ಸೋಮವಾರ, ಸೆಪ್ಟೆಂಬರ್ 23, 2019
27 °C

ಮುಗ್ಧತೆಯ ಹೊತ್ತಿಗೆಯಲ್ಲಿ ಶುದ್ಧ ಮನುಷ್ಯತ್ವದ ಕಥನ

Published:
Updated:
Deccan Herald

ಚಿತ್ರ: ಒಂದಲ್ಲಾ ಎರಡಲ್ಲಾ
ನಿರ್ಮಾಣ: ಸ್ಮಿತಾ ಉಮಾಪತಿ
ನಿರ್ದೇಶನ: ಡಿ. ಸತ್ಯಪ್ರಕಾಶ್‌
ತಾರಾಗಣ: ಮಾಸ್ಟರ್‌ ಪಿ.ವಿ. ರೋಹಿತ್, ಸಾಯಿಕೃಷ್ಣ ಕುಡ್ಲ, ಎಂ.ಕೆ. ಮಠ, ಆನಂದ್‌ ನೀನಾಸಂ, ಪ್ರಭುದೇವ್‌ ಹೊಸದುರ್ಗ, ನಾಗಭೂಷಣ್, ರಂಜಾನ್‌ ಸಾಬ್‌ ಉಳ್ಳಾಗಡ್ಡಿ

ಮಗುವಿನ ಮನಸ್ಸು ಮುಗ್ಧತೆಯ ಆಗರ. ಆದರೆ, ಇಂದಿನ ಬಹುತೇಕ ಮಕ್ಕಳಲ್ಲಿ ಮುಗ್ಧತೆ ಮಾಯವಾಗಿದೆ. ಇನ್ನೊಂದೆಡೆ ರಾಜಕೀಯ ಲಾಭದ ಹಾಲು ಕರೆಯಲು ಕೆಚ್ಚಲಿಗೆ ಕೈಹಾಕುವ ಜನರಿಗೆ ಹಸುವಿನ ಮುಗ್ಧತೆ ಅರ್ಥವಾಗುವುದಿಲ್ಲ. ಮೂಲರೂಪ ಮರೆತು ಪರಸ್ಪರ ಕೆಸರೆರಚಾಟ ನಡೆಸುತ್ತಿರುವ ನಮಗೆ ನಮ್ಮೊಳಗಿನ ಜೀವಸೆಲೆಯಾದ ಮನುಷ್ಯ ಧರ್ಮದ ಬಗ್ಗೆ ಅರಿವು ಇರುವುದಿಲ್ಲ.

ನಾವು ನಿತ್ಯವೂ ಎದುರಿಸುತ್ತಿರುವ ಘೋರ ಸಮಸ್ಯೆಗಳನ್ನು ಕೊಂಚವೂ ವಾಚ್ಯಗೊಳಿಸದೆ ನವಿರಾದ ಹಾಸ್ಯದ ಮೂಲಕ ‘ಒಂದಲ್ಲಾ ಎರಡಲ್ಲಾ’ ಚಿತ್ರದಲ್ಲಿ ಸೂಕ್ಷ್ಮವಾಗಿ ನೇಯ್ದಿದ್ದಾರೆ ನಿರ್ದೇಶಕ ಡಿ. ಸತ್ಯಪ್ರಕಾಶ್‌. ಈ ಚಿತ್ರದಲ್ಲಿ ಮಾನವೀಯತೆ ಸಾರುವ ಗಟ್ಟಿಯಾದ ಕತೆಯಿದೆ. 

ಗೋವು ಈಗ ರಾಜಕೀಯ ವಿರೋಧಿಗಳನ್ನು ಕಾನೂನಿನ ಕುಣಿಕೆಗೆ ಸಿಲುಕಿಸುವ ಅಸ್ತ್ರವೂ ಆಗಿದೆ. ಈ ಸಿನಿಮಾದಲ್ಲಿ ಹಸು, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಮತದಾನ ಎಲ್ಲವೂ ಇದೆ. ಆದರೆ, ಯಾವುದಕ್ಕೂ ಜೋತು ಬೀಳದೆ ಬದುಕನ್ನು ಯಥಾವತ್ತಾಗಿ ಪ್ರೇಕ್ಷಕರ ಮನಸ್ಸಿಗೆ ತಟ್ಟುವಂತೆ ದೃಶ್ಯರೂಪಕ್ಕೆ ಇಳಿಸಿದ್ದಾರೆ ನಿರ್ದೇಶಕರು.

ಸಮೀರನಿಗೆ ಬಾನು (ಹಸು) ಎಂದರೆ ಸರ್ವಸ್ವ. ಅವನ ಕುಟುಂಬಕ್ಕೂ ಬಾನುವಿನ ಮೇಲೆ ಅಪಾರ ಪ್ರೀತಿ. ಕಣ್ಣಾಮುಚ್ಚಾಲೆ ಆಟದಲ್ಲಿ ಬಾನು ತಪ್ಪಿಸಿಕೊಳ್ಳುತ್ತಾಳೆ. ಆಗ ಇಡೀ ಕುಟುಂಬವೇ ದುಃಖದ ಕಡಲಿನಲ್ಲಿ ಮುಳುಗುತ್ತದೆ. ಹಸು ಹುಡುಕಿಕೊಂಡು ಸಮೀರ ಪೇಟೆಗೆ ಹೋಗುತ್ತಾನೆ. ಅಲ್ಲಿ ಆತ ದಿಕ್ಕುತಪ್ಪುತ್ತಾನೆ. ಅಲ್ಲಿ ಸ್ವಾರ್ಥಿಗಳ ಅಡಕತ್ತರಿಗೆ ಸಿಲುಕುತ್ತಾನೆ. ಆದರೆ, ಮಗು ಮುಗ್ಧತೆಯ ಮೂಲಕ ಎಲ್ಲರನ್ನೂ ಗೆಲ್ಲುತ್ತಾ ಸಾಗುತ್ತಾನೆ.

ಇನ್ನೊಂದೆಡೆ ಸಮೀರ– ಬಾನುವಿಗಾಗಿ ಕುಟುಂಬಸ್ಥರು ಹುಡುಕಾಟ ಆರಂಭಿಸುತ್ತಾರೆ. ಕೊನೆಗೆ, ಸಮೀರನಿಗೆ ಬಾನು ಸಿಗುತ್ತಾಳೆಯೇ ಎನ್ನುವುದನ್ನು ಚಿತ್ರ ನೋಡಿಯೇ ತಿಳಿದುಕೊಳ್ಳಬೇಕು. 

ಒಂದು ಮಗು, ಒಂದು ಹಸು, ಒಂದು ಹುಲಿ, ಒಂದು ಕರು ಇವೇ ಪಾತ್ರಗಳ ಮೂಲಕವೇ ಚಿತ್ರಕಥೆ ಸಾಗುತ್ತದೆ. ಸಮೀರನ ಮುಗ್ಧತೆಯ ನೋಟಗಳು ನೋಡುಗರಲ್ಲಿ ಅದೇ ಭಾವವನ್ನು ಉಕ್ಕಿಸುತ್ತವೆ. ಇನ್ನೊಂದೆಡೆ ಚಿತ್ರದಲ್ಲಿನ ಕರು ಮತ್ತು ಹುಲಿಯ ಮುಗ್ಧತೆಯು ಪ್ರೇಕ್ಷಕರಿಗೆ ಬಹುಕಾಲ ಕಾಡುತ್ತದೆ. 

ಸಮೀರನ ಪಾತ್ರಧಾರಿ ಮಾಸ್ಟರ್‌ ಪಿ.ವಿ. ರೋಹಿತ್‌ನದು ಅದ್ಭುತ ನಟನೆ. ಸಾಯಿಕೃಷ್ಣ ಕುಡ್ಲ, ನಾಗಭೂಷಣ್‌, ಎಂ.ಕೆ. ಮಠ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಾಮರಸ್ಯದ ಗಟ್ಟಿ ಕಥನ ಹೇಳುವ ನಿರ್ದೇಶಕರ ಹಂಬಲಕ್ಕೆ ಲವಿತ್‌ ಅವರ ಛಾಯಾಗ್ರಹಣ ಸಮರ್ಥವಾಗಿ ಸ್ಪಂದಿಸಿದೆ. ವಾಸುಕಿ ವೈಭವ್‌ ಮತ್ತು ನಾಬಿನ್‌ ಪಾಲ್‌ ಸಂಗೀತ ಸಂಯೋಜನೆಯ ಹಾಡುಗಳು ಸೊಗಸಾಗಿವೆ. 

Post Comments (+)