ರೈತರ ಪಾಲಿಗೆ ಟೊಮೆಟೊ ‘ಹುಳಿ’

7
ಇಳುವರಿ ಹೆಚ್ಚಳದಿಂದ ಧಾರಣೆ ಕುಸಿತ, ಕೆ.ಜಿ. ಟೊಮೆಟೊ ₹3–₹6ಕ್ಕೆ ಮಾರಾಟ

ರೈತರ ಪಾಲಿಗೆ ಟೊಮೆಟೊ ‘ಹುಳಿ’

Published:
Updated:

ಚಾಮರಾಜನಗರ: ವಾರದಿಂದೀಚೆಗೆ ಟೊಮೆಟೊ ಧಾರಣೆ ಕುಸಿಯುತ್ತಿರುವುದರಿಂದ ಜಿಲ್ಲೆಯಲ್ಲಿ ಟೊಮೆಟೊ ಬೆಳೆದ ರೈತರು ಕಂಗಾಲಾಗಿದ್ದಾರೆ. ಸದ್ಯ ಬೆಳೆಗಾರರಿಗೆ ಕೆ.ಜಿ ಟೊಮೆಟೊಗೆ ₹3ರಿಂದ ₹6 ಸಿಗುತ್ತಿದೆ.

ಎಪಿಎಂಸಿಯಲ್ಲಿ ಒಂದು ಕೆ.ಜಿ ಟೊಮೆಟೊ ₹4–₹5ಕ್ಕೆ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ₹10–₹12ಕ್ಕೆ ಮಾರುತ್ತಿದ್ದಾರೆ. ತಳ್ಳುಗಾಡಿಗಳಲ್ಲಿ ಒಂದೂವರೆ ಕೆ.ಜಿ ಟೊಮೆಟೊ ₹12ಕ್ಕೆ ಸಿಗುತ್ತಿದೆ. 

ಹೆಚ್ಚು ಇಳುವರಿ: ಟೊಮೆಟೊ ಇಳುವರಿ ಹೆಚ್ಚಾಗಿರುವುದು ಬೆಲೆ ಕುಸಿತಕ್ಕೆ ಪ್ರಮುಖ ಕಾರಣ. ಜಿಲ್ಲೆಯಲ್ಲಿ ಮುಂಗಾರು ಪೂರ್ವದಲ್ಲಿ ಹೆಚ್ಚು ಮಳೆಯಾಗಿತ್ತು. ಹಾಗಾಗಿ ಟೊಮೆಟೊ ಬೆಳೆಯಲು ಸಾಧ್ಯವಾಗಿರಲಿಲ್ಲ. ಈಗ ಮಳೆಯ ಪ್ರಮಾಣ ಕಡಿಮೆ ಆಗಿರುವುದರಿಂದ ಟೊಮೆಟೊ ಫಸಲು ಹೆಚ್ಚಾಗಿದ್ದು, ಅಧಿಕ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದೆ. 

ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಈ ಮೂರು ಋತುಮಾನಗಳಲ್ಲೂ ರೈತರು ಟೊಮೆಟೊ ಬೆಳೆಯುತ್ತಾರೆ. ಪ್ರತಿ ಬಾರಿಯೂ ಮುಂಗಾರಿನಲ್ಲಿ ದರ ಏರಿಳಿತವಾಗುತ್ತದೆ. ಆದರೆ, ಈ ಸಲ ಧಾರಣೆಯಲ್ಲಿ ಭಾರಿ ಕುಸಿತವಾಗಿದೆ.

ದಲ್ಲಾಳಿಗಳು, ಬಿಡಿ ವ್ಯಾಪಾರಸ್ಥರಿಗೆ ಸುಗ್ಗಿ: ಜಿಲ್ಲೆಯ ಗುಂಡ್ಲುಪೇಟೆ ಮತ್ತು ತೆರಕಣಾಂಬಿಯಲ್ಲಿ ರೈತರು ಒಂದು ಕೆ.ಜಿ ಟೊಮೆಟೊವನ್ನು ಕನಿಷ್ಠ ₹3, ಗರಿಷ್ಠ ₹6ಕ್ಕೆ ಮಾರುತ್ತಿದ್ದಾರೆ. ಚಾಮರಾಜನಗರದ ಎಪಿಎಂಸಿಯಲ್ಲಿ 25 ಕೆ.ಜಿಯ ಒಂದು ಬಾಕ್ಸ್‌ಗೆ ₹100 ದರ ಇದೆ. ಅಂದರೆ ಕೆ.ಜಿಗೆ ₹4 ಎಂದಾಯಿತು. 

ರೈತರಿಂದ ನೇರವಾಗಿ ಮತ್ತು ಮಂಡಿ ಇಲ್ಲವೇ ಎಪಿಎಂಸಿಗಳಿಂದ ಖರೀದಿ ಮಾಡುವ ದಲ್ಲಾಳಿಗಳು ಮತ್ತು ತಳ್ಳುಗಾಡಿ, ಇನ್ನಿತರ ಚಿಲ್ಲರೆ ಮಾರಾಟಗಾರರು ಎರಡು ಪಟ್ಟು ಹೆಚ್ಚು ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. 

ಹುಳಿ ಟೊಮೆಟೊ ಹೆಚ್ಚು: ಜಾಮೂನ್‌ ಹಾಗೂ ಹುಳಿ ಟೊಮೊಟೊ ಎಂಬ ಎರಡು ತಳಿಗಳ ಪೈಕಿ ಜಿಲ್ಲೆಯ ರೈತರು ಹೈಬ್ರಿಡ್‌ ತಳಿಯ ಹುಳಿ ಟೊಮೆಟೊ ಅನ್ನು ಹೆಚ್ಚು ಬೆಳೆಯುತ್ತಾರೆ. ಶುಭ ಸಮಾರಂಭಗಳಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ. ಆಷಾಢ ಮಾಸ ಇರುವುದರಿಂದ ಶುಭ ಕಾರ್ಯಗಳು ನಡೆಯುತ್ತಿಲ್ಲ. ಶ್ರಾವಣ ಮಾಸದಲ್ಲಿ ಬೇಡಿಕೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ.

ಒಂದು ಗಿಡಕ್ಕೆ 70 ಪೈಸೆಯಂತೆ ರೈತರು ಖರೀದಿ ಮಾಡುತ್ತಾರೆ. ಖರ್ಚು ವೆಚ್ಚ ಎಲ್ಲ ಕಳೆದು ರೈತರಿಗೆ ಕೊಂಚ ಲಾಭವಾಗಬೇಕಾದರೆ ಒಂದು ಕೆ.ಜಿ ಟೊಮೆಟೊಗೆ ಕನಿಷ್ಠ ₹10 ಸಿಗಬೇಕು. ಇಲ್ಲವಾದರೆ ನಷ್ಟ ಅವರಿಗೆ ಕಟ್ಟಿಟ್ಟಬುತ್ತಿ. 

ಜಿಲ್ಲೆಯಲ್ಲಿ ಕಳೆದ ವರ್ಷ 2,805 ಹೆಕ್ಟೇರ್‌ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗಿತ್ತು. ಈ ಬಾರಿ ಸುಮಾರು 3,500 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿದೆ. ಉತ್ತಮ ತಳಿಯ ಹೈಬ್ರಿಡ್‌ ಟೊಮೆಟೊ ಒಂದು ಹೆಕ್ಟೇರ್‌ಗೆ 50ರಿಂದ 65 ಟನ್‌ ಇಳುವರಿ ಬರುತ್ತದೆ. ಬಿತ್ತನೆ ಮಾಡಿದ ಋತುವಿಗೆ ಅನುಗುಣವಾಗಿ ಫಸಲು ಇರುತ್ತದೆ ಎಂದು ತೋಟಗಾರಿಕೆಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ನೆರೆ ರಾಜ್ಯಗಳಲ್ಲಿ ಬೇಡಿಕೆ ಕುಸಿತ

ಚಾಮರಾಜನಗರ ಗಡಿ ಜಿಲ್ಲೆಯಾಗಿರುವುದರಿಂದ ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೂ ಟೊಮೆಟೊ ರಫ್ತಾಗುತ್ತದೆ. ಅಲ್ಲಿಯೂ ಈಗ ಮಳೆ ಪ್ರಮಾಣ ಕಡಿಮೆಯಾಗಿದ್ದು, ರೈತರು ಟೊಮೆಟೊ ಬೆಳೆದಿದ್ದಾರೆ. ಇದರ ಪರಿಣಾಮ ಜಿಲ್ಲೆಯ ಟೊಮೆಟೊಗೆ ಬೇಡಿಕೆ ಕುಸಿದಿದೆ ಎನ್ನುತ್ತಾರೆ ಮಂಡಿ ವ್ಯಾಪಾರಿಗಳು.

‘ಜೊತೆಗೆ, ಆಷಾಢ ಮಾಸ ಆಗಿರುವುದರಿಂದ ಶುಭ ಸಮಾರಂಭಗಳೂ ನಡೆಯುತ್ತಿಲ್ಲ. ಹೀಗಾಗಿ ಬೇಡಿಕೆ ಕುಸಿದಿದೆ. ಇದು ಬೆಲೆಯ ಮೇಲೆ ಪರಿಣಾಮ ಬೀರಿದೆ’ ಎನ್ನುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !