ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನು ಮಾಡುವ ಚಟ್ನಿ ಅತ್ತೆ–ಮಾವನಿಗೂ ಇಷ್ಟ’

Last Updated 6 ಮಾರ್ಚ್ 2019, 19:46 IST
ಅಕ್ಷರ ಗಾತ್ರ

ನಿಹಾರಿಕಾ, ಜಾನಕಿ ರಾಘವ, ಕಿನ್ನರಿ ಧಾರಾವಾಹಿಗಳಲ್ಲಿ ನಟಿಸಿರುವ, ಪ್ರಸ್ತುತ ಕಲರ್ಸ್‌ ಸೂಪರ್‌ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಪರಂಜಿ’ ಧಾರಾವಾಹಿಯಲ್ಲಿ ನಾಯಕನಾಗಿ ವಿಕ್ರಮ್‌ ಪಾತ್ರದಲ್ಲಿ ನಟಿಸುತ್ತಿರುವ ಸೂರಜ್‌ ಲೋಕ್ರೆ ಅಡುಗೆ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಅಡುಗೆ ಮನೆ ಅಂದ್ರೆ ತುಂಬಾ ಇಷ್ಟ. ಅಡುಗೆಯಲ್ಲಿ ಹೊಸ ಹೊಸ ಪ್ರಯೋಗಕ್ಕೆ ಮುಂದಾಗುತ್ತೇನೆ. ಇಟಾಲಿಯನ್ ಮತ್ತು ಉತ್ತರ ಕರ್ನಾಟಕದ ತಿನಿಸುಗಳ ತಯಾರಿಯಲ್ಲಿ ಪರಿಣತಿ ಇದೆ. ದಕ್ಷಿಣ ಭಾರತದ ಶಾವಿಗೆ ಉಪ್ಪಿಟ್ಟು, ಅವಲಕ್ಕಿ ಉಪ್ಪಿಟ್ಟು, ದೋಸೆ, ಇಡ್ಲಿ ಇಷ್ಟ ಪಟ್ಟು ಮಾಡುತ್ತೇನೆ. ನನ್ನ ಹೆಂಡ್ತಿಗೆ ನಾನು ಮಾಡುವ ಇಟಾಲಿಯನ್ ಶೈಲಿಯ ಅಡುಗೆ ಇಷ್ಟ.

ದೋಸೆ ದಿನಕ್ಕೆ ಮೂರು ಬಾರಿ ಕೊಟ್ಟರೂ ತಿನ್ನುತ್ತೇನೆ. ಜತೆಗೆ ನಾನ್‌ವೆಜ್‌ ಪ್ರಿಯ. ‌ದಮ್‌ ಬಿರಿಯಾನಿ, ಚಿಕನ್‌ ಪೆಪ್ಪರ್‌ ಇಷ್ಟವಾಗುತ್ತದೆ. ಅದರಲ್ಲೂ ಹೆಂಡತಿ ಮಾಡುವ ಪುದಿನಾ ಚಿಕನ್‌ ಎಂದರೆ ಚಪ್ಪರಿಸಿಕೊಂಡು ತಿನ್ನುತ್ತೇನೆ.

ಮೊದಲು ಅಡುಗೆ ಮಾಡಿದ್ದು 6ನೇ ತರಗತಿಯಲ್ಲಿ. ದೋಸೆ ಮಾಡಲು ಹೋಗಿ ಎಣ್ಣೆ ಸಿಡಿಸಿಕೊಂಡಿದ್ದೇನೆ. ಬೆರಳು ಸುಟ್ಟಿಕೊಂಡು ಫಜೀತಿ ಮಾಡಿಕೊಂಡಿದ್ದೇನೆ.

2006ರಲ್ಲಿ ಇಂಗ್ಲೆಂಡ್‌ನಲ್ಲಿ ಕೆಲಸದಲ್ಲಿ ಇದ್ದಾಗ ಬಿರಿಯಾನಿ ಮಾಡಿ ಸ್ನೇಹಿತರಿಗೆ ಬಡಿಸಿದ್ದೆ. ಮನೆಯಲ್ಲಿ ನಾನು ಮಾಡುವ ಚಟ್ನಿಯನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಅತ್ತೆ ಮಾವನಿಗೂ ಇಷ್ಟ.

ಮನೆಯಲ್ಲಿ ದೋಸೆ, ಇಡ್ಲಿ ಮಾಡಿದರೆ ಚಟ್ನಿ ನಾನೇ ಮಾಡಬೇಕು. ಅದನ್ನು ಖುಷಿಯಾಗಿ ಎಲ್ಲರೂ ಸವಿಯುತ್ತಾರೆ.

ನಮ್ಮದು ಕೂಡು ಕುಟುಂಬ. ಅಮ್ಮ ಅಡುಗೆಯಲ್ಲಿ ಎಕ್ಸ್‌ಫರ್ಟ್‌. ಅಮ್ಮನ ಕೈರುಚಿಯೇ ನನಗೆ ಇಷ್ಟ. ಅವರ ಕೈರುಚಿ ಮುಂದೆ ನನ್ನ ಹೆಂಡತಿ, ತಂಗಿ ಮಾಡುವ ಅಡುಗೆ ರುಚಿಸದು. ಈಚೆಗೆ ಮನೆಯಲ್ಲಿ ಏನಾದರೂ ಹೊಸ ಪ್ರಯೋಗ ಮಾಡಬೇಕು ಎಂದು ಪಿಜ್ಜಾ ಮಾಡಿದ್ದೆ. ಎಲ್ಲರೂ ಅಸ್ವಾದಿಸಿ ತಿಂದರು.

ದಮ್‌ ಬಿರಿಯಾನಿ
ಬೇಕಾಗುವ ಪದಾರ್ಥಗಳು:
ಚಿಕನ್‌, ಜೀರಾ ರೈಸ್‌, ಈರುಳ್ಳಿ, ಹಸಿಮೆಣಸಿನಕಾಯಿ, ಟೊಮೊಟೊ, ಪುದಿನಾ, ಚಕ್ಕೆ, ಲವಂಗ, ಮರಾಠಿ ಮೊಗ್ಗು, ಗರಂ ಮಸಾಲ ಪುಡಿ, ಜೀರಿಗೆ ಪುಡಿ, ದನಿಯಾ ಪುಡಿ, ಕೆಂಪು ಮೆಣಸಿನಪುಡಿ, ಮೊಸರು,ಸಿಂಥೆಟಿಕ್‌ ಕೇಸರಿ ಮತ್ತು ಅರಿಶಿಣ ಪುಡಿ, ನಿಂಬೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು.

ಮೊದಲು ಪಾತ್ರೆಯಲ್ಲಿ ಚಿಕನ್‌ ಹಾಕಿ ಸ್ವಲ್ವ ಬೇಯಿಸಿಕೊಳ್ಳಬೇಕು. ಮತ್ತೊಂದು ಪಾತ್ರೆಯಲ್ಲಿ ಒಗ್ಗರಣೆಗೆ ಎಣ್ಣೆ ಹಾಕಿ ನಂತರ ಚಕ್ಕೆ, ಲವಂಗ, ಮರಾಠಿ ಮೊಗ್ಗು ಹಾಕಿ ಫ್ರೈ ಮಾಡಬೇಕು. ಒಂದು ನಿಮಿಷದ ನಂತರ ಈರುಳ್ಳಿ, ಹಸಿಮೆಣಸಿನಕಾಯಿ ಫ್ರೈ ಮಾಡಿಕೊಳ್ಳಿ. ದನಿಯಾಪುಡಿ, ಗರಂ ಮಸಾಲ,ಜೀರಿಗೆ ಪುಡಿ, ಕೆಂಪು ಮೆಣಸಿನಪುಡಿ, 2 ಕಪ್‌ ಮೊಸರು ಹಾಕಿ ಅದಕ್ಕೆ ಚಿಕನ್‌ ಹಾಕಿ ಫ್ರೈ ಮಾಡಿಕೊಳ್ಳಬೇಕು.

ನಂತರ ನಿಂಬೆ ಹಣ್ಣಿನ ರಸ ಹಾಕಿ ಅದರ ಮೇಲೆ ಹೆಚ್ಚಿದ ಟೊಮೊಟೊ, ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು.ಮತ್ತೊಂದು ಪಾತ್ರೆಯಲ್ಲಿ ಜೀರಾ ರೈಸ್‌ ಮಾಡಿಕೊಳ್ಳಬೇಕು. ಈ ರೈಸನ್ನು ಚಿಕನ್‌ ಇರುವ ಪಾತ್ರೆಗೆ ಸ್ವಲ್ಪ ಹಾಕಿ ಅದರ ಮೇಲೆ ಸಿಂಥೆಟಿಕ್‌ ಕೇಸರಿ ಮತ್ತು ಅರಿಶಿಣ ಪುಡಿ ಹಾಕಬೇಕು. ನಂತರ ಅದರ ಮೇಲೆ ಪುದಿನಾ ಹಾಕಿ, ಅನ್ನ ಹಾಕಿದರೆ ದಮ್‌ ಬಿರಿಯಾನಿ ಸವಿಯಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT