7 ಪಕ್ಷ, 5 ಪಕ್ಷೇತರರು ಸೇರಿ 12 ಮಂದಿ ಅಖಾಡದಲ್ಲಿ..!

ಸೋಮವಾರ, ಏಪ್ರಿಲ್ 22, 2019
32 °C
ಉಮೇದುವಾರಿಕೆ ವಾಪಸ್ ಪಡೆದ ಮೂವರು; ಸ್ವಾಮೀಜಿಯೂ ಅಂತಿಮ ಸ್ಪರ್ಧಾ ಕಣದಲ್ಲಿ

7 ಪಕ್ಷ, 5 ಪಕ್ಷೇತರರು ಸೇರಿ 12 ಮಂದಿ ಅಖಾಡದಲ್ಲಿ..!

Published:
Updated:

ವಿಜಯಪುರ: ನಾಮಪತ್ರ ಸಲ್ಲಿಕೆ, ಪರಿಶೀಲನೆ, ಉಮೇದುವಾರಿಕೆ ವಾಪಸ್‌ ಪಡೆಯುವ ಪ್ರಕ್ರಿಯೆ ಸೋಮವಾರ ಪೂರ್ಣಗೊಂಡಿದೆ. ಚುನಾವಣಾ ಕಣ ಇದೀಗ ಅಂತಿಮಗೊಂಡಿದೆ.

ಬಿಜೆಪಿ, ಜೆಡಿಎಸ್‌, ಬಿಎಸ್‌ಪಿ, ಉತ್ತಮ ಪ್ರಜಾಕೀಯ ಪಕ್ಷ, ಹಿಂದೂಸ್ತಾನ ಜನತಾ ಪಾರ್ಟಿ, ಆರ್‌ಪಿಐ, ಭಾರಿಪ ಬಹುಜನ ಮಹಾಸಂಘ ತನ್ನ ಹುರಿಯಾಳುಗಳನ್ನು ಅಖಾಡಕ್ಕಿಳಿಸಿದ್ದು, ಐವರು ಪಕ್ಷೇತರರು ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ.

ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ದಲಿತ, ಲಂಬಾಣಿ, ಭೋವಿ ಸಮುದಾಯದ ಅಭ್ಯರ್ಥಿಗಳು ಅಖಾಡದಲ್ಲಿದ್ದು, ಕ್ಷೇತ್ರ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲ ಕೆರಳಿಸಿದೆ. ಬೇಡ ಜಂಗಮ ಜಾತಿಯ ಎಂ.ಇ.ಸುಜಾತಾ ನಾಮಪತ್ರ ತಿರಸ್ಕೃತಗೊಂಡಿತ್ತು.

ಅಖಾಡದಲ್ಲಿರುವ 12 ಅಭ್ಯರ್ಥಿಗಳಲ್ಲಿ 10 ಮಂದಿ ವಿಜಯಪುರ ಜಿಲ್ಲೆಯವರೇ. ಉಳಿದ ಇಬ್ಬರು ನೆರೆಯ ಬಾಗಲಕೋಟೆ ಜಿಲ್ಲೆಯವರು. ಈ ಇಬ್ಬರೂ ಪಕ್ಷಗಳಿಂದಲೇ ಸ್ಪರ್ಧಿಸಿದ್ದಾರೆ. ಚಲನಚಿತ್ರ ನಟ ಉಪೇಂದ್ರ ಸಾರಥ್ಯದ ಉತ್ತಮ ಪ್ರಜಾಕೀಯ ಪಕ್ಷದಿಂದ ನೆರೆಯ ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಗುರುಬಸವ ಪಿ.ರಬಕವಿ ಸ್ಪರ್ಧಿಸಿದ್ದರೆ, ಆರ್‌ಪಿಐ ಪಕ್ಷದಿಂದಲೂ ಜಮಖಂಡಿಯ ಯಮನಪ್ಪ ವಿಠ್ಠಲ ಗುಣದಾಳ ಅಖಾಡಲ್ಲಿದ್ದಾರೆ.

ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಹಿಂದೂಸ್ತಾನ ಜನತಾ ಪಾರ್ಟಿಯಿಂದ ವೆಂಕಟೇಶ್ವರ ಸ್ವಾಮೀಜಿ ಸಹ ಅಖಾಡದಲ್ಲಿದ್ದು, ಕುತೂಹಲ ಹೆಚ್ಚಿದೆ. ಜಿಲ್ಲಾ ಚುನಾವಣಾ ಆಯೋಗ ರಾತ್ರಿಯಾದರೂ, ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಿಲ್ಲ. ಮಂಗಳವಾರ ಪ್ರಕಟಿಸುವುದಾಗಿ ಮೂಲಗಳು ತಿಳಿಸಿವೆ.

ಅಂತಿಮ ಅಖಾಡಲ್ಲಿರುವವರು:

‘ಪ್ರಜಾವಾಣಿ’ಗೆ ಲಭ್ಯವಿರುವ ಮಾಹಿತಿಯಂತೆ, ಬಿಜೆಪಿಯಿಂದ ರಮೇಶ ಜಿಗಜಿಣಗಿ, ಜೆಡಿಎಸ್‌ನಿಂದ ಸುನೀತಾ ಚವ್ಹಾಣ, ಬಿಎಸ್‌ಪಿಯಿಂದ ಶ್ರೀನಾಥ ಪೂಜಾರಿ, ಉತ್ತಮ ಪ್ರಜಾಕೀಯ ಪಕ್ಷದಿಂದ ಗುರುಬಸವ ಪಿ.ರಬಕವಿ, ಹಿಂದೂಸ್ತಾನ ಜನತಾ ಪಾರ್ಟಿಯಿಂದ ವೆಂಕಟೇಶ್ವರ ಸ್ವಾಮೀಜಿ, ಆರ್‌ಪಿಐನಿಂದ ಯಮನಪ್ಪ ವಿಠ್ಠಲ ಗುಣದಾಳ, ಭಾರಿಪ ಬಹುಜನ ಮಹಾಸಂಘದಿಂದ ರುದ್ರಪ್ಪ ಚಲವಾದಿ ಹುರಿಯಾಳುಗಳಾಗಿದ್ದಾರೆ.

ದಾದಾಸಾಬ್ ಬಾಗಾಯತ, ದೋಂಡಿಬಾ ರಾಮು ರಾಠೋಡ, ಧರೆಪ್ಪ ಮಹಾದೇವ ಅರ್ಧಾವೂರ, ಬಾಲಾಜಿ ವಡ್ಡರ ಪಕ್ಷೇತರರಾಗಿ ಸ್ಪರ್ಧಿಸಿದ್ದು ಈ ಎಲ್ಲರೂ ವಿಜಯಪುರ ತಾಲ್ಲೂಕಿನವರು. ರಾಮಪ್ಪ ಹರಿಜನ ಸಹ ಪಕ್ಷೇತರರಾಗಿ ಕಣದಲ್ಲಿ ಉಳಿದಿದ್ದು ಇವರು ಬಸವನಬಾಗೇವಾಡಿ ತಾಲ್ಲೂಕಿನವರು.

ಉಮೇದುವಾರಿಕೆ ವಾಪಸ್ ಪಡೆದವರು:

ಉಮೇದುವಾರಿಕೆ ವಾಪಸ್‌ ಪಡೆಯಲು ಅಂತಿಮ ದಿನವಾದ ಸೋಮವಾರ ಮೂವರು ಪಕ್ಷೇತರರು ನಾಮಪತ್ರ ವಾಪಸ್‌ ಪಡೆಯುವ ಮೂಲಕ ಚುನಾವಣಾ ಕಣದಿಂದ ಹೊರ ನಡೆದರು.

ಇಂಡಿ ತಾಲ್ಲೂಕಿನ ಜೇವೂರ ಗ್ರಾಮದ ಮರಗಣ್ಣ ಮಾಳಪ್ಪ ಹೊನ್ನೂರ, ವಿಜಯಪುರದ ರಾಹುಲ ಭಾಸ್ಕರ, ಸಿಂದಗಿ ತಾಲ್ಲೂಕಿನ ಡಂಬಳ ಗ್ರಾಮದ ಮಹಾದೇವ ರಾಠೋಡ ಸೋಮವಾರ ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಲ್ಲಿ ತಮ್ಮ ಉಮೇದುವಾರಿಕೆ ವಾಪಸ್ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಚಾರಕ್ಕೆ 13 ದಿನ:

ಚುನಾವಣಾ ಕಣ ಅಂತಿಮಗೊಂಡಿದೆ. ಏ.23ರಂದು ಮತದಾನ ನಡೆಯಲಿದೆ. ಇದರ ನಡುವಿನ 13 ದಿನವಷ್ಟೇ ಪ್ರಚಾರಕ್ಕೆ ಸಮಯ ಉಳಿದಿದೆ. ಬಿಜೆಪಿ ಪೂರ್ವ ನಿಗದಿತವಾಗಿ ಈಗಾಗಲೇ ಹಲ ಸುತ್ತು ಕ್ಷೇತ್ರದಾದ್ಯಂಥ ಬಿರುಸಿನ ಪ್ರಚಾರ ನಡೆಸಿದೆ.

ಕ್ಷೇತ್ರಕ್ಕಾಗಿ ನಡೆದ ದೋಸ್ತಿ ತಿಕ್ಕಾಟ ಆರಂಭದಲ್ಲೇ ಜೆಡಿಎಸ್‌ಗೆ ಒಳ ಹೊಡೆತ ನೀಡಿದೆ. ಜಾತ್ಯತೀತ ಜನತಾದಳದ ಅಭ್ಯರ್ಥಿ ಚುರಾಕಾಗಿದ್ದು, ಕೈ ಮುಖಂಡರ ಸಾಥ್‌ನ ನಿರೀಕ್ಷೆಯಲ್ಲೇ ಫಲಿತಾಂಶ ನಿರ್ಧಾರಿತಗೊಳ್ಳಲಿದೆ ಎಂಬುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಪ್ರಮುಖ ಚರ್ಚಾರ್ಹ ವಿಷಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !