‘ಉದಯ’ ರುಚಿಗೆ ಮನಸೋತ ಗ್ರಾಹಕ

7
ವಿಜಯಪುರದ ಸ್ಟೇಷನ್‌ ರಸ್ತೆಯಲ್ಲಿರುವ ಉದಯ ಹೋಟೆಲ್‌

‘ಉದಯ’ ರುಚಿಗೆ ಮನಸೋತ ಗ್ರಾಹಕ

Published:
Updated:
Deccan Herald

ವಿಜಯಪುರ: ಒಮ್ಮೆ ಇಡ್ಲಿ–ವಡಾ ಸವಿದರೆ ದಿನವೂ ಇಲ್ಲಿಯೇ ತಿನ್ನಬೇಕು ಎನಿಸುತ್ತದೆ. ನಗರದ ಪ್ರಮುಖ ರಸ್ತೆಯಲ್ಲಿದ್ದರೂ; ಧಾರಣೆ ಬಲು ಕಡಿಮೆ. ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳ ಉಪಾಹಾರ ಮಿತ್ರ ಈ ಹೋಟೆಲ್‌.

ನಗರದ ಸ್ಟೇಷನ್‌ ರಸ್ತೆಯಲ್ಲಿರುವ ಉದಯ ಹೋಟೆಲ್‌ ಎಲ್ಲರಿಗೂ ಅಚ್ಚುಮೆಚ್ಚು. ಬೆಳಗಾದರೆ ಸಾಕು ಈ ಹೋಟೆಲ್‌ ಮುಂದೆ ಸರತಿ ಸಾಲಿನಲ್ಲಿ ಇಡ್ಲಿ, ವಡಾ, ಶಿರಾ, ಉಪ್ಪಿಟ್ಟು, ಜಾಮೂನು, ಅವಲಕ್ಕಿ ಸವಿಯಲು ಎಲ್ಲ ವರ್ಗದ ಜನರು ನಿಲ್ಲುತ್ತಾರೆ. ಹೊಟ್ಟೆ ತುಂಬಾ ತಿಂದು, ಮನೆಗೆ ಪಾರ್ಸೆಲ್‌ ಕಟ್ಟಿಸಿಕೊಂಡು ಹೋಗುವವರು ಹೆಚ್ಚಿದ್ದಾರೆ.

ನಿತ್ಯವೂ ನಸುಕಿನ ನಾಲ್ಕಕ್ಕೆ ಉದಯ ದಿನಚರಿ ಆರಂಭ. ಬೆಳಿಗ್ಗೆ 6.30ರಿಂದ ಮಧ್ಯಾಹ್ನ 12.30ರವರೆಗೆ ಆರು ತಾಸು ನಿರಂತರವಾಗಿ ಗ್ರಾಹಕರು ಭೇಟಿ ನೀಡುತ್ತಾರೆ. ಕೂರಲು ಖುರ್ಚಿಗಳಿಲ್ಲ. ನಿಂತೇ ಉಪಾಹಾರ ಸವಿಯಬೇಕು. ಆದರೂ ಇಲ್ಲಿನ ರುಚಿಗೆ ಮನಸೋತವರು ನಿರಂತರವಾಗಿ ಭೇಟಿ ನೀಡುವುದು ವಿಶೇಷ.

ಎರಡು ಇಡ್ಲಿಗೆ ₹ 10, ವಡಾ ಒಂದಕ್ಕೆ ₹ 10, ಶಿರಾ ₹ 10, ಬೋಂಡಾ ₹ 10, ಅವಲಕ್ಕಿ ₹ 15... ಅತ್ಯಂತ ಕಡಿಮೆ ದರದಲ್ಲಿ ಗ್ರಾಹಕರಿಗೆ ಗುಣಮಟ್ಟದ ರುಚಿ–ಶುಚಿಯಾದ ಹೆಚ್ಚಿನ ಪ್ರಮಾಣದ ಉಪಾಹಾರ ಇಲ್ಲಿ ದೊರೆಯುತ್ತದೆ.

‘ಸಾಕಷ್ಟ್‌ ಹೋಟೆಲ್‌ಗಳಲ್ಲಿ ಉಪಾಹಾರ ಮಾಡಿರುವೆ. ಆದರೆ ಇಲ್ಲಿನ ಎಣ್ಣೆ ಪ್ರಮಾಣ ಕಡಿಮೆ ಇರುವಂತ ವಡಾ ಎಲ್ಲೂ ಸಿಕ್ಕಿಲ್ಲ. ನಮ್‌ ದೋಸ್ತಾ ಈ ಹೋಟೆಲ್‌ ಬಗ್ಗೆ ಹೇಳಿದ ನಂತರ ನಿತ್ಯವೂ ಇಲ್ಲಿಯೇ ನಮ್ಮ ನಾಷ್ಟಾ. ₹ 30 ಕೊಟ್ಟು ತಲಾ ಎರಡೆರೆಡು ಇಡ್ಲಿ–ವಡಾ ತಿಂದರೆ ಸಂಜೆಯವರೆಗೂ ನಿಶ್ಚಿಂತೆ. ಚಟ್ನಿ–ಸಾಂಬಾರ ಅತ್ಯದ್ಭುತ. ಆಗಾಗ ಅವಲಕ್ಕಿ, ಜಾಮೂನಿನ ಸವಿಯನ್ನು ಆಸ್ವಾದಿಸಿದ್ದೇನೆ’ ಎಂದು ಸಂತೋಷ ಬಿರಾದಾರ ಖುಷಿಯಿಂದ ಹೇಳಿದರು.

‘ನಾನು ಆಟೊ ಡ್ರೈವರ್‌. ನಸುಕಿನಲ್ಲೇ ಮನೆ ಬಿಡ್ತೇನೆ. ನಾಸ್ಟಾ ಟೈಮ್‌ಗೆ ಮನೆಗೆ ಹೋಗೋದು ಕಷ್ಟ. ಹೀಗಾಗಿ 10 ಗಂಟೆಗೆ ಇಲ್ಲಿಗೆ ಬರುವೆ. ₹ 20 ಕೊಟ್ಟು ಎರಡು ಇಡ್ಲಿ, ಒಂದು ವಡಾ ತಿಂದ್ರೇ ಸಾಕು. ಬೇರೆ ಕಡೆ ಹೊಟ್ಟೆ ತುಂಬಲ್ಲ. ಕಾಸು ಕೈಬಿಡ್ತಾವಷ್ಟೇ. ನಮ್ಮಂತವರಿಗೆ ಬಾಳ ಚಲೋ ಆಗ್ಯಾದ. ಇಲ್ಲಿ ಒಮ್ಮೆ ತಿಂದವರು ರುಚಿಗೆ ಮತ್ತೆ ಬರಲೇಬೇಕು ಅನಿಸದಿರದು’ ಎನ್ನುತ್ತಾರೆ ಶಿವಾನಂದ ಹಿಪ್ಪರಗಿ.

‘ಮನೆಯಿಂದ ಬೆಳಿಗ್ಗೆ ಬೇಗನೆ ಅಂಗಡಿಗೆ ಬರುವುದರಿಂದ, ಬಂದ ತಕ್ಷಣ ಮೊದಲು ಉದಯ ಹೋಟೆಲ್‌ನಲ್ಲಿ ಟಿಫಿನ್‌ ಮಾಡುತ್ತೇನೆ. ಗುಣಮಟ್ಟದ ಜತೆಗೆ ಸ್ವಚ್ಛತೆಗೆ ಆದ್ಯತೆ ಕೊಟ್ಟಿದ್ದಾರೆ. ಅದಕ್ಕಾಗಿಯೇ ಜನರು ಸರತಿ ಸಾಲಿನಲ್ಲಿ ನಿಂತು ಇಲ್ಲಿನ ಉಪಹಾರ ಸವಿಯುತ್ತಾರೆ’ ಎಂದು ಗ್ರಾಹಕ ಅಜೇಯ ವಾಲಿಕಾರ ಹೇಳಿದರು.

‘ಮೂಲತಃ ಕಲಬುರ್ಗಿಯವನಾದ ನಾನು ಹತ್ತು ವರ್ಷ ವಿಜಯಪುರದಲ್ಲಿ ವಿವಿಧ ಹೋಟೆಲ್‌ಗಳಲ್ಲಿ ಕೂಲಿ ಮಾಡ್ಕೊಂಡಿದ್ದೆ. ನಾಲ್ಕು ವರ್ಷದ ಹಿಂದೆ ಸ್ವಂತ ಉದ್ಯೋಗ ಮಾಡಬೇಕಂತ ಉದಯ ಹೋಟೆಲ್‌ ಆರಂಭಿಸಿ ಸ್ವಾಭಿಮಾನಿಯಾಗಿ ಬದುಕು ಕಟ್ಟಿಕೊಂಡೀನಿ. ದೇವರ ದಯೆ. ವ್ಯಾಪಾರ ಚಲೋ ನಡಿತಿದೆ. ಕೂಲಿಕಾರನಾಗಿದ್ದ ನಾನು ಕಡಿಮೆ ದರದಲ್ಲಿ ಜನರಿಗೆ ಉಪಹಾರ ನೀಡುವ ಜತೆಗೆ ಮೂರ್ನಾಲ್ಕು ಜನರಿಗೆ ಕೆಲಸ ಕೊಟ್ಟಿರುವೆ. ಇದು ಖುಷಿ ನೀಡಿದೆ’ ಎಂದು ಹೋಟೆಲ್‌ ಮಾಲೀಕ ಉದಯ ಬಕರೆ ‘ಪ್ರಜಾವಾಣಿ’ಗೆ ತಿಳಿಸಿದರು.

**

ಗುಣಮಟ್ಟದ ಉಪಾಹಾರ ನೀಡುವುದರಿಂದ ನಿತ್ಯವೂ ನೂರಾರು ಗ್ರಾಹಕರು ನಮ್ಮ ಹೋಟೆಲ್‌ನಲ್ಲಿ ಪಾಳಿ ಹಚ್ಚಿ ಟಿಫಿನ್‌ ಮಾಡ್ತಾರೆ.

-ಉದಯ ಬಕರೆ, ಹೋಟೆಲ್‌ ಮಾಲೀಕ

**

ಉದಯ ಹೋಟೆಲ್‌ ಉಪಾಹಾರ ನಮ್ಮ ಪಾಲಿಗೆ ಮೃಷ್ಟಾನ್ನ. ಕಡಿಮೆ ದರದಲ್ಲಿ ಇಡ್ಲಿ, ವಡಾ ಕೊಡ್ತಾರೆ. ಚಟ್ನಿ, ಸಾಂಬಾರ್ ಸೂಪರ್.

–ಶಿವಾನಂದ ಹಿಪ್ಪರಗಿ. ಆಟೊ ಚಾಲಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !