ಶನಿವಾರ, ಮಾರ್ಚ್ 6, 2021
28 °C

ನೀರು, ನಾರಿಲ್ಲದ ಆಹಾರದಿಂದ...

ರೋಹಿಣಿ ಮುಂಡಾಜೆ Updated:

ಅಕ್ಷರ ಗಾತ್ರ : | |

ಮಕ್ಕಳಲ್ಲಿ ಅಪೌಷ್ಟಿಕತೆ, ಜೀವಸತ್ವಗಳ ಕೊರತೆ ಎಂದಾಕ್ಷಣ ಅಂಗನವಾಡಿ ಮತ್ತು ಸರ್ಕಾರಿ ಶಾಲಾ ಮಕ್ಕಳು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳು ನೆನಪಾದರೆ ಅಚ್ಚರಿ ಪಡಬೇಕಿಲ್ಲ. ಆದರೆ ಹೆತ್ತವರ ವರಮಾನಕ್ಕೂ ಮಕ್ಕಳ ಆರೋಗ್ಯಕ್ಕೂ ಸಂಬಂಧವಿಲ್ಲ ಎನ್ನುತ್ತಾರೆ ಕೆಲವು ವೈದ್ಯರು.

ಮಕ್ಕಳು ಕೇಳಿದ್ದನ್ನೆಲ್ಲ ಬಾರಿ ದುಡ್ಡು ಕೊಟ್ಟು ಕೊಡಿಸುವ ‘ಶ್ರೀಮಂತ’ ಹೆತ್ತವರು, ಎಳೆಯ ವಯಸ್ಸಿನಲ್ಲೇ ಮಕ್ಕಳ ಆರೋಗ್ಯ ಕೆಡಿಸಿಬಿಡುತ್ತಾರೆ. ಮಕ್ಕಳ ಭವಿಷ್ಯದ ಆರೋಗ್ಯದ ಬಗ್ಗೆ ದೂರದೃಷ್ಟಿ ಇಲ್ಲದಿರುವ ತಂದೆ ತಾಯಂದಿರು ಸಂಸ್ಕರಿತ ಆಹಾರಗಳ ಅಡ್ಡಪರಿಣಾಮಗಳನ್ನು ಅಲಕ್ಷಿಸುತ್ತಾರೆ. ಹಾಗಾಗಿ ಯೌವನಾವಸ್ಥೆಯಲ್ಲಿ ಕಾಡುವ ಅನಾರೋಗ್ಯಗಳಿಗೆ ಎಳೆಯ ವಯಸ್ಸಿನಲ್ಲಿಯೇ ಅಡಿಪಾಯ ಹಾಕಿದಂತಾಗುತ್ತದೆ ಎಂಬುದು ಅವರ ವಾದ. 

ಬೇಕಿದೆ ಆಧುನಿಕ ಚಿಂತನೆ, ಹಳೆಯ ಆಹಾರ ಪದ್ಧತಿ: ‘ಆಹಾರ ಸಂಸ್ಕೃತಿಯ ವಿಚಾರದಲ್ಲಿ ನಾವು ಹಿಂದಿನ ತಲೆಮಾರುಗಳತ್ತ ತಿರುಗಿ ನೋಡಲೇಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಮೆಟ್ರೊ ಪಾಲಿಟನ್‌ ನಗರಗಳ ಜೀವನಶೈಲಿ ಮತ್ತು ಹೆತ್ತವರು ತಮ್ಮ ಮಕ್ಕಳ ಭವಿಷ್ಯದ ಆರೋಗ್ಯವನ್ನು ಅಲಕ್ಷಿಸಿ ದುಂದುವೆಚ್ಚ ಮಾಡುತ್ತಿರುವುದು ಮಕ್ಕಳನ್ನು ವಿವಿಧ ಕಾಯಿಲೆಗಳಿಗೆ ದೂಡುತ್ತಿದೆ. ಮಾಲ್‌, ಸೂಪರ್‌ ಮಾರ್ಕೆಟ್‌, ಬೇಕರಿಗಳಲ್ಲಿ ಸಿಗುವ ಸಂಸ್ಕರಿತ ಆಹಾರ ಸೇವನೆ ನಮಗೆ ಇಷ್ಟವಾಗುತ್ತಿದೆ. ಆದರೆ ಇದರಿಂದ ಅಪೌಷ್ಟಿಕತೆ ಹೆಚ್ಚುತ್ತಿದೆ’ ಎನ್ನುತ್ತಾರೆ, ಕನಕಪುರ ರಸ್ತೆಯ ‘ಆಯುರ್ಧಾಮ ಆಸ್ಪತ್ರೆ’ಯ ಸಂಸ್ಥಾಪಕ ಡಾ.ಸಿ.ಎ.ಕಿಶೋರ್‌.

‘ನಮ್ಮಲ್ಲಿಗೆ ಬರುವ ಹೆಚ್ಚಿನ ಮಕ್ಕಳಲ್ಲಿ ಅಪೌಷ್ಟಿಕತೆ, ಹಾರ್ಮೋನ್‌ ಸಂಬಂಧಿ ಸಮಸ್ಯೆಗಳು, ಹುಡುಗರಲ್ಲಿ ಸ್ತನ ಬೆಳೆಯುವುದು, ಬೊಜ್ಜು, ಮಧುಮೇಹ ಸಮಸ್ಯೆ ಸಾಮಾನ್ಯ ವಾಗಿದೆ. ಬಾಲಕಿಯರು ಎಳೆಯ ವಯಸ್ಸಿಗೇ ಪ್ರೌಢಾವಸ್ಥೆಗೆ (ಋತುಮತಿ) ಬರುತ್ತಿದ್ದಾರೆ. ಇಂತಹ ಅಸಹಜ ಬೆಳವಣಿಗೆಗಳಿಗೆ ಆಹಾರ ಪದ್ಧತಿಯೂ ಕಾರಣ. ಇದೊಂದು ವಿಷವರ್ತುಲ. ಯಾಕೆಂದರೆ ವಯಸ್ಸಿನೊಂದಿಗೆ ಈ ಸಮಸ್ಯೆಗಳೂ ಬೆಳೆಯುವ ಅಪಾಯವಿರುತ್ತದೆ’ ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ.

‘ನೀರು, ಸತ್ವ, ಪೌಷ್ಟಿಕತೆ ಇಲ್ಲದ ಆಹಾರಗಳ ಸೇವನೆಯಿಂದ ಚಯಾಪಚಯ ವ್ಯವಸ್ಥೆಯಲ್ಲಿ (ಮೆಟಬಾಲಿಕ್‌ ಸಿಸ್ಟಮ್‌) ಹಾಗೂ ಅನ್ನನಾಳದಿಂದ ಗುದನಾಳದವರೆಗಿನ ಜೀರ್ಣಾಂಗ (Gut) ವ್ಯವಸ್ಥೆಯಲ್ಲಿ ಏರುಪೇರು ಆಗುತ್ತದೆ. ಜಂಕ್‌ ಆಹಾರಗಳಲ್ಲಿ ನೀರು ಮತ್ತು ನಾರಿನಂಶ ಇರುವುದಿಲ್ಲ. ಅನಿಯಂತ್ರಿತ ಪ್ರಮಾಣದ ಕಾರ್ಬೊಹೈಡ್ರೇಟ್‌, ಸಂಸ್ಕರಿತ ಸಕ್ಕರೆ, ಉಪ್ಪು, ಕೊಬ್ಬು ಮತ್ತು ಅತ್ಯಲ್ಪ ಪೌಷ್ಟಿಕ ಸತ್ವಗಳಿರುತ್ತವೆ. ಇದರಿಂದ ಸಹಜವಾಗಿ ಅಜೀರ್ಣ, ಮಲಬದ್ಧತೆ, ಮಲ ವಿಸರ್ಜನೆಯ ಸಮಸ್ಯೆಗಳೂ ಕಾಡುತ್ತವೆ. ದುಬಾರಿ ದುಡ್ಡು ಕೊಟ್ಟು ಅನಾರೋಗ್ಯವನ್ನು ಆಹ್ವಾನಿಸಿಕೊಳ್ಳುತ್ತಿದ್ದೇವೆ ಎಂದಾಯಿತು. ನಮ್ಮ ಹೆತ್ತವರು, ಅಜ್ಜ- ಅಜ್ಜಿಯರ ಕಾಲದಲ್ಲಿ ಜಂಕ್‌ ಆಹಾರಗಳಿರಲಿಲ್ಲ. ಆಹಾರಗಳಿಂದ ಅನಾರೋಗ್ಯವೂ ಬರುತ್ತಿರಲಿಲ್ಲ. ಈಗ ಬೇಕಾಗಿರುವುದು ಆಧುನಿಕ ಚಿಂತನೆ ಮತ್ತು ಹಳೆಯ ಆಹಾರ ಪದ್ಧತಿ’ ಎಂಬುದು ಅವರ ಬಲವಾದ ಪ್ರತಿಪಾದನೆ.

‘ತಾಜಾ ಆಹಾರವನ್ನೇ ಕಳುಹಿಸಿ’: ಮಕ್ಕಳು ಊಟದ ಡಬ್ಬಿಯಲ್ಲಿ ಏನಿದೆ ಎಂದೂ ನೋಡದೆ ವಾಪಸ್‌ ತರುವುದೂ ಇದೆ. ಮೂರೂ ಹೊತ್ತು ಜಂಕ್‌ ಆಹಾರಗಳನ್ನೇ ತಿನ್ನುವ ಮಕ್ಕಳೂ ಇದ್ದಾರೆನ್ನಿ. ಯಲಚೇನಹಳ್ಳಿ ಬಳಿಯ ಡೆಲ್ಲಿ ಪಬ್ಲಿಕ್‌ ಸ್ಕೂಲ್‌ನ (ದಕ್ಷಿಣ) ಶಿಕ್ಷಕಿ ರೇಖಾ ಅವರು ಹೇಳುವಂತೆ, ಮಕ್ಕಳ ಲಂಚ್ ಬಾಕ್ಸ್‌ನಲ್ಲಿ ಸತ್ವಯುತ, ತಾಜಾ ಆಹಾರವನ್ನೇ ಕಳುಹಿಸುವಂತೆ ಪೋಷಕರ ಸಭೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗುತ್ತದೆ. ಇದಕ್ಕೆ ಪೋಷಕರ ಸ್ಪಂದನವೂ ಉತ್ತಮ ವಾಗಿದೆಯಂತೆ.

ಆಹಾರಕ್ರಮದಲ್ಲೇ ಸರಿಪಡಿಸಿ: ಬಸವನಗುಡಿಯ ಪೊಲೀಸ್‌ ಠಾಣೆಯ ರಸ್ತೆಯಲ್ಲಿರುವ ಜಯ್‌ ಕ್ಲಿನಿಕ್‌ನ ಮಕ್ಕಳ ತಜ್ಞ ಡಾ.ವಾಸುದೇವ ಧನಂಜಯ ಅವರು, ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ಮಲಬದ್ಧತೆ ಸಮಸ್ಯೆ ಹೆಚ್ಚುತ್ತಿರುವುದು ಆತಂಕಕಾರಿ ಎನ್ನುತ್ತಾರೆ.

‘ಸೊಪ್ಪು, ತರಕಾರಿ, ಹಣ್ಣು, ನೀರು ಅಗತ್ಯ ಪ್ರಮಾಣದಲ್ಲಿ ಸೇವಿಸಿದರೆ ಮಲಬದ್ಧತೆ ಮತ್ತು ಅಪೌಷ್ಟಿಕತೆ ಸಮಸ್ಯೆಗಳನ್ನು ನಿವಾರಿಸಬಹುದು. ಆದರೆ ಬಿಸ್ಕತ್ತು, ಕೇಕ್‌, ಕುಕೀಸ್‌, ಪಿಜ್ಜಾ, ಬರ್ಗರ್‌ನಂತಹ ಸಂಸ್ಕರಿತ ಆಹಾರಗಳನ್ನೇ ಹೆಚ್ಚು ಪ್ರಮಾಣದಲ್ಲಿ ಸೇವಿಸುವ ಚಟ ಹೆಚ್ಚುತ್ತಲೇ ಇದೆ. ಅಪೌಷ್ಟಿಕತೆಯ ಪರಿಣಾಮವಾಗಿ ಮಕ್ಕಳ ಸ್ಮರಣ ಶಕ್ತಿ, ಬೆಳವಣಿಗೆ, ರಕ್ತದ ಗುಣಮಟ್ಟ ಕಡಿಮೆಯಾಗುವುದೂ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಪೋಷಕರು ಆಹಾರಕ್ರಮವನ್ನು ಸರಿಪಡಿಸಿಕೊಳ್ಳುವುದೇ ಸೂಕ್ತ ಪರಿಹಾರ. ಸಮಸ್ಯೆ ಗಂಭೀರವಾಗಿದ್ದರೆ ಮಾತ್ರ ಔಷಧಿ ನೀಡುವುದು ಒಳ್ಳೆಯದು’ ಎಂದು ಅವರು ಸಲಹೆ ನೀಡುತ್ತಾರೆ.

ಅಪ್ಪ ಮತ್ತು ಅಮ್ಮ ಇಬ್ಬರೂ ದುಡಿಯುವುದೇ ಮಕ್ಕಳ ಭವಿಷ್ಯಕ್ಕಾಗಿ. ಆದರೆ ಸಹಜ ಆಹಾರ ನೀಡಿ ಶಕ್ತಿ ಮತ್ತು ಸತ್ವಯುತವಾಗಿ ಬೆಳೆಸಿದರೆ ಭವಿಷ್ಯವೂ ಆರೋಗ್ಯಕರವಾಗಿರುತ್ತದೆ.

ಮಕ್ಕಳ ಊಟ, ಡಬ್ಬಿ ಮತ್ತು ಜೀರ್ಣಕ್ರಿಯೆ

ಮಕ್ಕಳು ಶಾಲೆಗೆ ಹೊರಡವುದಕ್ಕೂ ಮೊದಲು ಏನು ತಿನ್ನುತ್ತಾರೆ ಎಂಬುದೂ ಅವರ ದೈನಿಕ ಚಟುವಟಿಕೆಯನ್ನು ನಿರ್ಧರಿಸುತ್ತದೆ. ಒಂದು ಲೋಟ ಹಾಲು ಕುಡಿಯದೇ ಹೋಗುವ ಮಕ್ಕಳೂ ಸಾಕಷ್ಟಿದ್ದಾರೆ. ಶಾಲಾ ಬಸ್‌ ಅಥವಾ ಖಾಸಗಿ ವಾಹನದಲ್ಲಿ ಹೋಗುತ್ತಾ ತಿಂಡಿ ತಿನ್ನುವವರೂ ಇದ್ದಾರೆ. ತರಾತುರಿಯಿಂದ ತಿನ್ನುವುದಕ್ಕಿಂತ ಇದು ಉತ್ತಮ ಉಪಾಯವೇ. ಆದರೆ ಖಾಲಿಹೊಟ್ಟೆಯಲ್ಲಿ ಇರುತ್ತೇನೆ ಎಂಬ ಆಯ್ಕೆ ಅತ್ಯಂತ ಅಪಾಯಕಾರಿ.

ಬಿಸ್ಕತ್ತು, ಕೇಕ್‌, ಕುಕೀಸ್‌, ಚಾಕೊಲೇಟ್‌ ತಿನ್ನದೇ ಇರುವಂತೆ ಕಟ್ಟುನಿಟ್ಟು ಮಾಡುವುದು ಕಷ್ಟವೇ. ಆದರೆ ಎಷ್ಟು ತಿನ್ನುತ್ತಾರೆ ಎಂಬುದನ್ನು ಹೆತ್ತವರು ನಿಯಂತ್ರಿಸಲೇಬೇಕು. ಬೆಳಗ್ಗೆ ತಿಂಡಿ ತಿಂದು ಹಣ್ಣಿನ ರಸವೋ, ಹಾಲೋ ಕುಡಿದು ಶಾಲೆಗೆ ಹೋಗುವ ಮಗುವಿಗೆ ‘ಶಾರ್ಟ್‌ ಬ್ರೇಕ್‌’ ಅವಧಿಗೆ ಸಂಸ್ಕರಿತ ಆಹಾರ ಕೊಡಬಹುದು.

ಮಧ್ಯಾಹ್ನದ ಊಟಕ್ಕೆ ಏನು ಕೊಟ್ಟಿದ್ದೀರಿ, ಶಾಲೆಯಿಂದ ವಾಪಸ್‌ ಬಂದ ನಂತರ ಮಗು ಏನು ತಿನ್ನುತ್ತದೆ, ರಾತ್ರಿಯ ಊಟದ ತಟ್ಟೆಯಲ್ಲಿ ಏನಿರುತ್ತದೆ, ಸೇವಿಸಿದ ದ್ರವಾಹಾರದ ಪ್ರಮಾಣವೇನು... ಹೀಗೆ ಇಡೀ ದಿನದಲ್ಲಿ ಮಗುವಿಗೆ ಎಷ್ಟು ಪೌಷ್ಟಿಕ ಆಹಾರ ಕೊಟ್ಟಿದ್ದೀರಿ ಎಂಬುದನ್ನು ಗಮನಿಸಬೇಕು.

ಅಜೀರ್ಣದ ಸಮಸ್ಯೆ ಕಾಡದೇ ಇರಬೇಕಾದರೆ ನಾರು ಮತ್ತು ನೀರಿನಂಶ ಸಮೃದ್ಧವಾಗಿರುವ ಆಹಾರ ಸೇವಿಸುವಂತೆ ಎಚ್ಚರ ವಹಿಸಬೇಕು. ಮಗುವಿನ ಭವಿಷ್ಯವನ್ನು ಆರೋಗ್ಯಕರವಾಗಿಸುವ ಜಾಣ್ಮೆಯನ್ನು ಅವರ ಬಾಲ್ಯದಿಂದಲೇ ಪಾಲಿಸಬೇಕು.

ಎಲ್ಲದರಲ್ಲೂ ಹಿಂದೆ

ಅಪೌಷ್ಟಿಕತೆಯಿಂದ ಬಳಲುವ ಮಗು ಕಡ್ಡಿ ಪೈಲ್ವಾನ್‌ನಂತಿರುತ್ತದೆ ಎಂಬ ಸಾಮಾನ್ಯ ನಂಬಿಕೆಯಿದೆ. ಆದರೆ ಅಪೌಷ್ಟಿಕವಾಗಿರುವ ಮಗು ಧಡೂತಿಯಾಗಿರುವುದೂ ಇದೆ. ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಮಗುವಿಗೆ ಆಸಕ್ತಿ ಇರುವುದಿಲ್ಲ. ಇದರಿಂದಾಗಿ ಶಾಲೆಯಲ್ಲಿ ಎಲ್ಲದರಲ್ಲೂ ಹಿಂದೆ ಉಳಿಯುತ್ತದೆ. ಕ್ರಮೇಣ ಮಗುವಿಗೆ ತನ್ನಿಂದ ಏನೂ ಸಾಧ್ಯವಿಲ್ಲ ಎಂಬ ಕೀಳರಿಮೆ ಬೆಳೆಯುತ್ತದೆ. ನಾನು ಯೋಗ್ಯನಲ್ಲ ಎಂಬ ಭಾವ ಬಂದುಬಿಟ್ಟರೆ ಮಗು ಖಿನ್ನತೆಗೆ ಜಾರಬಹುದು. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ.

***

ಸತ್ವಯುತ ಆಹಾರ ಮತ್ತು ದೈಹಿಕ ವ್ಯಾಯಾಮ, ಬುದ್ಧಿ ಚುರುಕುಗೊಳಿಸುವ ಕೆಲಸ ಮಾಡಿದರೆ ಸಾಕು ಆ ಮಗುವೂ ಎಲ್ಲರಂತಾಗುತ್ತದೆ.
–ಡಾ. ನವೀನ್‌ ಕಿಣಿ, ಮಕ್ಕಳ ತಜ್ಞ, ಗುರುಕೃಪಾ ಕ್ಲಿನಿಕ್‌, ನ್ಯೂ ಬಿಇಎಲ್‌ ರಸ್ತೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.