ಭಾನುವಾರ, ಅಕ್ಟೋಬರ್ 17, 2021
22 °C

ಹಣ್ಣನ್ನು ಕೆಡದೆ ಇಡುವುದು ಹೇಗೆ? ಇಲ್ಲಿವೆ ಸರಳ ಟಿಪ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಣ್ಣುಗಳ ಸೇವನೆ ಆರೋಗ್ಯಕ್ಕೆ ಉತ್ತಮ ಎನ್ನುವುದು ಗೊತ್ತೇ ಇದೆ. ಹಾಗಂತ ಅವುಗಳ ಶೇಖರಣೆ ಸುಲಭವಲ್ಲ. ಪದೇ ಪದೇ ಮಾರುಕಟ್ಟೆಗೆ ಹೋಗಿ ಹಣ್ಣುಗಳನ್ನು ಖರೀದಿಸುವುದು ಕಷ್ಟ. ಅದಕ್ಕಾಗಿ ವಾರಕ್ಕೊಂದು ಬಾರಿ ಖರೀದಿ ಮಾಡಿ ಮನೆಯಲ್ಲಿ ತಂದಿರಿಸಿಕೊಳ್ಳಬಹುದು. ಆದರೆ ಆ ಹಣ್ಣುಗಳನ್ನು ಎಷ್ಟೇ ಜೋಪಾನ ಮಾಡಿದರೂ ಅವು ಕೊಳೆಯುತ್ತವೆ. ಹಣ್ಣುಗಳು ತಾಜಾ ಆಗಿರಬೇಕು ಎಂದುಕೊಂಡು ನಾನಾ ಮಾರ್ಗಗಳನ್ನು ಅನುಸರಿಸುತ್ತೇವೆ. ಆದರೆ ಸಾಧ್ಯವಾಗುವುದಿಲ್ಲ. ಈ ಕೆಳಗಿನ ಉಪಾಯಗಳು ಹಣ್ಣುಗಳು ಕೆಡದಂತೆ ತಾಜಾ ಆಗಿರಲು ಸಹಾಯ ಮಾಡುತ್ತವೆ. ಯಾವ ಯಾವ ಹಣ್ಣುಗಳನ್ನು ಹೇಗೆ ಶೇಖರಿಸಿ ಇಡಬೇಕು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಸೇಬುಹಣ್ಣು: ಹಣ್ಣುಗಳಲ್ಲೇ ಸೇಬುಹಣ್ಣಿಗೆ ಅಗ್ರಸ್ಥಾನವಿದೆ. ಇದು ಹೊರ ಸೂಸುವ ಇಥಿಲಿನ್ ಅನಿಲದಿಂದಾಗಿ ಇದು ಬೇಗನೆ ಮಾಗುತ್ತದೆ ಹಾಗೂ ಕೊಳೆಯುತ್ತದೆ. ಸಾಧ್ಯವಾದಷ್ಟು ಸೇಬುಹಣ್ಣುಗಳನ್ನು ಇತರ ಹಣ್ಣುಗಳಿಂದ ದೂರವಿರಿಸಬೇಕು. ಅದರಲ್ಲೂ ಬಾಳೆಹಣ್ಣು ಹಾಗೂ ಸಿಟ್ರಸ್‌ ಅಂಶ ಇರುವ ಹಣ್ಣುಗಳಿಂದ ದೂರವೇ ಇಡಬೇಕು. ಕೋಣೆಯ ಸಾಧಾರಣ ಉಷ್ಣಾಂಶದಲ್ಲಿ ಇರಿಸಿದರೂ ಹಣ್ಣುಗಳು ತಾಜಾ ಆಗಿರುತ್ತವೆ. ಹಣ್ಣಿನ ಮೂಲ ಪ್ಯಾಕ್‌ನಲ್ಲೇ ಇರಿಸಿ ಫ್ರಿಜ್‌ನಲ್ಲಿ ಇಡುವುದರಿಂದ ನಾಲ್ಕು ವಾರಗಳ ಕಾಲ ಕೆಡದಂತೆ ಇಡಬಹುದು.

ಬೆರ‍್ರಿ, ಚೆರ‍್ರಿ ಹಾಗೂ ದ್ರಾಕ್ಷಿಹಣ್ಣುಗಳು: ಬೆರ‍್ರಿ ಹಣ್ಣುಗಳನ್ನು ಕವರ್‌ನಲ್ಲಿ ಸುತ್ತಿ ಅಥವಾ ಕಂಟೇನರ್‌ಗಳಲ್ಲಿ ಶೇಖರಿಸಿ ಇಡುವುದರಿಂದ ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಆದರೆ ಇದನ್ನು ತಿನ್ನುವ ಮೊದಲು ಚೆನ್ನಾಗಿ ತೊಳೆದು ತಿನ್ನಬೇಕು. ಜೊತೆಗೆ ತಿನ್ನಲು ಬೇಕಾದಷ್ಟನ್ನೇ ತೊಳೆಯಬೇಕು. ಇದು ದ್ರಾಕ್ಷಿ ಹಾಗೂ ಚೆರ‍್ರಿಗೂ ಅನ್ವಯಿಸುತ್ತದೆ.

ಬಾಳೆಹಣ್ಣು: ಅಂಗಡಿಗಳಲ್ಲಿ ಬಾಳೆಹಣ್ಣನ್ನು ತೂಗು ಹಾಕುವುದನ್ನು ನೋಡಿರಬಹುದು. ಅದು ಯಾಕಿರಬಹುದು ಎಂದು ನೀವು ಯೋಚಿಸಿಯೂ ಇರಬಹುದು. ಅದಕ್ಕೂ ಕಾರಣ ಇದೆ. ಸೇಬುಹಣ್ಣಿನಂತೆ ಬಾಳೆಹಣ್ಣನ್ನು ಬೇರೆಯಾಗಿಯೇ ಇರಿಸಬೇಕು. ಬಾಳೆಹಣ್ಣು ಕೂಡ ಇಥಿಲಿನ್ ಅನಿಲವನ್ನು ಬಿಡುಗಡೆ ಮಾಡುವುದರಿಂದ ಇದರ ಅಕ್ಕಪಕ್ಕದಲ್ಲಿರುವ ಹಣ್ಣುಗಳು ಬೇಗನೇ ಕೊಳೆಯುತ್ತವೆ. ಮನೆಯಲ್ಲೂ ಕೂಡ ಇತರ ಹಣ್ಣುಗಳನ್ನು ಬಾಳೆಹಣ್ಣಿನಿಂದ ದೂರ ಇರಿಸಬೇಕು. ಆ ಕಾರಣಕ್ಕೆ ಬಾಳೆಹಣ್ಣನ್ನು ತೂಗು ಹಾಕುವುದು ಉತ್ತಮ ಉಪಾಯ. ಬಾಳೆಹಣ್ಣನ್ನು ಫ್ರಿಜ್‌ನಲ್ಲಿ ಇರಿಸಬಹುದು, ಆದರೆ ಸಂಪೂರ್ಣವಾಗಿ ಹಣ್ಣಾದ ಬಳಿಕವಷ್ಟೇ ಪ್ರಿಜ್‌ನಲ್ಲಿಡುವುದು ಸೂಕ್ತ.

ಬೆಣ್ಣೆಹಣ್ಣು: ಬೆಣ್ಣೆಹಣ್ಣು ಅಥವಾ ಅವಕಾಡೊ ಕಾಯಿ ಇರುವಾಗ ಹಾಗೂ ಹಣ್ಣಾದಾಗ ಎರಡೂ ಸಮಯದಲ್ಲಿ ಹಸಿರಾಗಿಯೇ ಇರುತ್ತದೆ. ಕೆಲವೊಮ್ಮೆ ಇದರ ಸಿಪ್ಪೆ ತಿಳಿನೇರಳೆ ಬಣ್ಣಕ್ಕೆ ತಿರುಗುವುದೂ ಉಂಟು. ಹಾಗಾಗಿದ್ದರೆ ನೀವು ಬೆಣ್ಣೆಹಣ್ಣನ್ನು ಸರಿಯಾಗಿ ಶೇಖರಣೆ ಮಾಡಿದ್ದೀರಿ ಎಂದು ಅರ್ಥ. ಇದನ್ನು ಚೆನ್ನಾಗಿ ಹಣ್ಣಾದ ನಂತರವಷ್ಟೇ ಫ್ರಿಜ್‌ನಲ್ಲಿ ಇರಿಸಬೇಕು. ಇದು ಹಣ್ಣಾದ ಮೇಲೂ ಮೂರು ದಿನಗಳವರೆಗೆ ತಾಜಾ ಆಗಿಯೇ ಇರುತ್ತದೆ. ತಿನ್ನಲು ಎರಡು ದಿನ ಇರುವಾಗ ಅವನ್ನು ಹೊರಗೆ ತೆಗೆಯಬೇಕು, ಆಗ ಚೆನ್ನಾಗಿ ಮಾಗುತ್ತದೆ. ಒಮ್ಮೆ ಕತ್ತರಿಸಿದ ಮೇಲೆ ಹಾಗೇ ಇರಬೇಕು ಎಂದರೆ ನಿಂಬೆರಸವನ್ನು ಸಿಂಪಡಿಸಬೇಕು.

 ಟೊಮೆಟೊ: ಟೊಮೆಟೊ ಹಣ್ಣನ್ನು ಗಾಳಿಯಾಡುವ ತೇವಾಂಶವಿರುವ ಜಾಗದಲ್ಲಿ ಇರಿಸಬೇಕು. ಇದನ್ನು ಬಳಸಲು ಸ್ವಲ್ಪ ಹೊತ್ತಿಗೆ ಮುಂಚೆ ತೊಳೆಯಬೇಕು. ಹಾಗೇ ಇಟ್ಟ ಟೊಮೆಟೊ ಒಂದು ವಾರದವರೆಗೆ ಕೆಡದಂತೆ ಇರುತ್ತದೆ. ಆದರೆ ಶೈತ್ಯೀಕರಿಸಿದ ಟೊಮೆಟೊಗಳನ್ನು ಹೆಚ್ಚು ಕಾಲ ಶೇಖರಿಸಿ ಇಡಬಹುದು.

ಕಲ್ಲಂಗಡಿ: ಕಲ್ಲಂಗಡಿ ಹಣ್ಣನ್ನು ಸಂಪೂರ್ಣವಾಗಿ ಹಣ್ಣಾಗುವವರೆಗೂ ಅಥವಾ ಕತ್ತರಿಸುವವರೆಗೂ ಕೋಣೆಯ ತಾಪಮಾನದಲ್ಲೇ ಇರಿಸಬೇಕು. ನಂತರ ಇದನ್ನು ಗಾಳಿಯಾಡದ ಪಾತ್ರೆಯಲ್ಲಿ ಇರಿಸಿ ಫ್ರಿಜ್‌ನಲ್ಲಿ ಇಡಬೇಕು.

ಸಿಟ್ರಸ್‌: ಸಿಟ್ರಸ್‌ ಒಮ್ಮೆಲೆ ಹಣ್ಣಾಗುವುದಿಲ್ಲ. ಆದ್ದರಿಂದ ಯಾವಾಗಲೂ ಅತ್ಯಂತ ಪರಿಮಳಯುಕ್ತ ಹಾಗೂ ತಿನ್ನಲು ಸಿದ್ಧವಿರುವ ಹಣ್ಣನ್ನು ಆರಿಸಿ ತರಬೇಕು. ಸೂರ್ಯನ ಕಿರಣ ನೇರವಾಗಿ ಬೀಳುವ ಕೋಣೆಯಲ್ಲಿ ಅವುಗಳನ್ನು ಸಂಗ್ರಹಿಸಬೇಕು. ಆಗ ಅವು ನಾಲ್ಕರಿಂದ ಏಳು ದಿನಗಳವರೆಗೆ ಇರುತ್ತವೆ.

ಮಾವಿನಹಣ್ಣು, ಪ್ಲಮ್ ಹಾಗೂ ಪಿಯರ್ಸ್‌: ಈ ಮೇಲಿನ ಹಣ್ಣುಗಳನ್ನು ಕೋಣೆಯ ತಾಪಮಾನದಲ್ಲೇ ಹಣ್ಣಾಗಲು ಬಿಡಬೇಕು. ನಂತರ ಅವನ್ನು ಫ್ರಿಜ್‌ನಲ್ಲಿ ಶೇಖರಿಸಿ ಇಡಬೇಕು. ಪ್ಲಮ್ ಹಾಗೂ ಪೀಚ್‌ ಹಣ್ಣುಗಳು ಫ್ರಿಜ್‌ನಲ್ಲಿ ಮೂರರಿಂದ ಐದು ದಿನಗಳವರೆಗೆ ಕೆಡದಂತೆ ಇರುತ್ತವೆ. ಮಾವು ಹಾಗೂ ಪಿಯರ್ಸ್ ಹಣ್ಣುಗಳು ಐದರಿಂದ ಏಳು ದಿನವರೆಗೆ ಕೆಡುವುದಿಲ್ಲ.

ಅನಾನಸ್‌: ಅನಾನಸ್‌ ಹಣ್ಣು ಬುಡದಲ್ಲಿ ಸಿಹಿ ಇದ್ದು ತಲೆಯ ಭಾಗದಲ್ಲಿ ಹುಳಿ ಇರುತ್ತದೆ. ಈ ಹಣ್ಣಿನ ಪೂರ್ಣ ಭಾಗ ಸಿಹಿ ಇರಬೇಕು ಎಂದರೆ ಹಣ್ಣನ್ನು ತಲೆಕೆಳಗಾಗಿ ಇರಿಸಬೇಕು. ಇದನ್ನು ಎರಡು ದಿನಗಳ ಕಾಲ ಹಾಗೇ ಇರಿಸಬೇಕು. ಅನಾನಸ್ ಹಣ್ಣು ಕೊಳೆಯದಂತೆ ಕಾಪಾಡಲು ಹಣ್ಣನ್ನು ಫ್ರಿಜ್‌ನಲ್ಲಿ ಇಡುವ ಮೊದಲು ಕೋಣೆಯ ಉಷ್ಣಾಂಶದಲ್ಲಿ ಇರಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು