ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರದ ಅಭಿವೃದ್ಧಿಯೇ ಮೂಲ ಮಂತ್ರ

Last Updated 13 ಜೂನ್ 2018, 11:12 IST
ಅಕ್ಷರ ಗಾತ್ರ

ಮಸ್ಕಿ: ಸತತ ಮೂರು ಬಾರಿ ಮಸ್ಕಿ ಕ್ಷೇತ್ರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ ಶಾಸಕ ಪ್ರತಾಪಗೌಡ ಪಾಟೀಲ ಅವರು ಕ್ಷೇತ್ರದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ನಿಮಿತ್ತ ‘ಪ್ರಜಾವಾಣಿ’ ಕೇಳಿದ ಪ್ರಶ್ನೆಗಳಿಗೆ ಶಾಸಕರ ಉತ್ತರ ಹೀಗಿವೆ.

ತಕ್ಷಣದ ಅಭಿವೃದ್ಧಿ ಕೆಲಸಗಳೇನು?

ಮಸ್ಕಿ ನೂತನ ತಾಲ್ಲೂಕು ಕಚೇರಿಗಳು ಆರಂಭವಾಗಿ ಎಲ್ಲಾ ಕೆಲಸಗಳು ಸುಲಭವಾಗಿ ನಡೆಯುವಂತೆ ಮಾಡುವುದು. ಮಿನಿ ವಿಧಾನಸೌಧ ನಿರ್ಮಾಣ ಮಾಡಿ ಎಲ್ಲಾ ಇಲಾಖೆಗಳು ಒಂದೇ ಕಟ್ಟಡದಲ್ಲಿ ಕಾರ್ಯಾರಂಭ ಮಾಡುವಂತೆ ಮಾಡಿ ಜನರಿಗೆ ಆಗುವ ಕಷ್ಟಗಳನ್ನು ತಪ್ಪಿಸಲಾಗುವುದು.

ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅಂತಹ ಗ್ರಾಮಗಳಿಗೆ ತುಂಗಭದ್ರಾ ಎಡದಂಡೆ ಕಾಲುವೆ ನೀರು ಪೂರೈಕೆ ಮಾಡಲು ಹಿಂದಿನ ಅವಧಿಯಲ್ಲಿ ಯೋಜನೆ ರೂಪಿಸಲಾಗಿದೆ. ಈಗ ಅದನ್ನು ತ್ವರಿತವಾಗಿ ಅನುಷ್ಠಾನಗೊಳಿಸಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ನೀರು ಪೂರೈಕೆಗೆ ಆದ್ಯತೆ ನೀಡಲಾಗುವುದು. ಮಟ್ಟೂರು, ಸಂತೆಕೆಲ್ಲೂರು, ಪಾಮನಕೆಲ್ಲೂರು ಭಾಗದ ಸುಮಾರು 50ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಂದವಾಡಗಿ ಏತ ನೀರಾವರಿ ಯೋಜನೆಗೆ ಕಳೆದ ಅವಧಿಯಲ್ಲಿ ಚಾಲನೆ ನೀಡಲಾಗಿದೆ. ನನ್ನ ಕ್ಷೇತ್ರಕ್ಕೆ ಒಳಪಡುವ ಹಳ್ಳಿಗಳ ಒಣಭೂಮಿಗೆ ನೀರಾವರಿ ಸೌಕರ್ಯ ಕಲ್ಪಿಸಬೇಕಾಗಿದೆ. ಸರ್ಕಾರದ ಮೇಲೆ ಒತ್ತಡ ತಂದು ಆದಷ್ಟು ಬೇಗನೆ ಕಾಲುವೆ ನಿರ್ಮಾಣ ಕೆಲಸ ಕೈಗೆತ್ತಿಕೊಳ್ಳಲಾಗುವುದು.

ನಿಧಾನಗತಿಯಲ್ಲಿ ಸಾಗಿರುವ ಶಾಲಾ ಕಟ್ಟಡ, ವಸತಿ ನಿಲಯಗಳ ನಿರ್ಮಾಣ, ರಸ್ತೆ ಕಾಮಗಾರಿ, ಸಮುದಾಯ ಭವನಗಳ ನಿರ್ಮಾಣ ಕಾಮಗಾರಿ ವೇಗ ಪಡೆಯುವಂತೆ ಮಾಡಲಾಗುವುದು. ಮಸ್ಕಿ ಹೊಸ ತಾಲ್ಲೂಕು ಕೇಂದ್ರವಾಗಿದ್ದರಿಂದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಇದ್ದು ಆಡಳಿತ ಯಂತ್ರ ಚುರುಕುಗೊಳಿಸಲಾಗುವುದು.

ಐದು  ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹಾಕಿಕೊಂಡಿರುವ ನೀಲನಕ್ಷೆ ಏನು ?

ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಮುಂದಿನ ದಿನಗಳಲ್ಲಿ ಮಾದರಿ ಕ್ಷೇತ್ರ ಮಾಡುವುದು ನನ್ನ ಉದ್ದೇಶ, ಮಸ್ಕಿ ಪಟ್ಟಣದ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಪಟ್ಟಣದಲ್ಲಿ ಕಸ ವಿಲೇವಾರಿಯೇ ದೊಡ್ಡ ಸಮಸ್ಯೆಯಾಗಿದೆ. ಅದಕ್ಕಾಗಿ ಪಟ್ಟಣದ ಹೊರ ವಲಯದಲ್ಲಿ ಭೂಮಿ ಗುರುತಿಸಿ ಕಸ ಸಂಸ್ಕರಣ ಘಟಕ ಸ್ಥಾಪನೆ ಮಾಡುವುದು ನನ್ನ ಮೊದಲ ಆದ್ಯತೆ. ಇದರ ಜೊತೆಗೆ ಬಳಗಾನೂರು ಹಾಗೂ ತುರ್ವಿಹಾಳ ಪಟ್ಟಣ ಪಂಚಾಯಿತಿಯಲ್ಲೂ ಕಸ ಸಂಸ್ಕರಣ ಘಟಕ ಸ್ಥಾಪನೆಗೆ  ಉದ್ದೇಶಿಸಲಾಗಿದೆ.

ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಏನು?

ಕ್ಷೇತ್ರದಲ್ಲಿ ಇನ್ನೂ ಅನೇಕ ಸಮಸ್ಯೆಗಳು ಇವೆ. ಅದರಲ್ಲೂ ಕೆಲವೊಂದು ಗ್ರಾಮಗಳಲ್ಲಿ ಆರ್ಸನಿಕ್ ನೀರು ಕುಡಿಯಲು ಪೂರೈಕೆಯಾಗುತ್ತಿದೆ. ಅಂತಹ ಗ್ರಾಮಗಳಿಗೆ ಬೇರೆ ಸ್ಥಳದಲ್ಲಿ ಕುಡಿಯುವ ನೀರಿನ ಮೂಲ ಹುಡುಕಿ ಅಲ್ಲಿಂದ ನೀರು ಸರಬರಾಜು ಮಾಡಲಾಗುವುದು.

ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯ ಉಪ ಕಾಲುವೆಗಳ ದುರಸ್ತಿ, ಮಸ್ಕಿ ನಾಲಾ ಜಲಾಶಯದ ಎಡ ಹಾಗೂ ಬಲದಂಡೆ ಕಾಲುವೆಗಳು ಹಾಳಾಗಿವೆ. ಇದರಿಂದ ರೈತರ ಜಮೀನುಗಳಿಗೆ ಸರಿಯಾಗಿ ನೀರು ಮುಟ್ಟುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಹಾಳಾದ ಕಾಲುವೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.

ಕ್ಷೇತ್ರಕ್ಕೆ ಹೊಸ ಯೋಜನೆಗಳನ್ನು ತರಲು ಹೇಗೆ ಪ್ರಯತ್ನಿಸುತ್ತೀರಿ ?

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ಸರ್ಕಾರ ಜಾರಿಗೆ ತರುವ ಹೊಸ ಯೋಜನೆಗಳನ್ನು ಕ್ಷೇತ್ರಕ್ಕೆ ತರಲು ನನ್ನ ಎರಡು ದಶಕದ ಅನುಭವ ಬಳಕೆಯಾಗುತ್ತದೆ.

ಸಂಪುಟದಲ್ಲಿ ಬಹುತೇಕ ಸಚಿವರು ನನ್ನ ಮೇಲೆ ಬಹಳ ಅಭಿಮಾನ ಮತ್ತು ಪ್ರೀತಿ ಹೊಂದಿದ್ದಾರೆ. ಸಚಿವರ ಹಾಗೂ ಅಧಿಕಾರಿಗಳ ಕೈ ಹಿಡಿದು ಹೊಸ ಹೊಸ ಯೋಜನೆಗಳನ್ನು ಕ್ಷೇತ್ರಕ್ಕೆ ತಂದು ಜನರಿಗೆ ತಲುಪಿಸುತ್ತೇನೆ ಎಂಬ ಆತ್ಮವಿಶ್ವಾಸ ಇದೆ. ಅಧಿಕಾರಿಗಳಿಗೆ ಬೇದರಿಸಿ ಕೆಲಸ ಮಾಡಿಸಿಕೊಳ್ಳುವುದಕ್ಕಿಂತ ಪ್ರೀತಿ, ವಿಶ್ವಾಸದಿಂದ ಕೆಲಸ ಮಾಡಿಸಿಕೊಂಡಾಗ ಮಾತ್ರ ಕೆಲಸಗಳು ವೇಗ ಪಡೆಯಲು ಸಾಧ್ಯ.

ಕಾರ್ಯವೈಖರಿ ಹೇಗಿರುತ್ತದೆ?

ಶಾಸಕರ ಅನುದಾನ ಸೇರಿದಂತೆ ವಿವಿಧ ಯೋಜನೆಗಳಿಗೆ ಜಿಲ್ಲಾ ಮಟ್ಟದಲ್ಲಿ ತ್ವರಿತವಾಗಿಅನುಮೋದನೆ ದೊರೆಯುತ್ತಿಲ್ಲ. ಇದರಿಂದ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತದೆ. ಇದರ ಸಲುವಾಗಿ ಒರ್ವ ಆಪ್ತ ಸಹಾಯಕನನ್ನು ನೇಮಕ ಮಾಡಿ ಜಿಲ್ಲಾ ಮಟ್ಟದಲ್ಲಿ ಕಡತಗಳ ವಿಲೇವಾರಿ ನೇಮಕ ಮಾಡಲಾಗುವುದು.

ನನ್ನ ಕಚೇರಿಗೆ ಬರುವ ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ನೀಡಲು, ಅವರ ಸಮಸ್ಯೆಗಳಿಗೆ ಸ್ಪಂದಿಸಲು ಸಹಕಾರಿಯಾಗುವಂತೆ ಕ್ರಮ ಕೈಗೊಳ್ಳಲಾಗುವುದು. ದಿನದ 24 ಗಂಟೆಯೂ ನನ್ನ ಮೊಬೈಲ್ ಆನ್ ಇರುತ್ತದೆ.

-ಪ್ರಕಾಶ್‌ ಮಸ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT