಕ್ಕೆ ಹೋಲಿಸಿದರೆ, ಈ ಕ್ಷೇತ್ರದಲ್ಲಿ ಹೂಡಿಕೆಯಾದ ಬಂಡವಾಳದ ಉತ್ಪಾದಕತೆ ಕಡಿಮೆ. ಇದು ಸಹ ದೇಶದ ಆರ್ಥಿಕ ಚಟುವಟಿಕೆಯ ಪ್ರಗತಿಯನ್ನು ಕುಂಠಿತಗೊಳಿಸಿತು.

ಸಹಾಯಧನದ ಅವೈಜ್ಞಾನಿಕ ಹಂಚಿಕೆ: ದೇಶದ ಕೃಷಿ ಕ್ಷೇತ್ರದಲ್ಲಿ ಅವೈಜ್ಞಾನಿಕವಾಗಿ ಸಹಾಯಧನ ನೀಡುತ್ತಿರುವುದು ಸಹ ಇಂತಹ ಬಿಕ್ಕಟ್ಟಿನ ಸ್ಥಿತಿಗೆ ಒಂದು ಪ್ರಮುಖ ಕಾರಣ. ಪಾಕಿಸ್ತಾನದಲ್ಲಿ ಕೆಲವೇ ಆಯ್ದ ವಾಣಿಜ್ಯ ಬೆಳೆಗಳಿಗಷ್ಟೇ ಎಲ್ಲಾ ಸ್ವರೂಪದ ಸಹಾಯಧನವನ್ನು ನೀಡಲಾಗುತ್ತಿದೆ. ಸಹಾಯಧನ ಪಡೆದ ಬೆಳೆಗಳಿಗಷ್ಟೇ ವೈಜ್ಞಾನಿಕ ಬೆಂಬಲ ಬೆಲೆಯ ಅನುಕೂಲ ಒದಗಿಸಿಕೊಡಲಾಗಿದೆ. ಜತೆಗೆ ಇಂತಹ ಬೆಳೆಗಳಿಗಷ್ಟೇ ನೀರಾವರಿ ಒದಗಿಸಲಾಗುತ್ತಿದೆ. ಇದರ ಪರಿಣಾಮವಾಗಿ ಹೆಚ್ಚಿನ ಕೃಷಿಕರು ಇಂತಹ ವಾಣಿಜ್ಯ ಬೆಳೆಗಳ ಮೊರೆ ಹೋಗಿದ್ದಾರೆ. ಇದರಿಂದ ಆಹಾರ ಬೆಳೆಗಳ ಕೊರತೆ ಉಂಟಾಗಿದ್ದು, ಆಹಾರ ಪದಾರ್ಥಗಳ ಬೆಲೆ ವಿಪರೀತ ಎನ್ನುವಷ್ಟು ಏರಿಕೆಯಾಗಿದೆ. ಆಹಾರ ಪದಾರ್ಥವನ್ನೂ ಆಮದು ಮಾಡಿಕೊಳ್ಳುವ ಸ್ಥಿತಿ ಎದುರಾಗಿರುವುದರಿಂದ, ಅವುಗಳ ಬೆಲೆ ಮತ್ತಷ್ಟು ಏರಿಕೆಯಾಗಿದೆ. ಮತ್ತೊಂದೆಡೆ ಸರ್ಕಾರದ ಸಹಾಯಧನ ಪಡೆದ ವಾಣಿಜ್ಯ ಬೆಳೆಗಳಿಗೆ ರಫ್ತು ಮಾರುಕಟ್ಟೆ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಈ ಬೆಳೆಗಳ ಮೇಲೆ ಹೂಡಲಾದ ಬಂಡವಾಳ ಮತ್ತು ಸಹಾಯಧನವು ಆರ್ಥಿಕತೆಗೆ ವಾಪಸಾಗಿಲ್ಲ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ವಿಪರೀತ ಸಾಲ: ಸಾಲವು ಪಾಕಿಸ್ತಾನದ ಅತ್ಯಂತ ದೊಡ್ಡ ಆರ್ಥಿಕ ಸಮಸ್ಯೆಗಳಲ್ಲಿ ಒಂದು. ದೇಶದ ವಾಣಿಜ್ಯ ಬ್ಯಾಂಕ್ಗಳು ನೀಡಿರುವ ಒಟ್ಟು ಸಾಲದಲ್ಲಿ ಸರ್ಕಾರ ಪಡೆದಿರುವ ಸಾಲದ ಪ್ರಮಾಣ ಶೇ 63ಕ್ಕಿಂತಲೂ ಹೆಚ್ಚು. ತೆರಿಗೆ ಮೂಲದ ಆದಾಯ ಖೋತಾ ಮತ್ತು ಸಹಾಯಧನದ ಪರಿಣಾಮ ಬಜೆಟ್ನ ವಿತ್ತೀಯ ಕೊರತೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಕೊರತೆಯನ್ನು ನೀಗಿಸಲು ಸರ್ಕಾರವು ದೇಶದ ವಾಣಿಜ್ಯ ಬ್ಯಾಂಕ್ಗಳಿಂದ ಹೆಚ್ಚು ಸಾಲ ಪಡೆದಿದೆ. ಹೆಚ್ಚು ಉದ್ಯೋಗ ಸೃಷ್ಟಿಸುವ ತಯಾರಿಕೆ ಮತ್ತು ಸೇವಾ ವಲಯಕ್ಕೆ ಅಗತ್ಯವಿರುವ ಸಾಲ ಲಭ್ಯವಿಲ್ಲ. ಹೀಗಾಗಿ ಇಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಇದು ಸಹ ದೇಶದ ಆರ್ಥಿಕತೆಯನ್ನು ಕುಂಠಿತಗೊಳಿಸಿದೆ. ಈ ಕಾರಣದಿಂದ ಜನರ ಬಳಿ ಹಣ ಇಲ್ಲದೇ ಇರುವ ಸ್ಥಿತಿ ಉಂಟಾಗಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ. ಇವುಗಳ ಜತೆಯಲ್ಲಿ ಷೆಲ್ ಕಂಪನಿಗಳ ಪ್ರಮಾಣ ಹೆಚ್ಚಾಗಿದೆ. ಸರ್ಕಾರದಿಂದ ನೆರವು ಪಡೆಯುವ ಉದ್ದೇಶದಿಂದ ಸ್ಥಾಪಿಸಲಾದ ಇಂತಹ ಕಂಪನಿಗಳು ಕಾರ್ಯನಿರ್ವಹಿಸುತ್ತಲೇ ಇಲ್ಲ. ಇವುಗಳು ಪಡೆದಿರುವ ಸಾಲವೂ ವಾಪಸ್ ಬಂದಿಲ್ಲ. ದೇಶದಲ್ಲಿ ನೋಂದಣಿಯಾದ ಒಟ್ಟು ಕಂಪನಿಗಳಲ್ಲಿ ಇಂತಹ ಕಂಪನಿಗಳ ಪ್ರಮಾಣ ಶೇ 11ರಷ್ಟು ಇದೆ. ಇದು ವಿಶ್ವದಲ್ಲೇ ಹೆಚ್ಚು. ಇಂತಹ ಕಂಪನಿಗಳ ಕಾರಣದಿಂದಲೂ ಸರ್ಕಾರದ ಬಂಡವಾಳ ವ್ಯರ್ಥವಾಗಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ನೆರವಿಗೆ ಪದೇ ಪದೇ ಮೊರೆ
ಹಣಕಾಸು ಬಿಕ್ಕಟ್ಟಿನಿಂದ ಹೊರಬರಲು ಪಾಕಿಸ್ತಾನವು ಇನ್ನಿಲ್ಲದ ಯತ್ನ ನಡೆಸುತ್ತಿದೆ. ಹಣಕಾಸಿನ ನೆರವು ನೀಡುವಂತೆ ಎಲ್ಲ ದೇಶಗಳ ಮುಂದೆ ಪದೇಪದೇ ಬೇಡಿಕೆ ಇಡುತ್ತಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಎದುರು ಪಾಕಿಸ್ತಾನ 23 ಬಾರಿ ಮನವಿ ಮಾಡಿದೆ ಎನ್ನಲಾಗಿದೆ. ಆದರೆ, ಷರತ್ತುಗಳನ್ನು ಈಡೇರಿಸದ ಹೊರತು ಹಣಕಾಸು ನೆರವು ಇಲ್ಲ ಎಂದು ಐಎಂಎಫ್ ಸ್ಪಷ್ಟಪಡಿಸಿದೆ. ಐಎಂಎಫ್ ಷರತ್ತುಗಳನ್ನು ಪೂರೈಸಲು ಪಾಕಿಸ್ತಾನಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ತಕ್ಷಣಕ್ಕೆ ಹಣಕಾಸು ನೆರವು ಸಿಗದೇ ಕಷ್ಟಪಡುತ್ತಿದೆ.

ಪ್ರವಾಹ ಹಾಗೂ ಆ ಬಳಿಕ ಉಂಟಾಗಿರುವ ಆರ್ಥಿಕ ಸಮಸ್ಯೆ ನಿವಾರಣೆಗಾಗಿ ಪಾಕಿಸ್ತಾನಕ್ಕೆ ಅಂತರರಾಷ್ಟ್ರೀಯ ಸಮುದಾಯದಿಂದ ₹73 ಸಾವಿರ ಕೋಟಿ (900 ಕೋಟಿ ಡಾಲರ್) ಹಣಕಾಸಿನ ನೆರವಿನ ಭರವಸೆ ಸಿಕ್ಕಿದೆ.

ಇಸ್ಲಾಮಿಕ್ ಡೆವಲಪ್ಮೆಂಟ್ ಬ್ಯಾಂಕ್ನಿಂದ ₹35,000 ಕೋಟಿ (420 ಕೋಟಿ ಡಾಲರ್) ವಿಶ್ವ ಬ್ಯಾಂಕ್ನಿಂದ ₹16,400 ಕೋಟಿ (200 ಕೋಟಿ ಡಾಲರ್), ಸೌದಿ ಅರೇಬಿಯಾದಿಂದ ₹8200 ಕೋಟಿ (100 ಕೋಟಿ ಡಾಲರ್) ಐರೋಪ್ಯ ಒಕ್ಕೂಟದಿಂದ ₹760 ಕೋಟಿ (9.3 ಕೋಟಿ ಡಾಲರ್), ಅಮೆರಿಕದಿಂದ ₹7,300 ಕೋಟಿ (90 ಕೋಟಿ ಡಾಲರ್) ಜರ್ಮನಿಯಿಂದ ₹720 ಕೋಟಿ (8.8 ಕೋಟಿ ಡಾಲರ್) ಚೀನಾದಿಂದ ₹820 ಕೋಟಿ (10 ಕೋಟಿ ಡಾಲರ್) ನೆರವಿನ ಭರವಸೆ ಸಿಕ್ಕಿರುವುದು ಪಾಕಿಸ್ತಾನಕ್ಕೆ ಕೊಂಚ ಸಮಾಧಾನ ತಂದಿದೆ. ಆದರೆ, ಪಾಕಿಸ್ತಾನದ ಅತ್ಯಂತ ಆಪ್ತ ದೇಶಗಳಲ್ಲಿ ಗುರುತಿಸಿಕೊಂಡಿರುವ ಚೀನಾ, ದೊಡ್ಡ ಮಟ್ಟದ ಸಹಾಯಕ್ಕೆ ಮುಂದಾಗಿಲ್ಲ ಎಂದು ಹೇಳಲಾಗಿದೆ. ಸೌದಿ ಅರೇಬಿಯಾವು ಪಾಕಿಸ್ತಾನಕ್ಕೆ ಈಗಾಗಲೇ ನೀಡಿರುವ 200 ಕೋಟಿ ಡಾಲರ್ ಸಾಲದ ಜೊತೆಗೆ ಮತ್ತೆ 100 ಕೋಟಿ ಡಾಲರ್ ಸಾಲ ನೀಡಲು ಮುಂದಾಗಿದೆ. ಕತಾರ್ ಮೊದಲಾದ ಇಸ್ಲಾಮಿಕ್ ದೇಶಗಳು ಸಹಾಯದ ಭರವಸೆ ನೀಡಿವೆ.

ಹೊರದೇಶಗಳ ಹಣಕಾಸಿನ ನೆರವಿನ ಮೇಲೆ ಅವಲಂಬನೆಯಾಗದೇ, ದೇಶೀಯವಾಗಿ ಆದಾಯ ಕ್ರೋಡೀಕರಿಸಬೇಕಾದ ಅಗತ್ಯವಿದೆ ಎಂದು ಪ್ರಧಾನಿ ಶಹಬಾಜ್ ಷರೀಫ್ ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರವಾಹ ಹಾಗೂ ಅದರ ಬಳಿಕ ಉಂಟಾಗಿರುವ ಆರ್ಥಿಕ ಏರುಪೇರು ಸರಿಪಡಿಸಲು ಸುಮಾರು ₹1.3 ಲಕ್ಷ ಕೋಟಿ (1630 ಕೋಟಿ ಡಾಲರ್) ಅಗತ್ಯವಿದೆ ಎಂದು ಪಾಕಿಸ್ತಾನ ಅಂದಾಜಿಸಿತ್ತು. ಈ ಪೈಕಿ ಅರ್ಧದಷ್ಟು ಹಣಕಾಸು ಹೊಂದಿಸಿಕೊಳ್ಳುವಲ್ಲಿ
ಯಶಸ್ವಿಯಾಗಿದ್ದರೂ, ತಕ್ಷಣಕ್ಕೆ ಪಾಕಿಸ್ತಾನಕ್ಕೆ ಎಷ್ಟು ನೆರವು ಸಿಗಲಿದೆ ಹಾಗೂ ಮರುಪಾವತಿ ಹೇಗೆ ಎಂಬ ವಿಚಾರಗಳಲ್ಲಿ ಸ್ಪಷ್ಟತೆಯಿಲ್ಲ.

ಉಳಿತಾಯಕ್ಕಾಗಿ ಕತ್ತರಿ ಪ್ರಯೋಗ!: ದೇಶದಲ್ಲಿ ಉಂಟಾಗಿರುವ ಇಂಧನ ಕೊರತೆ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಮಾಡದ ಕ್ರಮಗಳಿಲ್ಲ. ವಿದ್ಯುತ್ ಉಳಿತಾಯ ಮಾಡುವುದಕ್ಕಾಗಿ ದೇಶದ ಎಲ್ಲ ಮಾಲ್ಗಳನ್ನು ರಾತ್ರಿ 8.30ಕ್ಕೆ ಬಂದ್ ಮಾಡುವಂತೆ ಸರ್ಕಾರ ಆದೇಶಿಸಿದೆ. ಮದುವೆ ಸಮಾರಂಭಗಳಿಗೆ ರಾತ್ರಿ 10 ಗಂಟೆಯ ಗಡುವು ವಿಧಿಸಲಾಗಿದೆ.

ಸರ್ಕಾರಿ ಅಧಿಕಾರಿಗಳು ಬಳಸುವ ವಾಹನವು ತಿಂಗಳಿಗೆ 120 ಲೀಟರ್ಗಿಂತ ಹೆಚ್ಚು ಇಂಧನ ಬಳಸುವಂತಿಲ್ಲ. ಕರ್ತವ್ಯದ ಮೇಲೆ ನಗರದಿಂದ ಹೊರಗೆ ಹೋಗುವ ಅಧಿಕಾರಿಗಳಿಗೆ ನೀಡುತ್ತಿದ್ದ ಎರಡು ಡಿ.ಎಗಳನ್ನು ಒಂದಕ್ಕೆ ಇಳಿಸಲಾಗಿದೆ. ವೇತನದಲ್ಲಿ ಶೇ 25ಕ್ಕಿಂತ ಹೆಚ್ಚಿನ ಭತ್ಯೆಗೆ ಕತ್ತರಿ ಹಾಕಲಾಗಿದೆ. ಸರ್ಕಾರದ ಎಲ್ಲ ಘಟಕಗಳು ಹಣಕಾಸು ನಿಧಿ ಬಳಕೆಯ ಸ್ಪಷ್ಟ ವರದಿಯನ್ನು ಸಲ್ಲಿಸುವುದು ಕಡ್ಡಾಯ ಮಾಡಲಾಗಿದೆ. ನಿಯಮಗಳನ್ನು ಮೀರಿದ ಉದ್ಯೋಗಿಗಳ ಶೇ 50ರಷ್ಟು ವೇತನವನ್ನು ಕಡಿತ ಮಾಡುವ ಎಚ್ಚರಿಕೆಯನ್ನೂ ಉಳಿತಾಯಕ್ಕಾಗಿ ಜಾರಿ ಮಾಡಲಾಗಿರುವ ಮಾರ್ಗಸೂಚಿಗಳಲ್ಲಿ ಸೇರಿಸಲಾಗಿದೆ.

ಆಧಾರ: ಡಾನ್ ಪತ್ರಿಕೆ, ವಿಶ್ವ ಬ್ಯಾಂಕ್ ವರದಿ, ರಾಯಿಟರ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.