ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಜೆ ಉಪಹಾರಕ್ಕೆ ಗರಿ ಗರಿ ದೋಸೆ: ಮಾಡುವುದು ಹೇಗೆ?

Published 30 ಆಗಸ್ಟ್ 2024, 14:56 IST
Last Updated 30 ಆಗಸ್ಟ್ 2024, 14:56 IST
ಅಕ್ಷರ ಗಾತ್ರ

ಹೆಸರುಕಾಳಿನ ದೋಸೆ

ಬೇಕಾಗುವ ಸಾಮಗ್ರಿ: ಹೆಸರುಕಾಳು ಒಂದು ಕಪ್, ಅಕ್ಕಿ ಅರ್ಧ ಕಪ್, ತೆಂಗಿನಕಾಯಿತುರಿ ಕಾಲು ಕಪ್, ಕಡಲೆ ಬೇಳೆ ಒಂದು ಚಮಚ, ಶುಂಠಿ ಒಂದು ಅಂಗುಲ, ರುಚಿಗೆ ಉಪ್ಪು.
ಮಾಡುವ ವಿಧಾನ: ಹೆಸರುಕಾಳು, ಅಕ್ಕಿ, ಕಡಲೆ ಬೇಳೆ ಎಲ್ಲವನ್ನೂ ಬೇರೆ ಬೇರೆಯಾಗಿ ಐದರಿಂದ ಆರು ತಾಸು ನೆನೆಸಿಕೊಳ್ಳಿ. ನಂತರ ನೀರು ಬಾಗಿಸಿ, ಕಾಯಿತುರಿ, ಶುಂಠಿ ಸೇರಿಸಿ ನುಣ್ಣಗೆ ರುಬ್ಬಿಕೊಂಡು ಉಪ್ಪು ಸೇರಿಸಿ ಹಿಟ್ಟನ್ನು ಹದ ಮಾಡಿಕೊಂಡು ಹತ್ತು ನಿಮಿಷ ಬಿಟ್ಟು ನಾನ್‌ಸ್ಟಿಕ್ ತವಾದ ಮೇಲೆ ತೆಳುವಾಗಿ ದೋಸೆ ಹೊಯ್ದು ಬೇಯಿಸಿರಿ.ಇದನ್ನು ಬಿಸಿ ಇರುವಾಗಲೆ ಕಾಯಿಚಟ್ನಿಯೊಂದಿಗೆ ಸವಿಯಿರಿ.

ಸಬ್ಬಸ್ಸಿಗೆ ಸೊಪ್ಪಿನ ಸೆಟ್ ದೋಸೆ
ಬೇಕಾಗುವ ಸಾಮಗ್ರಿ: ಅಕ್ಕಿ ಒಂದು ಕಪ್, ಅವಲಕ್ಕಿ ಕಾಲು ಕಪ್, ಉದ್ದಿನ ಬೇಳೆ ಎರಡು ದೊಡ್ಡ ಚಮಚ, ಕಡಲೆ ಬೇಳೆ ಒಂದು ಚಮಚ, ಮೆಂತೆಕಾಳು ಕಾಲು ಚಮಚ, ಸಬ್ಬಸ್ಸಿಗೆ ಸೊಪ್ಪು ಅರ್ಧ ಕಟ್ಟು, ರುಚಿಗೆ ಉಪ್ಪು.
ಮಾಡುವ ವಿಧಾನ: ಅಕ್ಕಿಬೇಳೆ ಕಾಳುಗಳನ್ನು ಬೆಳಿಗ್ಗೆ ನೆನೆಸಿಕೊಳ್ಳಿ. ಇದು ನಾಲ್ಕೈದು ತಾಸು ನೆಂದ ಮೇಲೆ ನೀರು ಬಾಗಿಸಿ, ಅವಲಕ್ಕಿಯನ್ನು ನೆನೆಸಿಕೊಂಡು ಇದರ ಜೊತೆ ಸೇರಿಸಿ ನುಣ್ಣಗೆ ರುಬ್ಬಿಕೊಂಡು ಆಮೇಲೆ ಸಬ್ಬಸ್ಸಿಗೆ ಸೊಪ್ಪನ್ನೂ ಸೇರಿಸಿ ಮತ್ತೊಮ್ಮೆ ಮಿಕ್ಸಿ ಮಾಡಿಕೊಂಡು ಉಪ್ಪು ಹಾಕಿ. ಹಿಟ್ಟು ಸ್ವಲ್ಪ ಹುಳಿ ಬಂದ ಮೇಲೆ ಕಾದ ತವಾದ ಮೇಲೆ ಸೆಟ್‌ದೋಸೆ ಆಕಾರಕ್ಕೆ ದೋಸೆ ಹೊಯ್ದು ಎರಡೂ ಕಡೆ ಚೆನ್ನಾಗಿ ಬೇಯಿಸಿಕೊಳ್ಳಿ. ಬಿಸಿ ಇರುವಾಗಲೆ ಚಟ್ನಿಯೊಂದಿಗೆ ಸವಿಯಿರಿ. ಬೇಕಿದ್ದರೆ,ಹಿಟ್ಟನ್ನು ಸಂಜೆಗೆ ತಯಾರಿಸಿಕೊಂಡು ಬೆಳಿಗ್ಗೆ ದೋಸೆ ಮಾಡಬಹುದು.

ಚಿರೋಟಿ ರವೆ ಉತ್ತಪ್ಪ ‌

ಬೇಕಾಗುವ ಸಾಮಗ್ರಿ: ಚಿರೋಟಿ ರವೆ ಒಂದೂವರೆ ಕಪ್, ಮೊಸರು ಒಂದು ಕಪ್, ತುರಿದುಕೊಂಡ ಕ್ಯಾರೆಟ್ ಒಂದು ಕಪ್, ಕೊಚ್ಚಿದ ಈರುಳ್ಳಿ ಅರ್ಧ ಕಪ್, ಹಸಿಮೆಣಸು ಎರಡು ಅಥವಾ ಖಾರಕ್ಕೆ ತಕ್ಕಷ್ಟು, ಕೊಚ್ಚಿದ ಶುಂಠಿ ಒಂದು ಚಮಚ, ಕೊಚ್ಚಿಕೊಂಡ ಕೊತ್ತಂಬರಿ ಸೊಪ್ಪು ಅಥವಾÀ ಸಬ್ಬಸ್ಸಿಗೆ ಸೊಪ್ಪು ಸ್ವಲ್ಪ,ಕೊಚ್ಚಿದ ಬೇವಿನಸೊಪ್ಪು ಎರಡು ಎಸಳು, ರುಚಿಗೆ ಉಪ್ಪು.
ಮಾಡುವ ವಿಧಾನ: ಚಿರೋಟಿ ರವೆಗೆ ಉಪ್ಪು, ಮೊಸರು ಸೇರಿಸಿ ಅರ್ಧ ಗಂಟೆ ಬಿಡಿ. ನಂತರ ಇದಕ್ಕೆ ಮೇಲೆ ತಿಳಿಸಿದ ಎಲ್ಲ ಸಾಮಗ್ರಿಗಳನ್ನು ಬೆರೆಸಿ,ಚೆನ್ನಾಗಿ ಕಲಸಿ ಹಿಟ್ಟನ್ನು ಹದ ಮಾಡಿಕೊಳ್ಳಿ. ನಂತರ ನಾನ್‌ಸ್ಟಿಕ್ ತವಾದ ಮೇಲೆ ಸೆಟ್ ದೋಸೆ ಆಕಾರಕ್ಕೆ ಹಿಟ್ಟು ಹಾಕಿ ಮಧ್ಯಮ ಉರಿಯಲ್ಲಿ ಎರಡೂ ಕಡೆ ಚೆನ್ನಾಗಿ ಬೇಯಿಸಿಕೊಳ್ಳಿ. ಬಿಸಿ ಇರುವಾಗಲೆ ಬೆಣ್ಣೆಯೊಂದಿಗೆ ಸವಿಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT