ಹಬ್ಬದ ಸಂಭ್ರಮಕ್ಕೆ ಸಿಹಿ ಸಿಹಿ ಲಾಡುಗಳು

7

ಹಬ್ಬದ ಸಂಭ್ರಮಕ್ಕೆ ಸಿಹಿ ಸಿಹಿ ಲಾಡುಗಳು

Published:
Updated:
Prajavani

ಚುರುಮಿ ಉಂಡೆ

ಬೇಕಾಗುವ ಸಾಮಾಗ್ರಿಗಳು: ಬಾಂಬೆ ರವೆ – 2ಕಪ್, ತೆಂಗಿನ ತುರಿ – 1½ಕಪ್, ಸಕ್ಕರೆ – 2ಕಪ್, ತುಪ್ಪ – 1ಕಪ್, ಗೋಡಂಬಿ, ದ್ರಾಕ್ಷಿ, ಏಲಕ್ಕಿ

ತಯಾರಿಸುವ ವಿಧಾನ: ತೆಂಗಿನ ತುರಿಯನ್ನು ರವೆಯೊಂದಿಗೆ ಸೇರಿಸಿ ಚೆನ್ನಾಗಿ ಕಲೆಸಿಟ್ಟುಕೊಳ್ಳಬೇಕು. ಅರ್ಧ ಗಂಟೆಯ ನಂತರ ಒಂದು ಬಾಣಲೆಯಲ್ಲಿ ತುಪ್ಪ, ಗೋಡಂಬಿ, ದ್ರಾಕ್ಷಿ, ತೆಂಗಿನತುರಿ ಸೇರಿಸಿದ ರವೆಯನ್ನು ಹಾಕಿ ಚೆನ್ನಾಗಿ ಹುರಿಯಬೇಕು.

ಇನ್ನೊಂದು ಪಾತ್ರೆಯಲ್ಲಿ 2 ಕಪ್ ಸಕ್ಕರೆಗೆ ಅರ್ಧ ಕಪ್ ನೀರು ಹಾಕಿ ಪಾಕ ಮಾಡಿಕೊಳ್ಳಬೇಕು. ಎಳೆಪಾಕ ಬಂದ ನಂತರ ಹುರಿದಿಟ್ಟುಕೊಂಡಿರುವ ರವೆಯನ್ನು ಹಾಕಿ ಏಲಕ್ಕಿ ಪುಡಿ ಸೇರಿಸಬೇಕು. ತಣ್ಣಗಾದ ನಂತರ ಚೆನ್ನಾಗಿ ಕಲೆಸಿ ಉಂಡೆಗಳನ್ನು ಕಟ್ಟಬೇಕು.

**

ಸಿಹಿ ಪೊಂಗಲ್

ಬೇಕಾಗುವ ಸಾಮಗ್ರಿಗಳು: ಅಕ್ಕಿ – 1/2ಕಪ್, ಹೆಸರುಬೇಳೆ – 1/2ಕಪ್, ನೀರು – 2ಕಪ್, ಹಾಲು – 2ಕಪ್, ಏಲಕ್ಕಿ ಪುಡಿ – 1ಚಮಚ, ಬೆಲ್ಲದ ಪುಡಿ – 1/2ಕಪ್, ತುಪ್ಪ – 2ಚಮಚ, ದ್ರಾಕ್ಷಿ – ಸ್ವಲ್ಪ, ಗೋಡಂಬಿ – ಸ್ವಲ್ಪ,  ಕಾಯಿತುರಿ – ಸ್ವಲ್ಪ

ತಯಾರಿಸುವ ವಿಧಾನ: ಹೆಸರುಬೇಳೆಯನ್ನು ಘಮ್ಮೆನ್ನುವ ಪರಿಮಳ ಬರುವ ತನಕ ಹುರಿದು, ಅಕ್ಕಿಯ ಜೊತೆ ಸೇರಿಸಿ ಕುಕ್ಕರಿನಲ್ಲಿ ನೀರು ಸೇರಿಸಿ ಕೂಗಿಸಿ. ಅಕ್ಕಿ ಮತ್ತು ಬೇಳೆ ಬೆಂದ ನಂತರ, ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ. ಬೆಲ್ಲವನ್ನು ಕರಗಲು ಬಿಡಿ. ಬೆಲ್ಲಕ್ಕೆ ತುರಿದ ತೆಂಗಿನ ಕಾಯಿಯನ್ನು ಹಾಕಿ 10 ನಿಮಿಷ ಬೇಯಿಸಿ. ನಂತರ ಬೆಲ್ಲದ ಪಾಕಕ್ಕೆ ಹಾಲು ಸೇರಿಸಿ. ಬೇಯಿಸಿದ ಅಕ್ಕಿ, ಬೇಳೆಯನ್ನು ಹಾಕಿ, ಸಣ್ಣ ಉರಿಯಲ್ಲಿಟ್ಟು ಚೆನ್ನಾಗಿ ಬೆರೆಸಿರಿ. ಏಲಕ್ಕಿಯನ್ನು ಹಾಕಿ, ಕೊನೆಯಲ್ಲಿ ತುಪ್ಪದಲ್ಲಿ ಹುರಿದ ಗೋಡಂಬಿ ಹಾಗೂ ದ್ರಾಕ್ಷಿಯನ್ನು ಸೇರಿಸಿದರೆ, ಸಿಹಿ ಪೊಂಗಲ್ ಸವಿಯಲು ರೆಡಿ.

ಮಂಡಕ್ಕಿ ಲಾಡು

ಬೇಕಾಗುವ ಸಾಮಾಗ್ರಿಗಳು: ಮಂಡಕ್ಕಿ – 1ಕಪ್, ಬೆಲ್ಲ – 1ಕಪ್, ಒಣಕೊಬ್ಬರಿ ತುರಿ – 1/2ಕಪ್, ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ, ತುಪ್ಪ

ತಯಾರಿಸುವ ವಿಧಾನ: ಬಾಣಲೆಯಲ್ಲಿ ಒಂದು ಚಮಚ ತುಪ್ಪವನ್ನು ಹಾಕಿ ದ್ರಾಕ್ಷಿ, ಗೋಡಂಬಿ ಹಾಗೂ ಒಣಕೊಬ್ಬರಿ ತುರಿಯನ್ನು ಹುರಿದಿಟ್ಟುಕೊಳ್ಳಬೇಕು. ಮಂಡಕ್ಕಿಯನ್ನು ಮಿಕ್ಸಿಗೆ ಹಾಕಿ ತರಿ ತರಿಯಾಗುವಂತೆ ಪುಡಿಮಾಡಿಟ್ಟುಕೊಳ್ಳಬೇಕು. ಒಂದು ಕಪ್ ಬೆಲ್ಲಕ್ಕೆ ಕಾಲು ಕಪ್ ನೀರು ಸೇರಿಸಿ ಏರು ಪಾಕ ಬರಿಸಿಕೊಳ್ಳಬೇಕು. ನಂತರ ಮೊದಲೇ ಹುರಿದಿಟ್ಟಿರುವ ಕೊಬ್ಬರಿ ಮಿಶ್ರಣವನ್ನು ಇದಕ್ಕೆ ಸೇರಿಸಿಕೊಳ್ಳಬೇಕು. ಪುಡಿಮಾಡಿಟ್ಟುಕೊಂಡಿರುವ ಮಂಡಕ್ಕಿಗೆ ಪಾಕ ಹಾಕುತ್ತಾ ಉಂಡೆ ಕಟ್ಟಬೇಕು,

ಆರೋಗ್ಯಕರವಾದ ಈ ಉಂಡೆಗಳು ಹಸಿವಾದಾಗ ತಿನ್ನಲು ಬಲುರುಚಿಕರವಾಗಿರುತ್ತದೆ. ಅಲ್ಲದೇ ಬೆಲ್ಲದಲ್ಲಿ ಕ್ಯಾಲ್ಸಿಯಂ, ಕಬ್ಬಿಣಾಂಶ ಅಧಿಕವಾಗಿದ್ದು, ಗ್ಲೂಕೋಸ್ ನ ಬದಲಿಗೆ ಬೆಲ್ಲ ಸೇವಿಸಬಹುದಾಗಿದೆ.

ಡ್ರೈ ಫ್ರೂಟ್ಸ್ ಅಂಟುಂಡೆ

ಬೇಕಾಗುವ ಸಾಮಾಗ್ರಿಗಳು: ಪುಡಿ ಬೆಲ್ಲ – 1ಕಪ್, ಉತ್ತುತ್ತೆ – ½ಕಪ್, ಖರ್ಜೂರ – ½ಕಪ್, ಗೋಡಂಬಿ  – ¼ಕಪ್, ಒಣದ್ರಾಕ್ಷಿ – ¼ಕಪ್, ಬಾದಾಮಿ – ¼ಕಪ್, ತುರಿದ ಕೊಬ್ಬರಿ – ¼ಕಪ್, ಅಂಟು – 2ಚಮಚ, ಗಸಗಸೆ – 1ಚಮಚ, ಏಲಕ್ಕಿ ಪುಡಿ, ತುಪ್ಪ – ¼ಕಪ್

ತಯಾರಿಸುವ ವಿಧಾನ: ಒಂದು ಬಾಣಲೆಯಲ್ಲಿ ಗಸಗಸೆ, ಕೊಬ್ಬರಿಯನ್ನು ಬೇರೆ ಬೇರೆ ಹುರಿದುಕೊಳ್ಳಬೇಕು. ನಂತರ ಅವೆರಡನ್ನು ಒಟ್ಟಿಗೆ ಒಂದು ಬಟ್ಟಲಿನಲ್ಲಿ ತೆಗೆದಿಟ್ಟುಕೊಂಡು ಅದೇ ಬಾಣಲೆಗೆ 2 ಚಮಚದಷ್ಟು ತುಪ್ಪ ಹಾಕಿ ಬಾದಾಮಿ, ಗೋಡಂಬಿ, ದ್ರಾಕ್ಷಿ, ಖರ್ಜೂರ, ಉತ್ತುತ್ತೆ ಹಾಕಿ ಹುರಿದುಕೊಳ್ಳಬೇಕು. ಇದನ್ನು ಮೊದಲೇ ಹುರಿದಿಟ್ಟುಕೊಂಡಿರುವ, ಗಸಗಸೆ ಹಾಗೂ ಕೊಬ್ಬರಿಯೊಂದಿಗೆ ಸೇರಿಸಿ, ಖಾಲಿ ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ ಪುಡಿಮಾಡಿಟ್ಟುಕೊಂಡಿರುವ ಅಂಟು ಹಾಕಿ ಅದು ಉಬ್ಬುವವರೆಗೆ ಹುರಿಯಬೇಕು. ಅದನ್ನು ಡ್ರೈ ಫ್ರೂಟ್ಸ್ ನೊಂದಿಗೆ ಸೇರಿಸಬೇಕು. ನಂತರ ಬಾಣಲೆಗೆ ಬೆಲ್ಲ ಹಾಗೂ ಸ್ವಲ್ಪ ನೀರನ್ನು ಹಾಕಿ ಬೆಲ್ಲ ಕರಗುವವರೆಗೆ ಕೈಯ್ಯಾಡಿಸಬೇಕು. ಎಳಪಾಕ ಬರುವವರೆಗೂ ಕುದಿಸಬೇಕು. ಏಲಕ್ಕಿ ಪುಡಿ ಹಾಕಿ ಕೂಡಲೇ ಮೊದಲೇ ಹುರಿದಿಟ್ಟುಕೊಂಡಿರುವ ಡ್ರೈ ಫ್ರೂಟ್ಸ್ ಗಳ ಮಿಶ್ರಣವನ್ನು ಸೇರಿಸಿ ಬಿಸಿ ಇರುವಾಗಲೇ ಉಂಡೆ ಕಟ್ಟಬೇಕು.

ದಿನಕ್ಕೊಂದರಂತೆ ಈ ಉಂಡೆಗಳನ್ನು ತಿನ್ನುವುದರಿಂದ ಜೀರ್ಣಶಕ್ತಿಗೂ ಸಹಾಯಕವಾಗುತ್ತದೆ ಹಾಗೂ ಆರೋಗ್ಯಕ್ಕೂ ಒಳ್ಳೆಯದು.

ಪುಸ್ಸುಂಡೆ

ಬೇಕಾಗುವ ಸಾಮಾಗ್ರಿಗಳು: ಗೋಧಿಹಿಟ್ಟು – 1ಕಪ್, ಬೆಲ್ಲ – ¾ಕಪ್, ತುರಿದ ಕೊಬ್ಬರಿ – ¼ಕಪ್, ತುಪ್ಪ – 4ಚಮಚ, ಏಲಕ್ಕಿ ಪುಡಿ, ಗೋಡಂಬಿ, ದ್ರಾಕ್ಷಿ

ತಯಾರಿಸುವ ವಿಧಾನ: ಒಂದು ಬಾಣಲೆಯಲ್ಲಿ ಗೋಧಿಹಿಟ್ಟು, ಗೋಡಂಬಿ, ದ್ರಾಕ್ಷಿಯನ್ನು ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಹುರಿಯಬೇಕು. ಇನ್ನೊಂದು ಪಾತ್ರೆಯಲ್ಲಿ ಬೆಲ್ಲವನ್ನು ಹಾಕಿ ಕಾಲು ಕಪ್ ನೀರಿನೊಂದಿಗೆ ಕುದಿಯಲು ಇಡಬೇಕು. ಬೆಲ್ಲ ಎಳೇ ಪಾಕ ಬಂದ ನಂತರ ಹುರಿದಿಟ್ಟ ಹಿಟ್ಟಿಗೆ ಹಾಕಿ ಕಲಸಿ ತುಪ್ಪದೊಂದಿಗೆ ಉಂಡೆ ಕಟ್ಟಬೇಕು. 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !