‘ಅಪ್ಪನಿಗೆ ನನ್ನ ಅಡುಗೆ ಇಷ್ಟ’

7

‘ಅಪ್ಪನಿಗೆ ನನ್ನ ಅಡುಗೆ ಇಷ್ಟ’

Published:
Updated:
ಅಮಿತಾ ಕುಲಾಲ್‌

ನಾನು 20ನೇ ವಯಸ್ಸಿಗೇ ಮಾಡೆಲಿಂಗ್‌ಗಾಗಿ ಮುಂಬೈಗೆ ಹೋಗಿ ಅಲ್ಲಿಯೇ ನೆಲೆಸಿದೆ. ಅದಕ್ಕಿಂತ ಮೊದಲು ಓದು, ಮಾಡೆಲಿಂಗ್‌ ಎನ್ನುತ್ತಾ ಹೆಚ್ಚು ಕಾಲ ಮನೆಯಿಂದ ದೂರ ಇದ್ದವಳು. ಆಗೆಲ್ಲಾ ಮನೆಯೂಟವನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೆ.

ಹೊಸ ಜಾಗಕ್ಕೆ ಹೋದಾಗ ಅಲ್ಲಿನ ಅಡುಗೆ, ವಾತಾವರಣ ನನಗೆ ಹೊಂದುವುದಿಲ್ಲ. ಆಗೆಲ್ಲಾ ಮನೆಯೂಟ, ಅಮ್ಮನ ಕೈರುಚಿ ತುಂಬಾ ನೆನಪಾಗುತ್ತದೆ. ಹಾಗಾಗಿ ಬೇಗನೇ ಮನೆಯೂಟದ ಪ್ರಾಮುಖ್ಯತೆ ಗೊತ್ತಾಯಿತು. ಮುಂಬೈಗೆ ಬಂದ ಮೇಲೆ ನಾನೇ ಮನೆಯಲ್ಲಿ ಅಡುಗೆ ಮಾಡುವುದನ್ನು ರೂಢಿಸಿಕೊಂಡೆ.

ಈಗ ಮುಂಬೈನಲ್ಲಿ ನಾನು ಹಾಗೂ ನನ್ನ ರೂಮ್‌ಮೇಟ್‌ ಪ್ರತಿದಿನ ಹೊಸ ಹೊಸ ಅಡುಗೆ ಪ್ರಯೋಗ ಮಾಡುತ್ತಿರುತ್ತೇವೆ. ಹೊರಗಡೆ ತಿನ್ನುವುದು ತೀರಾ ಕಡಿಮೆ. ಬೆಂಗಳೂರಿನಲ್ಲಿ ಚಿತ್ರೀಕರಣವಿದ್ದಾಗ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದೆ. ನಾನೇ ಓಟ್ಸ್‌, ಕಾಳುಗಳ ಉಸ್ಲಿ ಮಾಡಿಕೊಂಡು ತಿನ್ನುತ್ತಿದ್ದೆ.

ಅಡುಗೆ ಅಂದ್ರೆ ನೆನಪಾಗುವುದು ನನ್ನ ಮೊದಲ ಪ್ರಯೋಗ. ನಾನು ಆರನೇ ತರಗತಿಯಲ್ಲಿದ್ದೆ. ನನ್ನ ತಂಗಿ ನನಗಿಂತ ಐದು ವರ್ಷ ಸಣ್ಣವಳು. ನಮ್ಮಪ್ಪ– ಅಮ್ಮ ಇಬ್ಬರೂ  ಉದ್ಯೋಗದಲ್ಲಿದ್ದರು. ಒಂದು ಬಾರಿ ಅವರು ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿ ನಾನು – ತಂಗಿ ಇಬ್ಬರೇ.

ಸಂಜೆ ಅಪ್ಪ– ಅಮ್ಮ ಬರುವಾಗ ಅವರಿಗೆ ಸರ್‌ಪ್ರೈಸ್‌ ಕೊಡಬೇಕು ಎಂದು ಪೂರಿ– ಬಾಜಿ ಮಾಡಲು ಎಲ್ಲಾ ತಯಾರಿ ಮಾಡಿಕೊಂಡೆವು. ಪೂರಿ ಮಾಡಿದ್ದಾಯ್ತು. ಬಾಜಿಗೆ ಹಳದಿ ಬಣ್ಣ ಬರಲು ಎಷ್ಟು ಅರಿಶಿನ ಹಾಕಬೇಕು ಎಂದು ಗೊತ್ತಿರಲಿಲ್ಲ. 4–5 ಚಮಚ ಹಾಕಿದೆವು. ಆದೆಷ್ಟು ಹಳದಿ ಬಣ್ಣ ಬಂತೆಂದರೆ ಅದನ್ನು ತಿನ್ನುವುದು ಅಸಾಧ್ಯ ಎಂದೂ ನೋಡಿಯೇ ಗೊತ್ತಾಯಿತು.

ಬಾಜಿಯನ್ನು ನೀರಿನಲ್ಲಿ ಹಾಕಿದೆವು. ಆದರೂ ಬಣ್ಣ ಹೋಗಲಿಲ್ಲವೆಂದು ಮತ್ತೊಂದು ಬಾರಿ ತೊಳೆದೆವು. ಕೊನೆಗೆ ಪೂರಿಯೊಳಗೆ ಬಾಜಿಯನ್ನು ಇಟ್ಟು ಅಪ್ಪ– ಅಮ್ಮನಿಗೆ ನೀಡಿದೆವು. ಅಪ್ಪ– ಅಮ್ಮ ಇಬ್ಬರಿಗೂ ರುಚಿ ನೋಡಿ ಶಾಕ್‌!. 

ಆದರೆ ಈಗ ನಾನು ಅಡುಗೆಯನ್ನು ತುಂಬಾ ಚೆನ್ನಾಗಿ ಮಾಡುತ್ತೇನೆ. ಮನೆಗೆ ಹೋದಾಗಲೆಲ್ಲಾ ಮಟನ್‌, ಚಿಕನ್‌ ಹಾಗೂ ಮೀನಿನಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತೇನೆ. ಅಪ್ಪನಿಗೆ ನಾನು ಮಾಡುವ ಮಟನ್‌ ಸಾರು ಹಾಗೂ ಚಿಕನ್‌ ಸುಕ್ಕ ತುಂಬಾ ಇಷ್ಟ. ‌ನಾನು ಮನೆಗೆ ಹೋದಾಗಲೆಲ್ಲಾ ಬೇರೆ ಅಡುಗೆ ಪ್ರಯೋಗ ಮಾಡುತ್ತಿರುತ್ತೇನೆ.

ನಾನು ಅಡುಗೆಯಲ್ಲಿ ತುಂಬಾ ಎಣ್ಣೆ ಬಳಸುವುದಿಲ್ಲ. ಜಂಕ್‌ಫುಡ್‌ ಕೂಡ ನನಗೆ ಇಷ್ಟ ಆಗಲ್ಲ. ಮನೆಯೂಟವೇ ನನ್ನ ಆಯ್ಕೆ. ನಾನು ಯಾವಾಗಲೂ ಬಿಸಿನೀರು ಕುಡಿಯುತ್ತೇನೆ. ಇದು ಆಹಾರ ಜೀರ್ಣ ಮಾಡಲು ಸಹಾಯ ಮಾಡುತ್ತದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !