ಮಂಗಳವಾರ, ಜೂಲೈ 7, 2020
28 °C

ದ್ಯಾವಪ್ಪ ಖಾನಾವಳಿಯ ಅಂಡಾಕರಿ ಸ್ಪೆಷಲ್..!

ಶಾಂತೂ ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ಸಿಂದಗಿ: ಪಟ್ಟಣದ ಕಲ್ಯಾಣ ನಗರದ ವಸತಿ ಬಡಾವಣೆಯಲ್ಲೊಂದು ಖಾನಾವಳಿ ಇದೆ. ಇಲ್ಲಿ ಮುಂಚಿತವಾಗಿ ಸ್ಥಳ ಬುಕ್ ಮಾಡಬೇಕಾಗುತ್ತದೆ. ಅಷ್ಟೊಂದು ಬೇಡಿಕೆ.

ಇದು ದ್ಯಾವಪ್ಪ ಖಾನಾವಳಿ ಅಂತೆಯೇ ಹೆಸರುವಾಸಿಯಾಗಿದೆ. ಇಲ್ಲಿ ಉಂಡವರು ತೃಪ್ತರಾಗಿಯೇ ಹೋಗುವ ಕಾರಣಕ್ಕಾಗಿ ‘ತೃಪ್ತಿ ಖಾನಾವಳಿ’ ಎಂದೇ ಹೆಸರಿಡಲಾಗಿದೆ.

ಖಾನಾವಳಿ ಸಮಯ ಮಧ್ಯಾಹ್ನ 1ರಿಂದ ಸಂಜೆ 5 ಗಂಟೆವರೆಗೆ. ರಾತ್ರಿ 8 ಗಂಟೆಯಿಂದ 10.30ರವರೆಗೆ ಮಾತ್ರ. ಇಲ್ಲಿ ಮದ್ಯಪಾನ, ಧೂಮಪಾನಕ್ಕೆ ಅವಕಾಶವಿಲ್ಲ.

ಈ ಖಾನಾವಳಿಗೆ 34 ವರ್ಷಗಳ ಇತಿಹಾಸವಿದೆ. ಆರಂಭದಲ್ಲಿ ಶೆಡ್‌ವೊಂದರಲ್ಲಿ ನಡೆಯುತ್ತಿತ್ತು. ಕೂರಲೂ ಸರಿಯಾದ ಸ್ಥಳ ಇರುತ್ತಿರಲಿಲ್ಲ. ಈಗಲೂ ಕೇವಲ 5 ಟೇಬಲ್‌ಗಳಿವೆ. ಒಬ್ಬರ ಊಟ ಮುಗಿಯುವ ತನಕ ನಿಂತುಕೊಂಡೇ ತಮ್ಮ ಪಾಳಿಗಾಗಿ ಕಾಯುವ ಚಿತ್ರಣ ನಿತ್ಯವೂ ಗೋಚರಿಸುತ್ತದೆ.

‘ನಮ್ಮಲ್ಲಿ ಸಿದ್ಧಗೊಳ್ಳುವ ಆಹಾರ ಚಿಕನ್, ಮಟನ್, ಮೀನು, ಅಂಡಾಕರಿ ಮಾತ್ರ. ದಿನಕ್ಕೆ 6 ಕಿಲೋ ಮಟನ್, 5 ಕೋಳಿ, 100ರಷ್ಟು ತತ್ತಿ... ಇಷ್ಟು ನಾವು ಮಾಡುವ ಆಹಾರ. ಹೆಚ್ಚಿಗೆ ಬೇಕಿದ್ದರೆ ಮುಂಚಿತವಾಗಿ ಒಂದು ದಿನ ಆರ್ಡರ್ ಕೊಡಬೇಕು.

ಅಡುಗೆ ಮಾಡುವವರು ಕುಟುಂಬದ ಸದಸ್ಯರೇ. ಇಬ್ಬರು ಮಹಿಳೆಯರು ಮಾತ್ರ ಹೊರಗಿನವರು ಚಪಾತಿ ಸಿದ್ಧಪಡಿಸುತ್ತಾರೆ. ದಿನಕ್ಕೆ ₹ 10,000 ಆದಾಯ ಆಗುತ್ತದೆ’ ಎನ್ನುತ್ತಾರೆ ಖಾನಾವಳಿ ಮಾಲೀಕ ಬಸವರಾಜ ಈಳಗೇರ.

ದ್ಯಾವಪ್ಪ ಈಳಗೇರ ಕಲಬುರ್ಗಿ ಜಿಲ್ಲೆಯ ಇಜೇರಿ ಗ್ರಾಮದಿಂದ ಸಿಂದಗಿಗೆ ಖಾನಾವಳಿ ಉದ್ಯೋಗ ಮಾಡಲು ಬಂದಿದ್ದರು. ಇವರು ಮೃತರಾದ ಬಳಿಕ ಅವರ ಮಗ ಬಸವರಾಜ ಇದನ್ನು ಮುಂದುವರೆಸಿಕೊಂಡು ಹೊರಟಿದ್ದಾರೆ.

ಬಸವರಾಜ 1992ರಲ್ಲಿ ನಡೆದ ಬಸ್ ಅಪಘಾತದಲ್ಲಿ ಎಡಗೈ ಕಳೆದುಕೊಂಡಿದ್ದು, ಆದಾಗ್ಯೂ ಎದೆಗುಂದದೇ ತಂದೆ ಮಾಡಿಕೊಂಡು ಬಂದ ಉದ್ಯೋಗವನ್ನೇ ಮುಂದುವರೆಸಿದ್ದಾರೆ. ಇದು ಕೈ ಇಲ್ಲದ ಬಸವರಾಜರ ಕೈ ಹಿಡಿದಿದೆ.

ದ್ಯಾವಪ್ಪ ಖಾನಾವಳಿಯಲ್ಲಿ ಅಂಡಾಕರಿ ಸ್ಪೆಷಲ್‌, ಅಂಡಾಕರಿ ಶೇರ್ವಾ, ಚಪಾತಿ ತಿನ್ನಲು ಜನ, ನಾ ಮುಂದೆ ನೀ ಮುಂದೆ ಎಂದು ಪಾಳಿ ಹಚ್ಚುತ್ತಾರೆ.

ಈ ಖಾನಾವಳಿ ದೊಡ್ದದೇನಿಲ್ಲ. ಮನೆಯಲ್ಲಿಯೇ ಇದೆ. ಆದಾಗ್ಯೂ ಇಡೀ ಪಟ್ಟಣದಲ್ಲೆಲ್ಲಾ ಭಾರಿ ಫೇಮಸ್. ದ್ಯಾವಪ್ಪ ಖಾನಾವಳಿ ಎನ್ನುತ್ತಿದ್ದಂತೆ ಯಾರಾದರೂ ತೋರಿಸುತ್ತಾರೆ.

ಸಂಪರ್ಕ ಸಂಖ್ಯೆ–9972639362

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.