ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ಕುಣಿಯುವ ವೈರಲ್ ವಿಡಿಯೊ ರಾಜಸ್ಥಾನದಲ್ಲಿ ಮೃತಪಟ್ಟ ದಲಿತ ಬಾಲಕನದಲ್ಲ

Last Updated 18 ಆಗಸ್ಟ್ 2022, 8:23 IST
ಅಕ್ಷರ ಗಾತ್ರ

ರಾಜಸ್ಥಾನದ ಜಾಲೋರ್‌ನ ಶಾಲೆಯೊಂದರಲ್ಲಿಮಡಿಕೆಯಲ್ಲಿಟ್ಟಿದ್ದ ನೀರು ಕುಡಿದನೆಂಬ ಕಾರಣಕ್ಕೆ ದಲಿತ ಸಮುದಾಯದ ಪುಟ್ಟ ಬಾಲಕ ಇಂದ್ರಕುಮಾರ್ ಮೇಘವಾಲ್‌ನ ಹತ್ಯೆ ಘಟನೆಯು ಇಡೀ ದೇಶವನ್ನು ಕೆರಳಿಸಿದೆ. ಘಟನೆ ಸಂಬಂಧ ಆರೋಪಿಯನ್ನು ಬಂಧಿಸಲಾಗಿದ್ದು, ಘಟನೆಗೆ ದೇಶದಾದ್ಯಂತ ಖಂಡನೆಯೂ ವ್ಯಕ್ತವಾಗಿದೆ. ಇದೇ ಸಂದರ್ಭ, "ಈ ಪುಟಾಣಿಯ ಪ್ರತಿಭೆ ಹೇಗಿತ್ತು, ಇಂಥವನನ್ನು ಕೊಂದರಲ್ಲಾ ಪಾಪಿಗಳು" ಎಂಬರ್ಥದ ಅಡಿಬರಹದೊಂದಿಗೆ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಆಗಸ್ಟ್ 14ರಿಂದೀಚೆಗೆ ವೈರಲ್ ಆಗುತ್ತಿದೆ. ಇದರಲ್ಲಿ ಬಾಲಕನು ನೃತ್ಯ ಮಾಡುತ್ತಿರುವ ದೃಶ್ಯವಿದೆ. ಇದನ್ನು ಓದಿದವರು, "ಎಂಥಾ ಬಾಲಕನನ್ನು ಕಳೆದುಕೊಂಡೆವು, ಪಾಪಿಗಳಿಗೆ ಶಿಕ್ಷೆಯಾಗಲಿ" ಎಂದೆಲ್ಲ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಈ ವಿಡಿಯೊದ ಅಸಲೀಯತ್ತೇನು ಎಂಬ ಕುರಿತು ಪ್ರಜಾವಾಣಿ ಫ್ಯಾಕ್ಚ್ ಚೆಕ್ ನಡೆಸಿದೆ. ತನಿಖೆಯ ಸಂದರ್ಭದಲ್ಲಿ, ಈ ವಿಡಿಯೊ, ಮೃತ ಬಾಲಕ ಇಂದ್ರಕುಮಾರ್‌ನದಲ್ಲ, ಬದಲಾಗಿ ರಾಜಸ್ಥಾನದ ಬೇರೆ ಶಾಲೆಯ ವಿದ್ಯಾರ್ಥಿ ಹರೀಶ್ ಭೀಲ್ ಎಂಬಾತನದು ಎಂಬುದು ದೃಢಪಟ್ಟಿದೆ.

ಕ್ಲೇಮ್ ಏನು?
ಹಲವಾರು ಫೇಸ್‌ಬುಕ್ ಹಾಗೂ ಟ್ವಿಟರ್ ಬಳಕೆದಾರರು ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಡಾ.ಖುಷ್ ನವಾಜ್ ಎಂಬವರು ಮಾಡಿರುವ ಪೋಸ್ಟ್‌ನಲ್ಲಿ ಹೀಗೆ ಬರೆಯಲಾಗಿದೆ: "ಇಂದ್ರನ ಕೆಲವೊಂದು ನೆನಪುಗಳು. ಈ ವಿಡಿಯೊದಲ್ಲಿ ಎಂಥಾ ಮುಗ್ಧತೆಯಿದೆ. ಈ ಬಾಲಕ ಬಾಯಾರಿ ನೀರು ಕುಡಿಯಲು ಹೋದಾಗ ಕೊಲೆಯಾಗುತ್ತಾನೆ ಎಂದು ಯಾರಾದರೂ ಯೋಚಿಸಿದ್ದಾರೆಯೇ? ಈ ಮುಗ್ಧ ಬಾಲಕನಿಗೆ ಮಾರಣಾಂತಿಕ ಶಿಕ್ಷೆ ಕೊಡುವಷ್ಟು ದೊಡ್ಡ ತಪ್ಪು ಮಾಡಿದ್ದಾನೆ ಎಂದರೆ ನಂಬುವುದು ಸಾಧ್ಯವೇ? ಅವನಿಗೆ ಶತ ಶತ ನಮನಗಳು.".

ರಾಹುಲ್ ಸಿದ್ಧಾರ್ಥ್ ಹಾಗೂ ಮುಕೇಶ್ ಕುಮಾರ್ ಚೋಪ್ರಾ ಎಂಬ ಬಳಕೆದಾರರೂ ಇದೇ ವಿಡಿಯೊವನ್ನು ಇದೇ ಅರ್ಥದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ರಾಜಸ್ಥಾನಿ ವಿಡಿಯೊ ಸಾಂಗ್ ಎಂಬ ಪುಟದಲ್ಲಿಯೂ ಈ ವಿಡಿಯೊ ಇದೆ.

ಟ್ವಿಟರ್‌ನಲ್ಲೂ ಇದೇ ಅರ್ಥದಲ್ಲಿ ವಿಡಿಯೊ ಶೇರ್ ಆಗುತ್ತಿದೆ.

ತನಿಖೆ ಹೇಗೆ?
ಈ ಕುರಿತು ಪ್ರಜಾವಾಣಿಯ ಫ್ಯಾಕ್ಟ್ ಚೆಕ್ ತಂಡವು ಅಂತರಜಾಲದಲ್ಲಿ ಶೋಧನೆ ನಡೆಸಿತು. ಇನ್‌ವಿಡ್ ಟೂಲ್ ಬಳಸಿದಾಗ ದೊರೆತ, ಚಿತ್ರದ ತುಣುಕುಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಟೂಲ್ ಮೂಲಕ ಶೋಧಿಸಿದಾಗ ಹೆಚ್ಚಿನ ಮಾಹಿತಿಯೇನೂ ದೊರೆಯಲಿಲ್ಲ.

ಆದರೆ, ಮುಕೇಶ್ ಕುಮಾರ್ ಚೋಪ್ರಾ ಅವರ ಪೋಸ್ಟ್‌ನಲ್ಲಿನ ಕಾಮೆಂಟ್‌ಗಳನ್ನು ಓದುತ್ತಿದ್ದಂತೆಯೇ ಒಂದು ಸುಳಿವು ಸಿಕ್ಕಿತು. ಬಳಕೆದಾರರೊಬ್ಬರು ಟಿಆರ್ ಚೆಲಾ ರಾಮ್ ರಾಯ್ಕ ಎಂಬ ಹೆಸರಿನಲ್ಲಿ ಜುಲೈ 30ರ ಟೈಮ್ ಸ್ಟ್ಯಾಂಪ್ ಇರುವ ಸ್ಕ್ರೀನ್ ಶಾಟ್ ಒಂದರಲ್ಲಿ ಈ ಬಾಲಕ ಹೆಸರು ಹರೀಶ್ ಎಂದು ಉಲ್ಲೇಖಿಸಲಾಗಿತ್ತು. ಪೋಸ್ಟ್‌ನಲ್ಲಿದ್ದ ಮಾಹಿತಿಯಂತೆ, ಈ ಬಾಲಕ, ಜಿಯುಪಿಎಸ್ ಗೋಮರಖ್ ಧಾಮ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ ಮತ್ತು ಶಾಲೆಯಲ್ಲಿ ನಡೆದ 'ನೋ ಬ್ಯಾಗ್ ಡೇ' ಆಚರಣೆ ಸಂದರ್ಭದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಣಿದಿದ್ದಾನೆ ಎಂಬ ಮಾಹಿತಿಯಿತ್ತು.

ಈ ಕುರಿತು ಚೆಲಾ ರಾಮ್ ರಾಯ್ಕ ಅವರ ಫೇಸ್‌ಬುಕ್ ಪ್ರೊಫೈಲ್ ಹುಡುಕಿದಾಗ, ಅದರಲ್ಲಿ ಈ ವಿಡಿಯೊ ಇರಲಿಲ್ಲ. ಬಹುಶಃ ಅವರು ಅದನ್ನು ಡಿಲೀಟ್ ಮಾಡಿರಬಹುದು. ಹೀಗಾಗಿ ಮತ್ತಷ್ಟು ಗೂಗಲ್ ಹುಡುಕಾಟ ನಡೆಸಿದಾಗ ಟ್ವಿಟರ್ ಬಳಕೆದಾರರೊಬ್ಬರು ನೀಡಿದ ಸುಳಿವು ಕೂಡ ನಮ್ಮ ತನಿಖೆಗೆ ಸಹಕಾರಿಯಾಯಿತು. ಅದರಲ್ಲಿಯೂ ಈ ಬಾಲಕ ತಾರಾತ್ರದ ಗೋಮರಖ ಧಾಮ ಮಠದ ಶಾಲೆಯ ವಿದ್ಯಾರ್ಥಿ ಎಂಬ ಮಾಹಿತಿ ಸಿಕ್ಕಿತು.

ಮತ್ತಷ್ಟು ಹುಡುಕಿದಾಗ, GUPS Gomrakh Dham ಶಾಲೆಯ ಫೇಸ್‌ಬುಕ್ ಪುಟ ಸಿಕ್ಕಿತು. ಅದರಲ್ಲಿ 2022ರ ಜುಲೈ 30ರಂದು ಈ ವಿಡಿಯೊ ಪೋಸ್ಟ್ ಮಾಡಲಾಗಿತ್ತು. ಶಾಲೆ ಇರುವುದು ರಾಜಸ್ಥಾನದ ಬಾರ್ಮೇರ್ ಜಿಲ್ಲೆಯ ಚೌಟಾನ್‌ನ ತಾರಾತ್ರ ಎಂಬಲ್ಲಿ.

ಇದರಲ್ಲಿ ಬರೆಯಲಾದ ಪ್ರಕಾರ, 2ನೇ ತರಗತಿ ವಿದ್ಯಾರ್ಥಿ ಹರೀಶ್ ಆತ್ಮವಿಶ್ವಾಸದಿಂದ, ಭರಪೂರವಾಗಿ ಅದ್ಭುತ ನೃತ್ಯ ಪ್ರದರ್ಶನವಾಗಿತ್ತದು.

ಇದನ್ನು ದೃಢಪಡಿಸಿಕೊಳ್ಳಲು, ತಾರಾತ್ರದ ಗೋಮರಖ ಶಾಲೆಯನ್ನು ಸಂಪರ್ಕಿಸಲಾಯಿತು. ಅಲ್ಲಿನ ಆಡಳಿತ ಮಂಡಳಿ ಸ್ಪಷ್ಟಪಡಿಸಿದ ಪ್ರಕಾರ, ಇದು ಜುಲೈ 30ರ ಶನಿವಾರ ಶಾಲೆಯಲ್ಲಿ ನಡೆದ ಕಾರ್ಯಕ್ರಮದ ವಿಡಿಯೊ. ಅದರಲ್ಲಿ ಕುಣಿದಿರುವುದು ಹರೀಶ್ ಭೀಲ್ ಎಂಬ ಎರಡನೇ ತರಗತಿ ವಿದ್ಯಾರ್ಥಿ. ಪ್ರತಿ ಶನಿವಾರ ಶಾಲೆಯಲ್ಲಿ ಬ್ಯಾಗುರಹಿತ ದಿನ ಎಂದು ಪರಿಗಣಿಸಿ, ಅದರ ಪ್ರಯುಕ್ತ ಮಕ್ಕಳಿಗೇನಾದರೂ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಅದರ ಅನುಸಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾರ್ಮೇರ್‌ನ ತಾರಾತ್ರ ಊರಿನ ಹುಡುಗ ಕುಣಿದಿದ್ದಾನೆ.

ಅಂತಿಮ ನಿರ್ಣಯ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೊದಲ್ಲಿದ್ದಂತೆ, ನೃತ್ಯ ಮಾಡುತ್ತಿದ್ದ ಬಾಲಕ, ರಾಜಸ್ಥಾನದ ಜಾಲೋರ್‌ನ ಸರಸ್ವತಿ ವಿದ್ಯಾಮಂದಿರದಲ್ಲಿ ಸಾವನ್ನಪ್ಪಿದ 9ರ ಹರೆಯದ ದಲಿತ ಬಾಲಕ ಇಂದ್ರಕುಮಾರ್ ಮೇಘವಾಲ್‌ನದಲ್ಲ. ಬದಲಾಗಿ, ಈ ವಿಡಿಯೊ ಬಾರ್ಮೇರ್‌ನ ತಾರಾತ್ರದಲ್ಲಿರುವ ಜಿಯುಪಿಎಸ್ ಗೋಮರಖ ಧಾಮ ಶಾಲೆಯ ಹರೀಶ್ ಭೀಲ್ ಎಂಬ ಎರಡನೇ ತರಗತಿಯ ಬಾಲಕನದು. ಹೀಗಾಗಿ ವೈರಲ್ ಆಗಿರುವ ವಿಡಿಯೊದ ಮಾಹಿತಿಯು ಸುಳ್ಳು ಸುದ್ದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT