ವಿಜಯಪುರ: ಅಪ್ಪು ಹೋಟೆಲ್‌ ಬರ್ಪಿ, ಚೂಡಾಗೆ ಬೇಡಿಕೆ

7
ಕಡಿಮೆ ಧಾರಣೆಯಲ್ಲಿ ಗುಣಮಟ್ಟದ ತಾಜಾ ಆಹಾರ ಪೂರೈಕೆ

ವಿಜಯಪುರ: ಅಪ್ಪು ಹೋಟೆಲ್‌ ಬರ್ಪಿ, ಚೂಡಾಗೆ ಬೇಡಿಕೆ

Published:
Updated:
Deccan Herald

ವಿಜಯಪುರ: ಇಲ್ಲಿನ ಪ್ರತಿಯೊಂದು ತಿನಿಸು ರುಚಿಕರವಾದದ್ದು. ಒಮ್ಮೆ ಸವಿದರೆ, ಮತ್ತೆ ಮತ್ತೆ ತಿನ್ನಬೇಕು ಎನ್ನಿಸುತ್ತದೆ. ಬರ್ಪಿ, ಚೂಡಾ ರುಚಿಗೆ ಮನಸೋಲದವರಿಲ್ಲ.

ನಗರದ ವಜ್ರ ಹನುಮಾನ ಮಂದಿರದ ಬಳಿಯಿರುವ ಅಪ್ಪು ಹೋಟೆಲ್‌ ಎಲ್ಲರಿಗೂ ಅಚ್ಚುಮೆಚ್ಚು. ಬೆಳಿಗ್ಗೆ ಸಿಹಿ ತಿಂಡಿಗಳಿಗೆ ಹೆಚ್ಚಿನ ಬೇಡಿಕೆಯಿದ್ದರೆ, ಮಧ್ಯಾಹ್ನ ರೈಸ್‌–ಬಜಿ ಹಾಗೂ ಸಂಜೆ ಮಿರ್ಚಿ ಬಜಿ, ಚುರುಮುರಿ ಚೂಡಾ ರುಚಿಯನ್ನು ಗ್ರಾಹಕರು ಸವಿಯುತ್ತಾರೆ.

ಮುಂಜಾನೆಯಿಂದ ಮುಸ್ಸಂಜೆವರೆಗೂ ಶುದ್ಧ ಕವಾದಲ್ಲಿ ತಯಾರಿಸುವ ಬರ್ಪಿಯ ರುಚಿ ಸವಿಯುವುದನ್ನು ಇಲ್ಲಿಗೆ ನಿಯಮಿತವಾಗಿ ಭೇಟಿ ನೀಡುವ ಯಾರೊಬ್ಬರೂ ತಪ್ಪಿಸಿಕೊಳ್ಳುವುದಿಲ್ಲ. ಕೆಲವರಂತೂ ಇದಕ್ಕಾಗಿಯೇ ಅಪ್ಪು ಹೋಟೆಲ್‌ಗೆ ಬರುವುದು ವಿಶೇಷ.

‘ಎಂಟತ್ತು ವರ್ಷಗಳಿಂದ ಈ ಹೋಟೆಲ್‌ ಬಗ್ಗೆ ಗೊತ್ತು. ದಿನದಲ್ಲಿ ಒಮ್ಮೆಯಾದರೂ ಇಲ್ಲಿನ ತಿಂಡಿ ತಿನ್ನದಿದ್ದರೆ ಹೊಟ್ಟೆ ತುಂಬುವುದಿಲ್ಲ. ಪ್ರತಿಯೊಂದು ತಿಂಡಿಯೂ ತಾಜಾ ಹಾಗೂ ಮನೆಯಲ್ಲಿಯೇ ಮಾಡಿದ್ದಾರೆನೋ ಎಂಬ ಅನುಭವ ಕೊಡುತ್ತವೆ. ಶುದ್ಧ ಕವಾದಲ್ಲಿ ತಯಾರಿಸುವ ಬರ್ಪಿ ಬಾಯಲ್ಲಿ ಇಟ್ಟರೆ ಹಾಗೆ ಕರಗಿ ಬಿಡುತ್ತದೆ. ಹಲವು ಹೋಟೆಲ್‌ಗಳಲ್ಲಿ ತಿಂಡಿ ತಿಂದಿದ್ದೇನೆ. ಆದರೆ, ಇಲ್ಲಿನ ಗಟ್ಟಿ ಚಟ್ನಿಯ ರುಚಿ ಮತ್ತೆಲ್ಲೂ ಸಿಕ್ಕಿಲ್ಲ’ ಎಂದು ಆಟೊ ಚಾಲಕ ಸೋಮಶೇಖರ ಧನಶೆಟ್ಟಿ ಖುಷಿಯಿಂದ ಹೇಳಿದರು.

‘₹ 25ರ ದರದಲ್ಲಿ ಪ್ಲೇಟ್‌ ತುಂಬಾ ರೈಸ್‌, ಮಜ್ಜಿಗೆ, ಸಾಂಬಾರ್ ಹಾಗೂ ಎರಡು ಬಜಿ ಕೊಡುತ್ತಾರೆ. ಅದನ್ನು ತಿಂದರೆ ಹೊಟ್ಟೆ ತುಂಬಿಯೇ ಬಿಡುತ್ತದೆ. ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಈ ಹೋಟೆಲ್‌ ಹೇಳಿ ಮಾಡಿಸಿದಂತಿದೆ. ಸ್ವಚ್ಛತೆಗೂ ಸಹಿತ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ. 10 ವರ್ಷಗಳಲ್ಲಿ ಒಮ್ಮೆಯೂ ಇಲ್ಲಿನ ಊಟ ಸರಿಯಿಲ್ಲ ಅನಿಸಿಲ್ಲ’ ಎನ್ನುತ್ತಾರೆ ಮನೋಹರ ಹಳ್ಳೂರ.

‘30 ವರ್ಷಗಳ ಹಿಂದೆ ₹ 800 ಬಂಡವಾಳದಿಂದ ಒತ್ತು ಗಾಡಿಯಲ್ಲಿ ಚುರುಮುರಿ ಸುಸಲಾ, ಉಪ್ಪಿಟ್ಟು, ಮಿರ್ಚಿ ಬಜಿಯಿಂದ ವ್ಯಾಪಾರ ಆರಂಭಿಸಿದ್ದೆ. ನಂತರ ಹೋಟೆಲ್‌ ಮಾಡಿಕೊಂಡು ಗ್ರಾಹಕರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಹಲವು ತಿಂಡಿಗಳನ್ನು ನೀಡುತ್ತಿದ್ದೇನೆ. ಆರಂಭದ ರುಚಿ ಇಂದಿಗೂ ಬದಲಾಗಿಲ್ಲ. ಅದುವೇ ನಮ್ಮ ಬೇಡಿಕೆ ಹೆಚ್ಚಲು ಕಾರಣ. ಪ್ರತಿಯೊಂದು ತಿಂಡಿಗೂ ನಮ್ಮಲ್ಲಿ ಬೇಡಿಕೆಯಿದ್ದು, ಬರ್ಪಿ ಮತ್ತು ಚೂಡಾಗೆ ತುಸು ಹೆಚ್ಚಿದೆ’ ಎನ್ನುತ್ತಾರೆ ಹೋಟೆಲ್‌ ಮಾಲೀಕ ಅಪ್ಪು ಬುಸಾರಿ.

ಚುರುಮುರಿ ಸುಸಲಾ ₹ 15, ಉಪ್ಪಿಟ್ಟು ₹ 15, ಇಡ್ಲಿ–ವಡಾ ₹ 30, ಪೂರಿ ₹ 20, ಬೊಂಡಾ ₹ 20, ರೈಸ್‌ ಬಜಿ ₹ 25, ಜಾಮೂನು ₹ 10, ಬರ್ಪಿ ₹ 10, ಶೇಂಗಾ ಉಂಡಿ ಎರಡಕ್ಕೆ ₹ 10, ಪಾಪಡಿ ಪ್ಲೇಟ್‌ಗೆ ₹ 15, ಚುರುಮುರಿ ಚೂಡಾ ₹ 15, ಮಿರ್ಜಿ ಬಜಿ ಪ್ಲೇಟ್‌ಗೆ ₹ 15ರಂತೆ ಮಾರಾಟ ಮಾಡುವೆ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !