ಬುಧವಾರ, ಆಗಸ್ಟ್ 10, 2022
24 °C

ಬೀದಿಬದಿ ಖಾದ್ಯ ‘ಸ್ವಿಗ್ಗಿ’ಯಲ್ಲಿ!

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರುಚಿ ರುಚಿ ಖಾದ್ಯಗಳನ್ನು ರೆಸ್ಟಾರೆಂಟ್‌ಗಳಿಂದ ಮನೆ ಬಾಗಿಲಿಗೆ ತಲುಪಿಸುವ ‘ಸ್ವಿಗ್ಗಿ’ ಕಂಪನಿಯು ತನ್ನ ಬೀದಿಬದಿ ಆಹಾರ ವ್ಯಾಪಾರಿ ಯೋಜನೆಯನ್ನು 125 ನಗರಗಳಿಗೆ ವಿಸ್ತರಿಸುತ್ತಿರುವುದಾಗಿ ತಿಳಿಸಿದೆ. ಪ್ರಧಾನ ಮಂತ್ರಿ ಬೀದಿಬದಿ ವ್ಯಾಪಾರಿ ಆತ್ಮನಿರ್ಭರ ನಿಧಿ (ಪಿಎಂ ಸ್ವನಿಧಿ) ಯೋಜನೆಯ ಅಡಿಯಲ್ಲಿ ಈ ವಿಸ್ತರಣಾ ಕಾರ್ಯವನ್ನು ಕಂಪನಿ ಕೈಗೊಂಡಿದೆ.

ಮೊದಲ ಹಂತದಲ್ಲಿ ಕಂಪನಿಯು ಒಟ್ಟು 36 ಸಾವಿರ ಬೀದಿಬದಿ ಆಹಾರ ವ್ಯಾಪಾರಿಗಳನ್ನು ತನ್ನ ಸೇವೆಗಳ ವ್ಯಾಪ್ತಿಗೆ ತರಲಿದೆ. ತನ್ನ ಮೂಲಕವೇ ಈ ವ್ಯಾಪಾರಿಗಳಿಗೆ ಸಾಲ ವಿತರಣೆ ಆಗಿದೆ ಎಂದು ಕಂಪನಿ ಹೇಳಿದೆ.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಜೊತೆಗೂಡಿ ಸ್ವಿಗ್ಗಿ ಕಂಪನಿಯು ಅಹಮದಾಬಾದ್, ವಾರಾಣಸಿ, ಚೆನ್ನೈ, ದೆಹಲಿ ಮತ್ತು ಇಂದೋರ್ ನಗರಗಳಲ್ಲಿ ಪ್ರಯೋಗಾರ್ಥವಾಗಿ ಇಂತಹ ಯೋಜನೆಯನ್ನು ಜಾರಿಗೆ ತಂದಿತ್ತು. ಪ್ರಾಯೋಗಿಕ ಯೋಜನೆಯ ಅಡಿಯಲ್ಲಿ ಒಟ್ಟು 300ಕ್ಕಿಂತ ಹೆಚ್ಚು ಬೀದಿಬದಿ ವ್ಯಾಪಾರಿಗಳು ಸ್ವಿಗ್ಗಿ ಜೊತೆ ಸೇರಿಕೊಂಡಿದ್ದಾರೆ.

ತನ್ನ ಜೊತೆ ಸೇರಿಸಿಕೊಳ್ಳುವ ಬೀದಿಬದಿ ಆಹಾರ ವ್ಯಾಪಾರಿಗಳನ್ನು ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ದಲ್ಲಿ ನೋಂದಾಯಿಸಲಾಗುವುದು. ಅವರಿಗೆ ಆಹಾರ ಸುರಕ್ಷತೆ ತರಬೇತಿಯನ್ನೂ ನೀಡಲಾಗುವುದು ಎಂದು ಕಂಪನಿ ಹೇಳಿದೆ. ‘ಬೀದಿಬದಿ ಆಹಾರ ವ್ಯಾಪಾರಿಗಳು ಭಾರತದ ಆಹಾರ ಸಂಸ್ಕೃತಿಯ ಭಾಗ’ ಎಂದು ‘ಸ್ವಿಗ್ಗಿ’ ಸಿಒಒ ವಿವೇಕ್ ಸುಂದರ್ ಹೇಳಿದ್ದಾರೆ.

ಜನಪ್ರಿಯ ಹಾಗೂ ಸುರಕ್ಷಿತ ಎಂದು ಸಾಬೀತಾಗಿರುವ ಬೀದಿಬದಿ ವ್ಯಾಪಾರಿಗಳನ್ನು ನಿರಂತರವಾಗಿ ಗುರುತಿಸಲು ಒಂದು ತಂಡ ರಚಿಸಲಾಗಿದೆ ಎಂದು ಸ್ವಿಗ್ಗಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು