ಹಳೇ ರುಚಿ, ಹೊಸ ಸ್ವಾದ

7

ಹಳೇ ರುಚಿ, ಹೊಸ ಸ್ವಾದ

Published:
Updated:
Deccan Herald

ಕೋಲಾರ ಮೋಟಾರ್‌ ದೋಸೆ, ಒರಿಜಿನಲ್‌ ಮದ್ದೂರು ವಡೆ, ಕುಕ್ಕರ್‌ ಬಿರಿಯಾನಿ, ಗೊಜ್ಜವಲಕ್ಕಿ, ಪರಾಟಾ ಮಂಚೂರಿ, ಪನೀರ್‌ ಚಿಲ್ಲಿ ಹನಿ, ಖಾಜು–ಬ್ರೆಡ್‌ ಹಲ್ವಾ...

ಎಲ್ಲೂ ಕೇಳಿರದ, ಹೊಚ್ಚ ಹೊಸ ಬಗೆಯ ತಿಂಡಿಗಳನ್ನು ಸವಿಯಲು ಹೆಚ್ಚೇನೂ ದೂರ ಹೋಗುವುದು ಬೇಡ, ಆನಂದರಾವ್‌ ವೃತ್ತದಿಂದ ಹತ್ತು ಹೆಜ್ಜೆ ಮುಂದೆ ಸಾಗಿದರೆ ಸಾಕು. ‘ಉತ್ಸವ್‌ ಗ್ರ್ಯಾಂಡ್‌’ ಎನ್ನುವ ಹಳಬರ ಹೊಸ ರೆಸ್ಟೊರೆಂಟ್‌ ನಿಮ್ಮನ್ನು ಎದುರುಗೊಳ್ಳುತ್ತದೆ.

ಮನಕ್ಕೆ ಮುದ ನೀಡುವ ಒಳಾಂಗಣ, ಆತ್ಮೀಯ ನಗೆಯೊಂದಿಗೆ ಸ್ವಾಗತಿಸುವ ಸಿಬ್ಬಂದಿಯ ಉಪಚಾರಕ್ಕೆ ದಣಿವು ನೀಗಿ ಹಾಯೆನಿಸುತ್ತದೆ. ಕಿಚನ್‌ನಿಂದ ಸೂಸಿ ಬರುವ ತುಪ್ಪ, ತೆಂಗಿನೆಣ್ಣೆಯ ಖಾದ್ಯಗಳ ಘಮ ಅಡರಿಕೊಂಡರೆ ಆಯ್ತು, ಮಾಡಿದ ಆರ್ಡರ್‌ ಟೇಬಲ್‌ ತಲುಪುವವರೆಗೂ ಕಾಯುವ ಕಷ್ಟ ನಿಮ್ಮದು.

ಅದದೇ ಇಡ್ಲಿ ವಡೆ, ಅದೇ ಮಸಾಲೆ ದೋಸೆ, ಮೈಸೂರು ದೋಸೆ, ತಟ್ಟೆ ಇಡ್ಲಿ, ಬೊಂಡಾಗಳ ಸಹವಾಸ ಸಾಕೆನಿಸಿದವರು ಇಲ್ಲಿ ಒಂದಷ್ಟು ಹೊಸ ಹೆಸರಿನ, ನೋಡಲೂ ಚೆಂದವೆನಿಸುವ ತಿನಿಸುಗಳನ್ನು ಸವಿಯಬಹುದು.

ಹೊಟೇಲ್‌ ಉದ್ಯಮದಲ್ಲಿ ಐದು ದಶಕಗಳ ಅನುಭವ ಹೊಂದಿರುವ ರಾಘವೇಂದ್ರರಾವ್‌ ಹತ್ವಾರ್ ಮತ್ತು ಸುಬ್ರಮಣ್ಯ ಅವರ ಹಳೇ ಸ್ವಾದ, ಊಟದರಮನೆಯ ಸೊಗಸಿಗೆ ಸೋತು ಹೊಟೇಲ್‌ ಉದ್ಯಮಕ್ಕೆ ಇಳಿದಿರುವ ಗುರುರಾಜ್‌ ಮತ್ತು ರೋಹಿತ್‌ ಭಟ್‌ ಅವರ ಹೊಸ ರುಚಿ ಮೇಳೈಸಿ ಇಲ್ಲಿ ಕೆಲ ಬಗೆಯ ಸಮ್ಮಿಶ್ರ ತಿಂಡಿಗಳು ರೂಪತಳೆದಿವೆ. ಕೋಲಾರದಿಂದ ತಂದ ದೋಸೆ, ಮದ್ದೂರಿನಿಂದ ಬಂದ ವಡೆ ಅದಕ್ಕೆ ಪುರಾವೆಯಂತೆ ನಿಲ್ಲುತ್ತವೆ. ಬೆಳಗಿನ ಆರಂಭಕ್ಕೆ ಕೋಲಾರ ಮೋಟಾರ್‌ ದೋಸೆ ಹಿತವೆನಿಸಿದರೆ, ಮಧ್ಯಾಹ್ನದ ಹಸಿವಿಗೆ ಕುಕ್ಕರ್‌ ಬಿರಿಯಾನಿ ದಿಲ್‌ಖುಷ್‌ ಮಾಡುತ್ತದೆ. ಸಂಜೆಯ ಸುಳಿರ್ಗಾಳಿಗೆ ಗರಿಗರಿ ಮದ್ದೂರು ವಡೆ ಮುದನೀಡುತ್ತದೆ.

ಖಾದ್ಯಕ್ಕೊಂದು ಹಿನ್ನೆಲೆ

ಈ ಒಂದೊಂದು ತಿಂಡಿಗೂ, ಒಂದೊಂದು ಖಾದ್ಯಕ್ಕೂ ಒಂದೊಂದು ಇತಿಹಾಸವಿದೆ. ಒಳಗೆ ಹಳೆ ರುಚಿಯನ್ನು ಹುದುಗಿಸಿಟ್ಟುಕೊಂಡು, ಮೇಲೆ ಹೊಚ್ಚ ಹೊಸ ಪೋಷಾಕು ತೊಟ್ಟು ದೋಸೆ ಪ್ರೀಯರ ನಾಲಗೆಯನ್ನೂ, ಕಣ್ಣನ್ನೂ ಒಟ್ಟೊಟ್ಟಿಗೇ ಸೆಳೆಯುವ ಕೋಲಾರ ಮೋಟಾರ್ ದೋಸೆಗೆ ದಶಕಗಳ ಚರಿತ್ರೆ ಇದೆ. ಹೋಟೆಲ್‌ ಮಾಲೀಕರಲ್ಲಿ ಒಬ್ಬರಾದ ರಾಘವೇಂದ್ರರಾವ್‌ ಅವರ ತಂದೆ ಕೋಲಾರದಲ್ಲಿ ಮೊದಲ ಬಾರಿಗೆ ದೋಸೆ ಪರಿಚಯಿಸಿದ್ದು. ಅವರ ಬಳಿ ಕಾರೂ ಇತ್ತು ಎನ್ನುವ ಕಾರಣಕ್ಕೆ ಅವರ ದೋಸೆಗೆ ಮೋಟಾರ್‌ ದೋಸೆ ಎಂದು ಹೆಸರು ಬಂತು. ಈಗ ಕೋಲಾರದಲ್ಲೂ ಸಿಗದ ಈ ಮೋಟಾರ್‌ ದೋಸೆ ಬೆಂಗಳೂರಿನಲ್ಲಿ ಘಂ ಎನ್ನುತ್ತಿದೆ. ದೋಸೆ ಹಿಟ್ಟಿಗೆ ಕೆಂಪು ಚಟ್ನಿ, ತೆಂಗಿನ ತುರಿ, ತರಕಾರಿ, ಕೆಂಪು ಕಾರದ ಪುಡಿ ಸೇರಿಸಿ ದೋಸೆ ಹೊಯ್ದು, ಮೇಲೆ ಹುರಿಗಡಲೆ ಪುಡಿ, ಈರುಳ್ಳಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕೃತಗೊಳ್ಳುವ ಈ ಮೋಟಾರ್‌ ದೋಸೆಯು ಖಾರವನ್ನು ಇಷ್ಟಪಡುವವರಿಗೆ ಹೆಚ್ಚು ಮೆಚ್ಚುಗೆಯಾಗುವುದು. ದೋಸೆಯ ರುಚಿ–ಪರಿಮಳದ ಮುಂದೆ ಅದರೊಂದಿಗೆ ಬರುವ ಕಾಯಿಚಟ್ನಿ, ಸಾಗು ಗೌಣವೆಂದೇ ಹೇಳಬಹುದು.

ಇಲ್ಲಿ ಸಿಗುವ ಕುಕ್ಕರ್‌ ಬಿರಿಯಾನಿಗೂ ಒಂದು ಹದವಿದೆ. ಕಂಡೂಕಾಣದಂತೆ ಹೆಚ್ಚಿದ ತರಕಾರಿಯನ್ನು ಒಗ್ಗರಣೆ ಕೊಟ್ಟು, ಮಂದ ಉರಿಯಲ್ಲಿ ಬಾಡಿಸುತ್ತಾರೆ. ಈರುಳ್ಳಿ, ಟೊಮೆಟೊ, ಪನೀರ್‌, ಆಗೀಗ ಬಾಯಿಗೆ ಸಿಗುವ ಕರಿದ ಬ್ರೆಡ್‌ ತುಂಡುಗಳು ಹಸಿದ ಹೊಟ್ಟೆಗೆ ಭರಪೂರ ಆನಂದ ನೀಡಿ ತಣಿಸುತ್ತವೆ. ಇದರೊಂದಿಗೆ ಬರುವ ಮೊಸರುಬಜ್ಜಿ ಬೇಕಿದ್ದರೆ ನೆಂಜಿಕೊಳ್ಳಬಹುದು, ಇಲ್ಲವೇ ಪಕ್ಕಕ್ಕಿಡಬಹುದು.

ಸಂಜೆಯ ಸೊಗಸಿಗೆ ಜತೆಯಾಗುವ ಮದ್ದೂರು ವಡೆಗೆ ಅದರದೇ ಆದ ರುಚಿಯಿದೆ. ಸಮಸಮ ಈರುಳ್ಳಿ, ಸೂಜಿ ರವೆಗೆ ಮುಕ್ಕಾಲು ಭಾಗ ಅಕ್ಕಿ ಹಿಟ್ಟು, ಇಷ್ಟೇ ಇಷ್ಟು ಮೈದಾ ಸೇರಿಸಿ, ಬೆಣ್ಣೆಯೊಂದಿಗೆ ಹದವಾಗಿ ಬೆರೆಸಿ, ಗೋಡಂಬಿ–ಗಸಗಸೆಯ ಘಮದೊಂದಿಗೆ ನಾಲಗೆಯಲ್ಲಿ ನೀರಾಡುವಂತೆ ಮಾಡುವ ವಡೆಯನ್ನು ಬಿಸಿಬಿಸಿ ಇರುವಾಗಲೇ ಬಾಯಿಗಿಟ್ಟುಕೊಳ್ಳಬೇಕು.

ಬಾಯಿಗಿಡುತ್ತಿದ್ದಂತೆ ಜರ್ರನೇ ಗಂಟಲಿಗೆ ಜಾರಿ, ಉದರಕ್ಕೆ ಹಿತಾನುಭವ ನೀಡುವ ಖಾಜು- ಬ್ರೆಡ್ ಹಲ್ವಾ ಇಲ್ಲಿ ಮಾತ್ರವೇ ಸಿಗುವ ವಿಶೇಷ ಸಿಹಿತಿಂಡಿ. ನೆನೆಸಿದ ಗೋಡಂಬಿ, ಸಪ್ಪೆ ಖೋವಾ, ಕರಿದ ಬ್ರೆಡ್‌ ತುಂಡುಗಳು, ಸಕ್ಕರೆ, ಗಸಗಸೆ ಬಳಸಿ ಈ ಹಲ್ವಾ ತಯಾರಿಸಲಾಗುತ್ತದೆ.

‘ನೂರು ಬಗೆಯ ದೋಸೆಗಳೇ ಇರಲಿ, ಈ ಕೋಲಾರ ಮೋಟಾರ್‌ ದೋಸೆಗೆ ಸಮವಾಗಲಾರದು. ತರಕಾರಿ, ಖಾರ, ಹುಳಿ, ಮಸಾಲೆಯನ್ನೆಲ್ಲ ದೋಸೆಯೊಳಗೇ ತುಂಬಿ ರುಚಿಕಟ್ಟುವ ಈ ಮಾದರಿಯನ್ನು ದಶಕಗಳ ಹಿಂದೆ ಕಂಡುಕೊಂಡಿದ್ದು. ಹೊಟೇಲ್‌ ನಮಗೆ ಒಂದು ಉದ್ಯಮ ಮಾತ್ರವಲ್ಲ. ನಮ್ಮ ಜೀವನಾಡಿ ಇದ್ದಹಾಗೆ. ತಾತ–ಮುತ್ತಾತಂದಿರ ಕಾಲದಿಂದಲೂ ಇದನ್ನೇ ನಂಬಿಕೊಂಡು ಬಂದಿದ್ದೇವೆ. ಕಾಲಕಾಲಕ್ಕೆ ತಕ್ಕಂತೆ ತುಸು ಬದಲಾಗಿದ್ದೆವೇಯೇ ಹೊರತು, ಮೂಲ ಮಂತ್ರವನ್ನು ಮರೆತಿಲ್ಲ’ ಎನ್ನುತ್ತಾರೆ ರಾಘವೇಂದ್ರರಾವ್‌ ಹತ್ವಾರ್.

‘ನಮ್ಮಲ್ಲಿ ತಯಾರಿಸಲಾಗುವ ಮದ್ದೂರು ವಡೆಗೂ ಅಷ್ಟೇ, ಶತಮಾನಗಳ ಇತಿಹಾಸವಿದೆ. ಸುಮ್ಮನೇ ರವೆ, ಮೈದಾ ಸೇರಿಸಿ ತಟ್ಟಿದರೆ ಅದು ಮದ್ದೂರು ವಡೆ ಆಗುವುದಿಲ್ಲ. ಒಂದಿಷ್ಟೂ ನೀರು ಬಳಸದೇ, ಈರುಳ್ಳಿಯಿಂದ ಬಿಡುಗಡೆ ಆಗುವ ನೀರು, ಬೆಣ್ಣೆಯಲ್ಲಿಯೇ ಮದ್ದೂರು ವಡೆ ಮಾಡಬೇಕು. ಅಂದಾಗ ಮಾತ್ರ ಅದರ ನಿಜವಾದ ಸ್ವಾದ ಸಿಗುವುದು. ಖಾದ್ಯಗಳ ಇಂತಹ ಮೂಲ ನಿಯಮಗಳನ್ನು ನಾವು ಸಡಿಲಿಸುವುದಿಲ್ಲ. ಅದೇ ನಮ್ಮ ಖಾದ್ಯಗಳ ರುಚಿ ಹಾಗೂ ಗುಣಮಟ್ಟಕ್ಕೆ ಕಾರಣ’ ಎನ್ನುವುದು ಸುಬ್ರಮಣ್ಯ ಅವರ ವಿವರಣೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !